Sunday, March 25, 2012

ನೂರುರೂಪಾಯಿ ಮತ್ತು ದೇವರು


                                                        ನೂರುರೂಪಾಯಿ ಮತ್ತು ದೇವರು

ಮೊನ್ನೆ ಮೊನ್ನೆ ಊರಿಗೆ ಹೋದಾಗ ತಮ್ಮ ಸುಕೇಶನ  ರೂಮಿನ  ಸಾಮಾನು  ತೆಗೆದು  ಅವನ ಹೊಸಮನೆ "ಶ್ರೀಮುತ್ತು" ವಿಗೆ ಸಾಗಿಸುತಿದ್ದೆವು . ನಮ್ಮಿಬ್ಬರ  ಕಾಲೇಜಿನ ಹಳೆ ಪುಸ್ತಕದ ಗಂಟೊಂದು ಕಣ್ಣಿಗೆ ಬಿತ್ತು. ನಾವು ಯವತ್ತೂ ನಮ್ಮ ಪಠ್ಯಪುಸ್ತಕಗಳನ್ನು ರದ್ದಿಗೆ ಮಾರುತಿರಲಿಲ್ಲ. ನನ್ನ ತಮ್ಮನಿಗೆ ಪಠ್ಯಪುಸ್ತಕಗಳು ಹೊಸ ಸಿಲೆಬಸ್ ಗೆ ಬದಲಾವಣೆಗೊಂಡದ್ದರಿಂದ ನನ್ನ ಎಲ್ಲಾ ಪುಸ್ತಕಗಳು ಅಟ್ಟವೇರಿ ಕುಳಿತಿದ್ದವು. ಒಂದು ಹಳೆಯ ಲೇಖಕ್ ನೋಟ್ ಬುಕ್ ನನ್ನ  ಕಣ್ಣಿಗೆ  ಬಿತ್ತು. ತೆರೆಯುತ್ತಿದ್ದಂತೆ  ಅದರೊಳಗಿಂದ ನೋಟು ಕೆಳಗೆ ಬಿತ್ತು. ಅದು ನೂರರ ನೋಟು. ಅದರ ಮೇಲೆ "೧೧.೦೩.೧೯೯೮..ದೇವರ ಹಣ" ಎಂಬ ನನ್ನ ಹಸ್ತಾಕ್ಷರ ಕಣ್ಣಿಗೆ  ಬಿತ್ತು. ಸುಕೇಶನಿಗೆ  ತೋರಿಸಿ "ಏನಾದರೂ ನೆನಪಾಯಿತೇ ? " ಕೇಳಿದೆ.  "ಇಲ್ಲಾ  ಅಣ್ಣ" ಎನ್ನುತ್ತಾ ನನ್ನ  ಕೈಯಿಂದ ನೋಟನ್ನು ಏಳೆದು ನೋಡಿದ. ಮನೆಯ ಶಿಪ್ಟಿಂಗ್ ಗಡಿಬಿಡಿಯಲ್ಲಿದ್ದ  ಆತ ಏನೂ ಹೇಳದೆ ಸಾಮಾನು ಸರಂಜಾಮು ವ್ಯವಸ್ಥಿತವಾಗಿ ಜೋಡಿಸಿ ಹೊರತರುತ್ತಿದ್ದ.

ನಾನು ಪುಸ್ತಕದ ಕಟ್ಟನ್ನು  ಮತ್ತೆ  ಅಟ್ಟ ಸೇರಿಸಿ...ನೋಟು ಪುಸ್ತಕ ಮತ್ತು ನೂರರ ನೋಟಿನೊಡನೆ ತೋಟಕ್ಕೆ ಹೋದೆ. ನಮ್ಮ ಅಡ್ದಬಾಗಿದ ತೆಂಗಿನ ಬುಡದಲ್ಲಿ ಕೂತಾಗ ಎಲ್ಲಾ ನೆನಪಾಯಿತು.

ಗದ್ದೆಯಲ್ಲಿ ಅವಸರ ಅವಸರವಾಗಿ ಕೋಣಗಳನ್ನು ಮೇಯಲು ಕಟ್ಟಿ ಮನೆ ಕಡೆಗೆ ಓಡುತ್ತಿದ್ದೆ. ಗಂಟೆ ಆಗಲೇ ೮.೩೦ ದಾಟಿತ್ತು. ೯.೧೫ ರ ನವೀನ್ ಬಸ್ಸು ಹೋಗಿ ಬಿಟ್ಟರೆ ಕಾಲೇಜ್ ಗೆ  ತಡವಾಗುತಿತ್ತು. ಸುಕೇಶನಿಗೆ ದೂರದಿಂದಲೇ ಬೊಬ್ಬೆ ಕೊಟ್ಟು ಕರೆಯುತ್ತಾ ಸ್ನಾನಕ್ಕೆ ಸಾಬೂನು ತರಲು ಹೇಳಿದೆ. ಪಡ್ಡಾಯಿ ಪಾದೆಯಲ್ಲಿ ಹರಿಯುತ್ತಿದ್ದ ತೊರೆಯಲ್ಲೇ ಮುಳುಗು ಹಾಕಿ ಸುಕೇಶ ಮತ್ತು  ನಾನು ಸ್ನಾನ ಮುಗಿಸಿ ಅವಸರವಾಗಿಯೇ ಮನೆಗೆ ಬಂದು ಬಿಸಿ ಗಂಜಿಯನ್ನು ಗಬಗಬನೆ ತಿಂದೆವು. ಆಗಲೇ ತುಂಬಾ  ತಡವಾಗಿದ್ದರಿಂದ ನಿನ್ನೆ  ಹಾಕಿದ  ಪ್ಯಾಂಟನ್ನೇ ಸಿಕ್ಕಿಸಿ ಕೊಂಡು ಕೈಗೆ ಸಿಕ್ಕಿದ ಅಂಗಿಯನ್ನು ಹೊಂದಿಸಿಕೊಂಡು ಇಬ್ಬರು ಹೊರಬಿದ್ದವು. ಕೈಯಲ್ಲಿ ಮೂರು ಪುಸ್ತಕಗಳು , ಕಾಲಲ್ಲಿ ಸ್ಲಿಪ್ಪರ್ ಗುತ್ತಿವಿನ ಕಟ್ಟಪುಣಿ ಯನ್ನು ಓಡಿಕೊಂಡೆ ದಾಟಿದೆವು. ಆಗಲೇ  ಕೈಗಡಿಯಾರದ ಮುಳ್ಳು ಒಂಭತ್ತು ದಾಟ್ಟಿತ್ತು. ಸುಕೇಶ ಕೇಳಿದ " ಅಣ್ಣ , ಟಿಕೇಟ್ ಗೆ  ಹಣ ಇದೆ ತಾನೇ?"  ನಾನು ಪ್ಯಾಂಟಿನ ಕಿಸೆಗೆ  ಕೈ ತುರುಕಿಸಿ  ನೋಡಿದೆ.  ಅಂಗಿ ಕಿಸೆಯನ್ನು ಹುಡುಕಾಡಿದೆ, ಪುಸ್ತಕದ ಹಾಳೆಗಳ ನಡುವೆಯೂ ನೋಡಿದೆ. ಏನೂ ಪ್ರಯೋಜನವಾಗಲಿಲ್ಲ. ಒಂದು  ನಯ ಪೈಸೆ  ಕೂಡಾ  ಜೇಬಿ ನಲ್ಲಿರಲಿಲ್ಲ. ಮತ್ತೆ  ಸುಕೇಶನಿಗೆ " ನನ್ನಲ್ಲಿ  ಹಣ  ಇಲ್ಲ ಕಣೋ .ನಿನ್ನ  ಕಿಸೆಯಲ್ಲಿ ಇದೆಯೋ ನೋಡು " . ಅವನು  ಜೇಬು  ಎಲ್ಲಾ  ಹುಡುಕಾಡಿದ . "ಇಲ್ಲಾ" ಎಂದು ಸಪ್ಪಾಗಾದ. ನಾವು ಈಗಾಗಲೇ ಅರ್ಧದಾರಿ  ಬಂದಾಗಿತು. ಮನೆಗೆ ಹೋದರೂ ಪ್ರಯೋಜನವಿರಲಿಲ್ಲ. ಮೊದಲೇ ಬಸ್ ಹೋಗಿಬಿಡುವ ಆತಂಕ, ಕ್ಲಾಸು ತಪ್ಪಿಸಿಕೊಳ್ಳುವುದು ಭಯವಾಗುತಿತ್ತು . ಮನೆಯಲ್ಲಿ  ಅಮ್ಮ ಕೂಡಾ ಇರಲಿಲ್ಲ . ಅಪ್ಪನೊಬ್ಬನೆ  ದುಡಿದುದರಲ್ಲಿ ಆರು ಮಂದಿಯ ಜೀವನ . ಬೇಸಾಯ ಕೂಲಿಯಿಂದ ಬಂದರೂ ಎಷ್ಟು ಬಂದೀತು!.  ಮುಂದೆ ನಡೆಯುತ್ತಲೇ ಇದ್ದೆವು.

"ಇನ್ನೇನೂ ಮಾಡುವುದು ಅಣ್ಣ ?" ಸುಕೇಶನ ಪ್ರಶ್ನೆ . " ನೋಡುವ ದೇವರಿದ್ದಾನೆ.  ಒಮ್ಮೆ ಬಸ್ ಸ್ಟಾಂಡ್ ಗೆ ಹೋದ ಮೇಲೆ ನೋಡಿದರಾಯಿತು ", ಸಮಾಧಾನಿಸಿ ಕೋಡುಗುಡ್ದೆಯಲ್ಲಿ ಏರುವಿನಲ್ಲಿ ಬಸ್ ಸ್ಟಾಂಡ್ ಕಡೆ ವೇಗದ ಹೆಜ್ಜೆ ಹಾಕತೊಡಗಿದೆವು. ಕೋಡುಗುಡ್ಡೆಯ ಏರು ತಪ್ಪಿಸಲು ಮಕ್ಕಳೇ ಮಾಡಿದ ಒಂದು ಒಳದಾರಿಯೊಂದು ಇದೆ. ಅದರಲ್ಲಿ ಬಂದ್ರೆ ಸುಮಾರು ನಾಲ್ಕೈದು ನಿಮಿಷ ಬೇಗ ಕೋಡು ಗುಡ್ಡೆ ಬಸ್ ನಿಲ್ದಾಣ ಸೇರುತ್ತಿತು. ನಮ್ಮ ದಿನದ ದಾರಿ ಕೂಡಾ ಅದೇ ಆಗಿತ್ತು. ಆ ಕಡೆ ಈ ಕಡೆ ಕುಂಟಲ  ಹಣ್ಣಿನ ಗಿಡಗಳೇ ತುಂಬಿ ಕೊಂಡಿರುವ ಹಾದಿ ಅದು. ರಾತ್ರಿಯಾದರಂತು ಪಾದ ಕಾಣುತಿರಲಿಲ್ಲ. ನಾನು ಮುಂದಿನಿಂದ ನಡೆಯುತ್ತಲೇ ಇದ್ದೆ. ಇದಕ್ಕಿದ್ದಂತೆ  ಸುಕೇಶ  " ಅಣ್ಣ ... ಅಣ್ಣ  ನೂರು ರೂಪಾಯಿ ..." ಅಂದ . ಒಮ್ಮೆಲೆ ನಿಂತು ಬಿಟ್ಟೆ. ಅಷ್ಟರಲ್ಲಿ ಸುಕೇಶ ಕೆಂಪು ಧೂಳಿನಿಂದ ನೂರರ ನೋಟು ಎತ್ತಿದ .ಧೂಳು ಕೆಡವಿ " ಅಣ್ಣ ನೋಡು ಇಲ್ಲಿ....ದೇವರು ನೂರು ರೂಪಾಯಿ ಕೊಟ್ಟಿದ್ದಾನೆ !" ಇಬ್ಬರಿಗೂ ಖುಶಿಯಾಯಿತು.  ಉಡುಪಿ ಕೃಷ್ಣ ನಿನ್ನ ಭಜನೆ  ಮಾಡಿದ್ದು ಸಾರ್ಥಕವಾಯಿತು ಅಂತ ಇಬ್ಬರೂ ಒಮ್ಮೆಲೇ ನೆನೆದು ,ವೇಗ ಜಾಸ್ತಿಮಾಡಿ ಕೋಡುಗುಡ್ಡೆ ತಲುಪಿದೆವು.

ಕೋಡುಗುಡ್ಡೆ ತಿಮ್ಮಪ್ಪ ನಾಯಕರ  ಅಂಗಡಿಯಲ್ಲಿ ನೂರರ ನೋಟನ್ನು ಚಿಲ್ಲರೆ ಮಾಡಿಕೊಂಡು ನವೀನ್ ಬಸ್ ಏರಿಕೊಂಡು ಕಾಲೇಜು ಸೇರಿದ್ದಾಗಿತ್ತು. ದಿನವಿಡಿ ದೇವರು ಸಹಾಯ ಮಾಡಿದ್ದೆ ತಲೆಯಲ್ಲಿ.  ಸಂಜೆ ಮನೆಗೆ ಬರುವಾಗ  ಅದೇ ಜಾಗದಲ್ಲಿ  ಮತ್ತೆ  ನಿಂತು ನಾನು ಮತ್ತು ತಮ್ಮ ಉಡುಪಿ ಕೃಷ್ಣನನ್ನು ನೆನೆದು ಗುರುತಿಗಾಗಿ  ಒಂದು ಕಲ್ಲು ಇರಿಸಿಬಿಟ್ಟೆವು. ಮನೆಗೆ  ಹೋಗುತ್ತಾ ನನ್ನ ಮನಸ್ಸಿನಲ್ಲಿ ಒಂದು ಯೋಚನೆ  ಮಿಂಚಿತು. "ಈ ನೂರರ  ನೋಟನ್ನು ಹಾಗೆ  ನೆನೆಪಿಗೆ ಇಡಬೇಕು " ಸುಕೇಶನಿಗೆ  ಹೇಳಿದೆ . "ಅದು ಹೇಗೆ ಸಾಧ್ಯ? ಈಗ ನಮ್ಮಲ್ಲಿ ಇದು ಬಿಟ್ಟು ಏನೂ  ಇಲ್ಲವಲ್ಲ?  ಅಣ್ಣ "  "ಹೌದು , ಅದು  ಸರಿ. ಗೇರು ಬೀಜ ಮಾರಿ ಹಣ ಬಂದರೆ  ಅದನ್ನು  ಈ ಸಲ ಖರ್ಚುಮಾಡುವುದು ಬೇಡ  ಸರೀನಾ? " ಅಂದದ್ದಕ್ಕೆ ಸುಕೇಶ ಒಪ್ಪಿಕೊಂಡ. ಅದು ಕಾರ್ಯಗತ ವಾಗಲು ಮುಂದಿನ ಏಪ್ರಿಲ್ ತನಕ ಕಾಯಬೇಕಾಯ್ತು. ಇಬ್ಬರೂ ಹತ್ತು ಹತ್ತು ಒಟ್ಟು ಸೇರಿಸಿ ಹತ್ತರ ಹತ್ತು ನೋಟು ಒಟ್ಟಾಯಿತು. ಮತ್ತೆ ತಿಮ್ಮಪ್ಪರ ಅಂಗಡಿಗೆ  ಬಂದು ಅದನ್ನು ನೂರರ ನೋಟಿಗೆ ಬದಲಾಯಿಸಿಕೊಂಡೆವು. ಮನೆಗೆ  ಹೋದ  ಕೂಡಲೇ ನನ್ನ ಹಳೆಯ ಲೇಖಕ್ ನೋಟಿನಲ್ಲಿ  ಇಟ್ಟು "೧೧.೦೩.೧೯೯೮..ದೇವರ ಹಣ" ಬರೆದು ಪುಸ್ತಕ ದ  ಗಂಟಿಗೆ ಅದನ್ನು ಸೇರಿಸಿ ಬಿಟ್ಟೆ.

ತೆಂಗಿನ ಮರದ  ಬುಡಕ್ಕೆ ಓಡಿ ಬಂದ ಸುಕೇಶ " ಅಣ್ಣ ನನಗೂ ಎಲ್ಲಾ ನೆನಪಾಯಿತು. ಆ ಕಲ್ಲು ಈಗಲೂ ಅಲ್ಲೇ ಇರಬಹುದು. ಈಗ ಆ ದಾರಿ ಪೂರ್ತಿ ಮುಚ್ಚಿ ಹೋಗಿದೆ." " ಸರಿ ಹಾಗಾದರೆ  ಒಮ್ಮೆ ಆ ಕಲ್ಲನ್ನು ನೋಡಿಕೊಂಡು ಬರೋಣ" ನಾನು ಅಂದದ್ದಷ್ಟೇ ಸುಕೇಶ ಬೈಕ್ ಏರಿ ತಯಾರದ. ಅಲ್ಲಿ ಬಂದಾಗ ಆ ದಾರಿ  ಪೂರ್ತಿ ಮುಚ್ಚಿಹೋಗಿತ್ತು. ಕರಂಡೆ ಮುಳ್ಳಿನ ಗಿಡ ದಟ್ಟವಾಗಿ ಆವರಿಸಿತ್ತು. ಆದರೆ ಸವೆದು ಹೋದ ದಾರಿಯ ಗುರುತು  ಹಾಗೆಯೇ ಇತ್ತು. " ಅಣ್ಣ ..ಓ.....ಅಲ್ಲಿ ನೋಡು...ಕಲ್ಲು ಕಾಣಿಸುತಿದೆ......".  " ಅದೇ  ಇರಬೇಕು"
 "ಹೌದು ... ಅದೇ ಕಲ್ಲು ..ಇಷ್ಟು ವರ್ಷವಾದರೂ  ಅಲ್ಲೇ ಬಿದ್ದು ಕೊಂಡಿದೆ."  "ಅಣ್ಣ  ಅದು  ಅಂತಿಂಥ ಕಲ್ಲಲ್ಲ  ಅದು  ನಮಗೆ ನೂರು ರೂಪಾಯಿ ಕೊಟ್ಟ ಗುರುತು" ಸುಕೇಶನ ಮಾತಿಗೆ  ತಲೆ ಅಲ್ಲಾಡಿಸಿದೆ.  ಅಲ್ಲೇ ಇದ್ದ  ಕೇಪುಲದ  ಗಿಡದ ಹೂವನ್ನು ಕೊಯ್ದು  ಇಬ್ಬರೂ  ಕಲ್ಲಿನ  ಮೇಲೆ  ಇರಿಸಿ "ಓ ..ದೇವರೇ ....ನಿಮ್ಮ  ಉಪಕಾರಕ್ಕೆ  ನಾವು ಋಣಿ " ಎನ್ನುತ್ತಾ ಪ್ರಾರ್ಥಿಸಿದೆವು.  ಏನೋ ಒಂದು ಶಕ್ತಿಯ ಸಂಚಾರ ವಾದಂತೆ ಇಬ್ಬರಿಗೂ ಅರಿವಾಯಿತು.


-ಅಕುವ