Tuesday, January 21, 2014

ಸಂಘರ್ಷ

ಸಂಘರ್ಷ 

ಇಂದು ನಿನ್ನೆಗಳದಲ್ಲ ಇದು 
ಹುಟ್ಟು ಸಾವೆಂಬ ಭವ -ಭಯ 
ಮೊಳಕೆಗೆ ಝರಿ ನೀರಲಿ 
ಕೊಳೆಯುವ ಕಳೆಯುವ ಅಂಜಿಕೆ  

ಮೊಣಕಾಲೂರಿ ದೈನನಾಗಿ 
ಪ್ರಪಂಚ ನೋಡಿದಂದಿನಿಂದ 
ಸಾಧನೆಯ ಹುಚ್ಚು ಮೇಲೇರುವ ಕೆಚ್ಚು 
ಅಂದೇ ಶುರುವಾಯಿತು ನೋಡಿ ಸಂಘರ್ಷ !

ಬೀಸುತಿದ್ದ ಗಾಳಿ ಹರಡುತ್ತಿದ್ದ ಬೆಳಕು 
ಎಲ್ಲಾ ಸೀಳಿಕೊಂಡು ವೇಗ ಹಿಡಿದ ಕನಸು 
ಈ ಮಧ್ಯೆ ಹತೋಟಿ ಕಳಕೊಂಡ ಮನಸ್ಸು 
ಜರ್ಜರಿತ  ದೇಹಕ್ಕೆ ಮತ್ತೆ ವಾಪಾಸಾಗದ ಆಯಸ್ಸು !

ಬೇಸರಾಗಿ  ಬೇಡದ  ಜೀವಕ್ಕೆ  
 ಸಮಾಜ ಕಟ್ಟಿದ್ದ ಸಂಗಾತಿ 
ಹೊಸ ಜೀವ ಹೊಸ ಮೋಡಿ 
ಬೆಂಬಿಡದ ಸಂಸಾರ ಮತ್ತೊಂದು ಸಂಘರ್ಷ !

ಸುಸ್ತಾಗಿ ದುಸ್ತರದಿ ಸುಮ್ಮನಿರಲು 
ಮುತ್ತಿಟ್ಟ ನಿವೃತ್ತಿ ! 
ಬೆಂಬಿಡೆನೆಂದು ಮತ್ತೆ ಹಿಂಬಾಲಿಸಿದೆ 
ಜೀವನವನ್ನು ರೂಪುಗೊಳಿಸಿದ .... 
ಸ್ವರೂಪಗಳ ಬದಲಿಸಿ ನಿಂತ ಅದೇ ಸಂಘರ್ಷ  !!


-  ಅಶೋಕ್ ಕುಮಾರ್ ವಳದೂರು ( ಅಕುವ )

ವೃದ್ಧಾಶ್ರಮ

ವೃದ್ಧಾಶ್ರಮ 

ಎಪ್ಪತ್ತರ ಹರೆಯದ ಮುದಿಕಂಗಳಲ್ಲಿ 
ಇನ್ನೂ ಉಳಿದಿದೆ ದೃಷ್ಟಿಯೆಂಬ ಬೆಳಕು 
ಆಶ್ರಮದ ಗೇಟು ಬಳಿ ನಿಂದು ದಾರಿ ಕಾಣಲು 
ದೂರದೂರಿಂದ ಬರುವ ಮನೆಯ ಅತಿಥಿಗೆ !

ಮೆಲ್ಲಗೆ ಸುರಿದ ಕಣ್ಣೆವೆಯ ಹನಿಗಳು 
ಮನದಾಳದ ಮಂಥನದ ಕಲಹವ
ಜತನದಿಂದ ಕಥೆಯಾಗಿ ಬಿತ್ತರಿಸಿದೆ !

ಪರಿವೆಯಿಲ್ಲದೆ ಕಳೆದ ಸಂತಸದ ಕ್ಷಣಗಳು
ಒಲವಿನಲ್ಲಿ ಹಾಡಿದ ನಂಟಿನ ಪದಗಳು
ಚಿಗುರೊಡೆದ ಲಲನೆಯ ಕೂಸುಗಳು
ತ್ಯಾಗ ಸಮರ್ಪಣೆಯ ಉದಯರಾಗಗಳು
ಸಾಲದುದಕ್ಕೆ ಸಾಲದ ಭಾರೀ ಹೊರೆಗಳು !

ಇಂದು ಮಾತಿಲ್ಲ ಎಲ್ಲಾ ಮೌನ ! ಒಳಗೊಳಗೆ ಗೌಣ
ಸುಗ್ಗಿಯ ಹಾಡಿಲ್ಲ , ಹಿಗ್ಗಿನ ಕುಣಿತವಿಲ್ಲ
ಗಾಂಭೀರ್ಯದ ಹೆಜ್ಜೆ ಇಲ್ಲ ಮಾಧುರ್ಯದ ಸ್ವರವಿಲ್ಲ
ಹಚ್ಚಿ ಮಾತಾಡಲು ಅಚ್ಚುಮೆಚ್ಚಿನವರಿಲ್ಲ !

ಅಕ್ಕರೆಯ ನುಡಿಯೊಂದು ಒಪ್ಪೊತ್ತು ಸಾಕೆಂದೆ
ತ್ರಾಣವಿಲ್ಲದ ಮೈಗೆ ಊರುಗೋಲು ಅದೆಂದೆ
ದೂಡಿದರು ದೂರದ ವಾಸಕೆ...ಅಪಹಾಸ್ಯಕೆ
ತಬ್ಬಿ ಮುದ್ದಾಡುವ ಹೃದಯ ಬೇಕೆಂದೆ !

ನಿನ್ನವರ  ನೀನೆಂದೂ ಜರೆಯಲಿಲ್ಲ
ಕಾಲವನ್ನೇ ಕೆಟ್ಟದೆಂದೆ...ಕಾಲವೇ ಕೆಟ್ಟಿತ್ತೆಂದೆ!
ಇಂದಾದರೂ ಬರುವನೆಂದು.....
ಕದಡದೆ ನಿಂದೆ ಆಶ್ರಮದ ಬಾಗಿಲೊಳು..........!

- ಅಶೋಕ್ ಕುಮಾರ್ ವಳದೂರು (ಅಕುವ)

ನಿನ್ನದೇ ನಿರೀಕ್ಷೆಯಲಿ.......

ನಿನ್ನದೇ ನಿರೀಕ್ಷೆಯಲಿ.......
 ಸೋಜಿಗವದು ನೀ ನನಗೊಲಿದ ಪರಿ
ಸೋಕುವ ಚಳಿಗಾಲವು ಅಲ್ಲ ಆಗ
ಇನ್ನೇನೋ ವಸಂತನು ಬಂದಿರಲಿಲ್ಲ
ಹುಣ್ಣಿಮೆಯ ಚಂದಿರನು ಕರೆದಿರಲಿಲ್ಲ
ಇಬ್ಬನಿಯು ಜೇನಾಗುವ ಹೊತ್ತು
ಉದ್ಭವಿಸಿದೆ ನೀನು !

ಇಳಿದು ಬಂದೆಯೋ ಸೆಳೆದುಕೊಂಡೇನೋ ತಿಳಿಯೇ
ವೇಗದಲ್ಲಿ ಧುಮುಕಿದ ನಿನ್ನ ಎದೆಗಪ್ಪಿಕೊಂಡೆ
ಸಾಗರವ  ಬಯಸದೆ ನನ್ನೊಳಗೆ ಮನೆಮಾಡುವೆನೆಂದೆ
ಮನದ ಸರೋವರದಲಿ ತೊರೆ ತೊರೆಯಾಗಿ ತುಂಬಿಕೊಂಡೆ

ನಿನ್ನಾಳದಲಿ ನಾ  ದಿನ ಮಿಂದೆ..ತೇಲಾಡಿದೆ..ಈಜಾಡಿದೆ
ಲೀಲಜಾಲದಲಿ ವಿಹರಿಸಿದೆ..ನಿನ್ನಲ್ಲೇ ಪಸರಿಸಿದೆ
ಸುಪ್ತಳಾಗಿ ಆವರಿಸಿ ಗುಪ್ತಗಾಮಿನಿಯಾದೆ
ಗುಟ್ಟು ಬಚ್ಚಿಡಲು ಮನಸ್ಸು ಹೊಕ್ಕು ಕುಕ್ಕಿದೆ
ಹಿಗ್ಗಿನಲಿ ತುಳುಕುತಿದ್ದೆ !.

ನಿನ್ನ ಹರಿವು ನಿಲ್ಲಲಿಲ್ಲವೋ ನನ್ನ ಕಟ್ಟೆಯಲ್ಲಿ ಬಿರುಕೋ
ಮೆಲ್ಲನೇ ಸೋರಿದುದು ತಿಳಿಯಲೇ ಇಲ್ಲ !
ಸುಳಿವಿಲ್ಲದೇ ನೀ ಬತ್ತುತ್ತಿರೆ !

ಇಂದೇಕೋ ನಿನ್ನಯ ಬರವೇ ಇಲ್ಲ
ಗೆಜ್ಜೆ ಸದ್ದೇ ಇಲ್ಲ  ಲಜ್ಜೆಯ ನೋಟವೇ ಇಲ್ಲ
ಸದ್ದಡಗಿದೆ ಗುನುಗುಡುವ ಮನಸ್ಸು ಸ್ತಬ್ಧ
ಹಿತವೆನಿಸಿದ ಒಂದೊಂದು ಗಳಿಗೆ ಇಂದು ಅಹಿತವೇ?

ಎಂದಾದರೊಂದುದಿನ ಮನ ಬದಲಿಸಿ ಬರುವೆ
ಮತ್ತೆಲ್ಲಾ ನೆನಪುಗಳ ಮೂಟೆ ಹೊತ್ತು ತರುವೆ
ಸಿಕ್ಕುಗಳ ಬಿಡಿಸುತ್ತಾ ಸಗ್ಗದಲ್ಲಿ ಒಂದಾಗಲಾದರೂ
ಬರುವೆ....ಸುಗ್ಗಿಯಲಿ ಕಾಯುವೆ !

 -ಅಶೋಕ್ ಕುಮಾರ್ ವಳದೂರು (ಅಕುವ)

ಹೋರಿ ತಂದ ಕಥೆ

ಹೋರಿ ತಂದ ಕಥೆ
          "ಸುಧೀರಣ್ಣ ತೀರಿ ಕೊಂಡ" ಅಮ್ಮನ ಫೋನ್ ಬಂದಾಗ ತುಂಬಾ ಸಂಕಟ ಪಟ್ಟಿದೆ. ಬೇಸಾಯವನ್ನು ಪ್ರೀತಿಸಿದ ವ್ಯಕ್ತಿತ್ವ ಅದು.ಬಿಸಿಲು ಮಳೆಗಳು ಎಂದೂ ಆತನನ್ನು ಮುಟ್ಟಿದ್ದಿಲ್ಲ. ಚಳಿ ತಟ್ಟಿದ್ದಿಲ್ಲ. ಅದು ಮನೆಯ ಬೇಸಾಯದ ಕೋಣಗಳೇ ಆಗಲೀ ಕಂಬಳದ ಕೋಣಗಳೇ ಆಗಲಿ ಈತನಿಗೆ ಬಗ್ಗದೆ ಇರಲಿಲ್ಲ. ಕಂಬಳದ ಕೋಣನ ಕೊಂಬು ತಲೆಯ ನೆತ್ತಿಗೆ ಇರಿದಾಗ ರಕ್ತ ಹೋದದ್ದು ತಿಳಿಯಲಿಲ್ಲ. ಲೇಪದಲ್ಲೇ ಗುಣವಾದ ಗಾಯ ಮತ್ತೆ ಒಳಗೊಳಗೆ ಇಳಿದದ್ದು ಗೊತ್ತಾಗಲಿಲ್ಲ. ಮೊದ ಮೊದಲು ತಲೆನೋವಿದ್ದ ಅವರು ಮಣಿಪಾಲ ಆಸ್ಪತ್ರೆ ಸೇರಿದಾಗ ಪರಿಸ್ಥಿತಿ   ಕೈ ಮೀರಿ ಹೋಗಿತ್ತು. ಕೊನೆಯ ಸಲ ನನ್ನ ಭೇಟಿಯಲ್ಲಿ ಅವರ ಮೀಸೆಯಡಿಯ ನಗು ಮಾತ್ರ ನೆನಪಿದೆ. ಅವರೊಂದಿಗಿನ ಒಡನಾಟದ  ಒಂದು ಘಟನೆ ಎಂದಿಗೂ ಮರೆಯುವಂತದ್ದಲ್ಲ.
          ಅದಿನ್ನೇನೋ ನಾವು ಹೈಸ್ಕೂಲ್ ನಲ್ಲಿದ್ದ ದಿನ .ಬೇಸಾಯ ಎಂದರೆ ಒಂದು ಥರ ಥ್ರಿಲ್ ಇದ್ದ ದಿನಗಳು. ಊರಿನ ಎಲ್ಲರ ಮನೆಯಲ್ಲೂ ಒಂದು ಜೋಡಿ ಕೋಣ ಇದ್ದಿತ್ತು. ಸಾಗುವಳಿ ಮಾಡಲು ಅವರಿವರ  ಕೋಣದ ಬಾಲ ಹಿಡಿಯಬೇಕಾಗಿತ್ತು. ನಾನು ಮತ್ತು ತಮ್ಮ ಸುಕೇಶ ಆಗಲೇ ನಮ್ಮ ತಂದೆಗೆ ಹೇಳಿ "ಈ ಸಲ ಹೋರಿ ತರೋಣ " ಎಂದು ಹಟಹಿಡಿದೆವು. ಮುಂದಿನ ಮಳೆಗಾಲಕ್ಕೆ ಖಂಡಿತ ಅಂಥ ಹೇಳಿದ ಮೇಲೆ ನಾವು ಸುಮ್ಮನಾದೆವು. ಬೇಸಗೆ ಕಳೆಯಿತು.  ಕೊಟ್ಟಿಗೆ (ಹಟ್ಟಿ) ರೆಡಿಯಾಯಿತು. ತಾಳೆ ಮರದ ತಟ್ಟಿ ಕಟ್ಟಿ ಕೂಡಾ ಆಯಿತು. ಕೊಟ್ಟಿಗೆಯು ಹೋರಿಗಳ ಆಗಮನಕ್ಕೆ  ಸಿದ್ಧವಾಗಿ ನಿಂತಿತು. ಮೇ ತಿಂಗಳ ಕೊನೆ ದಿನಗಳಲ್ಲಿ ಮಳೆ ಕೂಡಾ ಚೆನ್ನಾಗಿ ಬಿತ್ತು. ನೇಜಿಯ ಗದ್ದೆಯನ್ನು ಶೀನ ಮಾವನವರ ಕೋಣಗಳಿಂದ ಹದ ಮಾಡಿದ್ದಾಯಿತು. ನೇಜಿಗೆ ಬಿತ್ತಿದ್ದು ಕೂಡಾ ಆಯಿತು. ಹೋರಿಗಳು ಮಾತ್ರ ಹಟ್ಟಿ ಸೇರಿರಲಿಲ್ಲ. ಹುಡುಕಾಟ ನಡೆದೇ ಇತ್ತು . ವ್ಯವಹಾರ ಕುದುರುತ್ತಿತ್ತು. ಮುರಿಯುತಿತ್ತು .ಆದರೆ ಏನೇನೋ ಕಾರಣ ಒಡ್ಡಿ  ಚಂದ್ರನಗರ ಸೂಫಿ ಸಾಯಿಬ ಮುಂಗಡ ವಾಪಾಸ್ಸು ತಂದು ಕೊಡುತ್ತಿದ್ದ. ಒಟ್ಟಾರೆ ಹೋರಿ ಕಟ್ಟುವ ಕನಸು ಅಣ್ಣ ತಮ್ಮಂದಿರ ಕಣ್ಣಲ್ಲಿ ಕನಸಾಗೇ ಉಳಿದಿತ್ತು.!

       ಆವಾಗ ಒಂದು ಘಟನೆ ನಡೆಯಿತು. ಅಪರೂಪಕ್ಕೆ ಅತ್ತೆಯ ಮನೆಗೆ ಬರುವ ನಮ್ಮ ದೊಡ್ಡಮ್ಮನ ಮಗಳ ಗಂಡ ಜಯ ಭಾವ ಬಂದಿದ್ದರು. ಅವರಿಗೂ ನಮ್ಮ ಹೋರಿ ಹುಡುಕಾಟದ ಸುದ್ದಿ ಕಿವಿಗೆ ಬಿತ್ತಿತ್ತು. ಸುಧೀರಣ್ಣ (ದೊಡ್ಡಮ್ಮನ ಮಗಆಗಲೇ ತಿಳಿಸಿಯಾಗಿತ್ತು.ಅವರು"ನಮ್ಮ ನಂದಿಕೂರಿನ ಪುಣ್ಕೆದಡಿ ಆನಂದನಲ್ಲಿ  ಒಂದು ಜತೆ ಹೋರಿ ಇದೆ ,ನೀನು ಮತ್ತು ಸುಧೀರ ಬನ್ನಿ ಅಂತ" ಹೇಳಿ ಹೋದರು. ಅದೇ ರಾತ್ರಿ ಸುಧೀರಣ್ಣನ ಜೊತೆಯಲ್ಲಿ ನಾವಿಬ್ಬರೂ ನಂದಿಕೂರಿಗೆ ಹೋದೆವು.ಅಂದು ರಾತ್ರಿ ಅಲ್ಲಿಯೇ ಇದ್ದೆವು. ಮುಂಜಾನೆ ಹುಲ್ಲು ಮೇಯಲು ಕಟ್ಟಿದ್ದ ಎರಡು ಹೋರಿಗಳನ್ನು ನಮಗೆ ತೋರಿಸಿದರು. ನನಗೆ ಖುಷಿಯಾಯಿತು. ವ್ಯವಹಾರ ಕುದುರಿಸುವಂತೆ ಹೇಳಿ ಹಿಂತಿರುಗಿದೆವು. ಅಂದು ಅಲ್ಲಿ ಕಂಡ ಹೋರಿಗಳು ನಮ್ಮ ಕಣ್ಣಲ್ಲಿ ಮನೆ ಮಾಡಿದವು. ಒಂದು ಕಪ್ಪು ಕೊಂಬು ಬಾಗಿದ ಹೋರಿ. ಇನ್ನೊಂದು ಕೆಂಪು ಮೈಯ ಸದೃಢ ಹೋರಿ. ಸಂಜೆ ಮನೆಗೆ ಬಂದು ಅಪ್ಪ ಅಮ್ಮನಿಗೆ ವಿಷಯ ತಿಳಿಸಿದೆವು. ಖುಷಿಯೊಡನೆ ಹಟ್ಟಿ ತುಂಬುವ ಸಂಭ್ರಮ ನಮ್ಮದಾಯಿತು!.

       ನಾವೊಂದು ಎಣಿಸಿದರೆ ವಿಧಿ ಇನ್ನೊಂದು ಬಗೆಯುತ್ತದೆ ಅನ್ನುತ್ತಾರೆ. ಹಣ ಎಲ್ಲಾ ಸೇರಿಸಿಕೊಂಡು ಒಂದು ಎರಡು ದಿನ ಕಳೆದು ತಂದೆನಾನು ಮತ್ತು ತಮ್ಮ ಜಯ ಭಾವನವರ ಮನೆಗೆ ಹೋಗಿದ್ದೆವು. ಅಷ್ಟರಲ್ಲಿ ಒಂದು ನಿರಾಶೆ ನಮಗೆ ಕಾದಿತ್ತು. ಪುಣ್ಕೆದಡಿ ಆನಂದ ಹೋರಿಗಳನ್ನು ಆಗಲೇ ಪಡುಬಿದ್ರಿಯ ಇಮ್ತಿಯಾಜ್ ಬ್ಯಾರಿಗೆ ರೇಟ್ ಮಾಡಿ ಆಗಿತ್ತು. ಇಮ್ತಿಯಾಜ್ ಈಗಾಗಲೇ ಆನಂದನಿಗೆ ಎಲ್ಲಾ ಹಣ ಕೊಟ್ಟಾಗಿತ್ತು. ಭಾಷೆ ಮುರಿಯಲಾಗದೆ ಆನಂದ ನಮ್ಮನ್ನು ನಿರಾಶೆಯಿಂದಲೇ ಬೀಳ್ಕೊಟ್ಟ. ಇನ್ನೂ ಏನೂ ಮಾಡುವ ಹಾಗೆ ಇರಲಿಲ್ಲ. ಆದರೂ ತಮ್ಮ ಮತ್ತು ನನಗೆ ಇನ್ನೊಮ್ಮೆ ಆ ಹೋರಿಗಳನ್ನು ನೋಡಿಕೊಂಡು ಬರುವ ಆಶೆಯಾಯಿತು. ಆನಂದನ ಹಟ್ಟಿಯ ಕಡೆ ಜಯಭಾವ ನಮ್ಮನ್ನು ಕರೆದುಕೊಂಡು ಹೋದರು. ಎರಡು ಹೋರಿಗಳ ತಲೆ ನೇವರಿಸಿ ಬೇಸರದಿಂದ ನಾವು ಅಲ್ಲಿಂದ ಕಾಲ್ಕಿತ್ತೆವು !.

       ಮುಂಗಾರು ಚುರುಕಾಯಿತುಜೂನ್ ಬಿಡದೆ ಮಳೆರಾಯ ಗರ್ಜಿಸಿದನಿಧಾನವಾಗಿ ಸಾಗುವಳಿ ಶುರುವಾಯಿತುಶೀನ ಮಾವನ ಕೋಣಗಳು ನಮ್ಮ ಗದ್ದೆಯ ಸಾಗುವಳಿ ಮಾಡಿದವು.ಸುಧೀರಣ್ಣನ ಹಲಗೆ ನಮ್ಮ ಗದ್ದೆಯ ತುಂಬಾ ಓಡಾಡಿದವು.ಅಂತೂ ಕಾರ್ತಿ ಬೆಳೆ ಮುಗಿದಿತ್ತುಅಗಸ್ಟ್ ತಿಂಗಳುನಾಗರಪಂಚಮಿಯ ದಿನ ಜಯಭಾವನವರು ಮನೆ ಕಡೆ ಬಂದಿದ್ದರುಒಂದು ಸುದ್ದಿಯನ್ನು ಮುಟ್ಟಿಸಿದರುಇಮ್ತಿಯಾಜನಿಗೆ ಮಾರಿದ್ದ ಹೋರಿಗಳು ಇಮ್ತಿಯಾಜ್ ನ ಕೈಯಿಂದ ಓಡಿ ಹೋಗಿದ್ದವು . ಸುಮಾರು ಒಂದೂವರೆ ತಿಂಗಳು ಎಲ್ಲೂ ಸಿಗದ ಹೋರಿ ಮತ್ತೆ ಜಯಭಾವನವರ ಗದ್ದೆಯಲ್ಲಿ ಹುಲ್ಲು ಮೇಯುತ್ತಿದ್ದವುಪಡುಬಿದ್ರಿಯಲ್ಲಿ ಸ್ಕೂಟರ್ ಆಕ್ಸಿಡೆಂಟ್ ನಲ್ಲಿ ಕಾಲಿಗೆ ಪೆಟ್ಟಾದ ಇಮ್ತಿಯಾಜ್ ಉಡುಪಿಯ ಅಜ್ಜೆರಕಾಡ್ ಆಸ್ಪತ್ರೆಯಲ್ಲಿ ಎಡ್ಮಿಟ್ ಇದ್ದಾನೆಅವನ ಮಕ್ಕಳು ಇನ್ನು ಸಣ್ಣವರು ಸದ್ಯಕ್ಕೆ ಇಮ್ತಿಯಾಜ ನ ವ್ಯವಹಾರ ನಿಂತು ಹೋಗಿದೆ.
ಹೋರಿ ಗಳನ್ನು ತಮ್ಮ ಲಚ್ಚಿಲ್ ನಲ್ಲಿ ಹುಲ್ಲು ಮೇಯಿತ್ತಿದ್ದದನ್ನು ಕಂಡ ಜಯ ಭಾವ ಆನಂದನ ಮನೆಗೆ ಹೋಗಿ ಮಾರಿದ್ದನ್ನು  ಮತ್ತೊಮ್ಮೆ ದೃಢ ಮಾಡಿಕೊಂಡರುಆನಂದ "  ಹೌದು ಜಯ , ಒಂದೂವರೆ ತಿಂಗಳಾಯಿತು "ಎಂದಾಗ ಒಳಗೊಳಗೆ ಖುಷಿಪಟ್ಟರುಒಂದು ದಿನ ಬೆಳ್ಳಗ್ಗೆ ಜಯಭಾವ ಗದ್ದೆಗೆ ನೀರು ಅಡ್ಡ ಹಾಕಲು ಹೋದಾಗ ಕೆಂಪು ಹೋರಿ ಗದ್ದೆಯ ಪಕ್ಕದ ಲಚ್ಚಿನಲ್ಲಿ ಮಲಗಿತ್ತು . ಇವರು ಹತ್ತಿರ ಹೋದಾಗ ಒಂದೇ ನೆಗೆತಕ್ಕೆ ಓಡಿಹೋಯಿತು.

       ಭಾವ ನಮ್ಮನ್ನು ಕರೆದು ಉಪಾಯ ಮಾಡಿದರುಒಂದು ವೇಳೆ ಎರಡು ಹೋರಿಗಳು ಸಿಕ್ಕರೆ ನೀವು ಅವುಗಳನ್ನು ಕೊಂಡು ಹೋಗಬಹುದುಆದರೆ ಅವುಗಳನ್ನು ಹಿಡಿಯುವುದು ಹೇಗೆ ಎಂಬುದೇ ಪ್ರಶ್ನೆಯಾಯಿತು.ಕತ್ತಿನಲ್ಲಿ ಒಂದು ಹಗ್ಗ ಕೂಡಾ ಇರಲಿಲ್ಲಒಂದು ಸಿಕ್ಕಿ ಇನ್ನೊಂದು ಸಿಗದಿದ್ದರೆ ಪ್ರಯೋಜನವಿಲ್ಲ!.  ಜಯಭಾವನ ತಲೆ ಓಡತೊಡಗಿತುನಮ್ಮನ್ನು ಶಾಲೆಯಿಂದ ನೇರವಾಗಿ ನಂದಿಕೂರಿಗೆ ಕರೆಸಿ ಕೊಂಡರು.ನಾನುತಮ್ಮ ಮತ್ತು ಸುಧೀರಣ್ಣ ನಂದಿಕೂರಿಗೆ ಹೋಗುವ ಅಮರ್ಜ್ಯೊತಿ ಬಸ್ಸು ಹಿಡಿದೆವುರಾತ್ರಿ ಭಾವನವರ ಮನೆಯಲ್ಲಿ ಎತ್ತುಗಳನ್ನು ಹಿದಿಯುವ ಬಗೆಗಿನ ನಾನಾ ಚರ್ಚೆಯಾಯಿತುಬೆಳ್ಳಗ್ಗೆ ಲಚ್ಚಿಲ್ ನಲ್ಲಿ ಹುಡುಕಾಡಿ ಗುಡ್ಡೆಗಳಲ್ಲಿಗೋಳಿಮರದ ಅಡಿಯಲ್ಲಿ ನೋಡ ತೊಡಗಿದೆವುಇದಕ್ಕಿದ್ದಂತೆ ಕೆಂಪು ಹೋರಿ ಕುಂಟುತ್ತಾ ಲಚ್ಚಿಲಲ್ಲಿ ಕಾಣಿಸಿತುಬಹುಷಕಾಲಿಗೆ ಮುಳ್ಳು ಚುಚ್ಚಿರಬೇಕು .ನಾವು ನಾಲ್ಕು ಮಂದಿ ಅಡ್ಡಕಟ್ಟಿದಾಗ ಸುಲಭವಾಗಿ ಸಿಕ್ಕಿತ್ತುಸುಧೀರಣ್ಣ ಹಗ್ಗ  ಕೊರಳಿಗೆ ಬಿಗಿದು ಎಳೆದು ತಂದು  ಭಾವನ ಮನೆಯ ಹಟ್ಟಿಯಲ್ಲಿ ಕಟ್ಟೀ ಹಾಕಿದೆವುಕಾಲಿಗೆ ಶುಶ್ರೂಷೆ ಮಾಡಿ ಬಟ್ಟೆ ಕಟ್ಟಿದ್ದೆವು.ತುಂಬಾ ಸಾಧು ಸ್ವಭಾವದ ಹೋರಿ.ಬೇಗನೆ ಹೊಂದಿ ಕೊಂಡಿತ್ತು.

       ಇನ್ನೂ ಕೊಂಬು ಬಾಗಿದ ಕಪ್ಪು ಹೋರಿಯ ಹುಡುಕಾಟ ಶುರುವಾಯಿತುಸತತ ಎರಡು ದಿನವಾದರೂ ಅದರ ಸುಳಿವು ಇರಲಿಲ್ಲ.ಅಂದು ಶನಿವಾರ ಮಧ್ಯಾಹ್ನ ರಜೆಯಾದರಿಂದ ಬೇಗನೆ ನಾವು ಬಂದಿದ್ದೆವುಗುಡ್ಡ ಹುಡುಕಾಡುವಾಗ ಸುಧೀರಣ್ಣನ ಕಣ್ಣಿಗೆ ಕಪ್ಪು ಹೋರಿ ಕಂಡಿತು.ಆಗ ಅದನ್ನು ಹಿಡಿಯುವ ಸಮಯವಲ್ಲವಾದ್ದರಿಂದ ರಾತ್ರಿಗಾಗಿ ಕಾಯಬೇಕಾಯಿತುಗೋಳಿ ಮರದಡಿಯಲ್ಲಿ  ಅದು ಮಲಗುವ ಜಾಗದ ಪತ್ತೆ ಹಚ್ಚಿದೆವುರಾತ್ರಿ ಊಟ ಮುಗಿದು ಸುಮಾರು ೮ ಗಂಟೆ ರಾತ್ರಿಯ ಹೊತ್ತಿಗೆ ಗುಡ್ಡೆಯ ಕಡೆ ನಮ್ಮ ಸವಾರಿ ನಡೆಯಿತುಹೆಚ್ಚು ಸದ್ದಿಲ್ಲದೆ ಹೋದರೂ ಕಪ್ಪು ಹೋರಿ ನಮ್ಮ ವಾಸನೆಗೆ ದಢ್ ಅಂತ ಎದ್ದಿತು.ಇನ್ನೇನೂ ಓಡುವಷ್ಟರಲ್ಲಿ ಸುಧೀರಣ್ಣ ಅದರ ಕೊಂಬಿಗೆ ಹಗ್ಗ ಬೀಸಿದರುಅದು ಸಿಕ್ಕಿಹಾಕಿ ಕೊಂಡಿತುಸುಲಭವಾಗಿ ಕೈಗೆ ಸಿಕ್ಕಿ ಬಿಟ್ಟಿತುಜಯಭಾವನವರು ಇನ್ನೂ ಚುರುಕಾದರುಇವತ್ತೆ ರಾತ್ರಿ ನೀವು ಕರೆದುಕೊಂಡು ಹೋಗಿ ಎಂದರು.
       ನಾವು ಬೆಳ್ಳಗ್ಗೆ ಬೇಗ ಎದ್ದು ಹೊರಡುವ ಯೋಜನೆ ಮಾಡಿದ್ದೆವು.ಅದು ಆಗಸ್ಟ್ ತಿಂಗಳು ಮಳೆ ಇನ್ನೇನೂ ಇದ್ದೆ ಇತ್ತುಬೆಳ್ಳಿಗ್ಗೆ ೩ ಗಂಟೆಗೆ ಎದ್ದ ಭಾವನವರು ನಮ್ಮನ್ನು ಎಬ್ಬಿಸಿದರುಕಪ್ಪು ಚಾ ಮಾಡಿಕೊಟ್ಟು ಮೂವರಿಗೂ ಕುಡಿಸಿದರುಅಕ್ಕ ಮತ್ತು ಮಕ್ಕಳು ಇನ್ನು ನಿದ್ದೆಯಲ್ಲಿಯೇ ಇದ್ದರುಎರಡೂ ಹೋರಿಗಳ ಹಗ್ಗ ಹಿಡಿದು ಕೊಂಡು ನಾವು ನಂದಿಕೂರಿನ ಡಾಮರು ರೋಡಿನಿಂದ ಶಿರ್ವದ ಕಡೆ ನಡೆಯತೊಡಗಿದೆವುಮುಂದೆ ಸುಧೀರಣ್ಣ ಕಪ್ಪು ಹೋರಿಯ ಹಗ್ಗ ಹಿಡಿದರೆತಮ್ಮ ಕೆಂಪು ಹೋರಿಯ ಹಗ್ಗ ಹಿಡಿದಹಿಂದಿನಿಂದ  ನಾನು ಹಿಂದಿನಿಂದ ಹೋರಿಗಳನ್ನು ರಭಸವಾಗಿ ಹೆಜ್ಜೆ ಹಾಕುವಂತೆ ಬೆತ್ತ ಬೀಸುತ್ತ ಹುರಿದುಂಬಿಸುತ್ತಿದ್ದೆಒಂದು ಕೈಯಲ್ಲಿ ಕೊಡೆಇನ್ನೊಂದು ಕೈಯಲ್ಲಿ ಟಾರ್ಚು.  ರಾತ್ರಿಯ ಹೊತ್ತು ನಾಯಿಗಳ ಕೂಗಾಟ ಮತ್ತೊಂದು ಕಡೆಮುದರಂಗಡಿ ದಾಟುತ್ತಾ ಬಂದಂತೆ ನಾಯಿಗಳ ಕೂಗಾಟ ಹೆಚ್ಚಾಯಿತುಹೋರಿಗಳ ಗೆರೆಸೆ ಸಪ್ಪಳ್ಳಕ್ಕೆ ನಾಯಿಗಳು ಎಚ್ಚೆತ್ತಿದ್ದವುಮಳೆರಾಯ ಮಾತ್ರ ಹೆಚ್ಚಿಗೆ ಉಪದ್ರ ಕೊಡಲಿಲ್ಲಏನೋ ನಮ್ಮೊಡನೆ ಖುಷಿಯಾದಗಲೆಲ್ಲ ದೊಪ್ಪಂತೆ ಬೀಳುತ್ತಾ ನಿಲ್ಲುತ್ತಿದ್ದ.  ಸುಮಾರು ೭ ಗಂಟೆಯ ಹೊತ್ತಿಗೆ  ಇನ್ನೇನೊ ಸೂರ್ಯ ಏರಿರಲಿಲ್ಲ ಎರಡೂ ಹೋರಿಗಳು ನಮ್ಮ ಮನೆಯ ಪಟ್ಟಿ ಸೇರಿ ಆಗಿತ್ತುಆದಿತ್ಯನ ಹೊಸ ಕಿರಣಗಳೊಂದಿಗೆ ಹೋರಿಗಳು ಹೊಸ ಜಾಗವನ್ನು ಸೇರಿದವು.

       ಕಪ್ಪು ಹೋರಿಗೆ ಕೊಂಬು ಬಾಗಿದ್ದರಿಂದ ನಾವು ಪ್ರೀತಿಯಿಂದ ಬಾಚ ಎಂದು ಕರೆದೆವು . ಕೆಂಪು ಹೋರಿಗೆ ಮೈರ ಎಂದು ಹೆಸರಿಟ್ಟೆವು ಈ ಘಟನೆ ನಡೆದುದು ೧೯೯೫ ರ ಹೊತ್ತಿಗೆ ಅನಂತರ ಐದಾರು ವರ್ಷ ಹೋರಿಗಳು ನಮ್ಮ ಸಹಪಾಠಿಯಾಗಿದ್ದೆವುಅಂದಿನಿಂದ ನಾವು ಸ್ವತಂತ್ರವಾಗಿ ಬೇಸಾಯಮಾಡಿಕೊಂಡೆವುಹೆಚ್ಚುವರಿ ಗದ್ದೆಗಳನ್ನು ಹಿಡುವಳಿಯಾಗಿ ವಹಿಸಿಕೊಂಡೆವು ಕೂಡಾ . ಜಯಭಾವಸುಧೀರಣ್ಣನವರ ಉಪಕಾರ ಮರೆಯುವಂತಿಲ್ಲನಾನು ಮುಂಬೈಗೆ ಬಂದ ನಂತರ ೧೯೯೯ ನಂತರ ಎರಡು ವರ್ಷ ಈ ಹೋರಿಗಳು ಇದ್ದವುಅಸೌಖ್ಯದಿಂದ ಭಾಚ ಕೊನೆ ಉಸಿರು ಬಿಟ್ಟಾಗ ೨೦೦೦ ರಲ್ಲಿ ನಾನು ಕಣ್ಣೀರು ಹಾಕಿದ್ದೆನಂತರ ಒಂಟಿಯಾದ ಮೈರ ಬಡಕಲಾದಎಲ್ಲೋ ಬೇರಿನ ಎಡೆಗೆ ಸಿಕ್ಕಿಸಿಕೊಂಡ ನಂತರ ಏಳಲೇ ಇಲ್ಲ೨೦೦೧ ರಲ್ಲಿ ಅದನ್ನು ಸಮಾಧಿ ಮಾಡಿದ ತಮ್ಮ ಫೋನು ಮಾಡಿದಾಗ ಕಣ್ಣು ತೇವವಾಗಿತ್ತುಎಲ್ಲೋ ಇದ್ದ ಈ ಹೋರಿಗಳು ಯಾವ ಬಂಧನದಿಂದಲೋ ನಮ್ಮನ್ನು ಸೇರಿ ನಮ್ಮ ಸಾಧನೆಯ ಅಂಗವಾಗಿ ದೂರವಾಗಿ ಬಿಟ್ಟಿದ್ದವು.

       ಈ ಹೋರಿ ತಂದ ಕಥೆ ನೆನಪದಾಗಲೆಲ್ಲಾ ಮತ್ತೆ ಸುಧೀರಣ್ಣ ನೆನಪಾಗುತ್ತಾರೆಸುಧೀರಣ್ಣ ನೆನಪಾದಗಲೆಲ್ಲಾ ಈ ಶ್ರಮಜೀವಿಗಳು ನೆನಪಾಗುತ್ತವೆಶ್ರಮಕ್ಕೆ ಏನೂ ಬಯಸದ ಈ ಮೂವರು ಮತ್ತೆ ಮತ್ತೆ ನೆನಪಾಗುತ್ತಾರೆ.

ಅಶೋಕ್ ಕುಮಾರ್ ವಳದೂರ್ (ಅಕುವ)
20.12.2013

ಬೆಸೆಯೋಣ ಬನ್ನಿ

ಬೆಸೆಯೋಣ ಬನ್ನಿ 

ಅಧರ್ಮದ ಕೋಟೆಗಳ ಒ(ಹೊ)ಡೆಯ ಬನ್ನಿ 
ಜಾತಿಯ ಬೇಲಿಯ ಹಾರಿ ಬನ್ನಿ 
ಮನುಜ ಪಥಕೆ ನೀವು ಇನ್ನಾದರೂ ಬನ್ನಿ  !!
ಹರಿದೋಗಿರುವ ಸಂಬಧಗಳ ಬೆಸೆಯ ಬನ್ನಿ 
ನಿತ್ಯ ನೂತನ ದೇಶವ ಇನ್ನೊಮ್ಮೆ ಕಟ್ಟೋಣ ಬನ್ನಿ !!

- ಅಶೋಕ ಕುಮಾರ್ ವಳದೂರು  

Monday, January 20, 2014

ಬೊಳ್ಜೆ ಯ ನೆನಪು

ಬೊಳ್ಜೆ  ಯ ನೆನಪು 

ಬೊಳ್ಜೆ ನನ್ನ ಹುಟ್ಟೂರು. ನನ್ನ ಜನ್ಮ ವಳದೂರಿನಲ್ಲಿ ಆದರೂ ನನಗೆ ಬೊಳ್ಜೆಯ ನಂಟು ಜಾಸ್ತಿಯೇ. ಬಹುಶ: ಅದು  ನನ್ನ ತಂದೆ ಮನೆಯಾಗಿದ್ದರಿಂದ . ನಂದ ನಂತಹ ಸಹಪಾಠಿ ಸಿಕ್ಕಿದ್ದರಿಂದ. ನನ್ನ ಮೊದಲ ಕವಿತೆ "ನದಿ" ಯನ್ನು ನಾನು ಬರೆದದ್ದು ನನ್ನ ತಂದೆ ಮನೆ ಬೊಳ್ಜೆ ಯಲ್ಲಿ.  ತಂದೆ ಮನೆಯ ಎದುರಿಗೆ  ಹರಿಯುವ ತೊರೆಯೇ ನನ್ನ "ನದಿ". ಪಾದೂರಿನ ಗುಡ್ಡ-ಕಾಡು , ಬಂಡೆ ಹತ್ತಿದ ನನಗೆ ತಂದೆಯ ಊರು ಹಿಡಿಸಿದ್ದು ಎರಡು ಕಾರಣ ಗಳಿಂದ . ಒಂದು ತೆಂಗಿನ ಮರಗಳ ಕಾಡಿನ ತಂಪಾದ ವಾತಾವರಣ  ಬಯಲು ಗದ್ದೆ.  ಎರಡನೆಯದಾಗಿ ಅಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಗಳಿಂದ. ನನ್ನಲ್ಲಿ ಕವಿ ಹುಟ್ಟಿ ಕೊಂಡದ್ದೇ ಅಲ್ಲಿ ನಡೆಯುತ್ತಿದ್ದ  ಭಜನೆ ಗಳಿಂದ  ಅನಿಸುತ್ತದೆ. ಗರಡಿ ಗದ್ದೆಯಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟ. ಕೇದಾರ್ ಬ್ರಹ್ಮಲಿಂಗೆಶ್ವರ ಸನ್ನಿಧಿಯ ವರುಷದ ಆಟಗಳು , ಮಂಗಲೋತ್ಸವಗಳು. ಲಕ್ಷ್ಮಿ ನಾರಾಯಣ ಭಜನಾ ಮಂಡಳಿಯ ನಗರ ಭಜನೆಗಳು ಇವೆಲ್ಲಾ ಒಟ್ಟಾರೆಯಾಗಿ ನನ್ನ ಸಾಹಿತ್ಯದ ಹುಚ್ಚನ್ನು ಹೆಚ್ಚಿಸಿವೆ. ಲಯ ಬದ್ಧವಾದ ಅವರ ಕುಣಿತ , ತಾಳವನ್ನು ನಾನು ಗಮನಿಸುತಿದ್ದೆ. ಅವರ ಭಜನೆಗಳಲ್ಲಿ ನಾನು ಹುಡುಕುತಿದ್ದದು ಸಾಹಿತ್ಯವನ್ನು ಮಾತ್ರ . 

ತಂದೆಯರೊಂದಿಗೆ ತಪ್ಪದೆ  ಯಕ್ಷಗಾನವನ್ನು ನೋಡಲು ಹೊಗುತ್ತಿದೆ. ಉಡುಪಿ ಮಠವನ್ನು  ಸುತ್ತು ಹಾಕುವುದು ನಮ್ಮಲ್ಲಿ ಒಂದು  ವಾಡಿಕೆಯಂತೆ ಬೆಳೆದಿತ್ತು. ಅಲ್ಲಿ ಹೋದಾಗಲೆಲ್ಲ ದಾಸರ ಕೀರ್ತನೆಯಾ ಪುಸ್ತಕವನ್ನು ತಪ್ಪದೆ ಕೊಂಡು ಕೊಳ್ಳುವುದು ಅಭ್ಯಾಸವಾಗಿ ಬಿಟ್ಟಿತ್ತು . ಇದೇ ಮುಂದೆ ಮನೆಯಲ್ಲಿ  ಸಂಜೆ ಭಜನೆ ಹಾಡುವ ಪದ್ದತಿಯನು ರೂಢಿಸಿತು.ಇದರೊಂದಿಗೆ ತಾಳ ಕೂಡ ಮನೆಯ ದೇವರ ಸ್ಟ್ಯಾಂಡ್ ಕೆಳಗಡೆ ತೂಗಾಡ ತೊಡಗಿತು .

ರವಿವಾರ ರಜೆ ಬರಲು ನನ್ನ ಸವಾರಿ ಉದ್ಯಾವರ ದ ಬಸ್ಸು ಹಿಡಿಯುತ್ತಿತು. ರಸ್ತೆ ಉದ್ದಕ್ಕೂ ಮಾತಾಡುತ್ತ ಮನೆ ಸೇರುವಾಗಲೇ ಕತ್ತಲಾಗುತ್ತಿತ್ತು . ಗಾಳ ಹಾಕಿ ಮೀನು ಹಿಡಿಯುವ ಪಡ್ಡೆ ಹುಡುಗರ ಗುಂಪು ನಮ್ಮದಾಗುತಿತ್ತು . ಲಗೋರಿ ಆಟದ ಚಿನ್ನರ ಸಂತೆ ಕೆಲವೊಮ್ಮೆ . "ಅಂಡಿ" ಆಟದ ಕುಟ್ಟಿ-ದೊಣ್ಣೆ ಯಲ್ಲಿ  ಪೆಟ್ಟು ಮಾಡುವ ಹುಡುಗರಾಗುತ್ತಿದ್ದೆವು. ಗೇರುಬೀಜ , ತೆಂಡೊಲಿ ಗಳನ್ನೂ ಕಿಸೆಯಲ್ಲಿ ತುರುಕಿ ಕೊಂಡು ಹರಿದು ಕೊಂಡಿದ್ದೆವು. ಈ ಆಟದಲ್ಲಿ ನಂದನದು ಯಾವಾಗಲು ಮೇಲುಗೈ.  ಕ್ರಮೇಣ ಕ್ರಿಕೆಟ್ ಈ ಎಲ್ಲ ಆಟಗಳನ್ನು ನುಂಗಿ ಬಿಟ್ಟಿತ್ತು . 

ಜೀವನದ ಅನಿವಾರ್ಯತೆ ಉದರಪೋಷಣೆ  .  ಉದ್ಯೋಗದ  ಬೆನ್ನತ್ತಿದ ನಾವು ಪಟ್ಟಣವನ್ನು ಸೇರಿ ಬದುಕು ಯಾಂತ್ರಿಕ ವಾದಾಗ ಈ ನೆನಪುಗಳು ಕೊಡುವ ಸುಖ , ಖುಷಿ ಬೆಲೆ ಕಟ್ಟಲಾಗದ್ದು.    

            
- ಅಶೋಕ್ ಕುಮಾರ್ ವಳದೂರ್ (ಅಕುವ)

ದಾನಿಗಳೇ ..

ದಾನಿಗಳೇ ... 

ಬರಿಗೈಯಲ್ಲಿ ಕಳುಹಿಸಲಾಗದ ನನ್ನ 
ಸಮಾಜದ ಓಹೋ ದಾನಿಗಳೇ 

ದೇವರ  ಹೆಸರಲಿ ಹೇಸದೆ ಕೊಡುವಿರಿ 
ಸಾರ್ಥಕತೆಯ ಪಡೆಯದೇ ಇನ್ನೂ ಮಂಕಾಗಿರುವಿರಿ 
ದಟ್ಟನೆ ಸಭೆಯಲಿ ದಾನಿಯೆಂದು  ಕರೆದು ಕೊಂಬಿರಿ 
ಮತ್ತೆ ನಿನ್ನಲೇ ಕೇಳಿಕೋ ನೀ ದಾನಿಯೇ?

ನನ್ನೂರಿನ ರಸ್ತೆಗಳುದ್ದ  ಸ್ಮಾರಕ ತಂಗುದಾಣಗಳು
ಎದ್ದು ಕಾಣುವ ದೇವಾಲಯ ಸ್ವಾಗತ ಗೋಪುರಗಳು 
ರಸ್ತೆ ಗಳಿಗೆ   ಸ್ಮಾರಕ ಫಲಕಗಳು
ಜೀವಿತ ವಿಲ್ಲದ್ದ್ದಕ್ಕೆ ನಮ್ಮ ಸತ್ತ ನೆನಕೆಗಳು !!

ಹಳೆಗುಡಿ ದೇಗುಲಕ್ಕೆ  ನವೀಕರಣದ ಹೊದಿಕೆ 
ಸುರಿದಿದ್ದು ಕೋಟಿಗಳು 
ನೆವನ ಮಾತ್ರ ಮುಕ್ಕೋಟಿ ದೇವತೆಗಳು 
ಸುಲಿದದ್ದು ನನ್ನ ಸಮಾಜದ ದಾನಿಗಳು !!

ಕಾಣದ ದೇವರಿಗೆ ಮುಗಿ ಬೀಳುವಿರಿ 
ಧರ್ಮದ ಹೆಸರಲ್ಲಿ ಸುಮ್ಮನೆ ಸುರಿವಿರಿ 
ವಿದ್ಯೆಯೆಂಬ ಧರ್ಮಕ್ಕೆ ಮೋರೆ ಹೋಗಿ  
ಮಾನವ ಜೀವಿಗಳಿಗೆ ಆಸರೆಯಾಗಿ 
ದಾನಿಗಳ ಶ್ರಮ ಪೋಲಾಗದಿರಲಿ 
ನನ್ನ ಹಾರೈಕೆಗೆ ಸೋಲಾಗದಿರಲಿ 

ಓಹೋ ನನ್ನ ಸಮಾಜದ ದಾನಿಗಳೇ 
ಇನ್ನಾದಾರೂ ಎಚ್ಹೆತ್ತು ಕೊಳ್ಳಿ  !!

- ಅಶೋಕ್ ಕುಮಾರ್ ವಳದೂರ್ (ಅಕುವ)
20/12/2013

 

ಮೂಲ(ಭೂತ) ??

ಮೂಲ(ಭೂತ) ??

ಈ ದಿನ ದಿನಪತ್ರಿಕೆ ಓದುತಿದ್ದಾಗ  ಕಣ್ಣಿಗೆ ಬಿದ್ದ  ವಿಷಯದಲ್ಲಿ  ಒಮ್ಮೆ  ತಕಲಾಟ   ಶುರುವಾಯಿತು.  ನಮ್ಮ ಸಮಾಜದ ಘನವೆತ್ತ  ಸಂಸ್ಥೆಯ  ಶಾಲೆಯೊಂದು ಬೆಳ್ಳಿಹಬ್ಬ ವನ್ನು ಆಚರಿಸುವುದು ನಿಜವಾಗಿಯೂ ಹೆಮ್ಮೆ ಎನಿಸಿತು. ಅದರೊಟ್ಟಿಗೆ ನೋವಿನ ಇನ್ನೊಂದು ಎಳೆಯು ನನ್ನ ಮುಂದೆ ಹಾದು ಹೋಯಿತು. ನಾಣ್ಯದ ಎರಡೂ  ಮುಖವನ್ನು ಹೇಗೆ ನಾವು  ಏಕಕಾಲದಲ್ಲಿ ನೋಡಲಾಗುದಿಲ್ಲವೋ  ಅದೇ ರೀತಿ ಇಂತಹ ಸಂಭ್ರಮಗಳಲ್ಲಿ ಕೆಲವೊಮ್ಮೆ  ನೋವುಗಳು ನಮಗೆ ಕಾಣದೆ ಹೋದರೂ  ಖಂಡಿತ  ಮಾಸಿ ಹೋಗಿರುವುದಿಲ್ಲ . 

ಈಗ ಸುಮಾರು ಒಂದೂವರೆ  ವರ್ಷ ಕಳೆದಿದೆ. ಈ ಘನವೆತ್ತ ಶಾಲೆಯನ್ನು  ನನ್ನ ಜಾತಿ ಸಂಸ್ಥೆ ನಡೆಸಿಕೊಂಡು  ಬಂದಿದೆ ಎಂಬ ಅತಿ  ಪ್ರೀತಿಯಿಂದ ನನ್ನ ಸಹೋದರನ ಪುಟ್ಟ ಮಗುವನ್ನು ಅಲ್ಲಿನ ಕಿಂಡರ್  ಸೇರಿಸುವ ತಪ್ಪು ಮಾಡಿದೆ. ಮಗು  ಸರಿಯಾಗೇ  ಶಾಲೆಗೆ ಹೋಗುತಿತ್ತು . ಕಲಿಸಿದ್ದನ್ನು ಕರಾರುವಕ್ಕಾಗಿ ಟೀಚರ್ ಗೆ    ಹೋಗಿ ಒಪ್ಪಿಸುತ್ತಿತ್ತು. ಈ ಮಧ್ಯೆ  ಟೀಚರ್ ಬದಲಾಗುತ್ತಾಳೆ . ಅಥವ ಬದಲಿಸ್ಪಡುತ್ತಾಳೆ !! .  ಮಕ್ಕಳ ಕಲಿಕೆಯಲ್ಲಿ ಏರುಪೇರಾಗುತ್ತೆ . ಬಹುಶ: ಹೊಸ ಟೀಚರ್ ಗೆ   ಬೇಗ  ಹೊಂದಿ ಕೊಳ್ಳುವುದು   ಮಕ್ಕಳಿಗೆ ಕಷ್ಟವಾಗುತ್ತೆ .  ಈ ನಡುವೆ ಪಾಲಕರ ಮತ್ತು ಆಡಳಿತ ವರ್ಗದ ಮೀಟಿಂಗ್ ನಡೆಯುತ್ತದೆ . ಪಾಲಕರು  ಹಳೆಯ ಟೀಚರ್ ಬಗ್ಗೆ  ಪ್ರಶ್ನೆ ಎತ್ತುತ್ತಾರೆ .  ನನ್ನ ಸಹೋದರ ಕಾರಣಗಳನ್ನೂ  ಕೇಳಿ ಹಾಕಿ  ಪ್ರಶ್ನೆಗಳನ್ನು ಇಡುತ್ತಾನೆ . ಸ್ಥಳೀಯ ಆಡಳಿತವು  ಮುಂಬೈ ಮಾತೃ ಸಂಸ್ಥೆಯ ಮೊರೆ ಹೋಗುತ್ತದೆ. . ಇಷ್ಟರಲ್ಲಿ  ಹಳೆ ಟೀಚರ್ ಕೆಲಸಕ್ಕೆ ರಾಜೀನಾಮೆ ಕೊಡುತ್ತಾರೆ .  ನಮ್ಮ ಪಕ್ಕದ ಇನ್ನೊಂದು ಖಾಸಗಿ  ಶಾಲೆಯಲ್ಲಿ  ಸೇರಿಕೊಳ್ಳುತ್ತಾರೆ . ಮುಂಬೈ ಆಡಳಿತಗಾರರಿಗೆ  ಫೋನ್ ಮಾಡಿ ಹೇಳಿದರೂ ಕೇಳುವ ಪರಿಜ್ಞಾನ ಅವರಿಗಿರಲಿಲ್ಲ . "ಶಾಲೆಯನ್ನು ಯಾವ ರೀತಿ  ನಡೆಸಬೇಕೆಂದು ನಮಗೆ ಗೊತ್ತಿದೆ " ಎಂಬ ಉಢಾಪೆ  ಉತ್ತರ ನಮಗೆ ಸಿಗುತ್ತದೆ. ನಾವು ವಿಷಯವನ್ನು ಇನ್ನು ಎಳೆದು ಪ್ರಯೋಜನವಿಲ್ಲ ವೆಂದು  ಸುಮ್ಮನಾಗಿದ್ದೆವು.   

೨೦೧೩ ಮೇ ತಿಂಗಳಲ್ಲಿ  ಸಹೋದರನ ಮನೆಗೆ ಶಾಲೆಯಿಂದ ಒಂದು  ಪತ್ರ ಬರುತ್ತದೆ. "ನಿಮ್ಮ ಮಗನ ಟಿ.ಸಿ. ತೆಗೆದು ಕೊಂಡು ಹೋಗಿ , ನಾವು ಇನ್ನು ಇಲ್ಲಿ  ಮುಂದುವರಿಸಲು ಸಾಧ್ಯವಿಲ್ಲ " . ಈ  ಬಗ್ಗೆ ಮತ್ತೊಮ್ಮೆ ನಾನು ಮತ್ತು  ಸಹೋದರ ನಮ್ಮ  ಜಾತಿ  ಸಂಸ್ಥೆಗೆ ತಿಳಿಯಪಡಿಸುತ್ತೇವೆ . ಮತ್ತೊಮ್ಮೆ ಮುಂಬೈಗೆ ಪತ್ರದ ಮುಖೇನ ತಿಳಿಸುತ್ತೇವೆ. ಅದರ  ನಕಲನ್ನು  ಸ್ಥಳಿಯ ಎರಡು ಜಾತಿ  ಸಂಸ್ಥೆಗೆ ತಿಳಿಸುತ್ತೇವೆ. ಆದರೆ ಮೂರು ಕಡೆಯಿಂದ ಯಾವ ರೀತಿಯ ಉತ್ತರ ಕೂಡ  ಬರುವುದಿಲ್ಲ . ಜೂನ್ ಹೊತ್ತಿಗೆ ಶಾಲೆ ಆರಂಭವಾಗುತ್ತೆ. ನಾನು ಮತ್ತು ಸಹೋದರ ಕಲಿತ ಶಾಲೆಯಿಂದ ನಮಗೆ ಕರೆ ಬರುತ್ತದೆ . " ನಿಮ್ಮ ಮಗುವನ್ನು ನಮ್ಮಲ್ಲಿ ಸೇರಿಸಿ " ಎಂಬ ಪ್ರಾರ್ಥನೆ ನಮ್ಮ ಹಳೆಯ ಪ್ರಾಂಶುಪಾಲರದ್ದು    . ಮಗುವಿನ ಅಮ್ಮನೊಡನೆ ಮಾತಾಡಿ ಹಳೆಯ  ಟೀಚರ್   ಸೇರಿದ   ಶಾಲೆಗೆ ಮಗುವನ್ನು ಸೇರಿಸಲಾಗುತ್ತದೆ. ಮಗು ಈಗ  ಮತ್ತೆ ನಲಿವಿನಿಂದ ಶಾಲೆಗೆ ಹೋಗುತಿದೆ.  

ಜಾತಿ ಪ್ರೀತಿ ಮುಳುವಾಯಿತೋ? ನಮ್ಮ ಅನುಭವ ಕಡಿಮೆಯಾಯಿತೋ ? ಒಂದೇ ದೇವರು , ಒಂದೇ  ಮತ ,  ಒಬ್ಬನೇ ದೇವರು  ಎಂಬ  ಗುರುವಾಣಿಯನ್ನು ಲೆಕ್ಕಿಸದೆ ಜಾತಿಗೆ ಅಂಟಿ ಕೊಂಡದ್ದು ಅಪರಾಧವಾಯಿತೇ?
 ಸ್ವತ: ಕ್ಯಾಥೋಲಿಕ್ ಸಂಚಾಲಿತ ಶಾಲೆಯಲ್ಲಿ ಕಲಿತ ನಮಗೆ ಜಾತಿ ಪ್ರೇಮ ಹುಚ್ಚು ಯಾಕೆ ಬಂತೋ ? ಶಿಕ್ಷಣ ಕ್ಕೆ  ಜಾತಿಯ ಬೇಲಿಯೂ ಬೇಕೇ? ಸ್ವಜಾತಿ ಯ ಶಾಲೆ  ಇಂದು ಬೆಳ್ಳಿ ಹಬ್ಬ ಆಚರಿಸುತಿರುವಾಗ  ನನ್ನ ಜಾತಿ ಭಾಂಧವರು ಅದರಿಂದ ಪಡೆದ ಲಾಭ ಸಮಾಧಾನಕರವೇ? 

ಏನೆಲ್ಲಾ  ಮೂಲಭೂತ  ಪ್ರಶ್ನೆ ಗಳು  ಮನಸ್ಸನ್ನು ರಾಡಿ ಮಾಡಿ ಬಿಟ್ಟಿವೆ.   ಮೂಲಕ್ಕೆ ಅಂಟಿ ಕೊಳ್ಳಲೇ  ಭೂತ ವನ್ನು ಮರೆಯಲೇ .... ?

- ಅಶೋಕ್ ಕುಮಾರ್ ವಳದೂರು(ಅಕುವ) 
05/01/2013