Saturday, September 1, 2012

ನಿನಗಾಗಿ


  ನಿನಗಾಗಿ

ಹಾಲು ಗಲ್ಲದ ಹುಡುಗಿಯ ಅಂದು ಕಂಡು
ಕಂಬಳದ ಗದ್ದೆಯಲ್ಲಿ ಉದ್ದಿನ ಮೊಟೆಯನು
ಹೊರುವಾಗ ಉದ್ದ ಲಂಗದಲ್ಲಿ  ಸಣ್ಣ ಹೆಜ್ಜೆ
ಕದವ  ದೂಡಿ ಎನ್ನ ಹೃದಯದಲಿ  ಅಡಿ ಇಟ್ಟೆ......

ಟೊಂಕದಾಟದಲಿ ಸಿಕ್ಕಿಬೀಳುತ್ತಾ
ಕಣ್ಣಮುಚ್ಚಾಳೆಗೆ ಒಟ್ಟೊಟ್ಟು ಅಡಗಿದಾಗ
ಹುಟ್ಟಿಕೊಂಡ ಪ್ರೀತಿ ಮಾತಿಲ್ಲದ ಬರಿ ಮೌನ
ಬೇಸಿಗೆಗೆ ನದಿಗೆ ಗಾಳ ಹಾಕುವಾಗ ಸಿಕ್ಕಿ
ಬೆಸೆದು ಕೊಂಡ ಬೆಸುಗೆ...ಮೆಲ್ಲನೆ ನಕ್ಕಿದ್ದು !

ಉದ್ಯಾವರದ ಜಾತ್ರೆಯಲ್ಲಿ ಮಲ್ಲಿಗೆ ಕೊಡಿಸಿದ್ದೆ
ಚಿಕ್ಕಮ್ಮನ  ಜೊತೆ ಬಂದಿದ್ದ ನೀನು
ಚಿಕ್ಕ ಓಣಿಯಲಿ ಎದುರಾದಾಗ ಧಾವಣಿ ಸಿಕ್ಕುಸಿಕ್ಕದಾಗ
ಬಿಡಿಸಿದ ನನ್ನ ಕೆನ್ನೆಗೆ ಬಿಸಿ ಮುತ್ತು ಸವರಿತ್ತು !

ಸಂಪಾದನೆಯ ಗುಂಗು ಹಿಡಿದು ದೂರದ ಮುಂಬೈಗೆ
ಹೊರಟಾಗ ಉಡುಪಿ ಶ್ರೀಕೃಷ್ಣನ ಪ್ರಸಾದ ಕೊಟ್ಟಿದ್ದೆ
ಅಲ್ಲಿಂದಲೇ ನೀ ನನ್ನ ರಾಧೆಯಾದೆ..ದೂರವಾದೆ
ಪತ್ರದಲ್ಲೊ ನೆನೆಪಲ್ಲೊ ನೀ ಮನದ  ರಾಣಿಯಾದೆ

ನಿನಗಾಗಿ ಇಂದು ಬಂದು ಕಾದಿರುವೆ....ಅದ್ಯಾಕೊ
ನೀ ಭರದ ಹೊಳೆಯಲಿ ನಿನ್ನವರ ದಾಟಿಸಲು ಹೋದೆ..
ಮತ್ತೆಂದು ಹಿಂದಿರುಗಿ ಬಾರದ ಹಾಗೆ....
ಕಣ್ಣು ತುಂಬಿ ಧಾರೆಯಾಗಿದೆ....ಅದೇ ಹೊಳೆ
ಜಿನುಗುತಿದೆ ಮತ್ತೆ ಮಳೆ ಏಕಾಂಗಿ ಕಾದಿರುವೆ
ಬರುವಿಗಾಗಿ....ನಿನಗಾಗಿ........

-ಅಕುವ

No comments:

Post a Comment