ಶಂಕರಪುರ ಮಲ್ಲಿಗೆ
ಮೊನ್ನೆ ನನ್ನ ಮುಂಬೈ ನ ಬಾಲ್ಕನಿಯಲ್ಲಿ ನೆಟ್ಟಿದ ಮಲ್ಲಿಗೆ ಗಿಡದಲ್ಲಿ ೩ ಹೂವು ಕಾಣಿಸಿಕೊಂಡಿತ್ತು. ಅದೆಷ್ಟೋ ದಿನಗಳಿಂದ ಕಾಯುತ್ತ ಇದ್ದೆ. ಈ ಹಿನ್ನಲೆಯಲ್ಲಿ ಸುಮ್ಮನೆ ಕೆಳಗಿನ ಸಾಲುಗಳು ........................................
ಮಲ್ಲಿಗೆ ಯಾರಿಗೆ ಇಷ್ಟ ಇಲ್ಲ ಹೇಳಿ ? ಎಲ್ಲಾ ಶುಭ ಸಮಾರಂಭಗಳಿಗೆ ನಮ್ಮ ಉಡುಪಿಯಲ್ಲಿ ಮಲ್ಲಿಗೆ ಬೇಕೇ ಬೇಕು. ಮಲ್ಲಿಗೆ ಇಲ್ಲದ ಪೂಜೆ ಇಲ್ಲ . ನಮ್ಮ ದೇವರುಗಳಿಗೂ ಮಲ್ಲಿಗೆ ಅಂದ್ರೆ ಪ್ರಿಯ. ಬಹುಶ: ಮಲ್ಲಿಗೆಯ ಸುಹಾಸನೆಗೆ ಇರಬೇಕು. ನಮ್ಮೂರ ಕಡೆ ಒಂದು ಸಂಪ್ರದಾಯವಿದೆ. ಏನಾದರೂ ಮನೆಯಲ್ಲಿ ಶುಭ ಕಾರ್ಯ ನಡೆಯುವುದು ಇದ್ದರೆ ಮನೆದೇವರಿಗೆ ಒಂದು ಚೆಂಡು ಹೂ ಅರ್ಪಿಸುವ ಹರಕೆ ಹೇಳುತ್ತಾರೆ . ಇದು ಸಣ್ಣ ಹರಕೆ. ಮತ್ತೆ ಮುಂದಿನ ಸಂಕ್ರಮಣಕ್ಕೊ ಅಥವ ಪೂಜೆ ಪುನಸ್ಕಾರಗಳು ಇದ್ದ ದಿನ ಈ ಮಲ್ಲಿಗೆಯ ಹರಕೆ ತೀರಿಸುತ್ತಾರೆ. ಒಂದು ರೀತಿಯಲ್ಲಿ ತುಳುನಾಡಿನಲ್ಲಿ ಮಲ್ಲಿಗೆಯ ಕೃಷಿ ಹೆಚ್ಚಾಗಲು ದೈವ ದೇವತೆಗಳು ಕಾರಣ. ಡಿಮ್ಯಾಂಡ್ ಮತ್ತು ಸಪ್ಲಯ್ ಅರ್ಥಶಾಸ್ತ್ರ ಚೆನ್ನಾಗಿ ಕೆಲಸ ಮಾಡುತ್ತೆ.
ಉಡುಪಿಯ ಕಟಪಾಡಿಯಿಂದ ಶಂಕರಪುರ ಮಾರ್ಗವಾಗಿ ಬೆಳ್ಮಣ್ಣ ತನಕ ಹರಡಿ ಕೊಂಡಿದ್ದ ಮಲ್ಲಿಗೆ ಕೃಷಿ ಈಗ ಕಾರ್ಕಳ ಮತ್ತು ಮಂಗಳೂರಿಗೂ ಹರಡಿದೆ. ಮಲ್ಲಿಗೆಯ ಒಂದು ವೈಶಿಷ್ಟ್ಯ ವೆಂದರೆ ಇದನ್ನು ಕೇವಲ ಕೃಷಿಕರು ಮಾತ್ರ ವಲ್ಲದೆ ಪೇಟೆಯ ಕಡೆ ಕೂಡಾ ಬೆಳೆಯಲಾಗುತ್ತದೆ. ಕೆಂಪು ಮಣ್ಣು ಮತ್ತು ನೀರಿನ ಆಸರೆ ಇದ್ದರೆ ೩೬೫ ದಿನ ಮಲ್ಲಿಗೆ ಬೆಳೆಯುತ್ತಲೇ ಇರುತ್ತದೆ. ಇದು ಒಂದು ಲಾಭದ ಬೆಲೆ. ನಮ್ಮ ಕಡೆ ಇದಕ್ಕೆ "ವೈಟ್ ಬಿಸಿನೆಸ್ಸ್ " ಅನುತ್ತಾರೆ . ಮಲ್ಲಿಗೆ ಹಾಲಿನ ತರಹ ಇರುವುದರಿಂದ ಇದಕ್ಕೆ ಈ ಅನ್ವರ್ಥನಾಮ. ಮಲ್ಲಿಗೆ ಬೆಳೆಗೆ ಶ್ರಮ ತುಂಬಾ ಇದೆ. ಬೇಸಿಗೆ ಕಾಲದಲ್ಲಿ ಮಲ್ಲಿಗೆ ಗಿಡಗಳ ಬುಡ ಬಿಡಿಸಿ , ಹುಲ್ಲು ತೆಗೆಯದಿದ್ದರೆ ಹೂವೇ ಬಿಡೋಲ್ಲ. ದಿನ ತಪ್ಪದೆ ನೀರು ಹಾಕಬೇಕು . ಮಳೆಗಾಲದ ರಗಳೆಯೇ ಬೇರೆ . ಬುಡ ಏರಿಸಿ ಒಂದು ತೊಟ್ಟು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮೊದಲ ಮಳೆ ನೀರಿಗೆ ಒಮ್ಮೆಲೇ ಮಲ್ಲಿಗೆ ಬೆಳೆ ಜಾಸ್ತಿಯಾಗುತ್ತೆ . ಕೆಲವೊಮ್ಮೆ ಕೊಯ್ದು ಕೊಯ್ದು ಸಾಕಾಗಿ ಗಿಡದಲ್ಲೇ ಬಿಡ ಬೇಕದ ಪ್ರಸಂಗ ಕೂಡಾ ಬರುತ್ತೆ.
ಮಳೆಯ ರಭಸ ಹೆಚ್ಚಿದಂತೆ ಮಲ್ಲಿಗೆಯ ಮೊಗ್ಗುಗಳು ಕಡಿಮೆಯಾಗುತ್ತಾ ಹೋಗುತ್ತದೆ. ಹೂವಿನ ಗಾತ್ರ ಕೂಡಾ ಕ್ಷೀಣಿಸುತ್ತದೆ. ಚಲಿಗಳದ್ದಲ್ಲಿ ಗಿಡಗಳು ಸೊಟ್ಟು ಕಟ್ಟಿ ಚಿಗುರು ಇಲ್ಲದಾಗುತ್ತದೆ. ಮಲ್ಲಿಗೆ ಮೊಗ್ಗುಗಳು ಚಳಿಗೆ ಮುರುಟಿ ಹೋಗುತ್ತವೆ. ಹೀಗೆ ಹವಾಮಾನಕ್ಕೆ ತಕ್ಕಂತೆ ಮಲ್ಲಿಗೆ ಗಿಡಗಳನ್ನು ರಕ್ಷಿಸಿಕೊಂದು ಬರುವುದು ಸುಲಭ ದ ಕೆಲಸವಲ್ಲ. ಕೂಲಿನಾಲಿ ದೊರೆಯದ ಪ್ರಸಕ್ತ ಪರಿಸ್ಥಿತಿಯಲ್ಲಿ ಮಲ್ಲಿಗೆ ಗಿಡದ ಆರೈಕೆ ಬಾಣಂತಿ ಯ ಆರೈಕೆಗಿಂತ ಕಡಿಮೆಯೇನು ಇಲ್ಲ . ಪರಿಶ್ರಮದ ಫಲವಂತು ಇದ್ದೆ ಇದೆ. ಇದು ನನ್ನ ಸ್ವಂತ ಅನುಭವ.
ನಮ್ಮದು ಕೃಷಿ ಪ್ರಧಾನ ಮನೆ. ಏನಿದ್ದರೂ ಮಣ್ಣಿನಿಂದಲೇ ಉತ್ಪತ್ತಿ. ಸಣ್ಣ ಸಣ್ಣ ಗದ್ದೆಗಳು . ಅದಕ್ಕೆ ತಕ್ಕಂತೆ ನಮ್ಮಲ್ಲಿ ಎತ್ತು ಗಳಿದ್ದವು . ಒಂದು ಕಪ್ಪು ಕೊಂಬು ಬಾಗಿದ ಬಾಚ ಎತ್ತು ಇನ್ನೊಂದು ಕೆಂಪು ಬಣ್ಣದ ಮೈರ . ಕೃಷಿಯಿಂದ ಬಂದದ್ದು ಬಾಯಿ ತನಕ ಮಾತ್ರ . ತಿಂದು ಉಡಲು ಸಾಕಾಗುತ್ತಿತ್ತು . ನಾವು ಆಗ ೧೨-೧೩ ವರ್ಷದವರು . ನಮ್ಮೂರಿನ ಮೂಡುಮನೆಯ ಶೀನ ಪೂಜಾರಿಯ (ಮಾವನವರು) ಮನೆಯಲ್ಲಿ ಆಗ ಮಲ್ಲಿಗೆ ಕೃಷಿ ಉಛ್ರಾಯ ಸ್ಥಿತಿಯಲ್ಲಿತು . ನಾವು ದಿನ ಬೆಳ್ಳಿಗೆ ಅಲ್ಲಿ ಹೂವು ಕೊಯ್ದು ಅವರಿಗೆ ಬಾಳೆಯ ದಾರದಿಂದ ನೇಯ್ದು ಕೊಡುತಿದ್ದೆವು. ಅವರು ನಮಗೆ ಪುಸ್ತಕಕ್ಕೆ ಬೇಕಾದ ಹಣವೆಲ್ಲ ಕೊಡುತಿದ್ದರು. ಒಂದು ದಿನ ತಮ್ಮನಿಗೆ ಇದ್ದಕ್ಕಿದಂತೆ ನಾವು ಕೂಡಾ ಮಲ್ಲಿಗೆ ಗಿಡ ನೆಡೋಣ ಎಂಬ ಯೋಚನೆ ಬಂತು . ಅವನ ಯೋಚನೆ ಕಾರ್ಯಗತವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ . ಶ್ರಾವಣ ಕಳೆದು ಮಳೆ ಕಡಿಮೆ ಆಗುವ ಹೊತ್ತಿಗೆ ಶೀನ ಮಾವನವರಿಂದ 16 ಗಿಡಗಳನ್ನು ತಯಾರು ಮಾಡಿ ಬೆಟ್ಟು ಗದ್ದೆಯಲ್ಲಿ ನೆಟ್ಟದ್ದು ಆಯಿತು . 16 ರಲ್ಲಿ ೮ ರಿಂದ ೧೦ ಗಿಡ ಮಾತ್ರ ಜೀವ ಪಡೆಯಿತು. ಮತ್ತೆ ಹೂವು ಬಿಡಲು ಇನ್ನು ೬ ತಿಂಗಳು ಕಾಯಬೇಕಿತ್ತು. ಸುಮಾರು ಏಪ್ರಿಲ್ ವೇಳೆಗೆ ಎಲ್ಲಾ ಗಿಡಗಳಲ್ಲಿ ಚಿಗುರು ಕಾಣಿಸಿಕೊಂಡು ಹೂವು ಆರಂಭವಾಯಿತು. ಅಂದಿನಿಂದ ಇಂದಿನ ವರೆಗೂ ನಮ್ಮ ಆರ್ಥಿಕ ಪರಿಸ್ಥಿತಿ ಒಂದು ಮಟ್ಟದಲ್ಲಿ ಸುಸ್ಥಿತಿಯಲ್ಲಿದೆ.
ಮಲ್ಲಿಗೆ ಒಂದು ವಾಣಿಜ್ಯ ಬೆಳೆ. ಮನೆಯಲ್ಲಿ ತುಂಬಾ ಜನವಿದ್ದರೆ ತುಂಬಾ ಒಳ್ಳೆಯ ಬೆಳೆ. ಮಲ್ಲಿಗೆ ಹೆಣೆಯಲು ಬೇಕಾದ ಬಾಳೆಗಿಡದ ನೂಲಿನ ಉಂಡೆ ತಯಾರಿಸಬೇಕು. ಬೆಳ್ಳಿಗೆ ಎದ್ದ ಕೂಡಲೇ ಇದ್ದ ಹೂವನ್ನು ಕೊಯ್ಯ ಬೇಕು. ಬಿಸಿಲು ಬಿತ್ತೆಂದರೆ ಬಿಸಿಲಿನ ಪ್ರಕರತೆಗೆ ಹೂವು ಕಾಣಿಸುವುದಿಲ್ಲ. ಕೆಲವೊಮ್ಮೆ ಕೊಡೆ ಹಿಡಿದು ಮಲ್ಲಿಗೆ ಕೀಲ್ಬೇಕಾಗುತ್ತದೆ. ಮಲ್ಲಿಗೆ ಗಿಡದ ಒಂದು ವಿಶೇಷ ಅಂದರೆ ಸಣ್ಣ ಎಲೆಯ ಗಿಡದಲ್ಲಿ ಹೂವು ಜಾಸ್ತಿ . ಮತ್ತೆ ಒಂದು ಚಿಗುರಿಗೆ ೩ ಹೂವು. ಇದಕ್ಕಾಗಿ ಗಿಡಗಳು ಸದಾ ನಳನಳಿಸುತಿರಬೇಕು . ಇದಕ್ಕಾಗಿ ನೆಲಕಡಲೆಯ ಹಿಂಡಿಯನ್ನು ನೆನೆಸಿಟ್ಟು ಗಿಡಗಳಿಗೆ ಹಾಕಿ ಚೆನ್ನಾಗಿ ನೀರು ಹರಿಸಬೇಕು .ಹುಳ ಹುಪ್ಪಡಿಗಳು ಎಲೆ ತಿನ್ನದಂತೆ ಕೀಟನಾಶಕಗಳನ್ನೂ ಕೂಡಾ ಸಿಂಪಡಿಸಬೇಕಾಗುತ್ತೆ .ಮಲ್ಲಿಗೆ ಗಿಡ ಇರುವವರಿಗೆ ಬೆಳ್ಳಿಗೆ ೧೨ ಗಂಟೆ ತನಕ ಮನೆ ಬಿಡುವ ಹಾಗಿಲ್ಲ. ಹೂವು ಕೊಯ್ದು ,ನೇಯ್ದು ಹೂವಿನ ಕಟ್ಟೆಗೆ ೧೨ ಗಂಟೆಯ ಒಳಗೆ ಕೊಡಬೇಕು . ನಂತರ ಬಂದ ಹೂವನ್ನು ಸ್ವೀಕರಿಸುವುದಿಲ್ಲ. ಈ ಕಟ್ಟೆಯವರದ್ದು ಪಾಡು ಬೇರೆಯೇ.
ಸುಮಾರು ಒಂಬತ್ತು ಗಂಟೆಗೆ ನೇಯ್ದ ಹೂವು ಗಳು ಚೆಂಡು ಮತ್ತು ಅಟ್ಟೆಯ ರೂಪದಲ್ಲಿ ಇವರ ಕೈ ಸೇರುತ್ತೆ . ಒಂದು ಚೆಂಡು ಅಂದರೆ ೬ ಸುತ್ತುಗಳು. ಒಂದು ಸುತ್ತಿಗೆ 120 ರಿಂದ 150 ಹೂ ಇರುತ್ತದೆ. ಅಂದರೆ ಒಂದು ಚೆಂಡು ಅಂದರೆ ೭೦೦ ರಿಂದ ೮೦೦ ಹೂವು ಇರುತ್ತದೆ. ೪ ಚೆಂಡು ಒಟ್ಟಿಗೆ ಸೇರಿ ಒಂದು ಅಟ್ಟೆ ಆಗುತ್ತದೆ. ಇನ್ನು ಕಟ್ಟೆಗೆ ಬಂದ ಹೂವುಗಳು ಅವರ ಕೈಯಿಂದ ಇನ್ನೂ ಗಿಡ್ಡವಾಗಿ ಶಂಕರಪುರದಲ್ಲಿ ಮಧ್ಯವರ್ತಿಗಳ ಕೈ ಸೇರುತ್ತೆ . ಅಲ್ಲಿ ಅಂದಿನ ಧಾರಣೆ ನಿರ್ಧಾರವಾಗುತ್ತದೆ. ಅಲ್ಲಿಂದ ಮಂಗಳೂರು ಏರ್ಪೋರ್ಟ್ ಮೂಲಕ ಮುಂಬೈ , ದುಬೈ ಮತ್ತಿತರ ಕಡೆಗಳಿಗೆ ಸಾಗುತ್ತದೆ.
ನನ್ನ ತಾಯಿಗೆ ತುಂಬಾ ಇಷ್ಟ , ನಾವದನ್ನ ಮಂಗಳೂರು
ReplyDeleteಮಲ್ಲಿಗೆ ಅಂತಿವಿ. ಶಂಕರಪುರದ ಮಲ್ಲಿಗೆ ಅಂತ ಗೊತ್ತಿರ್ಲಿಲ್ಲ.
ಬರಹ ಚೆನ್ನಾಗಿದೆ
ಸ್ವರ್ಣಾ