Saturday, September 22, 2012

ಜಂಗಮ ಮತ್ತು ಸ್ಥಾವರ


ಜಂಗಮ ಮತ್ತು ಸ್ಥಾವರ

ವಿದ್ಯೆಯದು ಸದ್ದು ಮಾಡದ ಮದ್ದು
ಅತಿ ಮುದ್ದು ಮಾಡಿ ಕಲಿಸಿ
ಸಗ್ಗ ಸುಖದ ಹಿಗ್ಗಿನಲ್ಲಿ
ರೆಕ್ಕೆ ಪುಕ್ಕಕ್ಕೆ ಹಣದ ಕನಸ ಕಟ್ಟಿ
ನೆನಪ ತೊರೆದೆ ಹಾರ ಕಲಿಸಿದವನ!

ಕೋಶ ಓದಿ ದೇಶ ಸುತ್ತಿ
ಹಣದ ಅಳತೆಗೋಲು ಹಿಡಿದು
ಬಡವ ಬಲ್ಲಿದನ ಕಲ್ಪಿಸಿದೆ!

ಅಕ್ರಮದ ಸಂಪತ್ತಿನಲಿ ಸಭೆಕರೆದು
ಮಹಾಪೋಷಕನ ಪೋಷಾಕಿನಲ್ಲಿ
ಸವಕಲು ಪಾವಲಿಯ ಅಪಾತ್ರ ದಾನ!
ನಕಲಿ ಗೌರವ, ಒಣ ಪ್ರತಿಷ್ಠೆಗೆ
ಹಲ್ಲು ಬಿಟ್ಟ ಬಣ್ಣದ ಫೋಟೋ
ಪತ್ರಿಕೆಯ ದಿನಚರಿಯಲ್ಲಿ!

ನಿನ್ನದೇ ನಾಮಧೇಯ
ಬಸ್ಸು ತಾಣ,ಶೌಚದ ದ್ವಾರಕೂ!
ಹೆಗ್ಗಳಿಕೆಯ ಸೋಗಿನಲಿ
ಪೊಳ್ಳು ಪುರುಷೋತ್ತಮನಾಗಿ
ಗುಡಿಗೆ ಅಮೃತಶಿಲೆಯ ಮುಚ್ಚುವೆ
ಎದ್ದು ಬರಬಾರದೆಂದು ಕಲ್ಲಿನ ರುದ್ರ
ಏರಿಸಿ ಬಿಡುವೆ ಗೋಡೆಗೋಪುರವನ್ನು!

ಕೋಟಿ ಸುರಿಯುವೆ ಸ್ಥಾವರಕ್ಕೆ
ಕೋಟಿ ಜೀವನಾಡಿಗೆ ನೀ ಮಿಡಿಯಲಿಲ್ಲ!
ಅಡಿಕೆ ಜಗಿದು ಪೀಕುದಾನಿ ತುಂಬುವ ಹೊತ್ತು
ಹಡೆದವ್ವ ಅಪ್ಪ ನಿನ್ನ ಆಶ್ರಯಿಸಲು
ಒಡನೆ ಹುಡುಕುವೆಯಲ್ಲಾ ಆಶ್ರಮ
ಜಂಗಮರಂತೆ ಸವೆಸಿದ ಶ್ರಮ
ಅವರೊಲುಮೆಯನು ಅವಾಸ್ತವದ
ತಕ್ಕಡಿಯಲಿ ನಿಯತ್ತಿಲ್ಲದೆ ತೂಗಿದೆ !

ಜಂಗಮರರಿಯದೆ ಸ್ಥಾವರವ ಪೂಜಿಸುವೆ
ಸ್ಥಾವರವು ತಡೆಯೋ ಜಂಗಮರಿಗೆ
ಜಂಗಮಕ್ಕಳಿವೋ ಸ್ಥಾವರಕ್ಕಳಿವೋ

-ಅಕುವ
೧೬/೦೯/೨೦೧೨

No comments:

Post a Comment