Saturday, September 1, 2012

ಬೆಲ್ಲದ ಅಂಗಡಿ


 ಬೆಲ್ಲದ ಅಂಗಡಿ

ನೆನಪಿನ ಗರಿಗೆದರಿ ಕಣ್ಣು ಮಿಟುಕಿಸಿದಾಗ
ಪಕ್ಕನೆ ಹಾಯ್ದ ಕನಸು ಕಬ್ಬಿನಾಲೆ ಓಡಾಡಿದೆ
ರಸ್ತೆಯುದ್ದಕ್ಕೆ ಕಬ್ಬು ಸಿಗಿದು ರಸ ಉಂಡಿದ್ದು
ಕೋಣಗಳ ಗಾಣಕ್ಕೆ ಕಟ್ಟಿದ ಕೇಕೆ ನೆನಪು !

ಬೆಳ್ಳಂಬೆಳಗೆ ಸಿಹಿ ಕಳ್ಳು ಹೀರಿ ಉಪ್ಪಿನ ಕಾಯಿ ಚಪ್ಪರಿಸಿ
ಕಬ್ಬಿನ ಗದ್ದೆಗೆ ಕೊಯ್ಲಿಗೆ ಕಚ್ಚ ಕಟ್ಟಿ ನಿಂತದ್ದು
ಹತ್ತರ ಹೊತ್ತಿಗೆ ಗಂಜಿಯೊಡನೆ ಒಣ ಮೀನು ಚಟ್ನಿ
ಹೊತ್ತು ಕಬ್ಬು ರಾಶಿಗಳ ಗಾಣಕ್ಕೆ ಬಲಿಕೊಟ್ಟು ...!

ತೆಂಗಿನ ಗರಿಗಳ ನೇಯ್ದ ತಟ್ಟಿಗಳ ಚಪ್ಪರ
ಘಮಘಮಿಸುವ ಉರುಂಡೆ ಬೆಲ್ಲದ ಗೋಣಿ
ಮೂಗಿಗೆ ಬಡಿಯುತಿದ್ದ ಕಬ್ಬಿನ ಹಾಲಿನ ಉತ್ಕನನ
ಸಟ್ಟುಕೋಲಿನಿಂದ ಅಡಿಮೇಲಾಗುವ ಬೆಲ್ಲದ ರಸ

ಗಿರಿಯ ಪೂಜಾರಿಯ ದೊಡ್ಡ ಗಾಣದಲ್ಲಿ
ಉಂಡೆ ಕಟ್ಟುವ ಪುಂಡರು
ಬಿಸಿ ಬಿಸಿ ಬೆಲ್ಲವ ಸುರಿವಾಗ ಜೊಲ್ಲು ಬಿಟ್ಟು
ತಟ್ಟಿಹರಿದು ಬಿಸಿ ಬೆಲ್ಲ ನೆಕ್ಕುವ ನನ್ನ ಬೆರಳುಗಳು
ಎಲ್ಲಾ ಸಿಹಿ  ಅದು ಬೆಲ್ಲದ ಅಂಗಡಿ !.

---- ಅಕುವ

No comments:

Post a Comment