Monday, January 20, 2014

ಮೂಲ(ಭೂತ) ??

ಮೂಲ(ಭೂತ) ??

ಈ ದಿನ ದಿನಪತ್ರಿಕೆ ಓದುತಿದ್ದಾಗ  ಕಣ್ಣಿಗೆ ಬಿದ್ದ  ವಿಷಯದಲ್ಲಿ  ಒಮ್ಮೆ  ತಕಲಾಟ   ಶುರುವಾಯಿತು.  ನಮ್ಮ ಸಮಾಜದ ಘನವೆತ್ತ  ಸಂಸ್ಥೆಯ  ಶಾಲೆಯೊಂದು ಬೆಳ್ಳಿಹಬ್ಬ ವನ್ನು ಆಚರಿಸುವುದು ನಿಜವಾಗಿಯೂ ಹೆಮ್ಮೆ ಎನಿಸಿತು. ಅದರೊಟ್ಟಿಗೆ ನೋವಿನ ಇನ್ನೊಂದು ಎಳೆಯು ನನ್ನ ಮುಂದೆ ಹಾದು ಹೋಯಿತು. ನಾಣ್ಯದ ಎರಡೂ  ಮುಖವನ್ನು ಹೇಗೆ ನಾವು  ಏಕಕಾಲದಲ್ಲಿ ನೋಡಲಾಗುದಿಲ್ಲವೋ  ಅದೇ ರೀತಿ ಇಂತಹ ಸಂಭ್ರಮಗಳಲ್ಲಿ ಕೆಲವೊಮ್ಮೆ  ನೋವುಗಳು ನಮಗೆ ಕಾಣದೆ ಹೋದರೂ  ಖಂಡಿತ  ಮಾಸಿ ಹೋಗಿರುವುದಿಲ್ಲ . 

ಈಗ ಸುಮಾರು ಒಂದೂವರೆ  ವರ್ಷ ಕಳೆದಿದೆ. ಈ ಘನವೆತ್ತ ಶಾಲೆಯನ್ನು  ನನ್ನ ಜಾತಿ ಸಂಸ್ಥೆ ನಡೆಸಿಕೊಂಡು  ಬಂದಿದೆ ಎಂಬ ಅತಿ  ಪ್ರೀತಿಯಿಂದ ನನ್ನ ಸಹೋದರನ ಪುಟ್ಟ ಮಗುವನ್ನು ಅಲ್ಲಿನ ಕಿಂಡರ್  ಸೇರಿಸುವ ತಪ್ಪು ಮಾಡಿದೆ. ಮಗು  ಸರಿಯಾಗೇ  ಶಾಲೆಗೆ ಹೋಗುತಿತ್ತು . ಕಲಿಸಿದ್ದನ್ನು ಕರಾರುವಕ್ಕಾಗಿ ಟೀಚರ್ ಗೆ    ಹೋಗಿ ಒಪ್ಪಿಸುತ್ತಿತ್ತು. ಈ ಮಧ್ಯೆ  ಟೀಚರ್ ಬದಲಾಗುತ್ತಾಳೆ . ಅಥವ ಬದಲಿಸ್ಪಡುತ್ತಾಳೆ !! .  ಮಕ್ಕಳ ಕಲಿಕೆಯಲ್ಲಿ ಏರುಪೇರಾಗುತ್ತೆ . ಬಹುಶ: ಹೊಸ ಟೀಚರ್ ಗೆ   ಬೇಗ  ಹೊಂದಿ ಕೊಳ್ಳುವುದು   ಮಕ್ಕಳಿಗೆ ಕಷ್ಟವಾಗುತ್ತೆ .  ಈ ನಡುವೆ ಪಾಲಕರ ಮತ್ತು ಆಡಳಿತ ವರ್ಗದ ಮೀಟಿಂಗ್ ನಡೆಯುತ್ತದೆ . ಪಾಲಕರು  ಹಳೆಯ ಟೀಚರ್ ಬಗ್ಗೆ  ಪ್ರಶ್ನೆ ಎತ್ತುತ್ತಾರೆ .  ನನ್ನ ಸಹೋದರ ಕಾರಣಗಳನ್ನೂ  ಕೇಳಿ ಹಾಕಿ  ಪ್ರಶ್ನೆಗಳನ್ನು ಇಡುತ್ತಾನೆ . ಸ್ಥಳೀಯ ಆಡಳಿತವು  ಮುಂಬೈ ಮಾತೃ ಸಂಸ್ಥೆಯ ಮೊರೆ ಹೋಗುತ್ತದೆ. . ಇಷ್ಟರಲ್ಲಿ  ಹಳೆ ಟೀಚರ್ ಕೆಲಸಕ್ಕೆ ರಾಜೀನಾಮೆ ಕೊಡುತ್ತಾರೆ .  ನಮ್ಮ ಪಕ್ಕದ ಇನ್ನೊಂದು ಖಾಸಗಿ  ಶಾಲೆಯಲ್ಲಿ  ಸೇರಿಕೊಳ್ಳುತ್ತಾರೆ . ಮುಂಬೈ ಆಡಳಿತಗಾರರಿಗೆ  ಫೋನ್ ಮಾಡಿ ಹೇಳಿದರೂ ಕೇಳುವ ಪರಿಜ್ಞಾನ ಅವರಿಗಿರಲಿಲ್ಲ . "ಶಾಲೆಯನ್ನು ಯಾವ ರೀತಿ  ನಡೆಸಬೇಕೆಂದು ನಮಗೆ ಗೊತ್ತಿದೆ " ಎಂಬ ಉಢಾಪೆ  ಉತ್ತರ ನಮಗೆ ಸಿಗುತ್ತದೆ. ನಾವು ವಿಷಯವನ್ನು ಇನ್ನು ಎಳೆದು ಪ್ರಯೋಜನವಿಲ್ಲ ವೆಂದು  ಸುಮ್ಮನಾಗಿದ್ದೆವು.   

೨೦೧೩ ಮೇ ತಿಂಗಳಲ್ಲಿ  ಸಹೋದರನ ಮನೆಗೆ ಶಾಲೆಯಿಂದ ಒಂದು  ಪತ್ರ ಬರುತ್ತದೆ. "ನಿಮ್ಮ ಮಗನ ಟಿ.ಸಿ. ತೆಗೆದು ಕೊಂಡು ಹೋಗಿ , ನಾವು ಇನ್ನು ಇಲ್ಲಿ  ಮುಂದುವರಿಸಲು ಸಾಧ್ಯವಿಲ್ಲ " . ಈ  ಬಗ್ಗೆ ಮತ್ತೊಮ್ಮೆ ನಾನು ಮತ್ತು  ಸಹೋದರ ನಮ್ಮ  ಜಾತಿ  ಸಂಸ್ಥೆಗೆ ತಿಳಿಯಪಡಿಸುತ್ತೇವೆ . ಮತ್ತೊಮ್ಮೆ ಮುಂಬೈಗೆ ಪತ್ರದ ಮುಖೇನ ತಿಳಿಸುತ್ತೇವೆ. ಅದರ  ನಕಲನ್ನು  ಸ್ಥಳಿಯ ಎರಡು ಜಾತಿ  ಸಂಸ್ಥೆಗೆ ತಿಳಿಸುತ್ತೇವೆ. ಆದರೆ ಮೂರು ಕಡೆಯಿಂದ ಯಾವ ರೀತಿಯ ಉತ್ತರ ಕೂಡ  ಬರುವುದಿಲ್ಲ . ಜೂನ್ ಹೊತ್ತಿಗೆ ಶಾಲೆ ಆರಂಭವಾಗುತ್ತೆ. ನಾನು ಮತ್ತು ಸಹೋದರ ಕಲಿತ ಶಾಲೆಯಿಂದ ನಮಗೆ ಕರೆ ಬರುತ್ತದೆ . " ನಿಮ್ಮ ಮಗುವನ್ನು ನಮ್ಮಲ್ಲಿ ಸೇರಿಸಿ " ಎಂಬ ಪ್ರಾರ್ಥನೆ ನಮ್ಮ ಹಳೆಯ ಪ್ರಾಂಶುಪಾಲರದ್ದು    . ಮಗುವಿನ ಅಮ್ಮನೊಡನೆ ಮಾತಾಡಿ ಹಳೆಯ  ಟೀಚರ್   ಸೇರಿದ   ಶಾಲೆಗೆ ಮಗುವನ್ನು ಸೇರಿಸಲಾಗುತ್ತದೆ. ಮಗು ಈಗ  ಮತ್ತೆ ನಲಿವಿನಿಂದ ಶಾಲೆಗೆ ಹೋಗುತಿದೆ.  

ಜಾತಿ ಪ್ರೀತಿ ಮುಳುವಾಯಿತೋ? ನಮ್ಮ ಅನುಭವ ಕಡಿಮೆಯಾಯಿತೋ ? ಒಂದೇ ದೇವರು , ಒಂದೇ  ಮತ ,  ಒಬ್ಬನೇ ದೇವರು  ಎಂಬ  ಗುರುವಾಣಿಯನ್ನು ಲೆಕ್ಕಿಸದೆ ಜಾತಿಗೆ ಅಂಟಿ ಕೊಂಡದ್ದು ಅಪರಾಧವಾಯಿತೇ?
 ಸ್ವತ: ಕ್ಯಾಥೋಲಿಕ್ ಸಂಚಾಲಿತ ಶಾಲೆಯಲ್ಲಿ ಕಲಿತ ನಮಗೆ ಜಾತಿ ಪ್ರೇಮ ಹುಚ್ಚು ಯಾಕೆ ಬಂತೋ ? ಶಿಕ್ಷಣ ಕ್ಕೆ  ಜಾತಿಯ ಬೇಲಿಯೂ ಬೇಕೇ? ಸ್ವಜಾತಿ ಯ ಶಾಲೆ  ಇಂದು ಬೆಳ್ಳಿ ಹಬ್ಬ ಆಚರಿಸುತಿರುವಾಗ  ನನ್ನ ಜಾತಿ ಭಾಂಧವರು ಅದರಿಂದ ಪಡೆದ ಲಾಭ ಸಮಾಧಾನಕರವೇ? 

ಏನೆಲ್ಲಾ  ಮೂಲಭೂತ  ಪ್ರಶ್ನೆ ಗಳು  ಮನಸ್ಸನ್ನು ರಾಡಿ ಮಾಡಿ ಬಿಟ್ಟಿವೆ.   ಮೂಲಕ್ಕೆ ಅಂಟಿ ಕೊಳ್ಳಲೇ  ಭೂತ ವನ್ನು ಮರೆಯಲೇ .... ?

- ಅಶೋಕ್ ಕುಮಾರ್ ವಳದೂರು(ಅಕುವ) 
05/01/2013

No comments:

Post a Comment