Saturday, September 1, 2012

ದಿಬ್ಬಣ -ಕಥೆ


ದಿಬ್ಬಣ 

ಇಂದು, ಮುತ್ತು ಮಾತ್ರ ಎಲ್ಲಿಲ್ಲದ ಸಂತೋಷದಿಂದ ಪಡುಮನೆಯಲ್ಲಿ ಸಂಭ್ರಮದಿಂದ ತಿರುಗುತ್ತಿದ್ದಾಳೆ. ಎಲ್ಲಾ ನೆಂಟರಿಷ್ಟರೂ ತುಂಬಿಕೊಂಡು ಪಡುಮನೆಯಲ್ಲಿ ಯಾವುದೇ ಶುಭ ಸಂಭ್ರಮ ನಡೆಯುವ ರೀತಿಯಲ್ಲಿ ಕಾಣುತ್ತಿತ್ತು. ನಾಲ್ಕಾರು ಜನರು ಪಡುಮನೆಯ ಮೆಟ್ಟಿಲೇರಿ ಹೋಗುತ್ತಿದ್ದಾಗ ನಾನು ಅವರನ್ನು ವಿಚಾರಿಸಿದಾಗ "ಇಂದು ಮುತ್ತುವಿನ ಎರಡನೇ ಮಗಳು ಸುನೀತಳ ಮದರಂಗಿ" (ಮದುವೆಯ ದಿನದ ಹಿಂದಿನ ರಾತ್ರಿಯಲ್ಲಿ ಮದುಮಗ/ಳಿಗೆ ಮದರಂಗಿ ಇಡುವ ಸಮಾರಂಭ) ಎಂದಿದ್ದರು. "ಒಳ್ಳೆಯದಾಗಲಿ ಪಾಪ! ಮುತ್ತುವಿಗೆ ಗಂಡು ಮಕ್ಕಳ ಗುರಿಯಿಲ್ಲ,ನಡೆಯಲಿ ಶುಭ ಸಮಾರಂಭ ! ದೇವರು ಒಳ್ಳೆಯದು ಮಾಡಲಿ" ಎಂದು ನಾನು ಮುಂದೆ ನಡೆದೆ. ರಾತ್ರಿ ಸುಮಾರು ಹನ್ನೆರಡು ಗಂಟೆ ತನಕ ಪಡುಮನೆ ತುಂಬಾ ಗದ್ದಲ ತುಂಬಿತ್ತು. ಆಗ ಇನ್ನೂ ಕೂಡಾ ಕರೆಂಟ್  ಎಂಬುದು ಹೇರೂರಿನ ಮೆಟ್ಟಿಲು ಕೂಡಾ ತುಳಿದಿರಲಿಲ್ಲ.ಊರಿನಲೆಲ್ಲಾ ಸುದ್ದಿ ಹರಡಿತ್ತು ಮುತ್ತುವಿನ ತಮ್ಮ ತಮ್ಮಯ್ಯ ಈ ಮದುವೆಯನ್ನು ಮಾಡುತ್ತಿದ್ದಾನೆ. ಸುನೀತ ಕೂಡಾ ತನ್ನ ಮಾವ ಈಗಲಾದರೂ ನಮಗೊಂದು ಒಳ್ಳೆಯ ಕಾರ್ಯ ಮಾಡಲು ಹೊರಟಿದ್ದಾರೆ,ಎಂದು ಕೊಂಡು ತುಂಬಾ ಗೌರವದಿಂದ ಕಾಣುತ್ತಿದ್ದಳು.ಮುತ್ತುವಿನ ದೊಡ್ಡಮಗಳು ಸುನಂದ ಕೂಡಾ ತನ್ನ ಸಂಸಾರ ಸಮೇತ ಉಡುಪಿಯ ತನ್ನ ಗಂಡನ ಮನೆಯಿಂದ ಆಗಾಗಲೇ ಬಂದು ಎಲ್ಲಾ ಕಾರ್ಯಗಳ ಮೇಲುಸ್ತುವಾರಿ ತೆಗೆದು ಕೊಂಡಿದ್ದಳು. ಸುನಂದಳ ಗಂಡ ಭಾಸ್ಕರ ಬಂಗಾರದಂತಹ ಮನುಷ್ಯ ತನ್ನ ನಾದಿನಿಗೆ ಮದುವೆ ಮಾಡಬೇಕೆಂದು ಎಷ್ಟೆಲ್ಲಾ ಕಷ್ಟಪಟ್ಟು ಕೊನೆಗೊಂದು ವರನನ್ನು ಗೊತ್ತುಮಾಡಿ ಈ ಮದುವೆಗೆ ಇಳಿದಿದ್ದಾನೆ. ಆದರೆ ಗಂಡು ದಿಕ್ಕಿಲ್ಲದ ಮುತ್ತುವಿಗೆ ತನ್ನ ಅಳಿಯನೇ ಸರ್ವಸ್ವವಾಗಿದ್ದನು. ಅಳಿಯನಿಗೂ ಕೂಡಾ ಮಾವ ಬಾಬು , ಮುತ್ತು ಅತ್ತೆಯರನ್ನು ಕಂಡರೆ ಎಲ್ಲಿಲ್ಲದ ಗೌರವ. ಸುನಂದಳ ನಾಲ್ಕು ಮಕ್ಕಳು ಕೂಡಾ ಆ ಮಬ್ಬಾದ ಗ್ಯಾಸ್ ಲೈಟ್ ನ ಬೆಳಕಲ್ಲಿ ಆಡುತ್ತಿದ್ದರು. ಮಕ್ಕಳಿಗೆ ಮನೆಯಲ್ಲಿ ಸಂಭ್ರಮ ನಡೆಯುತ್ತಿದ್ದರೆ ಸರಿ ಖುಷಿಯೋ ಖುಷಿ. ಅಂತು ಸುಮಾರು ಒಂದು ಗಂಟೆ- ಎರಡು ಗಂಟೆಯ ಹೊತ್ತಿನ ಆಚೆ ಈಚೆ ಇರಬಹುದು, ಪಡುಮನೆಯ ಸುತ್ತ ಸ್ತಬ್ಥತೆ ಆವರಿಸಿತ್ತು. ನನಗನ್ನಿಸುತ್ತದೆ ನಾಳೆ ಬೆಳ್ಳಗ್ಗೆ ಬೇಗ ಏಳಬೇಕೆಂದು, ಎಲ್ಲರೂ ಮಲಗಿರಬೇಕು, ನಾನೂ ಸುಮ್ಮನಾದೆ, ನಾನು ನೀರವತೆಯನ್ನು ಅಪ್ಪಿಕೊಂಡು ವಾಸ್ತವದಲ್ಲಿ ಜಾರಿಹೋದೆ.

ಸುಮಾರು ನಾಲ್ಕು ಗಂಟೆ ಮುಂಜಾವು ಇರಬೇಕು, ಗೂಟದಲ್ಲಿ ಕಟ್ಟಿದ ಕೋಳಿ ಟಪ್ ಟಪ್ ಬಡಿದುಕೊಂಡು ಕೂಗತೊಡಗಿತು. ಅದರ ಆ ಗದ್ದಲಕ್ಕೆ ನಾನು ಎದ್ದೆ ಬಿಟ್ಟೆ! ನಾನು ಎಚ್ಚರವಾದದ್ದೆ ತಡ, ಮುತ್ತುವಿಗೆ ಎಚ್ಚರವಾಗಿರಬೇಕು ಎದ್ದು ಬಿಟ್ಟಳು! "ಎಷ್ಟೊಂದು ಸಣ್ಣ ಜೀವ , ಪಾಪ ಕೆಲಸಮಾಡಿ! ಮಾಡಿ ನೆಲಕ್ಕೆ ಬಾಗಿ ಹೋಗಿದ್ದಾಳೆ, ಆದರೂ ಇವಳ ಹುಮ್ಮಸ್ಸು ನೋಡು, ದೇವರು ಇವಳನ್ನು ಇನ್ನೂ ಚೆನ್ನಾಗಿ ಇಟ್ಟಿರಲಿ" ಎಂದುಕೊಂಡು ಮುತ್ತುವಿಗೆ ಇನ್ನೊಮ್ಮೆ ಹಾರೈಸಿದ್ದೆ. ನನ್ನ ಪರಿಚಯ ನಿಮಗೆ ಖಂಡಿತ ಇಲ್ಲ. ಯಾಕೆಂದರೆ ನಾನು ನಿಮಗೆ ಕಾಣುವುದೇ ಇಲ್ಲ, ಆದರೆ ನಾನು ನಿಮ್ಮೊಂದಿಗೆ ಕೂಡಾ ಇದ್ದೇನೆ, ಸದಾ ಇರುತ್ತೇನೆ, ನಿಮಗೆ ನಾನು ಕಳೆದ ಮೇಲೆ ಮಾತ್ರ ತಿಳಿಯುವುದು, ನಾನು ವರ್ತಮಾನ! ನಿಮಗೆ ನನ್ನನ್ನು ಪರಿಚಯಿಸುವುದರಲ್ಲಿ ನಾನು ಜಾರಿದ್ದೆ ನನಗೆ ತಿಳಿಯಲಿಲ್ಲ !. ಸುಮಾರು ಎಂಟು ಗಂಟೆ ಕಳೆದು ಎಂಟೂವರೆ ದಾಟಿದೆ, ಆಗಾಗಲೇ ಸುನೀತಳನ್ನು ಮದುಮಗಳಾಗಿ ಸಿಂಗರಿಸಿ, ಮೊಹೂರ್ತಶೇಷೆ ನಡೆಯುತ್ತಿತ್ತು, ನನಗೆ ನೆನಪಿದೆ ಗರಡಿ ಮನೆಯ ಕಳತ್ತೂರು ಮುದ್ದು ಪೂಜಾರಿಯವರು ಇಂತಹ ಕೆಲಸದಲ್ಲಿ ಯಾವಾಗಲೂ ಮುಂದಕ್ಕೆ, ಇಂದೂ ಕೂಡಾ ಅವರದೇ ಮುಂದಾಳುತ್ವ, ಮದುಮಗಳು, ಮಾವ ತಮ್ಮಯ್ಯ, ಅತ್ತೆ ಕಮಲಮ್ಮ, ಸುನಂದ, ಭಾವ ಭಾಸ್ಕರ, ಸಂಬಂಧಿಕರು, ಕುಟುಂಬಸ್ಥರು, ಊರಿನ ಗೃಹಿಣಿಯರು ಹೀಗೆ ಎಲ್ಲರೂ ತುಂಬಾ ಸಂತೋಷದಿಂದ ಅಕ್ಷತಾಶೇಷೆಯನ್ನು ಹಾಕಿ ಮದುಮಗಳನ್ನು ಹರಸಿದರು.ಪೋಸ್ಟು ಮ್ಯಾನ್ ರಾಗಣ್ಣ ಮೂರು ಸಿಡಿಮದ್ದನ್ನು ಎಸೆದರು, ಸಿಡಿಮದ್ದಿನ ಸದ್ದಿನೊಂದಿಗೆ ಗುರುದೇವರ ಆಶೀರ್ವಾದದೊಂದಿಗೆ ಸುನೀತಳ ದಿಬ್ಬಣ ಹೊರಟಿತ್ತು. ಇಡೀ ಹೇರೂರಿನ ಊರವರು ಎಲ್ಲರೂ ಒಟ್ಟಾಗಿದ್ದರು. ಇದಕ್ಕೆ ಇರಬೇಕು "ಬಡವನಿಗೆ ಜನಬಲ, ಶ್ರೀಮಂತನಿಗೆ ಹಣಬಲ,ಅನ್ನುವುದು ಬಲ್ಲವರು!. ಹಾಗೆ ನೆರೆದಿತ್ತು ಜನಸಮೂಹ. ಅಂತು ದಿಬ್ಬಣ ಹೇರೂರಿನ ಕಟ್ಟಪುಣಿಯ ತುಂಬಾ ಭಾರಿ ಮೆರವಣಿಗೆಯಂತೆಯೇ ಸಾಗಿತ್ತು. ನಾನು ಈಗ ಮದುಮಗಳೊಂದಿಗೆ ಇದ್ದೇನೆ. ಅವಳ ಮುಖದ ತುಂಬಾ ಸಂತಸ ಅರಳಿತ್ತು!. ಹೆಣ್ಣಿಗೆ ಮದುವೆಯೆಂಬುದು ಒಂದೇ ಸಲ! ಅವಳು ಯೋಚಿಸಿರಬೇಕು ನನಗೆ ಬೆಳಕಾಗಿ ಬರುವ ಪ್ರಿಯತಮನೊಡನೆ,ನಾನು ಮೆರೆಯಬೇಕೆಂದು!.ತಪ್ಪಲ್ಲ ಎಲ್ಲಾ ಹೆಣ್ತನವು ಯೋಚಿಸುವುದು ಇದನ್ನೇ, ಅದೂ ಕೂಡಾ ತುಂಬಾ ಕರಾಳ ದಿನಗಳನ್ನು ಕಂಡಿದ್ದ ಸುನೀತಳಲ್ಲಿ ಕೆಲವೊಮ್ಮೆ ನನಗೆ ಈ ಜನ್ಮದಲ್ಲಿ ಮದುವೆ ಇದೆಯೋ, ಇಲ್ಲವೋ ಎಂಬ ಗೊಂದಲಗಳು ಕೂಡಾ ಎಬ್ಬಿಹೋಗಿದ್ದವು. ಕಿತ್ತು ತಿನ್ನುತಿರುವ ಬಡತನ. ಆಗ ಯಾವ ಬಂಧುವೂ ಇಲ್ಲ, ನೆಂಟರೂ ಇಲ್ಲ, ಕುಟುಂಬಸ್ಥರೂ ಇಲ್ಲವೇ ಇಲ್ಲ! ಸುನೀತ ಕೆಲವೊಮ್ಮೆ ನಾನು ಯಾಕೆ ಹೆಣ್ಣಾಗಿ ಹುಟ್ಟಿದೆ, ಗಂಡಾಗಿ ಹುಟ್ಟಬಾರದಿತ್ತೇ ? "ಇವೆಲ್ಲವನ್ನು ಅನುಭವಿಸುವುದೂ ಕೂಡಾ ಒಂದು ಜನ್ಮವೇ, ಇದಕ್ಕಿಂತ ನಾಯಿ ಜನ್ಮವೇ ಲೇಸು" ಎಂದು ಕೊಂಡಿದ್ದ ದಿನಗಳೂ ಕೂಡಾ ಉಂಟು. ಅದು ನನಗೆ ಮಾತ್ರ ತಿಳಿದಿತ್ತು! ಆದರೆ ಈಗ ಅದು ವರ್ತಮಾನವಲ್ಲ! ನಾನು ಸುಳಿಯುತ್ತಲೇ ಇದ್ದೇನೆ ಸುನೀತಳ ಸುತ್ತ ಆದರೆ ಆಕೆಯ ಮುಖದಲ್ಲಿ ಯಾವತ್ತು ಕಾಣದ ನಗುವಿನ ಗೆರೆಯೊಂದು ಕಾಣುತಿತ್ತು ತುಂಬಾ ಸಂತಸದಿಂದ ಹೆಜ್ಜೆ ಹಾಕಿ ಮುನ್ನಡೆದಿದ್ದಳು ಮದುಮಗಳಾಗಿ ಸುನೀತ. ಮತ್ತೊಮ್ಮೆ ಮುತ್ತುವಿನ ಬಳಿ ಹೋದೆ !ಇತ್ತ ಮುತ್ತು ತುಂಬಾ ಸಂಭ್ರಮದಿಂದ ತಯಾರಾಗಿದ್ದಳು, ಬಾಬು ಕೂಡಾ ತುಂಬಾ ರಾಜಮರ್ಜಿಯಲ್ಲಿಯೇ ತಮ್ಮ ಮಗಳನ್ನು ಧಾರೆಯೆರೆದು ಕೊಡುವ ಆತುರದಲ್ಲಿ ನಡೆಯುತ್ತಿದ್ದರು. ಹಿಂದಿನಿಂದ ಸುನಂದ ತನ್ನ ನಾಲ್ಕು ಮಕ್ಕಳೊಂದಿಗೆ ಪತಿ ಭಾಸ್ಕರನೊಂದಿಗೆ ಹೆಜ್ಜೆ ಹಾಕುತ್ತಿದ್ದಾಳೆ, ಆ ಹೆಜ್ಜೆಯ ಮೆರೆಗೇ ಬೇರೆಯಾಗಿತ್ತು !

ಅಷ್ಟರಲ್ಲೇ ನಾನು ದಿಬ್ಬಣ ಸಮೇತ ಬನ್ನಂಜೆಯ ಕಲ್ಯಾಣ ಮಂಟಪವನ್ನು ಸೇರಿ ಆಗಿತ್ತು. ೧೦.೧೫ರ ಮೊಹೂರ್ತಕ್ಕೆ ಸರಿಯಾಗಿ ಮದುಮಗಳು ಬಂದು ಇಳಿದಾಗಿತ್ತು,ಆಗಲೇ ಬಂದಿದ್ದ ವರನ ಕಡೆಯ ಸುಮಂಗಲೆಯರು ಮದುಮಗಳನ್ನು ಶಾಸ್ತ್ರೋಕ್ತವಾಗಿ ಬರಮಾಡಿಕೊಂಡರು.ಕಲ್ಯಾಣಮಂಟಪಕ್ಕೆ ಕರೆದೊಯ್ದ ಮದುಮಗಳಿಗೆ ಧಾರೆಸೀರೆಯನ್ನು ಹಸ್ತಾಂತರಿಸಲಾಯಿತು. ಇನ್ನು ನನಗೆ ಮಾತ್ರ ಬಿಡುವು. ಇನ್ನು ಮದುಮಗಳು ಧಾರೆ ಸೀರೆ ಉಟ್ಟು ಬರುವಾಗ ಒಂದು ಅರ್ಧ ಗಂಟೆಯಾದರೂ ತಗಲುತ್ತಿತ್ತು. ಹಾಗೆ ನನ್ನ ಸವಾರಿಯನ್ನು ಗಂಡಸರು ನಿಂತುಕೊಂಡು ಗುಂಪಾಗಿ ಚರ್ಚಿಸುತ್ತಿದ್ದ ಕಡೆ ನಾನು ಬೆಳೆಸಿದೆ. ಭಾಸ್ಕರ, ತಮ್ಮಯ್ಯ, ಮುದ್ದಣ್ಣ ಇವರು ಮೂವರನ್ನು ಬಿಟ್ಟರೆ ಉಳಿದವರೆಲ್ಲಾ ಗಂಡಿನ ಕಡೆಯವರು, ಅಷ್ಟರಲ್ಲೇ ತಲೆಗೆ ಬಾಸಿಂಗ ತೊಟ್ಟ ಮದುಮಗ ಕೂಡಾ ಅಲ್ಲಿಗೆ ಬಂದು ಸೇರಿದ್ದ. ಅಷ್ಟರಲ್ಲಿಯೇ ನನಗೆ ತಿಳಿಯಿತು ಇದು ಏನೂ ವಿಷಯ ಗಂಭೀರವಾದುದೆ ಎಂದು. ಆದರೂ ಏನೂ ಮಾಡುವುದು ನಾನಾಗಿ ಕೇಳುವ ಹಾಗಿಲ್ಲ, ನೋಡುವ !ಎಂದು ಕಾಯುತ್ತಾ ಕುಳಿತೆ. ಮದುಮಗನನ್ನು ಕುರಿತು ಅವನ ಕಡೆಯವರು "ಲಕ್ಷ್ಮಣ, ಅವರು ಹಣವನ್ನು ಪೂರ್ತಿಯಾಗಿ ತರಲಿಲ್ಲ" ಎಂದದ್ದು ಕೇಳಿಸಿಕೊಂಡೆ. ಈಗ ನನಗೆ ಖಾತ್ರಿಯಾಯಿತು ಇದು ವರದಕ್ಷಿಣೆಯದ್ದೇ ವಿಷಯ. ಆವಾಗ ಅಲ್ಲಿಗೆ ಭಾಸ್ಕರ ಬಂದು ಸಮಾಧಾನ ಪಡಿಸಿದ, ಭಾಸ್ಕರ ಲಕ್ಷ್ಮಣನಿಗೆ ಏನೋ ಹೇಳುತ್ತಿದ್ದ. ಲಕ್ಷ್ಮಣನೂ ಕೂಡಾ ತಲೆ ಅಲ್ಲಾಡಿಸಿ, ಒಳಗೆ ನಡೆದು ಅಗ್ನಿ ಹೋಮದ ಮುಂದೆ ಕುಳಿತು ಪೂಜೆಗೆ ತಯಾರಾದ.ವಧುವು ನವ ಸೀರೆಯೊಂದಿಗೆ ಅಗ್ನಿ ಹೋಮದ ಮುಂದೆ ಬಂದು ಆಸೀನಳಾದಳು.ಭಟ್ರು ಗಟ್ಟಿ ಮೇಳ ! ಅಂದದ್ದೇ ತಡ ಲಕ್ಷ್ಮಣ ಸುನೀತಳಿಗೆ ತಾಳಿಯನ್ನು ಕಟ್ಟಿದ್ದ! ಇನ್ನೇನೊ ನವ ವಧು - ವರರು ಹಿರಿಯರ ಆಶೀರ್ವಾದಕ್ಕಾಗಿ ಮಾವ ತಮ್ಮಯ್ಯನನ್ನು ಹುಡುಕುತ್ತಿದ್ದಾಗ ತಮ್ಮಯ್ಯ ಮತ್ತು ಕಮಲಮ್ಮ ಅಲ್ಲಿಂದ ಮಾಯವಾಗಿದ್ದರು!ಯಾಕಿರಬಹುದು? ನಾನು ಕೂಡಾ ತುಂಬಾ ಯೋಚಿಸತೊಡಗಿದೆ. ಆದರೆ ಉತ್ತರ ಹೊಳೆಯಲೇ ಇಲ್ಲ! ನನಗೆ ತುಂಬಾ ಗಾಬರಿಯಾಯಿತು. ಇದರಲ್ಲೇನೋ ಆಟ ಇದೆ! ಎಂದು ನಾನು ಮದುವೆಯ ಮಂಟಪ ತೊರೆದು ತಮ್ಮಯ್ಯನ ಬೆನ್ನು ಹಿಡಿಯುವ ಯೋಚನೆ ಮಾಡಿದ್ದೆ! ಆದರೆ ನನ್ನ ಮನಸ್ಸು ತಡೆಯಲಾಗಲಿಲ್ಲ! ನಾನು ಅಲ್ಲೇ ಉಳಿದು ಬಿಟ್ಟೆ !ಲಕ್ಷ್ಮಣ ಬಂದು ಭಾಸ್ಕರನೊಂದಿಗೆ ಮಾತುಕತೆ ನಡೆಸಿರಬೇಕು. ಸುನಂದಳ ಕಣ್ಣಲ್ಲಿ ನೀರು ಆಗಲೇ ಇಳಿದಿತ್ತು! "ಬಡವರನ್ನು ದೇವರು ಪರೀಕ್ಷಿಸುವ ರೀತಿಯೋ ಇದು" ಎಂದು ನಿಟ್ಟುಸಿರು ಬಿಟ್ಟಿದ್ದಳು. ಮುತ್ತು, ಮದುಮಗಳಿಗೂ ಕೂಡಾ ವಿಷಯ ತಿಳಿದಿರಬೇಕು ಅವರು ಆಳುತ್ತಿದ್ದಳು! ನಾನು ಅಸಹಾಯಕನಾಗಿ ನಿಂತಿದ್ದೆ! ಇಂತಹ ಸಂಭ್ರಮದ ಹೊತ್ತಲ್ಲಿ ಈ ದುಃಖವೇ? ನನಗೆ ತುಂಬಾ ಬೇಸರವಾಗಿತ್ತು. ಆದರೂ ಕೂಡಾ ನಾನು ನಿಸ್ಸಹಾಯಕನಾಗಿದ್ದೆ!. ಸುನೀತಳನ್ನು ದುಃಖದಲ್ಲಿಯಲ್ಲಿಯೇ ಬೀಳ್ಕೊಡಲಾಯಿತು. ಮುತ್ತು, ಬಾಬು,ಸುನಂದ ಮತ್ತು ಭಾಸ್ಕರ ತುಂಬಾ ಚಿಂತೆಯಲ್ಲೇ ಮುಳುಗಿಹೋದರು.  

ನಾನು ಸೀದಾ ಪ್ರಯಾಣ ಪಡುಮನೆಗೆ ಬೆಳೆಸಿಬಿಟ್ಟೆ. ಸುಮಾರು ಆರು ಗಂಟೆ ಸಮಯವಾಗಿರಬೇಕು.ಗಂಡನ ಮನೆಗೆ (ವರನ ಮನೆಗೆ) ಹೋಗಿದ್ದ ಮದುಮಗಳು ಮನೆಗೆ ವಾಪಾಸ್ಸು ಬಂದಿದ್ದಳು.ಗಂಜಿ ಅಂಬಲಿ ಇದ್ದಿಲು ಬಟ್ಟಲಲ್ಲಿ ಹಿಡಿದುಕೊಂಡು ಮುತ್ತು ಮದುಮಗಳ ದೃಷ್ಠಿ ತೆಗೆಯಲು ಎದುರಾದಳು. ನೆರೆಹೊರೆಯವರೆಲ್ಲಾ ಬಂದಿದ್ದರು ಮದುಮಗಳನ್ನು ನೋಡಲು, ಈಗ ಮಾತ್ರ ನನಗೆ ಒಂದು ವಿಷಯ ತಿಳಿದಾಗಿತ್ತು! ಸುನೀತಳನ್ನು ಬರಮಾಡಿ ,ಮಕ್ಕಳನ್ನು ಸಂತೈಸಿ ಕೊಳ್ಳುತ್ತಿದ್ದ ಸುನಂದಳ ಕಿವಿಗೆ ಒಂದು ಆಘಾತಕಾರಿ ಸುದ್ದಿ ಬಿತ್ತು. ಒಡನೆ ಸುನಂದ ಮಾವ ತಮ್ಮಯ್ಯನ ಮನೆಗೆ ಹೋದಳು. ಅವಳಲ್ಲಿ ಅಷ್ಟೊಂದು ತಡೆದು ಕೊಳ್ಳುವ ಸಹನೆ ಇರಲಿಲ್ಲ!.

ಈಗಾಗಲೇ ನನಗೆ ಇಷ್ಟು ವಿಷಯ ಮಾತ್ರ ಚೆನ್ನಾಗಿ ತಿಳಿದಿತ್ತು.ಗಂಡು ದೆಸೆ ಇಲ್ಲದ ಮುತ್ತುವಿಗೆ ಬೊಂಬಾಯಿಯಲ್ಲಿದ್ದ ಅವಳ ಹಿರಿಯಕ್ಕನ ಮಕ್ಕಳು, ಕಿರಿಯಕ್ಕಳ ಮಕ್ಕಳು ಮದುವೆಗೆ ಸಹಾಯ ಮಾಡುವುದಾಗಿ ಭರವಸೆ ಕೊಟ್ಟು ಹೋಗಿದ್ದರು. ಬೊಂಬಾಯಿಗೆ ತಮ್ಮಯ್ಯ ಹೋಗಿ ನಲ್ವತ್ತು ಸಾವಿರ ರೂಪಾಯಿ ಒಟ್ಟು ಮಾಡಿದ್ದಾನೆ ಎಂಬ ಸುದ್ದಿ ತಿಳಿಯಿತು.ಮದುವೆಗೆ ಎರಡೋ ಮೂರೋ ದಿನ ಇರುವಾಗ ಬೊಂಬಾಯಿಂದ ಬಂದ ತಮ್ಮಯ್ಯ, ಹೋದದ್ದು ಹೆಚ್ಚು ಪ್ರಯೋಜನವಾಗಿಲ್ಲ ಎಂದು ಹೇಳಿ ಕೇವಲ ಇಪ್ಪತ್ತು ಸಾವಿರವನ್ನು ಮುತ್ತುವಿನ ಕೈಗೆ ಕೊಟ್ಟು ಇಷ್ಟೆ ಬೊಂಬಾಯಿಯಲ್ಲಿ ಒಟ್ಟಾದ ಹಣ ಅಂದಿದ್ದ. ಆಗಲೀ ಎಂದು ಮುತ್ತು ಮುಗ್ಧಳಾಗಿ ಹೆಚ್ಚು ವಿಚಾರಣೆಗೆ ಹೋಗದೆ ತಮ್ಮನ ಮೇಲಿನ ವಿಶ್ವಾಸದಿಂದ ಸ್ವೀಕರಿಸಿದ್ದಳು. ಇದಕ್ಕೆ ಸುದ್ದಿ ಹರಡಿದ್ದು ಮದುವೆ ತಮ್ಮಯ್ಯ ಮಾಡುವುದು ಎಂದು! ಆದರೆ ಈ ತಮ್ಮಯ್ಯ ಉಳಿದ ಇಪ್ಪತ್ತು ಸಾವಿರವನ್ನು ತನ್ನ ಜೇಬಿನಲ್ಲಿ ಇರಿಸಿಕೊಂಡು ಮದುವೆಗೆ ಬಂದಿದ್ದ!

ಅಲ್ಲಿ ಲಕ್ಷ್ಮಣನ ಕಡೆಯವರು ಅಂತಿಮ ವರದಕ್ಷಿಣೆಯ ಹಣವನ್ನು ಕೇಳಿದಾಗ ಅದರಲ್ಲಿ ಇಪ್ಪತ್ತು ಸಾವಿರದ ಕೊರತೆಯಾಗಿತ್ತು! ಗಂಡಿನ ಕಡೆಯವರು ಒಪ್ಪಲೇ ಇಲ್ಲ. ಮಾತುಕತೆಯಾಗುವಾಗ ತಮ್ಮಯ್ಯ ಕೂಡಾ ಒಟ್ಟಿನಲ್ಲೇ ಇದಿದ್ದ! ಮದುವೆ ನಿಂತು ಹೋಗುವ ಸಂಭವವೂ ಇತ್ತು! ಅಷ್ಟರಲ್ಲಿ ಭಾಸ್ಕರ ಲಕ್ಷ್ಮಣನಿಗೆ ಭರವಸೆಯನ್ನಿತ್ತು "ನಾಡಿದು ಹತ್ತು ಗಂಟೆಗೆ ನಿನ್ನ ಹಣ ಕೈ ಸೇರುತ್ತದೆ , ಮದುವೆ ಮಾತ್ರ ನಿಲ್ಲಿಸಬೇಡ " ಭಾಸ್ಕರ ಮಾನ ಉಳಿಸಿದ. ತಮ್ಮಯ್ಯನ ಇರಾದೆ ಮದುವೆಯನ್ನು ನಿಲ್ಲಿಸುವುದೇ ಅಗಿತ್ತೊ ಏನೋ ? ಆದರೆ ಅವನ ಲೆಕ್ಕ ತಲೆಕೆಳಗಾಗಿ ಹೋದವು. ಅವನು ಒಳಗಿಂದಲೇ ಕುದಿಯ ತೊಡಗಿದನು! ನಾನು ಆಗಲೇ ಎಣಿಸಿ ಕೊಂಡೆ ನಿನಗೂ ಕೂಡಾ ಇಬ್ಬರು ಹೆಣ್ಣು ಮಕ್ಕಳ್ಳಿದ್ದಾರೆ! ಅಲ್ಲಿ ಅವನಿಗೆ ಮುಖ ತೋರಿಸಲು ಆಗಲಿಲ್ಲ. ಆದ್ದರಿಂದ ಕೂಡಲೇ ಹೊರಟು ಬಿಟ್ಟು ಮನೆಯದಾರಿ ಹಿಡಿದಿದ್ದ. ಸೀದಾ ಮನೆಗೆ ಹೋಗಬಹುದಿತ್ತು! ಆದರೆ ಅವನ ಬಾಯಿಂದಲೇ ಅವನ ಕುಕೃತ್ಯ ಹೊರಬಿದ್ದದು ಹೇರೂರು ಗುತ್ತುವಿನ ಮನೆಯಲ್ಲಿ!. ಗುತ್ತುವಿಗೆ ಬಂದವನೇ ಜಗುಲಿಯಲ್ಲಿ ಕುಳಿತಿದ್ದ ಹಿರಿಯಣ್ಣ ಶೆಟ್ಟಿಗೆ "ಇಲ್ಲಿ ನೋಡಿ, ನನ್ನಲ್ಲಿ ಇಪ್ಪತ್ತು ಸಾವಿರ ರೂಪಾಯಿ ಇದೆ" ಎಂದು ಜೇಬಿನಲ್ಲಿದ್ದ ನೋಟಿನ ಕಂತೆಯನ್ನು ತೆಗೆದು ತೋರಿಸಿದ "ನಾನು ವರದಕ್ಷಿಣೆಗೆ ಈ ಹಣ ಕೊಡಲಿಲ್ಲ, ಅಲ್ಲಿ ಅವರಿಗೆ ವರದಕ್ಷಿಣೆಗೆ ಹಣ ಕಡಿಮೆ ಬಿತ್ತು, ನಾನು ಯಾಕೆ ಕೊಡಬೇಕು? ನಾನು ಬೊಂಬಾಯಿಗೆ ಹೋಗಿ ಈ ಹಣವನ್ನು ತಂದದ್ದು! ನಾನು ಹೋಗಿರದಿದ್ದರೆ ಅವಳಿಗೆ ಒಂದು ನಯ ಪೈಸೆ ಕೂಡಾ ಯಾರೂ ಕೊಡುತ್ತಿರಲಿಲ್ಲ. ಆ ಭಾಸ್ಕರನಿಗೆ ಒಂದು ಗತಿ ಕಾಣಿಸಬೇಕು" ಎಂದು ಹೇಳಿ ಪಡುಮನೆಯ ಕಡೆ ಹೊರಟಿದ್ದ. ಮತ್ತೂ ಬೇಸರವೆಂದರೆ ತಮ್ಮಯ್ಯನ ಹೆಂಡ್ತಿ ಕಮಲ ಕೂಡಾ  ಅವನೊಂದಿಗಿದ್ದು ಗಂಡನಿಗೆ  ವಿರೋಧದ  ಒಂದು  ಮಾತು ಆಡಲಿಲ್ಲ ! ಇಬ್ಬರು ಹೆಣ್ಣು ಮಕ್ಕಳ  ತಾಯಿಯಾಗಿ  ಅವಳ ಕರುಳು ಮರುಗಲಿಲ್ಲ!.

ಈ ವಿಷಯವನ್ನು ತಿಳಿದ ಮುತ್ತು ಅಳತೊಡಗಿದಳು.ಆದರೆ ಸುನಂದಳ ಸಿಟ್ಟು ನೆತ್ತಿಗೇರಿ ಹೋಯಿತು. ಸೀದಾ ಮನೆಗೆ ನುಗ್ಗಿ ಮಾವನನ್ನು ವಿಚಾರಿಸಿದಳು "ಮಾವ!  ನೀವೇನು ಅಷ್ಟು ಬೇಗ ಹೇಳದೆ ಕೇಳದೆ ಬಂದದ್ದು?" "ಏನಿಲ್ಲ! ತಲೆ ಸುತ್ತಿದ ಹಾಗಾಯಿತು!" ತಮ್ಮಯ್ಯ ಅಸಡ್ಡೆಯ  ಉತ್ತರ ಕೊಟ್ಟ. "ತಲೆ ಸುತ್ತದೆ ಮತ್ತೇನೋ, ಜೇಬಿನಲ್ಲಿ ಧರ್ಮದ್ದು ಇಪ್ಪತ್ತು ಸಾವಿರ ರೂಪಾಯಿ ಇರುವಾಗ ತಲೆಯೂ ಸುತ್ತುತ್ತದೆ, ನಿಮಗೆ ಸೀದಾ ಮನೆಯಲ್ಲಿ ಬಂದು ಕೂರ ಬಹುದಿತ್ತು, ಯಾಕೆ ಗುತ್ತುವಿನಲ್ಲಿ ಹಣವನ್ನು ತೋರಿಸಿ ಮೆಚ್ಚಿಸಿ ಬಂದದ್ದು....?" ಸುನಂದ ಅಳುತ್ತಿದ್ದಾಳೆ!  ಮತ್ತೆ ಮುಂದುವರಿದಳು "ಇದಕ್ಕಿಂತ ನಮ್ಮ ಕುತ್ತಿಗೆ ಹಿಡಿದು ಸಾಯಿಸಿ ಬರಬಹುದಿತ್ತು!" ತಮ್ಮಯ್ಯನ  ಒಂದೇ  ಒಂದು ಸ್ವರ ಕೂಡಾ ಬರಲಿಲ್ಲ. "ಬಡವರೆಂದು ನಮ್ಮನ್ನು ಈ ರೀತಿ ಮಾಡಬಾರದಿತ್ತು! ಇದು ನಿಮಗೆ ಖಂಡಿತಾ  ಒಳ್ಳೆಯದಾಗುವುದಿಲ್ಲ, ಮೇಲಿರುವ ದೇವರು ನಿಮ್ಮನ್ನು ನೋಡಿದರಾಯಿತು" ಎಂದು ಹೇಳಿ ದರದರನೆ ಅವರ ಮನೆಯಿಂದ ಹೊರನಡೆದಳು. ಈಗಲೂ ಆತ ಮಾಡಿದ ತಪ್ಪನ್ನು ಸರಿಪಡಿಸ ಬಹುದಿತ್ತು.ಅವನಿಂದ ಅದು ಸಾಧ್ಯವಾಗಲಿಲ್ಲ. ಬದಲಾಗಿ ತಮ್ಮಯ್ಯ " ಬಸ್ಸಿನವನ ಐದುಸಾವಿರ ರೂಪಾಯಿ ನನಗೆ ಕೊಡು" ಎಂದು ತಮ್ಮಯ್ಯ ಸುನಂದಳಲ್ಲಿ ಹಣ ಕೇಳಲು ಶುರುಮಾಡಿದ್ದ. ಆದರೆ ಈಗಾಗಲೇ ಕೈ ಖಾಲಿ ಮಾಡುಬಂದಿದ್ದ ಅವರು ಸಾವಿರವನ್ನು ತರುವುದಾದರೂ ಎಲ್ಲಿಂದ? ಅದಕ್ಕೆ ತಮ್ಮಯ್ಯನೇ ದಾರಿ ತೋರಿಸಿದ್ದ! "ಹಣವಿಲ್ಲ ಎನ್ನುವುದು ಬೇಡ! ಉಡುಗೊರೆ ಬಂದಿದೆಯಲ್ಲ ಅದರ ಕವರನ್ನು ಒಡೆದು ನನ್ನ ಹಣ ಕೊಡಿ, ಆ ಬಸ್ಸಿನವರು, ಹೂವಿನವರು ಕೇಳುವಾಗ ನನಗೆ ನಾಚಿಕೆಯಾಗುತ್ತದೆ" ಎಂದು ತಮ್ಮಯ್ಯ ತನ್ನ ಜಿಡ್ದು ಬಿಡಲಿಲ್ಲ. ಸುನಂದ ಎಲ್ಲಾ ಉಡುಗೊರೆ ತುಂಬಿದ್ದ ಪೆಟ್ಟಿಗೆಯನ್ನು ಅವರೆದುರು ದಡ ದಡ ಬಿಸಾಡಿ , " ಎಲ್ಲಾ ಕವರು ಹೊಡೆಯಿರಿ, ನಿಮ್ಮ ಐದುಸಾವಿರ ತೆಗೆದು ಕೊಂಡು ಹೋಗಿ , ಇಂದಿನಿಂದ ನಿಮಗೂ ನಮಗೂ ಯಾವ ಸಂಬಂಧನೂ ಇಲ್ಲ!" ಎಂದು ರೋಷದಿಂದಲೇ ಗದರಿದಳು. ತಮ್ಮಯ್ಯನ ಕಣ್ಣು  ಆಗಲಾದರೂ ತೆರೆಯಬೇಕಿತ್ತು !  ಆದರೆ  ನಾ  ಎನಿಸಿಕೊಂಡಂತೆ  ನಡೆಯಲಿಲ್ಲ.  ತಮ್ಮಯ್ಯ ನಿರ್ದಾಕ್ಷಿಣ್ಯವಾಗಿ ಉಡುಗೊರೆ ಬಂದ ಹಣದಲ್ಲಿ ಐದುಸಾವಿರ ಕೊಂಡು ಹೋದ. ಮುತ್ತು ಆಳುತ್ತಲೇ ಇದ್ದಳು.  ಆಳದೇ ಇನ್ನೇನೂ ಮಾಡುವಂತಿರಲಿಲ್ಲ!. ಸುನೀತ, ಭಾಸ್ಕರ ,ಮತ್ತು ಮಕ್ಕಳು ಈ ಘಟನೆಗೆ ಮೂಕ ಸಾಕ್ಷಿಯಾದರು. ಊರಿನವರು ನೋಡುತ್ತಲ್ಲೇ ಇದ್ದರು. ಯಾರು ಏನೂ ಮಾಡುವುದು ತಿಳಿಯದೇ ಹೋದರು. ನಾನೂ ಮೊದಲೇ ಮೂಕ ! ಕೇವಲ ದರ್ಶಕನಾಗಿದ್ದೆ. ಅಲ್ಲಿಂದ ಮುತ್ತು-ತಮ್ಮಯ್ಯನ ಸಂಸಾರದ ನಡುವೆ ಅನ್ನನೀರು ಸಂಪೂರ್ಣ ನಿಂತು ಹೋಗಿತ್ತು!.

ನನಗೆ ಈಗ ಮತ್ತೊಂದು ಯೋಚನೆ ಶುರುವಾಯಿತು. ಅಲ್ಲಿ ಭಾಸ್ಕರ , ಲಕ್ಷ್ಮಣನಿಗೆ ಮಾತು ಕೊಟ್ಟಿದ್ದಾನೆ.ಏನು ಮಾಡುತ್ತಾನೋ ಈತ ? ಅಂದುಕೊಂಡು , ಬೆಳಿಗ್ಗೆ ಬೆಳಿಗ್ಗೆ ಮತ್ತೆ ನಾನು ಪಡುಮನೆಗೆ ಬಂದೆ. ಭಾಸ್ಕರ ಮನೆಯಲ್ಲಿ ಕಾಣಿಸಲಿಲ್ಲ .ಸುಮಾರು ರಾತ್ರಿ ಎಂಟು ಗಂಟೆಯಾಗಿರಬೇಕು !  ಭಾಸ್ಕರ ಪಡುಮನೆಗೆ ವಾಪಸ್ಸಾಗಿದ್ದ ! ಮರುದಿನ ಎದ್ದವನೇ ಖಾಲಿ ಚಾ ಕುಡಿಯುತ್ತಲೇ, ಭಾಸ್ಕರ ಹೊರಟು ಹೋದ. "ಎಲ್ಲಿಗೆ? ಹೋಗ್ತಿರಾ? " ಸುನಂದಳ ಪ್ರಶ್ನೆಗೆ "ಉಡುಪಿ...." ಅಂತ ಹೇಳಿ ಮರುಮಾತಿಗೆ ಕಾಯದೆ ಹೊರಟೆಬಿಟ್ಟ.ಊರಲ್ಲಿ ಕಾಡ್ಗಚ್ಚಿನಂತೆ ಹರಡಿತ್ತು ತಮ್ಮಯ್ಯನ ದುಶೃಕತ್ಯದ ಸುದ್ದಿ. ಎಲ್ಲರೂ ಅವನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಸಂಜೆ ಐದುಗಂಟೆಯಾಗುತ್ತಲೇ ಭಾಸ್ಕರ ಬಂದ. ಅವನ ಮುಖದಲ್ಲಿ ಏನೋ ಸಮಾಧಾನದ ಕಳೆ ಕಂಡೆನು. ಸುನಂದ ಎದುರು ನೋಡುತ್ತಲೇ ಇದ್ದಳು. ಭಾಸ್ಕರನ ಕೊರಳಲ್ಲಿದ್ದ ಚಿನ್ನದ ಸರ ಮಾಯವಾಗಿತ್ತು! ಕೈಯಲ್ಲಿದ್ದ ಎರಡು ಉಂಗುರಗಳೂ ಕೂಡಾ ಮಾಯವಾಗಿದ್ದವು! ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ತೆಗೆದು ಕೊಂಡಳು ಸುನಂದ, ಅದರಲ್ಲಿ ಕಾರ್ಪೋರೇಶನ್ ಬ್ಯಾಂಕಿನ ಪೇಪರೊಂದು ಕಾಣಿಸುತ್ತಿತ್ತು. ಎಫ್ ಡಿ ಸರ್ಟಿಪಿಕೇಟ್ ಕ್ಯಾಂಸಲ್ ಆಗಿತ್ತು! ಸುನಂದಳ ಕಣ್ಣಲ್ಲಿ ನೀರು ಬಂತು! ನಾಲ್ಕು ಮಕ್ಕಳು ಅಪ್ಪ ಅಪ್ಪ ಅಂತ ಬಂದಿದ್ದರು .ಮನೆಯಲ್ಲಿ ಏನೂ ನಡೆಯುತ್ತಿದೆ ಎಂಬುದು ಅವರ ಬುದ್ದಿಗೆ ತಿಳಿಯದೇ ಹೋಯಿತು. ಅಂತು ಭಾಸ್ಕರ ಮಾರ್ಯಾದೆ ಉಳಿಸಿದ್ದ! 

ಈ ದಿನ ತಮ್ಮಯ್ಯನ ಮನೆಯ ಮುಂದೆ ಎಲ್ಲರೂ ಚಪ್ಪರ ಹಾಕುವುದರಲ್ಲಿ ನಿರತರಾಗಿದ್ದರು. ನನಗೆ ಆಮೇಲೆ  ತಿಳಿಯಿತು. ಇನ್ನು  ನಾಲ್ಕೆ ದಿನಗಳಲ್ಲಿ ತಮ್ಮಯ್ಯನ ಮೊದಲ ಮಗ ಶೇಖರನ ಮದುವೆ ಮನೆಯಲ್ಲಿಯೇ ನಡೆಯುತ್ತಿದೆ. ಶೇಖರ, ದಿನಕರ , ರಮೇಶ , ಸುರೇಶ ತಮ್ಮಯ್ಯನ ಗಂಡು ಮಕ್ಕಳು , ಜಯಂತಿ , ಗೀತಾ ಹೆಣ್ಣು ಮಕ್ಕಳು. ಈಗ ಮುತ್ತು ಮತ್ತು ತಮ್ಮಯ್ಯನ ನಡುವೆ ರಾಜಿ ಪಂಚಾಯಿತಿ ಆಗಿ  ಎರಡು ವರ್ಷಗಳು ಕಳೆದೇ ಹೋಗಿದ್ದವು. ತಮ್ಮಯ್ಯನ ಮನೆಯ ತುಂಬಾ ಸಂಭ್ರಮ ನಡೆಯುತಿತ್ತು. ಸುನೀತ ಕೂಡಾ ಬಂದಿದ್ದಳು. ಈಗಾಗಲೇ ಅವಳ ಮೂರು ತಿಂಗಳ ಮಗುವೊಂದು ತೀರಿ ಕೊಂಡಿತ್ತು. ಲಕ್ಷ್ಮಣ ಕೂಡಾ ಪಡುಮನೆಯಲ್ಲೇ ಇದ್ದಾನೆ. ಸುನಂದ ಭಾಸ್ಕರ ಮತ್ತು ಮಕ್ಕಳೂ ಕೂಡಾ ಮದುವೆಗೆ ಬಂದಿದ್ದಾರೆ. ಬಾಬು ಕೂಡಾ ಇದ್ದಾರೆ. ಎರಡೂ ಮನೆಯಲ್ಲಿ ಜನ ಮಂದಿ ತುಂಬಿ ಗಿಜಿ ಗಿಜಿ ಅನ್ನುತ್ತಿದ್ದಾರೆ ಬರುವ ಗುರುವಾರ ತಾನೇ ಮದುವೆ ತಮ್ಮಯ್ಯನ ಮನೆ ತುಂಬಾ ವಿಜೃಂಭಿಸುತ್ತಿದೆ. ಬುಧವಾರ ಬೆಳಿಗ್ಗೆ ಎಲ್ಲರೂ ಎದ್ದಿದ್ದರು. ಆದರೆ ಮುತ್ತು ಇನ್ನೂ ಕೂಡಾ ಮಲಗೇ ಇದ್ದರು. ಸುನೀತ ಬಂದು "ಅಮ್ಮ ಅಮ್ಮ ಹೊತ್ತು ಇಷ್ಟಾಯಿತು, ಏಳುವುದಿಲ್ಲವೇ ?" ಎಂದು ಕೈ ಹಿಡಿದು ಕುಲುಕಿದಳು. ಮುತ್ತು ಮಾತಾಡಲೇ ಇಲ್ಲ. ಒಮ್ಮೆಲೇ ಸುನೀತ ಚೀರತೊಡಗಿದಳು.ಅಷ್ಟು ಸಂಭ್ರಮದಿಂದ ಕೂಡಿದ್ದ ಪಡುಮನೆಯಲ್ಲಿ ಎಲ್ಲರೂ ಇದಕ್ಕಿದ್ದಂತೆ ಅಳತೊಡಗಿದರು. ಮುತ್ತು ಮಲಗಿದಲ್ಲಿಯೇ ಹೆಣವಾಗಿದ್ದಳು. ಪಡುಮನೆ ದುಃಖದಲ್ಲಿ ಮುಳುಗಿ  ಹೋಯಿತು .ಊರಿಗೆ ಊರೇ ಸೇರಿಕೊಂಡು ಅಂತ್ಯ ಸಂಸ್ಕಾರ ಮುಗಿಯಿತು. ತಮ್ಮಯ್ಯನ ಮಗನಿಗೆ ನಾಳೆ ಮದುವೆ, ತಮ್ಮಯ್ಯನಿಗೆ ದೇವರು ಒಡ್ಡಿದ ಪರೀಕ್ಷೆ! ತನ್ನ ಮಗನ ಮದುವೆಯ ಮಂಟಪದಿಂದ ಹೊರಗೆ ಉಳಿಯ ಬೇಕಾಯಿತು.ಗುರುವಾರ ಮದುವೆ ನಡೆಯುತಿತ್ತು!.ಪಡುಮನೆಯಲ್ಲಿ ಯಾರೂ ಬಂದಿರಲಿಲ್ಲ.ತಮ್ಮಯ್ಯ ಚಪ್ಪರದ ಹೊರಗೇ ಉಳಿದು ಹೋದ!.

ದೇವರು ಕಷ್ಟವನ್ನು ಕೊಡುತ್ತಾನೆ? ನಿಮ್ಮಲ್ಲಿ ನೀವೇ ಕೇಳಿ ಕೊಳ್ಳಿ ! ಅಲ್ಲ ದೇವರು ಪರೀಕ್ಷೆಗೆ ಒಡ್ಡುವಾಗ ಒಂದರ ಮೇಲೊಂದು ಪರೀಕ್ಷೆಯನ್ನು ತಂದೊಡ್ಡುತ್ತಾನೆ. ಮಗುವನ್ನು ಕಳೆದು ಕೊಂಡ ಸುನೀತಳಿಗೆ ಮೊತ್ರ ಕೋಶದ ಕಾಯಿಲೆ ಹಿಡಿದು ಕೊಂಡಿತ್ತು.ಲಕ್ಷ್ಮಣನ ದುರಾದೃಷ್ಟವೋ? ಮದುವೆಯಾದ ಎರಡೇ ವರ್ಷದಲ್ಲಿ ತನ್ನ ಎಲ್ಲಾ ಹಣ,ಸಂಪತ್ತನ್ನು ಆಸ್ಪತ್ರೆಯ ದಾರಿ ತೋರಿಸಿದ್ದ.ಅವಳ ಒಂದು ಮೊತ್ರ ಪಿಂಡ ಈಗ ನಿಷ್ಕ್ರಿಯವಾಗಿತ್ತು. ಈಗ ಸ್ವಲ್ಪ ಸುಧಾರಣೆಗೆ ಬಂದಿತ್ತು. ಆದರೂ ಗುಳಿಗೆ, ಇಂಜೆಕ್ಷನ್ ಗಳೂ ಮುಂದುವರಿಯುತ್ತಲೇ ಇದ್ದವು. ದೀಡಿರನೆ ಕೆಲವೊಮ್ಮೆ ನೋವಿನಿಂದ ಚೀರಿ ಕೊಳ್ಳುತ್ತಿದ್ದಳು. ಆದರೆ ಸುನೀತ ಈಗ ಹಾಸಿಗೆಯನ್ನು ಹಿಡಿದಿದ್ದಳು. ಬೇರೆ ದಾರಿಯಿಲ್ಲದೆ ಈಗ ಸುನಂದಳಿಗೆ ತಂಗಿಯ ಆರೈಕೆಗೆ ಉಡುಪಿಯಿಂದ ಬಂದು ಪಡುಮನೆಯಲ್ಲಿ ಉಳಿಯಬೇಕಾಯಿತು. ಅಪ್ಪನ ಜವಾಬ್ದಾರಿ ಕೂಡಾ ಅವಳ ತಲೆಯ ಮೇಲೆಯೇ ಇದ್ದಿತ್ತು. ಹೀಗೇಯೇ ಸುಮಾರು ಆರು ತಿಂಗಳು ಕಳೆದಿರಬೇಕು.ತಮ್ಮಯ್ಯನ ದೊಡ್ಡ ಮಗಳು ಜಯಂತಿಗೆ ಮದುವೆ ನಿಶ್ಚಯವಾಗಿತ್ತು .ನಾಲ್ಕು ಮಂದಿ ಅಣ್ಣಂದಿರಿದ್ದು ಕೂಡಾ ತಮ್ಮಯ್ಯ ಇಂದು ಬೊಂಬಾಯಿಗೆ ಹೊರಟಿದ್ದ ! ಮಗಳ ಮದುವೆಗೆ ಹಣ ಸಂಗ್ರಹಿಸಲು! .ತಂದೆಯ ಶಾಪದಿಂದಲೋ ಏನೋ ಅದೇ ಕಾಲಕ್ಕೆ ಎಲ್ಲರೂ ಕೈ ಖಾಲಿ ಮಾಡಿ ಕೂತಿದ್ದರು .ತಮ್ಮಯ್ಯ ಈಗ ಖಂಡಿತ ಎಣಿಸಿರಬೇಕು,ತಾನು ಹಿಂದೊಮ್ಮೆ ಇದೇ ರೀತಿ ಹಣಕ್ಕಾಗಿ ಬೊಂಬಾಯಿಗೆ ಬಂದದ್ದು ,ಆದರೆ ಆಗ ಕೇಳುವ, ಬೇಡುವ ಅವಶ್ಯಕತೆ ಇರಲಿಲ್ಲ!. ಆದರೆ ಈಗ ಅವನು ಬೇಡಲೇ ಬೇಕಿತ್ತು!.ವಿಷಯ ಯಾರಿಗೂ ತಿಳಿಯದಿರಲಿಲ್ಲ. ದಿಡೀರನೇ ಮಗಳ ಮದುವೆಯ ಮಾಡುವ ಪ್ರಸಂಗ ಅವನ ಪಾಲಿಗೆ ಬಂದೊದಗಿತ್ತು ! ತಮ್ಮಯ್ಯ ಈಗ ನಿಸ್ಸಾಹಾಯಕನಾಗಿದ್ದ. ಮಗಳನ್ನು ಮದುವೆ ಮಾಡಿ ಕೂಡಲೇ ಬೇಕಿತ್ತು. ಇಲ್ಲದಿದ್ದರೆ ಮಾರ್ಯಾದೆಯ ಪ್ರಶ್ನೆ ! ಕಮಲಮ್ಮ ಕೂಡಾ ಊರಿನಲ್ಲಿ ಯಾರಿಗೂ ಮುಖ ತೋರಿಸುತಿರಲಿಲ್ಲ !.

ನಾನು ಒಮ್ಮೆ ತಮ್ಮಯ್ಯನ ಮನೆಯಲ್ಲಿ ತಿರುಗಾಡುವಾಗ ಈ ವಿಷಯ ಕಿವಿಗೆ ಬಿತ್ತು. ಜಯಂತಿ ಆಗಲೇ ಎರಡು ತಿಂಗಳ ಗರ್ಭಿಣಿಯಾಗಿದ್ದಳು.ಅವಳನ್ನು ಮದುವೆಯಾಗುವ ಗಂಡು ಯಾವಾಗಲೂ ಅವಳಿಗೆ ಸಿಗಲು ಮನೆಗೆ ಬರುತ್ತಿದ್ದ. ಅವನೊಂದಿಗೆ ಈಕೆ ತಿರುಗಾಡಲು ಕೂಡಾ ಹೋಗುತ್ತಿದ್ದಳು. ಅವನಿಗೂ ಕೂಡಾ ವಿಷಯ ಗೊತ್ತಿತ್ತು. ಅವನು ಮದುವೆ ಮಾಡಿ ಕೊಡಿ, ನನ್ನ ಅಭ್ಯಂತರ ಏನೂ ಇಲ್ಲ. ನಾನು ಅವಳನ್ನು ಸ್ವೀಕರಿಸುತ್ತೇನೆ ಎಂದಿದ್ದ!. ಆದರೆ ಮದುವೆಯ ವಿಷಯ ಮಕ್ಕಳಲ್ಲಿ ಪ್ರಸ್ತಾಪಿಸಿದಾಗ "ನಾವು ಈಗ ತುಂಬಾ ನಷ್ಟದಲ್ಲಿದ್ದೇವೆ, ಬರುವ ದೀಪಾವಳೀಗೆ ಮಾಡುವ" ಎಂದು ಮುಂದಕ್ಕೆ ಹಾಕಿದ್ದರು.ವಿಷಯವನ್ನು ತಿಳಿಸಿದಾಗ ಕೂಡಾ ಮಕ್ಕಳು ಈ ರೀತಿ ನುಡಿದಿದ್ದು ಉಚಿತವೆನಿಸಿತ , "ಊರಿನ ಹೆಣ್ಣು ಮಕ್ಕಳಿಗೆಲ್ಲಾ ಹೇಳುತ್ತೀರಾ ?ಎಲ್ಲಾ ಸಭೆ ಸಮಾರಂಭಗಳಿಗೆ ಹೋಗುತ್ತೀರೆಂದು, ಆದರೆ ನಿಮ್ಮ ಮಗಳನ್ನು ಹದ್ದು ಬಸ್ತಿನಲ್ಲಿ ಇಡಲು ನಿಮ್ಮಿಂದ ಆಗಲಿಲ್ಲವೇ" ಈಗ ಖಂಡಿತ ಒಬ್ಬ ತಂದೆಯ ಮನಸ್ಸು ಖಂಡಿತ ನೊಂದಿರಲೇ ಬೇಕು!. ಮಗಳಿಗಾಗಿ ಅಲ್ಲದಿದ್ದರೂ ಪೊಳ್ಳು ಘನತೆಗಾಗಿ!.ನಾನು ಗಮನಿಸುತ್ತಲೇ ಇದ್ದೆ, ತಮ್ಮಯ್ಯ ಏನೋ ತನ್ನಷ್ಟಕ್ಕೆ ಅಂದು ಕೊಳ್ಳುತ್ತಿದ್ದ ,  "ನನ್ನಂತ ಪಾಪಿಗೆ ಇದೇ ಸರಿಯಾದ ಶಿಕ್ಷೆ, ಈಗ ದೇವ ನನ್ನ ಮಾರ್ಯಾದೆಯನ್ನು ಉಳಿಸಪ್ಪ!"

ಅಂತು ಬೇಡಿ ತಂದ ಹಣದಿಂದ ಮದುವೆಗೆ ದಿನ ನಿಶ್ಚಿತವಾಗಿತ್ತು. ಇಂದು ತಮ್ಮಯ್ಯನ ಮನೆಯಲ್ಲಿ ಮಗಳ ಮದುವೆಯ ಸಂಭ್ರಮಕ್ಕೆ ತಯಾರಿ ನಡೆಯುತಿತ್ತು. ಕಟಪಾಡಿ ದೇವಸ್ಥಾನದಲ್ಲಿ ಮದುವೆ. ಮದುವೆಗೆ ಬಂದಿದ್ದ ನೆಂಟರೆಲ್ಲರೂ ಸುನೀತಳನ್ನು ಕಾಣಲು ಪಡುಮನೆಗೆ ನಡೆದಿದ್ದರು.ಸುನೀತ ಮಂಚದ ಮೇಲೆ ಕುಳಿತು ಕೊಂಡಿದ್ದಳು. ತಾನು ಕೂಡಾ ಮದುವೆಗೆ ಬರುತ್ತೇನೆಂದು ಅಕ್ಕ ಸುನಂದಳಲ್ಲಿ ಹಠ ಮಾಡಿದ್ದಳು. ಲಕ್ಷ್ಮಣ ಕೂಡಾ ಅಲ್ಲೇ ಕೂತಿದ್ದ. ಸುನೀತ ಮೆಲ್ಲಗೆ ಸ್ವರದಲ್ಲಿ "ಏನ್ರೀ !ಏನ್ರೀ! ನಾನು ಕೂಡಾ ಮದುವೆಗೆ ಬರುತ್ತೇನೆ, ನನಗೆ ಜಯಂತಿಯ ಮದುವೆ ನೋಡಬೇಕೆಂದು ತುಂಬಾ ಆಸೆಯಾಗಿದೆ, ನಾವು ಟಾಕ್ಸಿ ಮಾಡಿ ಕೊಂಡು ಹೋಗುವ" ಎಂದು ಗಂಡನಲ್ಲಿ ಪ್ರಾರ್ಥಿಸಿದ್ದಳು. ಅಂತೂ ಸುನಂದಳ ಮಾತು ಕೂಡಾ ಕೇಳಲೇ ಇಲ್ಲ. ತನ್ನ ಧಾರೆ ಸೀರೆಯನ್ನುಟ್ಟು ಹಣೆಗೆ ಕುಂಕುಮವಿಟ್ಟು, ಬಲೆಯನ್ನು ತನ್ನ ಗಂಡನ ಕೈಯಲ್ಲಿ ಕೊಟ್ಟು "ನೋಡಿ ಇದನ್ನು ತೊಡಿಸಿ ನನ್ನ ಕೈ ನೋಯುತ್ತಿದೆ, ಸ್ವಲ್ಪ ಮೆತ್ತೆಗೆ ತೊಡಿಸಿ ನೋಡುವ" ಎಂದು ಲಕ್ಷ್ಮಣನ ಎದುರು ಕೈ ನೀಡಿದಳು. ತನ್ನ ಗಂಡನ ಮುಖವನ್ನೇ ನೋಡುತ್ತಿದ್ದಾಳೆ ಸುನೀತ. "ನಿಮ್ಮನ್ನು ಗಂಡನಾಗಿ ಪಡೆಯಲು ನಾನು ಎಷ್ಟು ಪುಣ್ಯ ಪಡೆದಿರಬೇಕು,ಕೇವಲ ಎರಡೇ ವರ್ಷದಲ್ಲಿ ನನಗೆ ಮಾಡಬಾರದ ಚಾಕರಿಯನ್ನೆಲ್ಲಾ ಮಾಡಿದಿರಿ, ಆದರೆ ಈ ಜನ್ಮದಲ್ಲಿ ಇನ್ನು ನಿಮ್ಮೊಂದಿಗಿರಲು ನನಗೆ ಭಗವಂತ ಮಾತ್ರ ಅಲ್ಪ ಆಯುಷ್ಯವನ್ನೇ ಕರುಣಿಸಿದ್ದಾನೆ.ನನ್ನನ್ನು ನೀವು ಕ್ಷಮಿಸಬೇಕು" ಎಂದು ಹೇಳುತ್ತಾ ಗಂಡನ ಎದೆಗೆ ಎರಗಿದಳು.ಸುನೀತಳ ಕಣ್ಣಲ್ಲಿ ನೀರು ತುಂಬಿತ್ತು.ಲಕ್ಷ್ಮಣ ಆಕೆಯ ತಲೆಯನ್ನು ಸವರಿ ಸಮಾಧಾನ ಪಡಿಸಿದ.

ಸುನಂದಮತ್ತು ಭಾಸ್ಕರ ಕೂಡಾ ತಯಾರಾದರು. ಬಾಬು ಕೂಡಾ ತಯಾರಾಗಿ ನಿಂತಿದ್ದರು.ಸುನಂದ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿವಳಿದ್ದಳು. ಜಯಂತಿಯ ದಿಬ್ಬಣ ಆಗಾಗಲೇ ಹೊರಡಿತ್ತು. ಪೋಸ್ಟ್ ಮ್ಯಾನ್ ರಾಗಣ್ಣ ಇಂದೂ ಕೂಡಾ ಸಿಡಿಮದ್ದು ಸಿಡಿಸಿದ್ದರು. ಸುನೀತ ಮನೆಯಂಗಳದಲ್ಲಿ ತುಳಸೀಕಟ್ಟೆಗೆ ಒಂದು ಸುತ್ತು ಬಂದು ತನ್ನ ತಾಳಿಗೆ ಗಂಧ ಪ್ರಸಾದವನ್ನು ಹಚ್ಚಿದಳು. ಇನ್ನೇನೊ ಮದುಮಗಳ ಕಾರು ಹೋಗಿ ಆಗಿತ್ತು.ತಮ್ಮಯ್ಯ ಮತ್ತು ಕಮಲಮ್ಮ ಹಿಂದಿನ ಕಾರಿನಲ್ಲಿ ಹೋಗುವುದೆಂದು ಹಿಂದೆ ಉಳಿದಿದ್ದರು. ಸುನೀತಳಿಗಾಗಿ ಮಾಡಿದ್ದ ಟ್ಯಾಕ್ಸಿ ಬಂದು ಹಾರ್ನ್ ಹಾಕುತ್ತಿತ್ತು. ಆದರೆ ದೈವಸ್ಥಾನದ ಮುಂದೆ ದೇವರಿಗೆ ಅಡ್ಡ ಬಿದ್ದಿದ್ದ ಸುನೀತ ಇನ್ನೂ ಕೂಡಾ ಎದ್ದಿರಲಿಲ್ಲ. ಲಕ್ಷ್ಮಣನಿಗೆ ಗಾಬರಿಯಾಯಿತು,ಓಡಿಹೋಗಿ ಎಬ್ಬಿಸಿದ್ದ. ಸುನೀತ ಮಾತನಾಡಲೇ ಇಲ್ಲ! ಕೂಡಲೇ ಡಾಕ್ಟರಿಗೆ ಪೋನು ಮಾಡಿದರು, ಪಡುಮನೆ ತುಂಬಾ ಮತ್ತೊಮ್ಮೆ ಬೊಬ್ಬೆ ಪ್ರಾರಂಭವಾಯಿತು.ಎಲ್ಲರೂ ಓಡಿ ಬಂದಿದ್ದರು.ದಿಬ್ಬಣದಲ್ಲಿದ್ದ ನಾಡಿ ವೈದ್ಯ ವಿಠಲ ಶೆಟ್ಟಿ ಕೈಯನ್ನು ಪರೀಕ್ಷಿಸಿದರು "ಏನೂ ಗಾಬರಿಯಿಲ್ಲ ನಾಡಿ ಸರಿಯಾಗಿ ಬಡಿಯುತ್ತಿದೆ" .ಅಷ್ಟರಲ್ಲೇ ಸುನೀತ ಕಣ್ಣು ತೆರೆದಿದ್ದಳು. ಎಲ್ಲರ ಮುಖದಲ್ಲಿ ಮತ್ತೊಮ್ಮೆ ನಗೆ ತುಂಬಿತ್ತು."ನಾನು ನಿಮ್ಮನ್ನು ಪರೀಕ್ಷಿಸಿದ್ದು " ಅಂದು ಕೊಂಡುನಕ್ಕಳು.ಗಂಡನ ತೊಡೆಯ ಮೇಲಿಂದ ಎದ್ದು ಮತ್ತೆ ದಿಬ್ಬಣದೊಂದಿಗೆ ನಡೆದಳು.ಡಾಕ್ಟರರಿಗೆ ವಾಪಾಸು ಪೋನು ಮಾಡಿ ಹೇಳಲಾಯಿತು.

ಈಗ ಟ್ಯಾಕ್ಸಿಯಲ್ಲಿ ಗಂಡನ ಎದೆಗೆ ತಲೆಯುಟ್ಟು ನಿದ್ರಿಸುತ್ತಿದ್ದಾಳೆ ಸುನೀತ ಪಕ್ಕದಲ್ಲಿ ಅಕ್ಕ ಸುನಂದ ಕುಳಿತಿದ್ದಾಳೆ. ಭಾವ ಭಾಸ್ಕರ ಮುಂದೆ ಕುಳಿತಿದ್ದಾನೆ. ತನ್ನ ಮಗ್ಗುಲು ಬದಲಾಯಿಸಿ ಅಕ್ಕನ ಹೆಗಲಲ್ಲಿ ತಲೆ ಇಟ್ಟು ಮಲಗಿ ಕೊಂಡಳು. ಸುನೀತ ಮಲಗಿರಲಿಲ್ಲ, ಕೇವಲ ಕಣ್ಣು ಮಾತ್ರ ಮುಚ್ಚಿ ಕೊಂಡಿದ್ದಳು. ಅಕ್ಕಳ ಸ್ಪರ್ಶದ ಕೊನೆಯ ಅನುಭವವನ್ನು ಅನುಭವಿಸಿ ಆನಂದಿಸಿದ್ದಳು." ದೇವರೇ ನನ್ನ ಪತಿ ಅಕ್ಕ ಭಾವ ಮಕ್ಕಳನ್ನೂ ಚೆನ್ನಾಗಿಟ್ಟಿರಪ್ಪ" ಎಂದು ಬೇಡಿ ಕೊಂಡಳು ಅಷ್ಟರಲ್ಲಿ ಕಟಪಾಡಿ ದೇವಸ್ಥಾನ ಬಂದಾಗಿತ್ತು. ಮದುಮಗಳ ಕಾರು ಆಗಾಗಲೇ ಮುಟ್ಟಿ , ಮೊರ್ತ ಶೇಷೆಯಾಗುತಿತ್ತು. ಟ್ಯಾಕ್ಸಿಯ ಬಾಗಿಲು ತೆರೆದು, ಇಳಿದು ಅಕ್ಕಳೊಂದಿಗೆ ಎರಡು ಹೆಜ್ಜೆ ಹಾಕಿದ ಸುನೀತ ಮುಗ್ಗರಿಸಿ ಬಿದ್ದು ಬಿಟ್ಟಳು. ಸುನಂದ "ಅಯ್ಯೋ ದೇವರೇ, ಸುನೀತ! ಸುನೀತ !" ಎನ್ನುವಷ್ಟರಲ್ಲಿ ಲಕ್ಷ್ಮಣ ಸುನೀತಳನ್ನು ಎಬ್ಬಿಸಲು ಪ್ರಯತ್ನ ಮಾಡಿದ, ಆದರೆ ಏನೂ ಪ್ರಯೋಜನವಾಗಲಿಲ್ಲ. ಸುನೀತ ಪರಲೋಕ ಸೇರಿ ಆಗಿತ್ತು. ಎಲ್ಲರೂ ಒಮ್ಮೇಲೆ ರಾಶಿ ಬಿದ್ದರು. ಮಾವ ತಮ್ಮಯ್ಯ, ಅತ್ತೆ ಕಮಲಮ್ಮ ಕೂಡಾ ಓಡಿ ಬಂದಿದ್ದರು.ಸುನಂದ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.ಭಾಸ್ಕರ ತನ್ನ ಕಣ್ಣನ್ನು ಸವರಿ ಕೊಂಡ.ಲಕ್ಷ್ಮಣನ ಕಣ್ಣಲ್ಲಿ ನೀರೂರಿತು.ತಮ್ಮಯ್ಯನ ಕಣ್ಣು ಕೂಡಾ ತೇವದಿಂದ ತುಂಬಿತ್ತು.ಸುನೀತ ಈಗ ಮುತ್ತೈದೆಯಾಗಿ ತನ್ನ ಗಂಡನ ತೊಡೆಯ ಮೇಲೆ ಚಿರ ನಿದ್ರೆಯಲ್ಲಿದ್ದಾಳೆ.ತಮ್ಮಯ್ಯ ತನ್ನ ಮಗಳಿಗೆ ಧಾರೆ ಎರೆಯುವ ಹಾಗೆ ಇರಲಿಲ್ಲ, ತನ್ನ ಭಾವ ಮತ್ತು ಹೆಂಡತಿಗೆ ಹೇಳಿ,ಸೊಸೆಯ ಶವಸಂಸ್ಕಾರಕ್ಕಾಗಿ ಪಡುಮನೆಗೆ ವಾಪಾಸ್ಸು ನಡೆದಿದ್ದ!. 

                                                                      --- ಅಕುವ

No comments:

Post a Comment