Wednesday, May 4, 2011

ಗೇರು


ಗೇರು

ಗೀರು ಪರ್ಬುನ ತೋಟವೆಲ್ಲಾ
ಹೂ ಬಿಟ್ಟು ನಿಂತಾಗ ಇನ್ನೂ
ಶಾಲೆ ಮುಗಿದಿಲ್ಲ !
ಸಣ್ಣನೆ ಎಳೆಮೊಗ್ಗು ಗುರುವಾರ
ಸಂತೆಗೆ ಹೋದಾಗ ಕಂಡೆ !
ಹಳದಿ ಕೆಂಪು ಹಣ್ಣು
ಅಂಟಿಕೊಂಡಿದೆ ಬೀಜ
ಪರ್ಬು ಚರ್ಚುಗೆ
ನಾವು ತೋಟಕೆ !

ಸಂಗೀಸದ ಚೀಲ


ಸಂಗೀಸದ ಚೀಲ

ನೆತ್ತಿಗೆ ಅಡ್ದಲಾಗಿ ಜೋತುಬಿದ್ದ
ತೋಡಿನಂತ ತಗ್ಗು ಇಂದೂ ಇದೆ
ಹೊತ್ತಿಗೆ ತುಂಬಿದ ಸಂಗೀಸದ ಚೀಲ
ನೀಲಿ ಜತೆ ಬಿಳಿಯ ಪಟ್ಟಿ
ಕೆಲವೊಮ್ಮೆ ಒಂದೇ ಹೆಗಲು
ಭಾರ ಹೆಚ್ಚಿದರೆ ಮತ್ತೆ ತಲೆ
ಜಗ್ಗುತಿದ್ದ ಪೋರನ ನಡೆ !

ಫುಟ್ ಪಾತ್


ಫುಟ್ ಪಾತ್

ಅಗಲರಸ್ತೆಗೆ  ಇನ್ನೂ ಅಂಟಿಕೊಂಡಿದೆ
ನಡೆಯಲುಂಟೇ ತಡೆಯಲುಂಟೇ
ಸಂಜೆಯಾಗುತ್ತಲೇ ಮತ್ತೆ ಬಿಡಾರ
ಹೇಳಲುಂಟೇ ಸಂತೆ ಕಂತೆ !
ಮುನ್ಸಿಪಾಲ್ಟಿ ಜಾವಕ್ಕೆ ನೀರೆರಚಿ
ಇನ್ನೂ ಎದ್ದಿಲ್ಲ ಬೂಟ್ ಪಾಲಿಸನವ
ಕಟಿಂಗ್ ಚಹಾದವ , ಮತ್ತೆ
ಬಿರುಸಾದ ತಿರುಗು ಪಾನ್ ವಾಲ !

ಬೆದರು(ಗೊ)ಬೊಂಬೆ


ಬೆದರು(ಗೊ)ಬೊಂಬೆ

ಮಹಡಿ ಮಜಲುಗಳ ನಡುವೆ
ಉದುದ್ದ ಟಾರು ರಸ್ತೆ
ಹಾದು ಹೋದ ಸಿಮೆಂಟು ಸೇತುವೆ
ಜನ ಜಾತ್ರೆ ಮತ್ತೆ
ಸೇರುತ್ತಾ ಜಾರುತಿದೆ
ಇಕ್ಕೆಲಾದ ಪುಟ್ ಪಾತ್
ಒಮ್ಮೇಲೇ ಬಂದ ಮಳೆಗೆ
ಖಾಲಿ ಖಾಲಿ ಎಲ್ಲಾ
ನೆಂದು ನಿಂತಿದ್ದಾಳೆ
ಮಾರುವ ಗೊಂಬೆಯ ಹುಡುಗಿ !

ಮೌನ


ಮೌನ

ಮುಳುವಾಯಿತಲ್ಲ  ನಿನ್ನ ಮೌನ
ತಿಳಿಸದೆ ಹೋದೆಯಲ್ಲ !
ಕದ್ದು ಮಾತಾಡುವಾಕೆ
ಇಂದೇಕೆ ಮಳ್ಳಿಯಂತೆ ಪಲಾಯನ!
ಗದ್ದಲ ಗೌಜಿ ಕಿರಿಕಿರಿಯಾಯ್ತೆ?
ಬಂಗಾರವಾಯಿತೇ ಈ ಮೌನ !

ನಲ್ಲೆ


ನಲ್ಲೆ

ಮೆಲ್ಲ ನಗು ನನ್ನ ಸೆಳೆದ ರೀತಿ
ಮೆಚ್ಚುಗೆಯು ನಿನ್ನ ಪ್ರೀತಿ
ಇಲ್ಲದೆಲ್ಲೆಡೆ ಕಂಡೆ
ನಿನ್ನನ್ನೇ ನನ್ನ ತುಂಬಾ ಆವರಿಸಿಕೊಂಡೆ !
ಮತ್ತೆ ಮುಸುಕು ಮುಚ್ಚಿಕೊಂಡೆ
ಕಣ್ಣು ಮುಚ್ಚಿ ನೆನೆದೆಯಲ್ಲೇ !
ಮರೆಯಾದೆ ಏಲ್ಲೇ ನನ್ನ ನಲ್ಲೆ !

ಸ್ವಂತ ಮನೆ


ಸ್ವಂತ ಮನೆ

ಕಟ್ಟಿದೆ ಮನೆ ಸ್ವಂತ
ಆದರೂ ಗೋಡೆ ನನ್ನದಲ್ಲ
ಇಟ್ಟಿಗೆ ಹಿಡಿದು ನಿಂತಿದೆ !
ಬೆಳಕು ನನ್ನದಲ್ಲ
ಕಿಟಕಿ ಸದ್ದು ಮಾಡಿದೆ !
ಸುರಕ್ಷಿತವಾದೆ  ನಾನೆಂದರೆ
ಬಾಗಿಲು ಮುಚ್ಚಿಕೊಂಡಿದೆ !
ಗಾಳಿ ಮತ್ತೊಮ್ಮೆ ಬೀಸಿದೆ
ಅದೂ ನನ್ನದಲ್ಲ !
         ---- ಅಕುವ
೨೫.೦೪.೨೦೧೧