Saturday, September 1, 2012

ಮಿಂಚು - ಕಥೆ


                                                           ಮಿಂಚು

ಅಂದು ಜನವರಿ ತಿಂಗಳ ಹದಿನೆರಡನೇ ತಾರೀಕು, ಬೆಳಗ್ಗೆ ಏಳುತ್ತಲೇ ನಮ್ಮ ಮನೆಗೆ ದಿನೇಶ ಹಾಜರಾಗಿದ್ದ!  "ಏನು, ಮಹಾರಾಯ, ಬೆಳಗ್ಗೆ! ಬೆಳಗ್ಗೆ! ಇವತ್ತು ಆದಿತ್ಯವಾರ ಕೂಡಾ ಇಲ್ವ ನಿಂಗೆ , ಸವಾರಿ ಏನು ಈ ಕಡೆ " ಎಂದು ಒಂದೇ ಉಸಿರಿಗೆ ಕೇಳಿಬಿಟ್ಟೆ.  "ಇವತ್ತು ತಾರೀಕು ಎಷ್ಟು? " ಪ್ರಶ್ನಿಸಿದ ದಿನೇಶ.  ಕ್ಯಾಲೆಂಡರ್ ಮೇಲೆ ಕಣ್ಣು ಹಾಯಿಸಿ, ಪಕ್ಕ ಮಾಡಿಕೊಂಡು "ಇವತ್ತು ಹನ್ನೆರಡಲ್ಲವೇ" ಅಂದು ಬಿಟ್ಟೆ. "ಅಬ್ಬಾ ಅಷ್ಟಾದರೂ ನೆನಪಿದೆಯಲ್ಲಾ!" ಎಂದು ನಿಟ್ಟುಸಿರು ಬಿಟ್ಟಿದ್ದ ದಿನೇಶ. "ಯಾಕೆ ಮಾರಾಯ ಒಗಟಾಗಿ ಮಾತಾಡುತ್ತೀಯಾ, ಏನು ಹೇಳಬೇಕು ನೇರವಾಗಿ ಹೇಳಿ ಬಿಡು , ನನಗೆ ಇನ್ನು ನಿದ್ದೆ ಬಿಟ್ಟಿಲ್ಲ" ಅಂತ ಕೇಳಿದೆ. "ಇವತ್ತು ಜೆಸಿಂತಳ ಬರ್ಥ್ ಡೇ ಅಲ್ಲವೇ ?" ಎಂದು ಪ್ರಶ್ನಾರ್ಥವಾಗಿ ಕೇಳಿದಾಗ ನಾನು ತಲೆ ಬಡಿದುಕೊಂಡು"ಛೇ ಛೇ ಮರತೇ ಬಿಟ್ಟಿದ್ದೆ ತುಂಬಾ ಒಳ್ಳೆದಾಯಿತು ನೆನಪಿಸಿದ್ದು ,ಸಂಜೆ ಹೋದರೆ ಆಯಿತು ತಾನೇ?" ನಾನು ಇನ್ನು ಕೂಡಾ ಉದಾಸೀನ ದಲ್ಲಿದ್ದೆ.  "ಅವರು ಅಲ್ಲಿ ಮಧ್ಯಾಹ್ನವೇ ಎಲ್ಲಾ ರೆಡಿಯಾಗಿ ನಿನ್ನನ್ನ ಹನ್ನೆರಡು ಗಂಟೆಗೆ ಬಾ ಏಂದು ಕರೆಯಲು ನನಗೆ ಪೋನ್ ಮಾಡಿದ್ದರು" ಎಂದು ಬಿಟ್ಟ. "ಹಾಗಾದರೆ ನೀವು ಈಗ ಹೋಗಿ ನಾನು ಬರುತ್ತೇನೆ, ನೀವು ಕೂಡಾ ಅಷ್ಟೊತ್ತಿಗೆ ಅಲ್ಲಿಗೆ ಬನ್ನಿ" ಎನ್ನುವಷ್ಟರಲ್ಲಿ ದಿನೇಶ್ " ನಾನು ಹೋಗುತ್ತೇನೆ" ಎಂದು ಕಾಳ್ಕಿತ್ತಿದ್ದ. ಅಂದು ಶನಿವಾರವಾಗಿತ್ತು. ಊರಿಗೆ ಹೋಗಿ ಬಂದಿದ್ದ ನಾನು ಇನ್ನೂ ಕೂಡಾ ಕೆಲಸಕ್ಕೆ ಸೇರಿರಲಿಲ್ಲ. ಸೋಮವಾರ ಸೇರಿದರಾಯಿತು ಎಂದು ಮನೆಯಲ್ಲಿಯೇ ಇದ್ದೆ. ಆಗ ನಾವು ನಾಲ್ಕು ಬ್ಯಾಚುಲರ್ಸ್ ಗಳು ಒಟ್ಟಿಗೆ ಇದ್ದದ್ದು. ನಮ್ಮ ರೂಮ್ ಬೊರಿವಲಿ ವೆಸ್ಟ್ ನಲ್ಲಿತ್ತು. ದಿನೇಶ ಕೂಡಾ ಬೊರಿವಲಿಯ ನನಗೆ ಹತ್ತಿರದಲ್ಲಿಯೇ ವಾಸಿಸುತ್ತಿದ್ದ. ಏನೂ  ಇದ್ದರೂ ನಾನು ಮತ್ತು ದಿನೇಶ್ ಒಟ್ಟಿಗೆ  ಹೋಗುವುದು ,ತರುವುದೆಲ್ಲಾ  ಇತ್ತು . ಸಂಡೇ ಕ್ರಿಕೆಟ್ ಆಡಲು ಎಲ್ಲೆಲ್ಲಿ  ಅಲೆದಾಡುತಿದ್ದೆವು.

ಜೆಸಿಂತ ಮೇರಿ ಆಂಟಿಯ ಮಗಳು. ಈ ಮೇರಿ ಯಾರು?  ಮೇರಿ ಸವಿತಳ ಚಿಕ್ಕಮ್ಮ. ಈ ಸವಿತ ಮತ್ತೆ ಯಾರೂ ಅಲ್ಲ ನನ್ನ ತಂಗಿ. ಸವಿತ ನನ್ನ ಒಡಹುಟ್ಟಿದ ತಂಗಿ ಅಲ್ಲ ನಾನು ಮತ್ತು ಸವಿತ ಎಂಟನೇ ತರಗತಿಯಿಂದ ಒಟ್ಟಿಗೆ ಕಲಿತವರು. ಅವಳು ಆಗಲಿಂದಲೇ ನನ್ನನ್ನು ಸಹೋದರನಾಗೇ ಕಾಣತಿದ್ದಳು. ಅದಕ್ಕಾಗಿ ಈ ಸಂಬಂಧ ನಾವು ಇಬ್ಬರೂ ದ್ವೀತಿಯ ಪಿ.ಯು.ಸಿ ತನಕ ಒಂದೇ ಕ್ಲಾಸಿನಲ್ಲಿ ಕಲಿತು ಪಾಸಾದವರು. ಬಬಿತ ಸವಿತಳ ಅಕ್ಕ, ಪ್ರಾಯದಲ್ಲಿ ನನಗೂ ಕೂಡಾ ಅಕ್ಕಳೇ, ಒಂದು ವರ್ಷ ಡುಮುಕಿ ಹೊಡೆದು , ದ್ವೀತಿಯ ಪಿ.ಯು.ಸಿ ಯಲ್ಲಿ ನಮ್ಮ ಕ್ಲಾಸಿನಲ್ಲಿಯೇ ಸಿಕ್ಕಿದ್ದಳು. ಅಂತಹ ಸವಿತ - ಬಬಿತ ಇಬ್ಬರೂ ಒಟ್ಟಿಗೆ ಹೋಗುತ್ತಿದ್ದರೆ ಅವಳಿ ಜವಳಿಯೆಂದೇ ಹೇಳಬೇಕಿತ್ತು. ಅಂತು ಸುಬ್ರಮಣ್ಯ ಜೋಡಿಯೊಂದಿಗೆ ಒಳ್ಳೆಯ ನಂಟು ಬೆಳೆದಿತ್ತು .ನಮಗೆ ಕಲಿಕೆಯಲ್ಲಿ ಪೈಪೋಟಿ ಹೇಳತೀರದು. ಒಮ್ಮೆ ಬಬಿತ ಪ್ರಥಮ , ಒಮ್ಮೆ ಸವಿತ ಮಗದೊಮ್ಮೆ ಪ್ರಥಮ ನಂತರದ ಸರದಿ ನನ್ನದಾಗಿತ್ತು. ಅಂತು ಪಿ.ಯು.ಸಿ ಮುಗಿಯುತ್ತಲೇ ನಮ್ಮ ತ್ರಿಮೂರ್ತಿಗಳ ನಂಟು ಸಡಿಲಿಸುತ್ತಾ ಬಂತು, ಬಬಿತ ನರ್ಸಿಂಗ್ ಮಾಡಲು ಮಂಗಳೂರಿಗೆ ಹೋದಳು.ಸವಿತ ಬಿ.ಬಿ.ಎಮ್ ಮಾಡಲು ಉಡುಪಿಗೆ ತೆರಳಿದಳು.ನಾನು ಅದೇ ಕಾಲೇಜಿನಲ್ಲಿ ಬಿ.ಕಾಂ ಮುಂದುವರಿಸಿದೆ.ನಂತರ ನಾವು ಭೇಟಿಯಾದುದು ತುಂಬಾ ಅಪರೂಪ. ಆದರೂ ಪತ್ರದ ಮೂಲಕ ನಮ್ಮ ನಂಟು ಜೋಡಿಕೊಂಡಿತ್ತು. ಕಾಲೇಜು ಮುಗಿಯುತ್ತಲೇ ನಾನು ಬೊಂಬಾಯಿಯ ದಾರಿ ಹಿಡಿದೆ. ಬಬಿತ ಮಂಗಳೂರು, ಸವಿತ ಉಡುಪಿಯಲ್ಲಿ ಕಂಪ್ಯೂಟರ್ ಕೋರ್ಸ್ ಮಾಡುತ್ತಿದ್ದಳು. ಬೊಂಬಾಯಿಗೆ ಬರುವುದಕ್ಕಿಂತ ಮುಂಚಿನ ದಿನ ನಾನು ಉಡುಪಿ ಶ್ರಿ ಕೃಷ್ಣನ ದರ್ಶನಕ್ಕೆ ಹೋಗಿದ್ದೆ. ಆಕಸ್ಮಾತ್ ಸಿಕ್ಕಿದ ಸವಿತ ನನ್ನನ್ನ ಅವರ ಮನೆಗೆ ಕರೆದೊಯ್ದಳು. ಅಲ್ಲಿ ನನ್ನ ಮತ್ತು ಮೇರಿ ಆಂಟಿಯ ಪ್ರಥಮ ಭೇಟಿ. ಬೊಂಬಾಯಿಯಲ್ಲಿ ಎನೂ ಮಾಡುತ್ತೀಯಾ? ಎಂದು ಪ್ರಶಿಸಿದ ಮೇರಿ ಆಂಟಿಗೆ "ಸಿ.ಎ. ಯ ಹತ್ತಿರ ಒಂದು ಕೆಲಸ ನೋಡಿದ್ದೇನೆ, ನೋಡುತ್ತೇನೆ  ಮುಂದೆ ಏನಾಗುತ್ತದೆ? " ಎಂದು ಉತ್ತರ ಕೊಟ್ಟಿದ್ದೆ. ಒಂದು ಬಿಳಿಯ ಡ್ರೆಸ್ ಹಾಕಿಕೊಂಡಿದ್ದರು.ಸರಿಯಾಗಿ ತುಳು ಬರುತ್ತಿರಲಿಲ್ಲ. ಕನ್ನಡ ಕೂಡಾ ತೊದಲುತಿತ್ತು. ಮೇರಿಯ ಅಮ್ಮ , ಲಿಲ್ಲಿಬಾಯಿಯನ್ನು ಅಜ್ಜಿ ಎಂದು ಸವಿತ ಪರಿಚಯಿಸಿದಳು. ಸವಿತಳಿಂದ ಬೀಳ್ಕೊಂಡ ನಾನು ಪುನಃ ಸವಿತಳನ್ನು ಭೇಟಿ ಮಾಡಿದ್ದು ಮುಂಬೈನಲ್ಲಿ , ೨೦೦೧ನೇ ಇಸವಿಯ ಅಗಸ್ಟ್ ೧೫ ರಂದು ಅಂದು ರಕ್ಷಾ ಬಂಧನವಾಗಿತ್ತು. ನನ್ನನ್ನು ಸವಿತ ಮನೆಗೆ ಕರೆದಿದ್ದಳು. ನಾವು ಅಂದು ಭೇಟಿಯಾದುದು , ದಾದರ್ ರೈಲ್ವೆ ಸ್ಟೇಶನ್ ನಲ್ಲಿ, ನನ್ನ ಇತರ ಇಬ್ಬರೂ ಗೆಳತಿಯರು ಕೂಡಾ ಆ ಸಮಯದಲ್ಲಿ ಹಾಜರಿದ್ದರು. ಮೇರಿ ಆಂಟಿ ಕೂಡಾ ಬಂದಿದ್ದರು. ಜೆನೆಟ್ ಎಂಬ ಸಣ್ಣ ಹುಡುಗಿಯನ್ನು ಕೂಡಾ ಕರೆತಂದಿದ್ದರು. ಜೆನೆಟ್ ಳನ್ನು  ಮೇರಿಯ ಮಗಳೆಂದು ಗ್ರಹಿಸಿದೆ. ಮೇರಿ ಆಂಟಿ ನನ್ನನ್ನು  ಮನೆಗೆ ಬಾ ಎಂದು ಆಹ್ವಾನಿಸಿದರು.  ಸವಿತ ಕೂಡಾ ಒತ್ತಾಯ ಮಾಡಿದಳು .ನನಗೆ ನಿರಾಕರಿಸಲು ಸಾಧ್ಯವಾಗಲಿಲ್ಲ. ಅವರ ಸಂತಕ್ರೂಸಿನಲ್ಲಿದ್ದ ರೂಮಿಗೆ ನಡೆದೆ. ಜೆನೆಟ್ ಬಗೆಗಿನ ಗ್ರಹಿಕೆ ತಪ್ಪು ಆಗಿತ್ತು. ಅದು ಮೇರಿಯ ತಂಗಿ ಸೆಲಿನಳ ಮಗಳು. ಸೆಲಿನ ಕೂಡಾ ಬೊಂಬಾಯಿಯಲ್ಲಿಯೇ ಕೆಲಸ ಮಾಡುತ್ತಿದ್ದಳು. ಜೀನ್ಸ್ ಪ್ಯಾಂಟ್, ಮತ್ತೊಂದು ಟಾಪ್ ಹಾಕಿ ಮಾಡರ್ನ್ ಹುಡುಗಿಯ ಹಾಗೆ ವಿನ್ಯಾಸ ಮಾಡಿ ಕೊಂಡಿದ್ದ  ಮೇರಿಆಂಟಿಯ ಕಂಡಾಗ ಇವರಿಗೆ ಸ್ಟೈಲ್ ತುಂಬಾ ಇದೆ, ಅಂದು ಕೊಂಡಿದ್ದೆ ಆದರೇ ನಂತರ ತಿಳಿದದ್ದು ಕೇಳಿದಾಗ ನಗು ಬರುತ್ತದೆ ಅವರಿಗೆ ಸೀರೆ ಉಡಲು ಬರುತ್ತಿರಲಿಲ್ಲ!. ಚೂಡಿದಾರದ ಅಭ್ಯಾಸವೇ ಇರಲಿಲ್ಲ!. ಕೇವಲ ಪ್ಯಾಂಟ್ ಶರ್ಟ್ ಟಾಪ್ ಇದೇ ಅವರ ಉಡುಗೆಯಾಗಿತ್ತು. ಸಂಜೆಯ ತನಕ ಕಾಲ ಹರಣ ಮಾಡಿದ ನಂತರ ನಾನು ಹೋಗುತ್ತೇನೆ. ಎಂದಾಗ "ಹೇಗಾಯಿತು ನಮ್ಮ ಮನೆ, ನಾವು ಹೀಗೆಯೇ ಫ್ರೀಯಾಗಿರುತ್ತೇವೆ ನಾವು .ಇಲ್ಲಿ ಎನೂ ಸಂಕೋಚ ಮಾಡಬಾರದು, ಇನ್ನೊಮ್ಮೆ ಬಾ, ಜುಹು ಬೀಚ್ ತಿರುಗಿಕೊಂಡು ಬರುವಾ , ಬರುವ ಭಾನುವಾರ ಬಾ" ಎಂದು ಮೇರಿ ಆಂಟಿಯಿಂದ ನಾನು ಬೀಳ್ಕೊಂಡೆ. ನನ್ನ ಮನಸ್ಸಿಗೆ ತುಂಬಾ ಆನಂದವಾಗಿತ್ತು . ನಾನು  ಸಂತಕ್ರೂಸ್ ಸ್ಟೇಷನ್ ಗೆ ಹೋಗಲು ಬೆಸ್ಟ್ ಬಸ್ ಹತ್ತಿದೆ.

ನಾನು ವಾರಕ್ಕೆ ಒಂದು ಸಲವಾದರೂ ಸವಿತಳಿಗೆ ಪೋನ್ ಮಾಡುತ್ತಲೇ ಇದ್ದೆ. ಮತ್ತು ರವಿವಾರ ಮನೆಗೆ ಕರೆಯುತ್ತಿದ್ದಳು.ನಿಜ ಹೇಳಬೇಕಾದರೆ ಜುಹು ಬೀಚ್, ರಾಣಿಬಾಗ್, ಪಾರ್ಕ್ ನಾನು ಸುತ್ತ ತೊಡಗಿದ್ದು ಮೇರಿಆಂಟಿಯ ಸಹವಾಸದ ನಂತರವೇ ಹೇಳಬೇಕು. ಅವರು ನಮ್ಮೊಂದಿಗೆ ಚಿಕ್ಕಮ್ಮ ಅಥಾವ ತಾಯಿಯ ಅಧಿಕಾರದಲ್ಲಿ ಇರಲಿಲ್ಲ, ನಾವು ಅವರ ಗೆಳೆಯ, ಗೆಳತಿಯರಂತೆ ಅವರೊಡನೆ ನಾನು ವರ್ತಿಸುತ್ತಿದ್ದೆವು. ಒಂದು ದಿನ ಇದಕ್ಕಿಂತ ನನ್ನ ಆಫೀಸಿಗೆ ಸವಿತಳ ಫೋನ್ ಬಂತು, "ಹಲೋ ಏನು ಸಮಾಚಾರ "ಎಂದು ಕೇಳಿದ್ದೆ "ಬರುವ ಆದಿತ್ಯವಾರ ನೀನು ಹನ್ನೆರೆಡು ಗಂಟೆಯ ಒಳಗೆ ಮನೆಗೆ ಬರಬೇಕು, ನಾನಿನ್ನು ಇಡುತ್ತೇನೆ" ಎಂದು ಸವಿತ ಪೋನ್ ಕೆಳಗಿಟ್ಟಿದ್ದಳು. ಅಂದು ಶುಕ್ರವಾರವಾಗಿತ್ತು. ಇನ್ನೊಮ್ಮೆ ಪೋನ್ ಮಾಡಿ ಯಾಕೆ? ಏನು? ಎಂದು ವಿಚಾರಿಸಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ನೇರವಾಗಿ ಆದಿತ್ಯವಾರ ಅವರ ಸಂತಕ್ರೂಸಿನ ಮನೆಯಲ್ಲಿ ಹನ್ನೆರೆಡು ಗಂಟೆಗೆ ಹಾಜರಾಗಿಬಿಟ್ಟೆ. ನಾನು ಆಗ ಡೊಂಬಿವಲಿಯಲ್ಲಿ ವಾಸಿಸುತ್ತಿದ್ದೆ. ಆಗಲೂ ಕೂಡಾ ಸಿ.ಎ ಯ ಹತ್ತಿರವೇ ಕೆಲಸ ಮಾಡುತ್ತಿದ್ದೆ.

ನನಗೆ ಮತ್ತೆ ತಿಳಿಯಿತು ಅಂದು ಜೆನೆಟಳ ಹುಟ್ಟಿದ್ದ ಹಬ್ಬದ ಆಚರಣೆಗೆ ತಯಾರಿ ನಡೆಯುತ್ತಿತ್ತು. ಛೇ ಮಗುವಿಗೆ ಏನೂ ಕೂಡಾ ಉಡುಗೊರೆ ತಾರದೆ, ಖಾಲಿ ಕೈಯಲಿ ಬಂದು ಬಿಟ್ಟೆ ಎಂದು ಬೇಸರವಾಗಿತ್ತು. ಜೆನೆಟಳ ತಾಯಿ ಸೆಲಿನ ಕೂಡಾ ಮನೆಯಲ್ಲಿದ್ದರು. ಜೆನೆಟ್ ಆರು ವರ್ಷದ ಮಗಳು ಆಗ ತಾನೇ ಎರಡನೇ ಕ್ಲಾಸ್ ಇಂಗ್ಲೀಷ್ ಮೀಡಿಯಂನಲ್ಲಿ ಓದುತ್ತಿದ್ದಳು. ಯಾರ ತಂಟೆಗೆ ಹೋಗದೆ ತನ್ನಷ್ಟಕ್ಕೆ ಆಡುತ್ತಿದ್ದಳು "ಅಶೋಕ ನೀನು ಮಾಂಸ ತಿನ್ನುತ್ತೀಯಲ್ಲ ಎಂದು ಪ್ರಶ್ನಿಸಿದರು ಮೇರಿ ಆಂಟಿ ನನ್ನನ್ನು, ನಾನು ಆಗ ಮೀನು ಮಾಂಸ ತಿನ್ನುತ್ತಿರಲಿಲ್ಲ. ಆದರೂ ಬಿರಿಯಾನಿ ಮಾಡುತ್ತಿದ್ದ ಮೇರಿ ಆಂಟಿ ನನಗಾಗಿ ಮಾಂಸ ಹಾಕುವುದಕ್ಕೆ ಮುಂಚಿತವಾಗಿ ಗೀರೈಸನ್ನು ತೆಗೆದಿಟ್ಟರು. ಅಷ್ಟರಲ್ಲಿ ಅವರು ಒಬ್ಬರು ನೆಂಟರಿಗಾಗಿ ಪದೇ ಪದೇ ಹೋಗಿ ಹೊರಗೆ ನೋಡುತ್ತಿದ್ದರು, ನನಗೆ ಅದು ಗೋಚರಕ್ಕೆ ಬರಲಿಲ್ಲ. ನಾನು ಸವಿತಳೊಂದಿಗೆ ಮಾತನಾಡುತ್ತಾ ಕುಳಿತ್ತಿದ್ದೆ. ಅಷ್ಟರಲ್ಲಿ ಒಂದು ಕುಳ್ಳ ಜೀವದ ಪ್ರವೇಶವಾಯಿತು. "ಇವರು ದಿನೇಶ್ , ನನ್ನ ಪಾರ್ಲರ್ ನ ಹತ್ತಿರದಲ್ಲೇ ಟೈಲರಿಂಗ್ ಕೆಲಸ ಮಾಡುತ್ತಾರೆ," ಎಂದು ಆ ಹೊಸ ವ್ಯಕ್ತಿಯ ಪರಿಚಯ ಮಾಡಿದರು ಮೇರಿ ಆಂಟಿ. ಅದೇ ನನ್ನ ಮತ್ತು ದಿನೇಶರ ಮೊದಲ ಭೇಟಿ . ಅವರು ಬರುವಾಗ ಜೆನೆಟಳಿಗೆ ಉಡುಗೊರೆ ತಂದಿದ್ದರು. ಪ್ರಾಯಶಃ ಅವರಿಗೆ ಈ ಬಗ್ಗೆ ಮೊದಲೇ ತಿಳಿದಿರಬೇಕು. "ನನಗೆ ಮಾತ್ರ ಇವರು ಮಂಗ ಮಾಡಿದ್ದು" ಎಂದು ಮನಸ್ಸಿನಲ್ಲಿಯೇ ಸವಿತಳಿಗೆ ಬೈದು ಬಿಟ್ಟೆ. ದಿನೇಶರು ನನಗಿಂತ ಕೂಡಾ ಎತ್ತರದಲ್ಲಿ ಕಡಿಮೆ ಇದ್ದರು, ಆದರೆ ದೇಹ ಕಟ್ಟು ಮಸ್ತಾಗಿತ್ತು, ಇವರು ಕೂಡಾ ಟೈಟ್ ಪಿಟ್ ಜೀನ್ಸ್ ಹಾಕಿದ್ದರು. ನನಗೊಬ್ಬ ಬೇಸರಕ್ಕೆ ಜನ ಸಿಕ್ಕಿದ ಎಂದು ಕೊಂಡು ಹರಟೆಗೆ ಕುಳಿತು ಎಲ್ಲಾ ವಿಚಾರ ವಿನಿಮಯವಾಗ ತೊಡಗಿತು."ನೀವು ಎಲ್ಲಿರುವುದು?" ನಾನೇ ಆರಂಭಿಸಿದೆ "ಜೋಗೇಶ್ವರಿ" ಎಂದು ದಿನೇಶರಿಂದ ಉತ್ತರ ಬಂದಿತ್ತು, ನಂತರ ಎಲ್ಲಾ ಸಕಲ ಕಷ್ಟ ಸುಖ ವಿನಿಮಯ ತೊಡಗಿತು. ಅವರ ಮನೆ ಪೋನ್ ನಂಬರ್ ಕೂಡಾ ನನಗೆ ಕೊಟ್ಟರು, ನನಗೆ ತುಂಬಾ ಆತ್ಮೀಯರಾಗಿ ಬಿಟ್ಟರು. ಇತ್ತೀಚೆಗೆ ನನ್ನ ಕೆಲಸ ಅಂಧೇರಿಯ ಖಾಸಗಿ ಕಂಪೆನಿಯೊಂದರಲ್ಲಿ ಆಯಿತು. ಆಗ ನಾನು ನನ್ನ ವಾಸವನ್ನು ಬೊರಿವಲಿಗೆ ಬದಲಾಯಿಸಿ ನಾವು ಬ್ಯಾಚುಲರ್ಸ್ ವಾಸಿಸಲು ಪ್ರಾರಂಭ ಮಾಡಿದೆವು. ನಂತರ ದಿನೇಶ ಮತ್ತು ನಾನು ಪ್ರತಿ ರವಿವಾರ ಮೇರಿ ಆಂಟಿಯ ಮನೆಗೆ ಹೋಗಿ ವಾರದ ರಜೆಯನ್ನು ತುಂಬಾ ಸಂಭ್ರಮದಿಂದ ಆಚರಿಸ ತೊಡಗಿದೆವು. ಹೀಗೆ ಸಲುಗೆ, ಮಾತಿನ ಚಕಮುಕಿ ನಮ್ಮಲ್ಲಿ ನಡೆಯುತ್ತಲೇ ಇತ್ತು. ಇಷ್ಟಾಗುವಾಗ ನಾನು ಸವಿತಳ ಸಂಸಾರದ ಬಗ್ಗೆ ವಿಚಾರಿಸತೊಡಗಿದೆ. ಸೆಲಿನಳ ಗಂಡಾ ಅಬುದಾಬಿಯಲ್ಲಿ ಕೆಲಸ ಮಾಡುತ್ತಾನೆಂದು ತಿಳಿಯಿತು. ಮೇರಿ ಆಂಟಿಗೆ ಕೂಡಾ ಒಬ್ಬಳು ಮಗಳಿದ್ದಾಳೆ, ಜೆಸಿಂತ, ಅವಳು ಮಂಚಕಲ್ ನಲ್ಲಿ ತನ್ನ ಅಜ್ಜಿಯೊಂದಿಗೆ (ಅಲ್ಲಿಬಾಯಿ) ಇದ್ದಾಳೆ, ಅಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆಗೆ ಹೋಗುತ್ತಿದ್ದಳು, ಈಗ ಜೆಸಿಂತ ಏಳನೇಯ ತರಗತಿ, ಎಂಟನೆಯ ತರಗತಿಗೆ ಅವಳನ್ನು ಮುಂಬೈಗೆ ತರಿಸುವ ಅಂದಾಜಿನಲ್ಲಿದ್ದರು. ಮೇರಿ ಆಂಟಿ ಗಂಡ ಕೂಡಾ ಅಬುದಾಬಿಯಲ್ಲಿದ್ದಾರೆ ಅಂದು ಕೊಂಡಿದ್ದೆ!.

ಒಂದು ಭಾನುವಾರ ನಾನು, ಸವಿತ, ದಿನೇಶ ಮತ್ತು ಮೇರಿ ಆಂಟಿ ಜುಹು ಬೀಚಿಗೆ ಹೋಗಿದ್ದೆವು. ಏನೋ ಮಾತಾಡುತ್ತಾ, ಮಾತಾಡುತ್ತಾ "ನನಗೆ ಯಾರೂ ಇಲ್ಲ, ನಾನು ಇಷ್ಟು ಕಷ್ಟ ಪಡುತ್ತೇನೆ, ನನಗೆ ಯಾರು ನೋಡುವವರು ಇಲ್ಲ "ಎಂದು ದಿನೇಶನೊಡನೆ ಮೇರಿ ಆಂಟಿ ಕಣ್ಣೀರುಡುತ್ತಾ ಹೇಳುತ್ತಿದ್ದರು. ನಾನು ಎಣಿಸಿಕೊಂಡೆ "ಇವರದ್ದು ಇದ್ದದ್ದೇ ಸ್ವಲ್ಪ ತದ್ವಿರುದ್ದ ಮಾತಾಡಿದರೆ ನಾನು ಅದು ಇದು ಮಾಡಿಕೊಳ್ಳುತ್ತೇನೆ ಅಂತ ಹೋಗುತ್ತಾರೆ". ದಿನೇಶ ಹೇಗೊ ಅವರನ್ನು ಸಮಾಧಾನ ಪಡಿಸಿದ , ನಾನು ಮತ್ತು ಸವಿತ ನಮ್ಮ ಆಫೀಸಿನ ವಿಷಯ ಮಾತನಾಡುತ್ತಾ ಕಾಲಕಳೆದಿದ್ದೆವು. ಬರಬರುತ್ತಾ ನಾನು ಮೇರಿ ಆಂಟಿಯ ಬಗ್ಗೆ ಇಷ್ಟನ್ನು ಮಾತ್ರ ತಿಳಿದು ಕೊಂಡಿದ್ದೆ "ಮೇರಿ ಆಂಟಿ ಎಂದೂ ಸೀರೆ ಉಟ್ಟದ್ದು ನಾನು ಕಂಡಿಲ್ಲ, ಅವರು ಕರಿಮಣಿ ಎಂದೂ ಹಾಕುತ್ತಿರಲಿಲ್ಲ, ಪ್ಯಾಂಟ್ ಮತ್ತು ಟಾಪ್ ಅವರ ಉಡುಗೆ, ಲಿಪಿಸ್ಟಿಕ್ ಹಚ್ಚುವ ಹುಚ್ಚ್ಚು ಮಾತ್ರ ಇತ್ತು. ನೋಡುವವರಿಗೆ ನವೀನಯುಗದ ಹೆಂಗಸಿನಂತೆ ಕಾಣುತ್ತಿದ್ದರು.ತಾನು ಯಾರಿಗೂ ಹೆದರುತ್ತಿರಲಿಲ್ಲ ದೇವರೊಬ್ಬನಿಗೆ ಬಿಟ್ಟು ! ಗಂಡಸಿನ ವ್ಯವಾಹಾರಿಕ ಬುದ್ಧಿ ಅವರಲ್ಲಿತ್ತು. ಆದರೇ ಅವರಿಗಿದ್ದದ್ದು ಒಂದೇ ಕೊರತೆ, ತನಗೆ ಬೆಂಗಾವಲಾಗಿ ನಿಲ್ಲುವವರು ಯಾರು ಇಲ್ಲವೆಂದು, ನಮ್ಮೊಂದಿಗೆ ಎಂದೂ ತಾಯಿ ದರ್ಪ ತೋರಿದವರಲ್ಲ , ಅದನ್ನು ತೋರಿಸಬೇಕಾದ ಸನ್ನಿವೇಶವನ್ನೂ ನಾವು ಸೃಷ್ಠಿದವರಲ್ಲ, ಯಾವಾಗಲೊಮ್ಮೆ ಮಾತಿನ ಹದ್ದು ಮೀರಿದರೆ, ಕಣ್ಣ ಸನ್ನೆಯನ್ನೇ ಮಾಡುತ್ತಿದ್ದರು, ಆಗ ನನಗೆ ಅರ್ಥವಾಗುತ್ತಿತ್ತು. ನನ್ನ ಮಾತನ್ನ ಮೊಟಕುಗೊಳಿಸಬೇಕೆಂದು, ಇಲ್ಲಿ ಕೆಲವೊಮ್ಮೆ ನಾನು ಮುಂದುವರಿದು ಪೂರ್ತಿಯಾಗಿ ಹೇಳಬೇಕಾದನ್ನ ಹೇಳಿಬಿಡುತ್ತಿದ್ದೆ, ಆಗ ನನ್ನನ್ನು ಓಡಿಸಿ ಕೊಂಡು ಬಂದದ್ದು ಉಂಟು, ನಾನು ಅವರಲ್ಲಿ ತಾಯಿಯ ಔದರ್ಯವನ್ನು ಕಂಡಿದ್ದೆ. ದಿನೇಶರಿಗೆ ಅವರು ಆಪ್ತ ಗೆಳತಿಯಾಗಿದ್ದರು.ಯಾವ ಮುಚ್ಚುಮರೆ ಇಲ್ಲದೆ ನಾವು ಚರ್ಚಿಸುತ್ತಿದ್ದೆವು.

ಅದೊಂದು ಡಿಸೆಂಬರ್ ತಿಂಗಳ ರವಿವಾರ ಸಂಜೆ ಸುಮಾರು ಆರು ಗಂಟೆ ಸಮಯ,ನಾನು ಬಬಿತ, ಸವಿತ ಮತ್ತು ಜೆನೆಟ್ ಜುಹು ಬೀಚಿಗೆ ಹೋಗುವ ತರಾತುರಿಯಲ್ಲಿದ್ದೆವು. ಮೇರಿಆಂಟಿ ತನ್ನ ಪಾರ್ಲರ್ ನಿಂದ ನೇರವಾಗಿ ಅಲ್ಲಿಗೆ ಬರುವವರಿದ್ದರು. ದಿನೇಶ ಕೂಡಾ "ನನ್ನ ರಿಲೇಶನ್ ರವರ ಮದುವೆ ಇದೆ ನಾನು ಕೂಡಾ ನೇರವಾಗಿ ಅಲ್ಲಿಗೆ ಬರುತ್ತೇನೆ" ಅಂದಿದ್ದರು. ನಾವು ೭ ಗಂಟೆಗೆ ಸಮುದ್ರ ತೀರವನ್ನು ಸೇರಿಯಾಗಿತ್ತು. ಜೆನೆಟ್ ಒಬ್ಬಳೇ ತನ್ನಷ್ಟಕ್ಕೆ ಮರಳಿನಲ್ಲಿ ಆಡುತ್ತಿದ್ದಳು.ನಾನು ಆ ದಿನ ತಾನೇ ನರ್ಸಿಂಗ್ ಮುಗಿಸಿಕೊಂಡು  ಮುಂಬೈಗೆ ಬಂದಿದ್ದ ಬಬಿತಳನ್ನು ವಿಚಾರಿಸುತ್ತಿದ್ದೆ."ಬಬಿತ ನಾವು ಎಷ್ಟು ಸಮಯದ ನಂತರ ಮುಖಾಮುಖಿ ಬೇಟಿಯಾಗುವುದು" ನಾನೇ ಕೇಳಿದೆ -" ಐದು ವರ್ಷದ ನಂತರ, ಹೌದಲ್ಲ ಪಿ.ಯು.ಸಿ ಫಲಿತಾಂಶದ ದಿನ ನಾನು ನಿನ್ನನ್ನು ಕಡೇ ಸಲ ನೋಡಿದ್ದು ಏನೂ ಬದಲಾಗಲಿಲ್ಲ, ನಿನ್ನದು ಖಂಡಿತ ಗ್ಯಾರಂಟಿ ಕಲರ್" ಎಂದು ಮೋಡಿಮಾಡಿದಳು."ನಿಂದೂ  ಕೂಡಾ ನೀರೆರೆದ ಕೆಂಡದ ಬಣ್ಣ " ಎಂದು ಪ್ರತಿಉತ್ತರ ನೀಡಿದೆ. ಒಮ್ಮೆ ದಿಟ್ಟಿಸಿನೋಡಿ  ಕೋಪಿಸಿ  ಮತ್ತೆ  ಸುಮ್ಮನಾದಳು.

ಆಂಟಿ ಬಂದ್ರು ಆಂಟಿ ಬಂದ್ರು ಅಂತಹ ಜೆನೆಟ್ ಕೂಗುತ್ತಾ ಬಂದಳು , ಆ ಜನ ಜಂಗುಳಿ ಇನ್ನೇನು ಮುಳುಗಿತ್ತು ಸೂರ್ಯ ,ಗಿಜಿ ಗಿಜಿ ವ್ಯಾಪಾರ, ವಾಡ ಪಾವ್ , ಕಲಾ ಕಟ್ಟ ಈ ಎಲ್ಲದರ ನಡುವೆ ಜೆನೆಟ್ ಆಂಟಿಯನ್ನು ಎಲ್ಲಿ ಕಂಡಿದ್ದಳೋ ಅವರು ಹತ್ತಿರಕ್ಕೆ ಬಂದ ಮೇಲೆಯೇ ನಮಗೆ ತಿಳಿದದ್ದು .ಮಕ್ಕಳ ದೃಷ್ಠಿಯೋ ಹಾಗೇ ನೋಡಿ ಎಲ್ಲವನ್ನು ಕಂಡು ಹಿಡಿಯುತ್ತವೆ." ಬನ್ನಿ ಬನ್ನಿ " ಅಂತ ಸ್ವಾಗತಿಸಿದೆ ನಾಟಕೀಯವಾಗಿ. "ಎಲ್ಲಿದೆ ನಿಮ್ಮ ಜೋಡಿದಾರು, ಇನ್ನು ಅವರನ್ನು ಎಲ್ಲಿ ಹುಡುಕಬೇಕು" ಎಂದು ಸವಿತ ಆಂಟಿಯನ್ನು ಕೆಣಕಿದರು.   ದಿನೇಶ್ ಇನ್ನೂ ಕೂಡಾ ಬಂದಿರಲಿಲ್ಲ. ಮೇರಿಆಂಟಿ, ಸವಿತ, ಬಬಿತರ ಮಾತೃ ಭಾಷೆ ಕೊಂಕಣಿ. ಕೆಲವೊಮ್ಮೆ ಅರ್ಥವಾಗಬಾರದ ಸಂಭಾಷಣೆಯನ್ನು ಅದರಲ್ಲೇ ಮಾಡುತ್ತಿದ್ದರು. ಆದರೂ ನನಗೆ ಅರ್ಥಮಾಡಿ ಕೊಳ್ಳುವುದರಲ್ಲಿ ಕಷ್ಟವೇನೂ ಆಗುತ್ತಿರಲಿಲ್ಲ. "ನೋಡು ನಿನ್ನ ಆತ್ಮೀಯ ಗೆಳತಿ ಬಂದಿದ್ದಾಳೆ, ಅವಳಿಗೆ ಇವತ್ತು ಎಲ್ಲಿ ಪಾರ್ಟಿ ಕೊಡುವುದು?" ಎಂದು ಬಬಿತಳನ್ನು ತೋರಿಸಿ ನನಗೆ ಹೇಳಿದರು ಮೇರಿ ಆಂಟಿ. "ಇಲ್ಲೇ ಉಂಟಲ್ಲ - ವಡಾ ಪಾವು, ಸಮೋಸ ಪಾವ್, ಇದು ಬೊಂಬಾಯಿಯ ಎರಡು ಶ್ರೇಷ್ಠ ತಿನಸುಗಳೆಂದು ಅವಳಿಗೆ ತಿನ್ನಿಸಿದರಾಯಿತು" ಎಂದದ್ದಕ್ಕೆ ಎಲ್ಲರೂ ನಕ್ಕರು. "ಒಡ್ಲೆ ಪಿಟ್ಟಾಸಿನೋ" ಎಂದು ಕೊಂಕಣಿಯಲ್ಲಿ ಗೊಣಗೊಡುತ್ತಾ ಸವಿತಳ ಕಿವಿಯಲ್ಲಿ ಹೇಳಿದರು. "ಅವಳಿಗೆ ಹೇಳುವ ಅವಶ್ಯಕತೆ ಇಲ್ಲ ಅವಳೂ ಕೂಡಾ ಹಾಗೆ " ಎಂದು ನಗೆಯ ಹೊನಲು ಬರಿಸಿದೆ ನಾನು. ಅಷ್ಟರಲ್ಲೇ ದಿನೇಶನ ಸವಾರಿ ಬಂತು. "ಏನು ತಡವಾಯಿತು?, " ಮೇರಿಆಂಟಿ ವಿಚಾರಿಸಿದರು. "ಎಲ್ಲಿ ಲೇಟ್ ನಾನು ಸರಿಯಾಗಿಯೇ ಬಂದು ಮುಟ್ಟಿದ್ದೇನೆ, ನೀವು ಬೇಗ ಬಂದಿದ್ದರೆ ನಾನು ಏನೂ ಮಾಡ್ಬೇಕು?" ದಿನೇಶರು ಹಾರಿಕೆಯ ಉತ್ತರ ಕೊಟ್ಟರು. " ಹೋಗುವ ಅವಸರದಲ್ಲಿ ನನ್ನ  ಮಧ್ಯಾಹ್ನದ ಚಾ ಕುಡಿಯಲು ಬಿಡಲಿಲ್ಲ " ಎಂದು ಸವಿತ ಬಬಿತಳನ್ನು ತರಾಟೆ ಮಾಡಿದೆ. "ಬಸ್ ತುಂಬಾ ಹುಷಾರಾಗಿದ್ದೀಯಾ!" ಎಂದು ಸವಿತ ತನ್ನ ಕೈ ಉಗುರಿನಿಂದ ಚಿವುಟಿದಳು. 

ನಾವು ಸ್ವಲ್ಪ ಮಾತಾಡುತ್ತಾ ಕುಳಿತೆವು. ದಿನೇಶರು ಹೋಗಿ ಕಾದಜೋಳದ ತೆನೆ ತಂದರು.ನಾವು ಎಲ್ಲರೂ ಒಟ್ಟಾಗಿ ತಿಂದೆವು. "ಇಲ್ಲೇ ಕುಳಿತು ಏನೂ ಮಾಡುವುದು, ಒಂದು ಸುತ್ತು ಹಾಕುವ" ಎಂದು ಆಂಟಿ ಎದ್ದು ನಿಂತರು, ಎಲ್ಲರೂ ಎದ್ದು ನಿಂತೆವು, ಶುರುವಾಯಿತು ಮರಳಿನ ಮೇಲೆ ಪುಟ್ಟ ಹೆಜ್ಜೆ ಹಾಕಿ ಹಾಕಿ ನಾವು ಸಮುದ್ರ ತೀರದಲ್ಲಿ ನಡೆಯತೊಡಗಿದೆವು.ಸೂರ್ಯ ಆವಾಗಲೇ ಕತ್ತಲೆಯ ಸಾಮ್ರಾಜ್ಯದಲ್ಲಿ ಮುಳುಗಲು ಹೋಗಿದ್ದ ಚಂದ್ರ ತಾನು ಪೂರ್ಣವಲ್ಲದಿದ್ದರೂ ಆಕಾಶದಲ್ಲಿ ಮೆರೆಯುತ್ತಿದ್ದ ಅದೇ ಚಂದ್ರನನ್ನು ನೋಡಿ ಕೆಲವು ನಕ್ಷತ್ರಗಳು ಚಂದ್ರನೊಡನೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದವು. ಪಾಪ ನಕ್ಷತ್ರಗಳೂ ಕೂಡಾ ತಿಳಿದಿದ್ದವು ಚಂದ್ರನ ಕಥೆ ಆದರೇ ನಾನು ಮಾತ್ರ ತಿಳಿಯದೇ ಹೋದೆ ಮೇರಿಯ ಕಥೆ. 
ಇಂದು ಜನವರಿ ತಿಂಗಳ ಹನ್ನೆರಡನೇ ತಾರೀಕು, ಜೆಸಿಂತಳ ಬರ್ತ್ ಡೇ ತುಂಬಾ ಸಂಭ್ರಮವಾಗಿಯೇ ನಡೆದಿತ್ತು. ಎಲ್ಲಾ ನೆಂಟರೂ ಕೂಡಾ ಹೋಗಿ ಆಗಿತ್ತು, ನಂತರ ದಿನೇಶರ ಸವಾರಿ ಬಂತು. ನಾನು ಬಬಿತ,ಸವಿತ,ಅಲ್ಲಿ ಬಾಯಿ (ಮೇರಿಯ ತಾಯಿ) ಜೆನೆಟ್ , ಆಂಟಿ ಮಾತ್ರ ಮನೆಯಲ್ಲಿದ್ದೆವು. "ಇದು ಬರುವ ಹೊತ್ತೇ ಬರ್ತ್ ಡೇ ಎಲ್ಲಾ ಮುಗಿಯಿತು, ಇನ್ನೂ ಯಾಕೇ ಬಂದದ್ದು ಉಳಿದ್ದದ್ದು ಎಷ್ಟು ಅಂತ ನೋಡೋಕ?" ದಿನೇಶರನ್ನು ನಾನು ತಮಾಷೆಯಾಗಿ ಕೇಳಿ ಬಿಟ್ಟೆ. "ಊಟ ಮಾಡುವೀಯಂತೆ" ಅಂತ ಹೇಳಿ ಬಿರಿಯಾನಿ, ಮಟನ್ ಗ್ರೇವಿ ಎಲ್ಲಾ ತಂದು ದಿನೇಶನ ಮುಂದಿಟ್ಟರು ಆಂಟಿ. ಅರ್ಧ ಗಂಟೆ ಹಾಗೆಯೇ ಹರಟುತ್ತಾ ಕಳೆದೆವು. "ಸವಿತ ಇವತ್ತು ಎಲ್ಲಿಗೆ ಹೋಗುವ ಪ್ಲಾನ್ ಇದೆ?" ಅಂತ ಕೇಳಿ ಬಿಟ್ಟೆ "ನನಗೆ ಸುಸ್ತಾಗಿ ಹೋಗಿದೆ, ಎಲ್ಲಿಗೂ ಬೇಡ ಮನೆಯಲ್ಲೇ ಕೂರುವ" ಎಂಬ ಉತ್ತರ ಬಂತು. ನನಗೆ ತುಂಬಾ ಸಂತೋಷವೇ ಆಯಿತು. ಆದರೆ ಇದು ಮಾತ್ರ ಜೆಸಿಂತಳಿಗೆ ಖುಷಿ ಕೊಡಲಿಲ್ಲ. ಅವಳಿಗೆ ಎಲ್ಲಿಯಾದರೂ ತಿರುಗಲು ಹೋಗ ಬೇಕಿತ್ತು . ಆಂಟಿಯತ್ರ ಹಠಮಾಡ ತೊಡಗಿದಳು. "ನಿನಗೆ ಈಗ ಕೈಗೆ ಸಿಕ್ಕಿರುವ ಹಣವನ್ನು ಖರ್ಚು ಮಾಡುವ ತನಕ ದಿಗಿಲು ಇಲ್ಲ" ಎಂದು ಹೇಳಿ ಮೇರಿಆಂಟಿ ಮುಂದುವರಿಸಿ "ಇವತ್ತು ಎಲ್ಲಿಗೂ ಇಲ್ಲ , ಎಲ್ಲರೂ ಮನೆಯಲ್ಲಿಯೇ ಇರುವ" ಅಂದರು. ಆದರೆ ಜೆಸಿಂತ ಮತ್ತೂ ಮತ್ತೂ ತಾಯಿಯಲ್ಲಿ ಹಟ ಹಿಡಿದಳು. ತಾಯಿ ಸಮಾಧಾನ ಮಾಡುತ್ತಲೇ ಬಂದರು. ಇವರು ಸುಮ್ಮನ್ನಿದ್ದಷ್ಟು ಅವಳ ಹಠವೇರುತ್ತಿತ್ತು. ಸುಮ್ಮನಿರುವಂತೆ ಸನ್ನೆ ಮಾಡಿದರೂ ಕೂಡಾ ಜೆಸಿಂತ ಕೇಳಲೇ ಇಲ್ಲ. ತಾಯಿ ಲಿಲ್ಲಿಬಾಯಿಗೆ ಬೈಯ್ಯಲು ಶುರುಮಾಡಿದಳು. ಅಜ್ಜಿಲಿಲ್ಲಿ ಸಾಕಿದ ಮೊಮ್ಮಗಳು ಆದಕ್ಕೆ.  ಮತ್ತೂ ಹಠ ನಿಲಲಿಲ್ಲ. ಜೆಸಿಂತ ಹದ್ದು ಮೀರಿದ್ದಳು. ಸ್ವಲ್ಪವೂ ತಾಯಿಯ ಹೆದರಿಕೆ ಇರಲಿಲ್ಲ. ಇನ್ನು ತಡೆದು ಕೊಳ್ಳಲು ಆಗದೆ, ಕೈಗೆ ಸಿಕ್ಕಿದ ಸ್ಕೇಲ್ ನಿಂದ ಹೊಡೆದು ಬಿಟ್ಟರ. "ನಿನ್ನ ಬರ್ತ್ ಡೇ ಅಂತ ಸುಮ್ಮನಿದ್ದೆ, ಇಲ್ಲದಿದ್ದರೆ ಬೇಗನೇ ಬೆನ್ನಿಗೆ ಬೀಳುತ್ತಿತ್ತು. ದರಿದ್ರ ತಂದೆಯ ಸಂತಾನದ ಗುಣವೇ ಬಂದಿದೆ" ಎಂದು ಸಂತಾನದ ಬಗ್ಗೆ ಬೈಯಲಾರಂಭಿಸಿದರು. ಅಂತು ಸನ್ನಿವೇಶ ಈಗ ಹತೋಟಿಗೆ ಬಂದು, ಜೆಸಿಂತ ಸುಮ್ಮನಾಳದಳು.ನಾವು ಹೊರಡುತ್ತೇವೆ ಎಂದು ನಾನು ಮತ್ತು ದಿನೇಶ ಎದ್ದು ನಿಂತೆವು. ನಾನು ಕೂಡಾ ಬಸ್ ಸ್ಟಾಪ್ ತನಕ ಬರುತ್ತೇನೆ ಎಂದು ನಮ್ಮೊಂದಿಗೆ ಮೇರಿ ಆಂಟಿ ಕೂಡಾ ಹೊರಬಿದ್ದರು. ಮುಂಚೆ ನಡೆದ ಘಟನೆಯ ಬಗ್ಗೆ ಮಾತಾಡುತ್ತಾ ಮಾತಾಡುತ್ತಾ ನಾನು ಕೇಳಿದೆ. "ನೀವು ಅವಳ ತಂದೆಗೆ ಅವರ ಸಂತಾನಕ್ಕೆ ಯಾಕೆ ಬೈಯ್ಯುತ್ತೀರಿ ? ಮಕ್ಕಳೆದುರಿಗೆ ಹಾಗೆಲ್ಲಾ ಹೇಳಿದರೆ ನಾವು ಕ್ಷುಲಕವಾಗಿ ಬಿಡುತ್ತೇವೆ, ಎಲ್ಲಾ ವಿಷಯಗಳು ಕೆಲವೊಮ್ಮೆ ಮಕ್ಕಳಿಗೆ ತಿಳಿದಿರ ಕೂಡದು" ಎಂದು ನಾನು ಮಾತು ಮುಗಿಸುವಷ್ಟರಲ್ಲಿ "ಯಾವ ತಂದೆ ಯಾರವನು?" ಎಂದು ವಿಚಿತ್ರವಾಗಿ ಉತ್ತರಿಸಿದರು. "ಏನು ಮಾತಾಡುತ್ತಿದ್ದೀರಿ ನಿಮಗೆ ತಲೆಗಿಲೆ ಕೆಟ್ಟಿಲ್ಲ ತಾನೇ? ನಾನು ನಿಮ್ಮ ಗಂಡ, ಜೆಸಿಂತಳ ತಂದೆಯ ಬಗ್ಗೆ ಮಾತಾಡುತ್ತಿದ್ದೇನೆ" ಎಂದು ಜೋರಾಗಿಯೋ ಹೇಳಿ ಬಿಟ್ಟ. ದಿನೇಶ ನನ್ನ ಹೆಗಲಮೇಲೆ ಕೈ ಹಾಕಿದ, ನನಗೆ ಕಣ್ಣ ಸನ್ನೆ ಮಾಡಿದ. ನಾನು ಸುಮ್ಮನಾದೆ. ನಾನು ಪರಿಸ್ಥಿತಿಯನ್ನು ತಿಳಿಯದೇ ಹೋದೆ. ಇಷ್ಟು ಸಮಯ ಅವರೊಂದಿಗೆ ಒಡನಾಟದಲ್ಲಿದ್ದು ಚಂದ್ರನಲ್ಲಿದ್ದ ಕಪ್ಪು ಚುಕ್ಕೆಗಳನ್ನು ಗುರುತಿಸದಾದೆನೇ? ಪ್ರಾಯಶಃ ನನಗೆ ಹುಣ್ಣಿಮೆಯ ಚಂದ್ರನನ್ನು ಕಾಣುವ ಅವಕಾಶವೇ ಸಿಗಲಿಲ್ಲ ಎನ್ನಬೇಕು. ಏಕೆಂದರೆ ನಾನು ಮುಗ್ಧನಾಗಿದ್ದೆ ಆಂಟಿ ಜೀವನದ ದುರಂತವನ್ನು ತಿಳಿಯದೇ ಹೋಗಿದ್ದೆ!.
.....

ಅದು ಪೆರ್ನಾಲ್ ಚರ್ಚ್ ನ ಹೊರಾಂಗಣ ಜನ ಕಿಕ್ಕಿರಿದು ತುಂಬಿದ್ದಾರೆ. ಯಾವುದೋ ಮದುವೆ ನಡೆಯುತ್ತಿದೆ. ಜನರು ಹೋಗುತ್ತಿದ್ದಾರೆ ಚರ್ಚ್ ಕಡೆ ಮದುಮಗಳು ಮೇರಿ ಬಿಳಿಯ ವಸ್ತ್ರದಲ್ಲಿ ತಾನು ಸಿದ್ಧಳಾಗಿ ಬಂದಿದ್ದಾಳೆ. ಪಕ್ಕದಲ್ಲೇ ಮದುಮಗ ಡೇನಿಯಲ್ ಶೋಭಿಸುತ್ತಿದ್ದಾನೆ.ಅದು ಮೇರಿಯ ಮದುವೆಯ ಸಂಭ್ರಮ ಇಂದು ಮೇರಿ ದಾಂಪತ್ಯ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಅಣಿಯಾಗುತ್ತಿದ್ದಳು. ಮದುಮಗ ಡೇನಿಯಲ್ ಕೂಡಾ ಅದೇ ಊರಿನವ ಇದು ಲವ್ ಮ್ಯಾರೇಜ್ ಅಲ್ಲ ಖಂಡಿತಾ ಅಲ್ಲ , ಮೇರಿಯ ಮನಸ್ಸು ತುಂಬಾ ಸಂಭ್ರಮದಿಂದ ಕೂಡಿತ್ತು. ಮದುವೆ ಎಂದರೇ ಎಲ್ಲರಿಗೂ ಸಂಭ್ರಮ ತಾನೇ , ಎಲ್ಲಾ ಗುರುಹಿರಿಯರು ವಧು ವರರನ್ನು ನೂರು ಕಾಲ ಸುಖವಾಗಿ ಬಾಳಿ ಎಂದು ಹರಿಸಿದ್ದರು. ಅವರ ಆಶೀರ್ವಾದದಂತೆ ಆಗಿರುತ್ತಿದ್ದರೆ ಪಾಪ ಮೇರಿ ಇವತ್ತು ಎಷ್ಟು ಸುಖವಾಗಿರುತ್ತಿದ್ದಳೋ ಏನೋ! 

ವಧು ವರರನ್ನು ಆಶೀರ್ವದಿಸಿ ವಧುವನ್ನು ವರನ ಮನೆಗೆ ಬೀಳ್ಕೊಡುವುದು ಸಂಪ್ರದಾಯ, ಮೇರಿ ಕೃಷ್ಣವರ್ಣೆಯಾಗಿದ್ದರು ಕೂಡಾ ತುಂಬಾ ಲಕ್ಷಣವಾಗಿ ಕಾಣುತ್ತಿದ್ದಳು. ಮೇರಿ ಡೇನಿಯಲ್ ಹೇಳಿ ಮಾಡಿಸಿದ ಜೋಡಿಯಾಗಿತ್ತು. ತನ್ನ ಪ್ರಥಮ ರಾತ್ರಿಯಲ್ಲಿ ಮೇರಿ ಅದೆಷ್ಟೊ ಕನಸುಗಳನ್ನು ಕಟ್ಟಿದ್ದಳೋ ಏನೋ ಡೇನಿಯಲ್ ನನ್ನು ಮದುವೆಯಾದದ್ದು ತನ್ನ ಪುಣ್ಯವೆಂದು ನಂಬಿದ್ದಳು. ನವದಂಪತಿಗಳು ತುಂಬಾ ಸಂತೋಷದಿಂದ ಮಧುಚಂದ್ರವನ್ನು ಮುಗಿಸಿಕೊಂಡು ಬಂದರು. ಮೇರಿಯ ಮನೆಯವರು, ಡೇನಿಯಲ್ ನ ಮನೆಯವರು ತುಂಬಾ ಸಂತೋಷವಾಗಿದ್ದರು. ಒಂದು ದಿನ ಗಂಡನ ಮನೆಯಲ್ಲಿ ಮೇರಿ ತನ್ನ ಮಾವ ಮತ್ತು ಅತ್ತೆ ಈ ರೀತಿ ಮಾತಾನಾಡಿ ಕೊಂಡದ್ದನ್ನು ಕೇಳಿದ್ದಳು," ಇನ್ನಾದರೂ ಡೇನಿಯಲ್ ಒಬ್ಬ ಒಳ್ಳೆಯ ಮನುಷ್ಯನಾಗಿ ಮೇರಿಯೊಡನೆ ಬಾಳಿದರೆ ಸಾಕು ಓ ಯೇಸು ಅಷ್ಟಾದರೂ ಮಾಡಪ್ಪ". ಮೇರಿಗೆ ಮದುವೆಯ ಉತ್ಸಾಹದಲ್ಲಿ ಈ ವಿಷಯ ತಲೆಗೆ ಹತ್ತದೇ ಹೋಯಿತು!. 

ಇನ್ನೂ ೨೦ ದಿನಗಳು ಕಳೆದಿರಲಿಲ್ಲ ಮದುವೆಯಾಗಿ ಡೇನಿಯಲ್ ಮುಂಬೈಗೆ ಹೊರಡಲು ಅನುವಾಗಿ ನಿಂತನು ಈ ಡೇನಿಯಲ್. ತಂದೆ ತಾಯಿಯ ಮುಖದಲ್ಲಿ ದುಗುಡ ತುಂಬಿತ್ತು. ಹೊಸದಾಗಿ ಆ ಪರಿವಾರವನ್ನು ಸೇರಿದ ಮೇರಿ ಅದನ್ನು ತಿಳಿಯದೇ ಹೋದಳು. ಡೇನಿಯಲ್ ಮುಂಬೈಯ ದಾರಿ ಹಿಡಿದ. ಕೇವಲ ಒಂದು  ತಿಂಗಳು ಕಳೆದಿರಬೇಕಷ್ಟೆ ಇದ್ದಕ್ಕಿಂತೆ ಒಂದು ದಿನ ಮೇರಿಯ ಎದುರು ಡೇನಿಯಲ್ ಪ್ರತ್ಯಕ್ಷವಾಗಿಬಿಟ್ಟ. "ಒಂದು ಪೋನು ಕೂಡಾ ಮಾಡ್ಬರದಿತ್ತಾ ಏನು ? ದಿಢೀರನೆ ಬಂದು ಬಿಟ್ಟಿರಲ್ಲ!" ಕೇಳಿಯೇ ಬಿಟ್ಟಿದ್ದಳು ಮೇರಿ. "ಏನಿಲ್ಲ ನಿನ್ನ ನೆನಪು ತುಂಬಾ ಬರುತಿತ್ತು . ಅದಕ್ಕೆ ಹೇಳದೆಯೇ ಬಂದು ಬಿಟ್ಟೆ " ಎಂದು ತಪ್ಪಿಸಿಕೊಂಡ. ಪಾಪ ಮುಗ್ಧ ಮೇರಿಗೆ ಮನದಲ್ಲಿ ಖುಷಿಯಾಗಿತ್ತು. ಆದರೆ ಡೇನಿಯಲ್ ನ  ಹೆಜ್ಜೆ ಹಿಡಿಯಲು ಅವಳು ಅಸಫಲಳಗಿದ್ದಳು!.

    ಮೇರಿ ತಾಯಿಯ ಮನೆಗೆ ಹೋಗಿದ್ದಳು. ಡೇನಿಯಲ್ ಇನ್ನು ಊರಿನಲ್ಲೇ ಇದ್ದ. ಎಲ್ಲೊ ಹೊರಗೆ ಹೋಗಿರಬೇಕು. ಡೇನಿಯಲ್ ತಂದೆ ಮತ್ತು ತಾಯಿ ಮಗನ ನಡವಳಿಕೆಯಿಂದ  ಗಾಬರಿಯಾಗಿದ್ದರು ."ಎನ್ರೀ ಡೇನಿಯಲ್ ಮತ್ತ್ಯಾಕೆ ಬಂದಿದ್ದಾನೆ ಗೊತ್ತಾ?" ಅತ್ತೆಯ ಸ್ವರ, "ನಮ್ಮ ಮಗ ಮುಂಬೈಯಿಂದ ಓಡಿ ಬಂದಿದ್ದಾನೆ, ಅವನಿಗಾಗಿ ಪೋಲಿಸರು ಹುಡುಕಿತ್ತಿದ್ದಾರಂತೆ, ಇದೇನಾದರೂ ಮೇರಿಗೆ ತಿಳೀದು ಬಿಟ್ಟರೇ....." ಮಾತು ಮುಗಿಸುವಷ್ಟರಲ್ಲಿ ಮೆರಿ ಬಂದೇ ಬಿಟ್ಟಿದ್ದಳು. ಬಿಕ್ಕಿ ಬಿಕ್ಕಿ ಅಳತೊಡಗಿದಳು, ಗಂಡ ಬರಲಿ, ಅವನನ್ನೇ ಕೇಳುವುದೆಂದು ನಿರ್ಣಯಿಸಿ ಒಳಮನೆಯನ್ನು ಸೇರಿದ್ದಳು.ಹೊತ್ತು ಮುಳುಗುತ್ತಲೇ ಡೇನಿಯಲ್ ಪೇಟೆಯಿಂದ ಮನೆಗೆ ಬಂದ. ಚಾವಡಿಯನ್ನು ಪ್ರವೇಶಿಸುತ್ತಲೇ "ನಿಲ್ಲಿ ಇವತ್ತು ನೀವು ನನಗೆ ಹೇಳಲೇ ಬೇಕು, ನೀವು ಮುಂಬೈಯಲ್ಲಿ ಎಲ್ಲಿ ಕೆಲಸ ಮಾಡುತ್ತೀರಾ ?" ಎಂದು ಮೇರಿ ಕೇಳಿಬಿಟ್ಟಳು. ಡೇನಿಯಲ್ ದಂಗಾಗಿ ಹೋದ. ಇವಳಿಗೆ ಅಷ್ಟು ಬೇಗ ತಿಳಿದೇ ಹೋಯಿತ,"ನಾನು ಅಂಧೇರಿಯಲ್ಲಿ ಟ್ರಾವೆಲ್ ಏಜೆಂಟ್ ಕೆಲಸ ಮಾಡುವುದು" ಎಂದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಅಷ್ಟರಲ್ಲಿ ಮಾವ ಅತ್ತೆಯ ಪ್ರವೇಶವಾಯಿತು." ನಿಜ ಹೇಳಿ ನೀವು ಯಾರೊಟ್ಟಿಗೆ ಕೆಲಸ ಮಾಡುತ್ತಿದ್ದೀರಾ?"  "ಅಂದರೆ?" ಮೇರಿಯನ್ನೊಮ್ಮೆ ದುರುಗುಟ್ಟಿ ನೋಡಿದ. "ನಿಮ್ಮ ಗ್ಯಾಂಗ್ ನ ಹೆಸರೇನು?" ಮೇರಿ ಎದುಸಿರು ಬಿಡುತಿದ್ದಳು.   ತಲೆಗೆ ಸಿಡಿಲು ಬಡಿದಂತಾಯಿತು ಡೇನಿಯಲ್ ಗೆ. ಗಾಬರಿಗೊಂಡ. ಮೇರಿ ದುಃಖ ತಡೆಯಲಾರದೆ "ನಿಮಗೆ ಮದುವೆ ಯಾಕೆ ಬೇಕಿತ್ತು? ಯಾಕೆ ಈ ಮಾಂಗಲ್ಯ ನನ್ನ ಕೊರಳಿಗೆ ಕಟ್ಟಿದ್ದೀರಿ?ನೀವು ಯಾಕೆ ನನಗೆ ಮೋಸ ಮಾಡಿದಿರಿ? ಹೇಳಿ ಹೇಳಿ" ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಅವನ ಪಾದಕ್ಕೆ ಬಿದ್ದಳು. ಡೇನಿಯಲ್ ಮೇರಿಯನ್ನು ಎಬ್ಬಿಸಲು ಪ್ರಯತ್ನಿಸಿದ, "ಮುಟ್ಟಬೇಡಿ ಆ ಕೊಳಕು ಕೈಗಳಿಂದ !". ಇದು ಬಲವಾಗಿ ಡೇನಿಯಲ್ ಹೃದಯಕ್ಕೆ ನಾಟಿತ್ತು. ಮೇರಿ ಕಣ್ಣೀರಿನ ಕೋಡಿಯಲ್ಲಿ ಮುಳುಗಿ ಹೋದಳು. ಅವಳು ಕಟ್ಟಿದ್ದ ಆಶಾಗೋಪುರ ಕೇವಲ ತಂಗಾಳಿಗೆ ಧೂಳಿಪಟವಾದುದನ್ನು ಅವಳು ಕಂಡು ಪರಿತಪಿಸಿದಳು. ತನ್ನಷ್ಟಕ್ಕೆ ಎನಿಸತೊಡಗಿದಳು. ನನ್ನ ಕನಸು ಇನ್ನು ಈ ಜನ್ಮದಲ್ಲಿ ನನಸಾಗುವಂತೆ ಇಲ್ಲ.ಗೊತ್ತಿದ್ದು ಕೂಡಾ ತನಗೆ ಇಂತಹ ಮದುವೆಯನ್ನು ಮಾಡಿದ್ದ ಮಾವ ಅತ್ತೆಯನ್ನು ದ್ವೇಷಿಸತೊಡಗಿದಳು ಮೇರಿ. ಡೇನಿಯಲ್ ಗೆ ಮುಂಬೈಗೆ ಹೋಗುವಂತಿರಲಿಲ್ಲ . ಊರಿನಲ್ಲಿಯೇ ಇದ್ದು ಸುಮಾರು ತಿಂಗಳು ಸುಧಾರಿಸಿಕೊಂಡ. ಮೇರಿ ಮನಸಿನಲ್ಲಿ" ಇನ್ನು ಇವರು ಸುಧಾರಿಸಿದ್ದಾರೆ"  ಅಂದು ಕೊಂಡಳು.  ಏಳೆಂಟು ತಿಂಗಳು ಕಳೆದದ್ದೇ ತಿಳಿಯಲಿಲ್ಲ.ಆದರೆ ಅವನ ಕೃತ್ಯಗಳು ಅವನನ್ನೇ ಕೈ ಬೀಸಿ ಕರೆಯುತ್ತಿದ್ದವು. ಅವನು ಬಿಟ್ಟು ಹೋಗಿದ್ದ  ಜೀವನ ಮರುಕಳಿಸಿ ತನ್ನೊಡೆಗೆ ಕರೆಯುತ್ತಿತ್ತು.  ಈಗ ತನ್ನ ಮನೆಗೂ ಕೂಡಾ ಎಲ್ಲಾ ವಿಷಯಗಳು ತಿಳಿದಿದ್ದವು ಎಂದು ಮೇರಿ ನೊಂದುಕೊಂಡಳು .  

ಆಗಲೇ ಮದುವೆಯಾಗಿ ಒಂಭತ್ತು ತಿಂಗಳು ಕಳೆದಿತ್ತು. ಡೇನಿಯಲ್ ನನ್ನು ಮುಂಬೈ ಎಳೆಯುತ್ತಿತ್ತು.ಅವನು ತನ್ನ ಹಿಂದಿನ ವೃತ್ತಿಯನ್ನು ಬಿಡಲು ಸುತರಾಂ ಒಪ್ಪಲಿಲ್ಲ. ಅವನು ಬಿಡುವ ಮನಸ್ಸು ಮಾಡಿದರೂ ಮುಂಬೈ ಅವನನ್ನು ಕೈಬೀಸಿ ಕರೆಯುತಿತ್ತು. ಈ ನಡುವೆ ಮೇರಿ ನಾಲ್ಕು ತಿಂಗಳ ಗರ್ಭಿಣಿ ಕೂಡಾ ಆಗಿದ್ದಳು. "ನಮ್ಮ ಮಗುವಿನ ಭವಿಷ್ಯಕ್ಕಾದರೂ ನೀವು ಊರಿನಲ್ಲೇ ಕುಳಿತುಕೊಳ್ಳಿ"ಎಂದು ಅಂಗಲಾಚಿ ಬೇಡಿದರೂ ಕೂಡಾ ಡೇನಿಯಲ್ ಗೆ ಹೃದಯ ಕರಗಲೇ ಇಲ್ಲ. ಈಗ ಮೇರಿ ಒಂದು ಮಹತ್ತರವಾದ ನಿರ್ಧಾರಕ್ಕೆ ಬಂದಿದ್ದಳು. ಡೇನಿಯಲ್ ನಲ್ಲಿ ವಿಚ್ಛೇದನ ಕೇಳಿದ್ದಳು. ಡೇನಿಯಲ್ ಎನೂ ಸುತರಾಒ  ಅನ್ನದೆ ಡೈವೊರ್ಸ್ ಪೇಪರ್ಗೆ ಸಹಿ ಹಾಕಿದ್ದ! . ಪಂಜರದ ಬಾಗಿಲು ತೆರೆದಂತಾಯಿತು ಹೆಬ್ಬುಲಿಗೆ ! ಡೇನಿಯಲ್ ಮುಂಬೈಗೆ ಹಾರಿದ್ದನು. ಮೇರಿ ತನ್ನ ತಾಯಿ ಮನೆ ಸೇರಿದ್ದಳು.

ಅಲ್ಲಿ ಬಾಯಿಯ ಮನೆ, ಪುಟ್ಟ ಮೂರು ತಿಂಗಳ ಮಗುವೊಂದು ಅಳುತಿತ್ತು. ಮೇರಿ ಮಗುವಿಗೆ ಹಾಲುಣಿಸುತ್ತಿದ್ದಳು. ಈಗ ಮೇರಿ ತನ್ನ ಮಗಳು ಜೆಸಿಂತಳ ಬಗ್ಗೆಯೇ ಯೋಚಿಸತೊಡಗಿದಳು. "ನಾನು ನನ್ನ ಮಗಳನ್ನು ಚೆನ್ನಾಗಿ ಸಾಕಬೇಕು, ಅವಳಿಗೆ ಒಳ್ಳೆಯ ಭವಿಷ್ಯವನ್ನು ಕೊಡಬೇಕು" ಎಂದು ನಿರ್ಧರಿಸಿದವಳೇ ಮೂರು ತಿಂಗಳ ಮಗುವನ್ನು ತಾಯಿಯ ಮಡಿಲಲ್ಲಿ ಹಾಕಿ ಮೇರಿ ದುಬಾಯಿಗೆ ಲಗ್ಗೆ ಹಾಕಿದಳು. ದುಬಾಯಿ ಜೀವನ ತಿಳಿದವರಿಗೆ ಗೊತ್ತು. ಅಲ್ಲಿಯ ಭವಣೆ, ಅರಬ್ಬರ ದಬ್ಬಾಳಿಕೆ, ಆದರೂ ಮೇಲಿನ ತನ್ನ ಮಗಳ ಭವಿಷ್ಯ ಮುಖ್ಯವಾಗಿತ್ತು. ಆದರೆ ಮೇಲಿನ ಒಂದು ವಿಷಯ ಅರ್ಥವಾಗಲಿಲ್ಲ. ಆಕೆ ಯೋಚಿಸಿದ್ದು ಮಗುವಿನ ಭವಿಷ್ಯ ಮಾತ್ರ, ಆದರೆ ಆಕೆಗೆ ತಾಯಿ ಪ್ರೀತಿ ಕೊಡುವಲ್ಲಿ ಅವಳು ವಿಫಲಳಾಗಿದ್ದಳು. ಇದು ದುರಂತ. ದುಬಾಯಿ ಬಿಸಿಲಿನ ಬೇಗೆ, ಚಳಿಯ ಕಾಟ ಎರಡಕ್ಕೂ ಈಗ ಮೇರಿ ಹೊಂದಿ ಕೊಂಡಿದ್ದಳು. ಅಷ್ಟರಲ್ಲಿ ತನ್ನ ಮಗುವನ್ನು ನೋಡಬೇಕೆನಿಸಿತೋ ಏನೋ ಮೂರು ವರ್ಷಗಳ ನಂತರ ಊರಿಗೆ ಬಂದಿದ್ದಳು ಮೇರಿ .ಈಗ ಪರಿಸ್ಥಿತಿ ಸುಧಾರಣೆಯಾಗಿತ್ತು. ಮೂರು ವರ್ಷದ ಮಗಳು ಜೆಸಿಂತ ಆಗ ತಾನೇ ಎಲ್.ಕೆ.ಜಿ ಗೆ ಹೋಗುತ್ತಿದ್ದಳು. ಮಾತೃ ಹೃದಯ ಸಂತೋಷದಿಂದ ಕುಪ್ಪಳಿಸಿತ್ತು. ತಾನು ಸಾಧಿಸಿದೆ. ಸಾಧಿಸಿದೆ. ಎಂದು ಒಳಗಿನಿಂದಲೇ ಹೆಮ್ಮೆ ಪಡುತ್ತಿದ್ದಳು. ಆದರೆ ಇದನ್ನು ಹಂಚಿಕೊಳ್ಳಲು ಅವಳಿಗೆ ಸಂಗಾತಿ ಇಲ್ಲದೇ ಹೋಯಿತು. ಒಂದು ವಿಷಯ ಮಾತ್ರ ಮೇರಿಗೆ ತುಂಬಾ ಸಂಕಟವನ್ನು ತಂದಿತ್ತು. ಮಗಳು ಜೆಸಿಂತ ಯಾವ ರೀತಿಯಲ್ಲೂ ಮೇರಿಯನ್ನು ಹೋಲುತ್ತಿರಲಿಲ್ಲ. ತನ್ನ ತಂದೆಯನ್ನೇ ಹೋಲುತ್ತಿದ್ದಳು. ಈಗ ಮೇರಿಗೆ ಅವನ ಹೆಸರು ಎತ್ತಿದ್ದರೂ ಕೋಪ ನೆತ್ತಿಗೆ ಏರುತ್ತಿತ್ತು. ಮತ್ತೆ ಅವನ ಬಗ್ಗೆ ತಿಳಿದು ಕೊಳ್ಳುವ ಯಾವುದೇ ಪ್ರಯತ್ನ ಮೇರಿ ಮಾಡಿರಲಿಲ್ಲ.

ಇಷ್ಟು ವಿಷಯ ಹೇಳುವಷ್ಟರಲ್ಲಿ ಮೇರಿ ಆಂಟಿಯ ಕಣ್ಣಿನಲ್ಲಿ ನೀರು ತುಂಬಿ ಕೊಂಡಿತ್ತು . ನಾನು ಕೂಡಾ ದುಃಖದಲ್ಲಿ ಮುಳುಗಿದೆ. ದಿನೇಶರ ಕಣ್ಣುಗಳು ಸಹ ತೇವದಿಂದ ತುಂಬಿದವು . ಒಟ್ಟಾರೆ ಅವರ ಬದುಕಿನಲ್ಲಿ ಸೂರ್ಯನು ಮಧ್ಯಾಹ್ನವೇ ಮುಳುಗಲು ಹೋಗಿದ್ದ. ಅವಳಿಗಿದ್ದ ಕೊರತೆ ಒಂದೇ ನನಗೆ ಬೆನ್ನು ತಟ್ಟುವವರಿಲ್ಲ. ಈ ಬರ್ತ್ ಡೇಗೆ ಜೆಸಿಂತಳಿಗೆ ಹದಿಮೂರು ವರ್ಷ ತುಂಬಿತ್ತು. ನನಗೆ ಆಶ್ಚರ್ಯವೇ ಆಗಿ ಹೋಯಿತು. ಖಂಡಿತ ನಾನು ಇಷ್ಟೊಂದು ದೊಡ್ಡ ದುರಂತವನ್ನು ಆಂತಿಯ ಬಾಳಿನಲ್ಲಿ ಎಣಿಸಿದವನೇ ಅಲ್ಲ. ಅದು ಕೂಡಾ ನಾನು ಎಣಿಸುವುದಕ್ಕೆ ಮುಂಚೆಯೇ ಆಗಿ ಹೋಗಿತ್ತು. ಯಾರು ನನಗೆ ತಿಳಿಸಿರಲಿಲ್ಲ !.

ಜನವರಿ ೧೩ನೇ ತಾರೀಕು ೨೦೦೨ ನಾನು ಮನೆಯಲ್ಲಿಯೇ ಇದ್ದೆ. ಕೈಗೆ ಸಿಕ್ಕಿದ Times of India ವನ್ನು ಒದುತ್ತಾ ಕುಳಿತಿದ್ದೆ. "Rajans Aide shot Dead" ನಾಮದಡಿಯಲ್ಲಿ ಓದುತ್ತಾ ಮುಂದುವರಿದೆ. "It is reported that Rajans Aide Mr. Daniel Mathias was shot dead yesterday late night when he was eacaping from the police. As per the prior information to the police he was coming meet the Rajans men at Chembur. ನಾನು ಒಂದು ನಿಟ್ಟುಸಿರುನ್ನು ತೆಗೆದೆ. ಅಷ್ಟರಲ್ಲೇ ದಿನೇಶರವರ ಪೋನು ಬಂದಿತ್ತು. ನಾನು ಓದಿದೆ ಅಂದು ಬಿಟ್ಟೆ. ಮೇರಿಯ ಜೀವನಕ್ಕೆ ಬಡಿದ ಕೋಲ್ಮಿಂಚು, ಇಂದು ಕೂಡಾ ತನ್ನ ಪರಿಣಾಮವನ್ನು ತೋರುತ್ತಿತ್ತು. ಅದರ ಪರಿಣಾಮ ಇಂದು ಕೂಡಾ ಆಗಾಗ  ಅವಳ ಶಾಂತಿಯನ್ನು ಕದಡುತ್ತಿತ್ತು. ಆದರೆ ಆ ಮಿಂಚು ಆಡುತ್ತಿದ್ದ ಆಟಕ್ಕೆ ಇಂದು ಕೂಡಾ ಮೇರಿ ಏಕಾಂಗಿಯಾಗಿ  ನಿಂತಿದ್ದಾಳೆ.

- ಅಕುವ
......................................................................................................................................................................

No comments:

Post a Comment