Saturday, September 1, 2012

ಮುಚ್ಚುತ್ತಿರುವ ಶಾಲೆಗಳೇ ??


ಮುಚ್ಚುತ್ತಿರುವ ಶಾಲೆಗಳೇ ??

ಮಣ್ಣು ಮೆತ್ತಿದ ಚಪ್ಪಲಿಲ್ಲದ
ನಸುಗೆಂಪು ಕಾಲುಗಳು
ಕೇಳುತಿದೆ ಶಾಲೆಯ ಗಂಟೆ
ಕೇಕೆ ಹಾಕುತ್ತ ತುಂಬಿದ ಮೈದಾನ
ಧ್ವಜ ಸ್ತಂಭದ ಮುಂದೆ ಪ್ರಾರ್ಥನೆ
ಹಾರುತ್ತಿದ್ದ ಬಾವುಟ ..ಹೂಮಳೆ..
ನೆತ್ತಿ ಮೇಲೆ ಬಿರುಬಿಸಿಲು...
ಧ್ಯಾನವೆಲ್ಲಾ ಮರದಿ ಕೂತ
ಓತಿಕೇತದ ಮೇಲೆ !

ಹರಿದ ಚಡ್ಡಿ ಬಣ್ಣದರಿವೆಯ ತೇಪೆ
ಕಾಲೆಳೆಯುವ ಕಬಡ್ಡಿ !
ನಾಗರ ಬೆತ್ತದ ಶ್ರೀನಿವಾಸ ಮೇಷ್ಟ್ರು
ಡೆಸ್ಕು ಒಳಗೆ ದೇವರ ಪೂಜೆ
ಬೆಂಚು ಸುಟ್ಟ ಊದುಬತ್ತಿ...!
ಪ್ರಸಾದ ತಿಂದ ಹಿಂದಿ ಪಂಡಿತರು !

ನಾವೇ ನೆಟ್ಟ ತೆಂಗಿನ ಗಿಡ
ರಾಟೆಯಲ್ಲಿ  ಇಳಿದ ಬಾವಿಯ ನೀರು !
ಎಲ್ಲದಕ್ಕೂ  ಸಾಲು ಸಾಲು
ಸಂಜೆಯ ಆಟ...ಓಡುವುದೇ ಪರಿಪಾಠ!

ಸರಿದ ದಿನಗಳು...ಬದಲಾದ ಸರಕಾರಿನಿಯಮಗಳು
ಮುಚ್ಚುತ್ತಿವೆ ಶಾಲೆಗಳು....ಮಾಸುತ್ತಿದೆ ಸ್ಥಾವರ
ಪಾಚಿ ಗಟ್ಟಿದ ಗೋಡೆ !
ಜಂಗಮನ ಜ್ಞಾನ  ದೇಗುಲ ...ಮತ್ತೊಮ್ಮೆ ಘಂಟೆ
ಒಳಗೊಳಗೆ ಬಡಿದು ಪೂಜೆ ಗೈದಿದೆ !

-ಅಕುವ

No comments:

Post a Comment