Thursday, July 7, 2011

ಕಲಿ ಪುರುಷ

ಕಲಿ ಪುರುಷ

ಹಿಂದೊಮ್ಮೆ ಬಯಲಾಟದಲಿ ಮೈಸಾಸುರನಗಿದ್ದ
ಮೈಯೆಲ್ಲ  ಬೂದಿ  ಹಚ್ಚಿ  ಭಸ್ಮಾಸುರನಾಗಿದ್ದ
ಅಟ್ಟಹಾಸದಿ ಮೆರೆದ ದುರ್ಯೋಧನನಾಗಿದ್ದ
ಘಟ ದೇಹ ಹೊಂದಿ ಕಲಿ ಎನಿಸಿದ್ದ .

ಈಗ ವೇಷವಿಲ್ಲ ಬಿಳಿ ಕೂದಲು
ಹಣ್ಣಾಗಿದೆ ದೇಹ
ನಡುಗುತಿದೆ ಕಾಲು
ಬಾಯಿ ಅಂಟಿದೆ

ಗರಡಿ  ಪಡೆಯು ಬಯಲಾಟ ಆಡಲಿದೆ
ಚೆಂಡೆಯ ಸದ್ದು ಕೇಳುತಿದ್ದ
ಸಣ್ಣ  ಹೆಜ್ಜೆಯ  ಮತ್ತೆ ಕಲಿಯುತಿದ್ದ !
-ಅಕುವ

ಚುಕ್ಕಿಗಳು


ಚುಕ್ಕಿಗಳು


ಬಾನನ್ನು ಬೆಳಗುತಿರುವ 
ಚುಕ್ಕಿಗಳೇ
ಶತಶತಮಾನಗಳಿಂದ 
ನಗುತಿರುವಿರಿ ನೀವು
ಆಸೆ, ಅತಿಯಾಸೆ , ಮೋಹ 
ತುಂಬಿಕೊಂಡು 
ಅಳುವವರು ನಾವು
ಚುಕ್ಕಿಗಳು ಬರೀ
ಕಪ್ಪು ಚುಕ್ಕಿಗಳು !


-ಅಕುವ

ಭುವಿಯ ಹಾಡು

ಭುವಿಯ ಹಾಡು

ಗಗನ  ಬಿರಿದು  ಮೋಡ ಹರಿದು
ಬಂದಿತೋ ಔತಣ
ಒಣ ಭೂಮಿಯ ಹಸಿವು ತೀರಿ
ಸುರಿದಿದೋ ಜಣ ಜಣ
ರಾಗಿ ಬೇಳೆ ಅಕ್ಕಿ ಹೂವು ಸಕ್ಕರೆ
ಇಳೆ ಬಿರಿದು ನಕ್ಕರೆ
ಹಸಿರು ಪಚ್ಚೆ ಸಾಲು
ನೆಲದ ಮೇಲೆ ಹಕ್ಕಿ ಕಾಲು
ನದ ನದಿಗಳಲಿ ನೀರ ಸಾಲು
ಕೋಗಿಲೆಗಳ ಹಾಡಿನ ಹಾಲು
ಅಹಾ ! ಎನ್ನ ಮನದ ಹಾಡು
ಇದೇ ಈ ಭುವಿಯ ಹಾಡು!

-ಅಕುವ

ಸಾಲುದೀಪ

 ಸಾಲುದೀಪ

ಕಣಜ ತುಂಬಿ ಮನ ತುಳುಕುತಿರಲು ಬಲೀಂದ್ರನ ಕೂಗಿ
ತೆಂಗಿನೆಲೆಯ ದೀವಟಿಗೆ ಎಣ್ಣೆ ಮೆದ್ದ ಕೋಲುದೀಪ !
ಹೊಲ ಗದ್ದೆ ಗೊಬ್ಬರದ ರಾಶಿ ಅಡಿಕೆ ತೆಂಗು ಬಾಗಿ
ದೇವರ ಗುಡಿಯ ಸುತ್ತ ಎಣ್ಣೆ ಹಣತೆ ಹಚ್ಚಿ ಸಾಲುದೀಪ !

ಬೈಲಂಗಲ ಬೆಳಗು ಮಾಡಿ ಅಮಾವಾಸ್ಯೆಯ ಕತ್ತಲ ದೂಡಿ
ದೀವಟಿಗೆ ಸಾಲುಗಳ ಬಾಣವ ಗಗನಕ್ಕೆ ಹೂಡಿ
ಮತ್ತೆ ಮೆರೆದಿದೆ ವಿಜಯ ತಾಮಸ ಕೂಟಗಳ ಸದೆಬಡಿದು
ಕತ್ತಲೆಯ ಸೀಳಿ ಬತ್ತಲೆ ಗೊಂಡಿದೆ ಮೆರೆದಿದೆ ಬೈಲದೀಪ !

ಗೋವಿಂದನ ಕೂಗಿ ಶ್ರೀನಿವಾಸನ ಆರಾಧಿಸಿ ಲಕ್ಷ್ಮಿಯ ಒಲಿಸಿ
ಶ್ರೀತುಳಸಿಗೆ ತಲೆಬಾಗಿ ಕಬ್ಬು ನೆಟ್ಟು  ಹಚ್ಚಿ ಬೆಣ್ಣೆ ದೀಪ
ಉಡುಪಿಯ ದೇವನ ನೆನೆದು ಮನೆತುಂಬ ಹಚ್ಚಿ ಸಾಲುದೀಪ !
ಬೀದಿ ಬೀದಿಯ ರಂಗೋಲಿ ಚಿತ್ತಾರ ಮತ್ತೆ ಹಚ್ಚಿದೆ ಲಕ್ಷದೀಪ !

ಹೊಸ ಉಡಿಗೆ ಅಡಿಗೆ ಮೆರಗು ತಂದಿದೆ ಬೆಲ್ಲದ ಪಾನಕ
ಮನ ಉಲ್ಲಾಸ ಬೆರಗಿನ ಸಿಡಿಮದ್ದು ರಂಗಿನ ದ್ಯೋತಕ
ಮತ್ತೆ ಜೋಕಾಲಿ ಹಾಡಿದೆ ಪುಳಕಗೊಂಡು ಗೂಡುದೀಪ !
ಅದ ಕಂಡು ಹಸನಾಗಿ ನಗುತಲಿದೆ ಸಾಲುದೀಪ !

                              - ಅಕುವ
                                ೧೯/೦೮/೨೦೧೦

ನೀ ಮುಂದೆ ನಿಂದೆ !

 ನೀ ಮುಂದೆ  ನಿಂದೆ !

ಮೊಂಬತ್ತಿ ಬೆಳಕಿನಲಿ ನೀ ನಡೆದು ಬಂದೆ
ಜರತಾರಿ   ನೀಲಿ ಸೀರೆ ನೀನುಟ್ಟು ನಿಂದೆ !
ಉಬ್ಬಿದ ಹುಬ್ಬು ತುಂಬಿದ  ನಗು  ಮೊಗದಲಿ
ಕೈಯಲ್ಲಿ ಸೀರೆಯ  ನೆರಿಗೆ !
ಪಾದವ ಆವರಿಸಿ ಗೆಜ್ಜೆಗಳ ಬೆಳ್ಳಿ ಸರಿಗೆ !

ಇಂಚಿಗೊಂದು  ಪಾದ ಬೆಳೆಸಿ ನಿನ್ನ ಸವಾರಿ
ಸಾಗಿತ್ತು  ಎನ್ನೆಡೆ ಇಲ್ಲದೆ ಯಾರ ರುವಾರಿ
ಏನದೋ ಬಿರಿದ  ತುಟಿ ತುಂಬಾ  ನಗುವು
ಹಲ್ಲು ತೋರಿ ನಗುವ  ಸಣ್ಣ ಮಗುವು !

ಕಣ್ಣು  ಪಿಳಿಪಿಳಿಯಾಡಿಸಿದೆ  ಒಂದೆಡೆ ನಿಲ್ಲದೆ
ಯಾವುದೋ ತುಮುಲದಲಿ ಎನ್ನ ಹುಡುಕಾಟದಿ
ಸೆರಗಿಗೆ ಮೆರಗು ಕೊಡಿಸಿದೆ ಇನ್ನೊಮ್ಮೆ ಸರಿಪಡಿಸಿ
ದೃಷ್ಟಿಯ ನೆಟ್ಟಿದೆ ಓಮ್ಮೆಲೆ ನನ್ನ ಮೇಲೆ !

ಸೋತು  ಹೋದೆ  ನಾ ನಿನ್ನ ನೋಟಕೆ
ಸೌಂದರ್ಯದಾಟದಿ ಬೆರಗಾದೆ ನಿನ್ನ  ಮಾಟಕೆ
ನಿನ್ನ  ಸಿಂಹ ಕಟಿಯ  ಬಳಸುವ ಬಯಕೆ
ನಿನ್ನ  ಜೇನಿಗೆ ದುಂಬಿಯಾಗಲೇ ಓ ನನ್ನಾಕೆ !
       -ಅಕುವ
                      ೨೭/೦೭/೧೯೯೯
(ಇದು ಮುಂಬೈಯಲ್ಲಿ ಬರೆದ  ಮೊದಲ ಕವನ)

ಬಿಡುಗಡೆ

ಬಿಡುಗಡೆ

ಉದ್ದ ಹಾದಿಯಲಿ  ನಡೆದು
ಸಣ್ಣನೆ   ಇಕ್ಕೆಲದ  ತಿರುವಿನಲಿ
ಅಡ್ಡಲಾಗಿ ಬೆಳೆದ ಗೋಲಿ ಮರದ
ಇಳಿದ  ಬೀಳಿನಲಿ ನೇತಾಡುವ ಮಕ್ಕಳಿಗೆ ......!

ಬೆತ್ತ ಹಿಡಿವ  ಮೇಸ್ಟ್ರು ಬಾರದ ದಿನ
ಇಪ್ಪತ್ತು ಮಗ್ಗಿ  ಕೇಳದ
ಒಪ್ಪೊತ್ತು ಶಾಲೆಯ  ಗಂಟೆ ಬಾರಿಸುತ
ಬೇಸಗೆ  ರಜೆ  ಸಾರಿದ  ದಿನ............!

ಹೆಚ್ಚೊತ್ತು  ಲೈಬ್ರರಿ ಇಲ್ಲದೆ
ಕಾಲೇಜು ಮುಗಿದು  ಬಂದನ ಬಿಗಿದು
ಕೆಲಸಕೆ  ತಿರು ತಿರುಗಿ  ಸೋತು
ಮತ್ತೆ  ಆಫೀಸು ಸೇರಿದ ಮೊದಲ ದಿನ ನೆನೆದಾಗ .....!

ಕಾತ್ಯಾಯಿನಿಯ ಕೈ ಹಿಡಿದು  ಮಗ ರಾಹುಲನ
ಊರಿನ ಹಾದಿಯಲಿ  ಕರೆತರುವಾಗ
ಮತ್ತದೆ ಗೋಲಿಮರ ಬೀಳುಬಿಟ್ಟಿತ್ತು
ಹಿಡಿದೊಮ್ಮೆ  ಜೋತು  ಬಿದ್ದಾಗ ಬಿಡುಗಡೆ ......!

                             - ಅಕುವ