Friday, September 28, 2012

ಶಂಕರಪುರ ಮಲ್ಲಿಗೆ


 ಶಂಕರಪುರ ಮಲ್ಲಿಗೆ

ಮೊನ್ನೆ  ನನ್ನ ಮುಂಬೈ ನ ಬಾಲ್ಕನಿಯಲ್ಲಿ ನೆಟ್ಟಿದ ಮಲ್ಲಿಗೆ ಗಿಡದಲ್ಲಿ ೩  ಹೂವು ಕಾಣಿಸಿಕೊಂಡಿತ್ತು. ಅದೆಷ್ಟೋ ದಿನಗಳಿಂದ ಕಾಯುತ್ತ ಇದ್ದೆ. ಈ  ಹಿನ್ನಲೆಯಲ್ಲಿ ಸುಮ್ಮನೆ ಕೆಳಗಿನ ಸಾಲುಗಳು ........................................


ಮಲ್ಲಿಗೆ ಯಾರಿಗೆ ಇಷ್ಟ ಇಲ್ಲ  ಹೇಳಿ ?  ಎಲ್ಲಾ  ಶುಭ ಸಮಾರಂಭಗಳಿಗೆ ನಮ್ಮ ಉಡುಪಿಯಲ್ಲಿ ಮಲ್ಲಿಗೆ ಬೇಕೇ ಬೇಕು. ಮಲ್ಲಿಗೆ ಇಲ್ಲದ ಪೂಜೆ ಇಲ್ಲ . ನಮ್ಮ ದೇವರುಗಳಿಗೂ ಮಲ್ಲಿಗೆ ಅಂದ್ರೆ ಪ್ರಿಯ. ಬಹುಶ: ಮಲ್ಲಿಗೆಯ ಸುಹಾಸನೆಗೆ ಇರಬೇಕು.  ನಮ್ಮೂರ ಕಡೆ ಒಂದು ಸಂಪ್ರದಾಯವಿದೆ. ಏನಾದರೂ ಮನೆಯಲ್ಲಿ ಶುಭ ಕಾರ್ಯ ನಡೆಯುವುದು ಇದ್ದರೆ ಮನೆದೇವರಿಗೆ  ಒಂದು ಚೆಂಡು ಹೂ ಅರ್ಪಿಸುವ ಹರಕೆ ಹೇಳುತ್ತಾರೆ . ಇದು  ಸಣ್ಣ  ಹರಕೆ. ಮತ್ತೆ ಮುಂದಿನ ಸಂಕ್ರಮಣಕ್ಕೊ  ಅಥವ ಪೂಜೆ ಪುನಸ್ಕಾರಗಳು ಇದ್ದ ದಿನ ಈ  ಮಲ್ಲಿಗೆಯ ಹರಕೆ  ತೀರಿಸುತ್ತಾರೆ. ಒಂದು ರೀತಿಯಲ್ಲಿ  ತುಳುನಾಡಿನಲ್ಲಿ ಮಲ್ಲಿಗೆಯ ಕೃಷಿ ಹೆಚ್ಚಾಗಲು ದೈವ ದೇವತೆಗಳು ಕಾರಣ. ಡಿಮ್ಯಾಂಡ್  ಮತ್ತು ಸಪ್ಲಯ್ ಅರ್ಥಶಾಸ್ತ್ರ ಚೆನ್ನಾಗಿ ಕೆಲಸ ಮಾಡುತ್ತೆ.

ಉಡುಪಿಯ  ಕಟಪಾಡಿಯಿಂದ ಶಂಕರಪುರ ಮಾರ್ಗವಾಗಿ ಬೆಳ್ಮಣ್ಣ ತನಕ ಹರಡಿ ಕೊಂಡಿದ್ದ ಮಲ್ಲಿಗೆ ಕೃಷಿ ಈಗ ಕಾರ್ಕಳ ಮತ್ತು ಮಂಗಳೂರಿಗೂ ಹರಡಿದೆ. ಮಲ್ಲಿಗೆಯ ಒಂದು ವೈಶಿಷ್ಟ್ಯ ವೆಂದರೆ ಇದನ್ನು ಕೇವಲ ಕೃಷಿಕರು ಮಾತ್ರ ವಲ್ಲದೆ ಪೇಟೆಯ ಕಡೆ ಕೂಡಾ ಬೆಳೆಯಲಾಗುತ್ತದೆ. ಕೆಂಪು ಮಣ್ಣು ಮತ್ತು ನೀರಿನ ಆಸರೆ ಇದ್ದರೆ ೩೬೫ ದಿನ ಮಲ್ಲಿಗೆ ಬೆಳೆಯುತ್ತಲೇ  ಇರುತ್ತದೆ. ಇದು ಒಂದು ಲಾಭದ ಬೆಲೆ. ನಮ್ಮ ಕಡೆ ಇದಕ್ಕೆ "ವೈಟ್ ಬಿಸಿನೆಸ್ಸ್ " ಅನುತ್ತಾರೆ . ಮಲ್ಲಿಗೆ ಹಾಲಿನ ತರಹ ಇರುವುದರಿಂದ ಇದಕ್ಕೆ ಈ  ಅನ್ವರ್ಥನಾಮ. ಮಲ್ಲಿಗೆ ಬೆಳೆಗೆ ಶ್ರಮ ತುಂಬಾ ಇದೆ. ಬೇಸಿಗೆ ಕಾಲದಲ್ಲಿ ಮಲ್ಲಿಗೆ  ಗಿಡಗಳ ಬುಡ ಬಿಡಿಸಿ , ಹುಲ್ಲು ತೆಗೆಯದಿದ್ದರೆ ಹೂವೇ ಬಿಡೋಲ್ಲ. ದಿನ ತಪ್ಪದೆ ನೀರು ಹಾಕಬೇಕು . ಮಳೆಗಾಲದ ರಗಳೆಯೇ ಬೇರೆ . ಬುಡ ಏರಿಸಿ ಒಂದು ತೊಟ್ಟು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮೊದಲ ಮಳೆ ನೀರಿಗೆ ಒಮ್ಮೆಲೇ  ಮಲ್ಲಿಗೆ ಬೆಳೆ ಜಾಸ್ತಿಯಾಗುತ್ತೆ . ಕೆಲವೊಮ್ಮೆ ಕೊಯ್ದು ಕೊಯ್ದು ಸಾಕಾಗಿ ಗಿಡದಲ್ಲೇ ಬಿಡ ಬೇಕದ ಪ್ರಸಂಗ ಕೂಡಾ ಬರುತ್ತೆ. 
ಮಳೆಯ ರಭಸ ಹೆಚ್ಚಿದಂತೆ ಮಲ್ಲಿಗೆಯ ಮೊಗ್ಗುಗಳು ಕಡಿಮೆಯಾಗುತ್ತಾ ಹೋಗುತ್ತದೆ. ಹೂವಿನ ಗಾತ್ರ ಕೂಡಾ ಕ್ಷೀಣಿಸುತ್ತದೆ.  ಚಲಿಗಳದ್ದಲ್ಲಿ ಗಿಡಗಳು ಸೊಟ್ಟು ಕಟ್ಟಿ  ಚಿಗುರು ಇಲ್ಲದಾಗುತ್ತದೆ. ಮಲ್ಲಿಗೆ ಮೊಗ್ಗುಗಳು ಚಳಿಗೆ ಮುರುಟಿ ಹೋಗುತ್ತವೆ. ಹೀಗೆ ಹವಾಮಾನಕ್ಕೆ  ತಕ್ಕಂತೆ ಮಲ್ಲಿಗೆ  ಗಿಡಗಳನ್ನು ರಕ್ಷಿಸಿಕೊಂದು  ಬರುವುದು ಸುಲಭ ದ ಕೆಲಸವಲ್ಲ. ಕೂಲಿನಾಲಿ ದೊರೆಯದ ಪ್ರಸಕ್ತ ಪರಿಸ್ಥಿತಿಯಲ್ಲಿ ಮಲ್ಲಿಗೆ ಗಿಡದ ಆರೈಕೆ ಬಾಣಂತಿ ಯ  ಆರೈಕೆಗಿಂತ ಕಡಿಮೆಯೇನು ಇಲ್ಲ . ಪರಿಶ್ರಮದ ಫಲವಂತು  ಇದ್ದೆ ಇದೆ. ಇದು ನನ್ನ ಸ್ವಂತ ಅನುಭವ. 

ನಮ್ಮದು  ಕೃಷಿ ಪ್ರಧಾನ ಮನೆ. ಏನಿದ್ದರೂ ಮಣ್ಣಿನಿಂದಲೇ ಉತ್ಪತ್ತಿ. ಸಣ್ಣ ಸಣ್ಣ ಗದ್ದೆಗಳು . ಅದಕ್ಕೆ ತಕ್ಕಂತೆ ನಮ್ಮಲ್ಲಿ ಎತ್ತು ಗಳಿದ್ದವು . ಒಂದು ಕಪ್ಪು ಕೊಂಬು ಬಾಗಿದ ಬಾಚ ಎತ್ತು  ಇನ್ನೊಂದು ಕೆಂಪು ಬಣ್ಣದ ಮೈರ . ಕೃಷಿಯಿಂದ ಬಂದದ್ದು ಬಾಯಿ ತನಕ ಮಾತ್ರ . ತಿಂದು ಉಡಲು ಸಾಕಾಗುತ್ತಿತ್ತು . ನಾವು ಆಗ ೧೨-೧೩ ವರ್ಷದವರು . ನಮ್ಮೂರಿನ  ಮೂಡುಮನೆಯ  ಶೀನ ಪೂಜಾರಿಯ (ಮಾವನವರು) ಮನೆಯಲ್ಲಿ ಆಗ ಮಲ್ಲಿಗೆ ಕೃಷಿ ಉಛ್ರಾಯ ಸ್ಥಿತಿಯಲ್ಲಿತು . ನಾವು  ದಿನ ಬೆಳ್ಳಿಗೆ ಅಲ್ಲಿ ಹೂವು ಕೊಯ್ದು ಅವರಿಗೆ ಬಾಳೆಯ ದಾರದಿಂದ ನೇಯ್ದು ಕೊಡುತಿದ್ದೆವು.   ಅವರು ನಮಗೆ ಪುಸ್ತಕಕ್ಕೆ  ಬೇಕಾದ ಹಣವೆಲ್ಲ ಕೊಡುತಿದ್ದರು.  ಒಂದು ದಿನ ತಮ್ಮನಿಗೆ ಇದ್ದಕ್ಕಿದಂತೆ ನಾವು ಕೂಡಾ ಮಲ್ಲಿಗೆ ಗಿಡ ನೆಡೋಣ ಎಂಬ ಯೋಚನೆ ಬಂತು . ಅವನ ಯೋಚನೆ ಕಾರ್ಯಗತವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ .  ಶ್ರಾವಣ ಕಳೆದು ಮಳೆ ಕಡಿಮೆ ಆಗುವ ಹೊತ್ತಿಗೆ  ಶೀನ ಮಾವನವರಿಂದ 16  ಗಿಡಗಳನ್ನು ತಯಾರು ಮಾಡಿ ಬೆಟ್ಟು ಗದ್ದೆಯಲ್ಲಿ ನೆಟ್ಟದ್ದು ಆಯಿತು . 16  ರಲ್ಲಿ ೮ ರಿಂದ ೧೦ ಗಿಡ ಮಾತ್ರ ಜೀವ ಪಡೆಯಿತು. ಮತ್ತೆ ಹೂವು ಬಿಡಲು ಇನ್ನು ೬ ತಿಂಗಳು ಕಾಯಬೇಕಿತ್ತು.  ಸುಮಾರು ಏಪ್ರಿಲ್ ವೇಳೆಗೆ ಎಲ್ಲಾ ಗಿಡಗಳಲ್ಲಿ ಚಿಗುರು ಕಾಣಿಸಿಕೊಂಡು ಹೂವು ಆರಂಭವಾಯಿತು.  ಅಂದಿನಿಂದ  ಇಂದಿನ ವರೆಗೂ ನಮ್ಮ ಆರ್ಥಿಕ ಪರಿಸ್ಥಿತಿ ಒಂದು ಮಟ್ಟದಲ್ಲಿ ಸುಸ್ಥಿತಿಯಲ್ಲಿದೆ. 

ಮಲ್ಲಿಗೆ ಒಂದು ವಾಣಿಜ್ಯ ಬೆಳೆ.  ಮನೆಯಲ್ಲಿ ತುಂಬಾ ಜನವಿದ್ದರೆ  ತುಂಬಾ ಒಳ್ಳೆಯ ಬೆಳೆ. ಮಲ್ಲಿಗೆ ಹೆಣೆಯಲು ಬೇಕಾದ ಬಾಳೆಗಿಡದ ನೂಲಿನ ಉಂಡೆ ತಯಾರಿಸಬೇಕು. ಬೆಳ್ಳಿಗೆ ಎದ್ದ ಕೂಡಲೇ ಇದ್ದ ಹೂವನ್ನು ಕೊಯ್ಯ ಬೇಕು. ಬಿಸಿಲು ಬಿತ್ತೆಂದರೆ ಬಿಸಿಲಿನ ಪ್ರಕರತೆಗೆ ಹೂವು ಕಾಣಿಸುವುದಿಲ್ಲ. ಕೆಲವೊಮ್ಮೆ ಕೊಡೆ ಹಿಡಿದು ಮಲ್ಲಿಗೆ ಕೀಲ್ಬೇಕಾಗುತ್ತದೆ. ಮಲ್ಲಿಗೆ ಗಿಡದ ಒಂದು ವಿಶೇಷ ಅಂದರೆ  ಸಣ್ಣ ಎಲೆಯ ಗಿಡದಲ್ಲಿ ಹೂವು ಜಾಸ್ತಿ . ಮತ್ತೆ ಒಂದು ಚಿಗುರಿಗೆ ೩ ಹೂವು. ಇದಕ್ಕಾಗಿ ಗಿಡಗಳು ಸದಾ ನಳನಳಿಸುತಿರಬೇಕು . ಇದಕ್ಕಾಗಿ ನೆಲಕಡಲೆಯ ಹಿಂಡಿಯನ್ನು ನೆನೆಸಿಟ್ಟು ಗಿಡಗಳಿಗೆ ಹಾಕಿ ಚೆನ್ನಾಗಿ ನೀರು ಹರಿಸಬೇಕು .ಹುಳ  ಹುಪ್ಪಡಿಗಳು ಎಲೆ ತಿನ್ನದಂತೆ ಕೀಟನಾಶಕಗಳನ್ನೂ ಕೂಡಾ ಸಿಂಪಡಿಸಬೇಕಾಗುತ್ತೆ .ಮಲ್ಲಿಗೆ ಗಿಡ ಇರುವವರಿಗೆ ಬೆಳ್ಳಿಗೆ ೧೨ ಗಂಟೆ ತನಕ ಮನೆ ಬಿಡುವ ಹಾಗಿಲ್ಲ. ಹೂವು ಕೊಯ್ದು ,ನೇಯ್ದು  ಹೂವಿನ ಕಟ್ಟೆಗೆ ೧೨ ಗಂಟೆಯ ಒಳಗೆ ಕೊಡಬೇಕು . ನಂತರ ಬಂದ ಹೂವನ್ನು ಸ್ವೀಕರಿಸುವುದಿಲ್ಲ. ಈ ಕಟ್ಟೆಯವರದ್ದು ಪಾಡು ಬೇರೆಯೇ.
ಸುಮಾರು ಒಂಬತ್ತು ಗಂಟೆಗೆ ನೇಯ್ದ ಹೂವು ಗಳು ಚೆಂಡು ಮತ್ತು ಅಟ್ಟೆಯ ರೂಪದಲ್ಲಿ ಇವರ ಕೈ ಸೇರುತ್ತೆ .  ಒಂದು ಚೆಂಡು ಅಂದರೆ ೬ ಸುತ್ತುಗಳು. ಒಂದು ಸುತ್ತಿಗೆ 120 ರಿಂದ 150  ಹೂ ಇರುತ್ತದೆ. ಅಂದರೆ ಒಂದು ಚೆಂಡು ಅಂದರೆ ೭೦೦ ರಿಂದ ೮೦೦ ಹೂವು ಇರುತ್ತದೆ. ೪ ಚೆಂಡು ಒಟ್ಟಿಗೆ ಸೇರಿ ಒಂದು ಅಟ್ಟೆ ಆಗುತ್ತದೆ. ಇನ್ನು ಕಟ್ಟೆಗೆ ಬಂದ ಹೂವುಗಳು ಅವರ ಕೈಯಿಂದ ಇನ್ನೂ ಗಿಡ್ಡವಾಗಿ ಶಂಕರಪುರದಲ್ಲಿ ಮಧ್ಯವರ್ತಿಗಳ ಕೈ ಸೇರುತ್ತೆ . ಅಲ್ಲಿ ಅಂದಿನ ಧಾರಣೆ ನಿರ್ಧಾರವಾಗುತ್ತದೆ. ಅಲ್ಲಿಂದ ಮಂಗಳೂರು ಏರ್ಪೋರ್ಟ್  ಮೂಲಕ ಮುಂಬೈ , ದುಬೈ ಮತ್ತಿತರ ಕಡೆಗಳಿಗೆ  ಸಾಗುತ್ತದೆ. 


Inline image 1


Inline image 1


Inline image 2

Saturday, September 22, 2012

ಐವತ್ತು ತುಂಬಿದೆ .......


ಐವತ್ತು ತುಂಬಿದೆ .......

ಸಂವತ್ಸರ ಕಳೆದು ಬಾಳೊಂದು ಹಸನಾಗಿದೆ
ಬಿಳಿ ನರೆಯೊಂದಿಗೆ ಪಕ್ವತೆಯು ತುಂಬಿ
ಹರುಷದ ಹೊನಲೆಲ್ಲಾ ಹರಿದು ಮುನ್ನುಗ್ಗಿದೆ
ಭಟ್ ಸರ್ ಗೆ ಇದ್ದಕ್ಕಿದಂತೆ ಐವತ್ತು ತುಂಬಿದೆ !

ಇನ್ನು ಮಾಸಿಲ್ಲ ನಿಮ್ಮೊಡನೆ ಪ್ರಶಿಕ್ಷಣದ ಕ್ಷಣ
ಸಾಟಿಯಿಲ್ಲ ನಿಮ್ಮ ಸಹಾಯ ಹಸ್ತಕ್ಕೆ
ಕದ್ದು ನಿಮ್ಮ ಜ್ಯೂಸ್ ಕುಡಿದದ್ದು ಇನ್ನು ಮರೆತಿಲ್ಲ
ಎಂದೂ ಅನಿಸಲೇ ಇಲ್ಲ ನಾವು ನಿಮ್ಮಂದ ದೂರ.

ಹರಸುವೆವು ಇನ್ನೊಂದು ಐವತ್ತು ಬಾಳಿರಿ
ಸಂತಸದ  ಕಡಲು ಇನ್ನೂ ಉಕ್ಕಲಿ
ನಿಮ್ಮನ್ನು ಪಡೆದ ನಮಗೆ ಬೀಳದಿರಲಿ ಜಗದ ಕಣ್ಣು
ಐವತ್ತರ ಚಿರಯುವಕನಿಗೆ ಮತ್ತೊಮ್ಮೆ ಹಾರೈಕೆ
ಹುಟ್ಟು ಹಬ್ಬದ ಶುಭ ಹಾರೈಕೆ !

-ಅಕುವ

(ನನ್ನ  ಮುಂಬೈನ ಗುರುವಾದ C A  ಹರಿದಾಸ್ ಭಟ್ ರವರ 50 ನೇ ಹುಟ್ಟುಹಬ್ಬಕ್ಕೆ..ಶುಭಕೋರುತ್ತಾ)

ಜಂಗಮ ಮತ್ತು ಸ್ಥಾವರ


ಜಂಗಮ ಮತ್ತು ಸ್ಥಾವರ

ವಿದ್ಯೆಯದು ಸದ್ದು ಮಾಡದ ಮದ್ದು
ಅತಿ ಮುದ್ದು ಮಾಡಿ ಕಲಿಸಿ
ಸಗ್ಗ ಸುಖದ ಹಿಗ್ಗಿನಲ್ಲಿ
ರೆಕ್ಕೆ ಪುಕ್ಕಕ್ಕೆ ಹಣದ ಕನಸ ಕಟ್ಟಿ
ನೆನಪ ತೊರೆದೆ ಹಾರ ಕಲಿಸಿದವನ!

ಕೋಶ ಓದಿ ದೇಶ ಸುತ್ತಿ
ಹಣದ ಅಳತೆಗೋಲು ಹಿಡಿದು
ಬಡವ ಬಲ್ಲಿದನ ಕಲ್ಪಿಸಿದೆ!

ಅಕ್ರಮದ ಸಂಪತ್ತಿನಲಿ ಸಭೆಕರೆದು
ಮಹಾಪೋಷಕನ ಪೋಷಾಕಿನಲ್ಲಿ
ಸವಕಲು ಪಾವಲಿಯ ಅಪಾತ್ರ ದಾನ!
ನಕಲಿ ಗೌರವ, ಒಣ ಪ್ರತಿಷ್ಠೆಗೆ
ಹಲ್ಲು ಬಿಟ್ಟ ಬಣ್ಣದ ಫೋಟೋ
ಪತ್ರಿಕೆಯ ದಿನಚರಿಯಲ್ಲಿ!

ನಿನ್ನದೇ ನಾಮಧೇಯ
ಬಸ್ಸು ತಾಣ,ಶೌಚದ ದ್ವಾರಕೂ!
ಹೆಗ್ಗಳಿಕೆಯ ಸೋಗಿನಲಿ
ಪೊಳ್ಳು ಪುರುಷೋತ್ತಮನಾಗಿ
ಗುಡಿಗೆ ಅಮೃತಶಿಲೆಯ ಮುಚ್ಚುವೆ
ಎದ್ದು ಬರಬಾರದೆಂದು ಕಲ್ಲಿನ ರುದ್ರ
ಏರಿಸಿ ಬಿಡುವೆ ಗೋಡೆಗೋಪುರವನ್ನು!

ಕೋಟಿ ಸುರಿಯುವೆ ಸ್ಥಾವರಕ್ಕೆ
ಕೋಟಿ ಜೀವನಾಡಿಗೆ ನೀ ಮಿಡಿಯಲಿಲ್ಲ!
ಅಡಿಕೆ ಜಗಿದು ಪೀಕುದಾನಿ ತುಂಬುವ ಹೊತ್ತು
ಹಡೆದವ್ವ ಅಪ್ಪ ನಿನ್ನ ಆಶ್ರಯಿಸಲು
ಒಡನೆ ಹುಡುಕುವೆಯಲ್ಲಾ ಆಶ್ರಮ
ಜಂಗಮರಂತೆ ಸವೆಸಿದ ಶ್ರಮ
ಅವರೊಲುಮೆಯನು ಅವಾಸ್ತವದ
ತಕ್ಕಡಿಯಲಿ ನಿಯತ್ತಿಲ್ಲದೆ ತೂಗಿದೆ !

ಜಂಗಮರರಿಯದೆ ಸ್ಥಾವರವ ಪೂಜಿಸುವೆ
ಸ್ಥಾವರವು ತಡೆಯೋ ಜಂಗಮರಿಗೆ
ಜಂಗಮಕ್ಕಳಿವೋ ಸ್ಥಾವರಕ್ಕಳಿವೋ

-ಅಕುವ
೧೬/೦೯/೨೦೧೨

Saturday, September 1, 2012

ಯಂತ್ರ


ಯಂತ್ರ

ನಿದ್ದೆಗಣ್ಣಲ್ಲಿ ಜಗವ ನೋಡುವ
ಕೋಳಿ ಕೂಗಿನ ಅಲಾರಮದ ಗುಂಡಿ
ಒತ್ತಿ ತಡೆದು ....
ಅರ್ಧ ಏಳುತ್ತಾ....ದಿನಕರನು ಕಾಣದೆ....

ಹೊತ್ತು ಓಡುವುದೋ, ನಾವು ...?
ಸದ್ದು ಮಾಡಿ ಬಂದ ಗಾಡಿಯಲಿ
ಜಜ್ಜಿ  ತೂರಿ........
ಜಗವ  ಮರೆವ ಗುಂಗಿಗೆ ಹತ್ತಿರವಾಗಲು
ಉದರ ಪೊರೆವ ಉದ್ಯೋಗ ನೆನಪಾಗಲು......

ಸಿಕ್ಕುಗಳ ಶುಷ್ಕ ಸುಲಿಗೆಯಲಿ
ಸಲಿಲದಂತೆ ಜಾರದೆ ಆವಿಯಾದ ದೇಹ
ಬದುಕಲು ಮರೆತ ಬಡಜೀವ
ಸುಸ್ತಾಗಿ.....ಮತ್ತೆ ಮರುಗಿದೆ....ಇಷ್ಟೇನಾ
ಜೀವನ !

-ಅಕುವ
೨೨/೧೨/೨೦೧೧

ವಿಷಾದ


ವಿಷಾದ

ಓದು ಮುಗಿಸಿ ಕೆಲಸ ಗಿಟ್ಟಿಸಿ
ಚಿಂತೆಯಲ್ಲಿ ಮುಳುಗಿದ್ದ
ದಕ್ಷಿಣದ  ಹುಡುಗ...  !

ದಿನಾ ಒಂದೇ ಬೋಗಿಯಲಿ
ಮುಖ  ನೋಡಿ ನೋಡಿ
ಮುಗಳ್ನಾಕ್ಕಾಗ ...
ಒಂದು ದಿನ ಅರುಹಿಕೊಂಡ....

ಮದುವೆಗೆ ಹೆಣ್ಣು
ಗೊತ್ತು ಮಾಡಿದ್ದಾರೆ....
ಅಪ್ಪ ಅಮ್ಮನ ಒಟ್ಟಿಗಿರಲು
ಅವಳೊಪ್ಪಲ್ಲ......!
ಹಣದ ತೊಂದರೆ ಅಲ್ಲ !
ಒಟ್ಟಿಗೆ  ಇರೋದೆ ಬೇಡ !

ಅವಿಭಕ್ತ ನಮ್ಮಲ್ಲೇ ನೋಡಿ
ಗಂಡಿಗೆ ಅಪ್ಪ ಅಮ್ಮ ಇರಬಾರದು !
ಇದ್ರು ಮದುವೆ ಮುಂಚೆ
ಸಾಯಿಸಬೇಕು! ಸಾಯಬೇಕು !
ಇಲ್ಲಾಂದ್ರೆ ಮದುವೆ ಬೇಡ
ಸುಮ್ಮಗಿರಬೇಕು !

ನಾನು ಏನು ಹೇಳದೆ ಮೌನ
ಸುತ್ತಮುತ್ತ ಇದೇ ಎಲ್ಲಾ !

-ಅಕುವ
(ಮೊನ್ನೆ ರೈಲ್ಲಿನಲ್ಲಿ  ನನ್ನ  ಸಹಪ್ರಯಾಣಿಕ  ಆಂಧ್ರ ಯುವಕನೊಬ್ಬನ ವಿಷಾದದ ಮಾತಿನಿಂದ  ಹುಟ್ಟಿದ ಕವನ.  ನಮ್ಮ ಸಂಭಾಷಣೆಯ ಭಾಷೆಯನ್ನೇ  ಉಪಯೋಗಿಸಿದ್ದೇನೆ.)

ಟ್ಯಾಲಿ


ಟ್ಯಾಲಿ

ವಾಲಿ ನಿಂತ ಮೊನಿಟರೊಳಗೆ
ತಾಳೆ ಲೆಕ್ಕದ ಟ್ಯಾಲಿ !
ಗುಂಡಿ ಒತ್ತಲು ಕೂಡಿಸಿ ಕಳೆದು
ಮೊತ್ತ ಮಾಡಿ
ಬ್ಯಾಲನ್ಸು ಕನ್ಫರ್ಮ್ ಆದಾಗ
ನಗೆಯು ಮೆಲ್ಲ ಮೊಗದಲಿ

ಅಲ್ಲಿ ಇಲ್ಲಿ ಅಂಟಿಸಿದ
ಸೂಚನೆ ಚೀಟಿಗಳು
ಮರೆವ ರೋಗದ
ಗುಳಿಗೆಗಳು !

ನಡುವೆ ಬಡಿದು ಕೊಳ್ಳುವ ಪೋನು
ಮಡದಿ ಇರಬೇಕು
ಮತ್ತೆ ತಲೆ ತುರಿಕೆ !
ಬಣ್ಣದ ಪೆನ್ನು ಗೀಚಿದ ಬಿಳಿ ಹಾಳೆ !
ವೇಗದಿ ಓಡುವ ದಿನಗಳ ಲೆಕ್ಕಕೆ
ಪಕ್ಕದ್ದಲ್ಲೇ ಕ್ಯಾಲೆಂಡರ್
ಪ್ರಾಯ ಓಡಿದುದೆ ತಿಳಿಯಲಿಲ್ಲ !

-ಅಕುವ
೨೯/೦೭/೨೦೧೧

ಶೋಕ ದೀಪ


 ಶೋಕ ದೀಪ

ಉತ್ತರ ದಕ್ಷಿಣ ಮಲಗಿಸಿ ನೆತ್ತಿ ಮೇಲೆ
ಹಚ್ಚಿಬಿಟ್ಟು ಎಣ್ಣೆಹಾಕಿ ಮೌನಧರಿಸಿ
ನೀವು ಮುಳುಗಲು ದು:ಖದಿ
ನಾ ಮಾಡಿದ ಪಾಪವಾದರೇನು ?

ಯಾವುದಕ್ಕಾದರೂ ಹಚ್ಚಿ ನಾ
ಬೆಳಕು ನಿಮಗೆ ಕೊಟ್ಟು
ಕತ್ತಲು ಎನ್ನಡಿಯಲಿ ಬಚ್ಚಿಡುವೆ
ನಿಮ್ಮ ಶೋಕದೊಳ್ ಎನ್ನ ದೋಷವೇನು ?

ಕತ್ತೆತ್ತಿ ನಾ ಬದುಕುವೆ
ಎನ್ನ ಉರಿಸುತ ಬೆಳಕ ಚೆಲ್ಲುವೆ
ನಂದಿ ಹೋದರೂ ಗಾಳಿಬೀಸಿ
ಶಕುನದ ಲೆಕ್ಕ ನಾನೆಲ್ಲಿ ಅರಿವೆನು ?

ಎನ್ನ ಕರೆಯದಿರಿ ಶೋಕದೀಪ
ನಾ ಭಾಗಿಯಿಲ್ಲ ಯಾರ ಸಾವಲ್ಲಿ
ನಾನರಿವೆ ಒಂದೆ !
ಕಿಲಕಿಲನೆ ನಗುವೆ ಹಚ್ಚಿದವರ ಮುಂದೆ !
                                       - ಅಕುವ
೨೨/೧೦/೨೦೧೦  

ನೀನಿಲ್ಲದೆಯೇ ನನ್ನೊಳಗೆ!


ನೀನಿಲ್ಲದೆಯೇ ನನ್ನೊಳಗೆ!

ಶಿಶಿರದ ಬೀಸು ಚಳಿಗಾಳಿಗೆ
ನಿನ್ನಪ್ಪುಗೆಯ ಬಿಸಿ ನೆನಪ
ಹೊದ್ದು ಬಿಚುತ್ತಿದ್ದೆ ಕನಸ!

ಹಸೆಮಣೆಯೀರಿದ ಕ್ಷಣದಿಂದ
ತವಕ ತಳಮಳದ ಮನಸು
ಇನ್ನೂ ಹಸಿ ನೀನಿಟ್ಟ ಮುತ್ತು!

ಮಾತಿಲ್ಲ ಕತೆಯಿಲ್ಲ ಮೌನವೇ ಅಲ್ಲಿ
ಎರೆದೆ ಧಾರೆ ನಿನಗೆ ಸಕಲವನೂ
ಮಿಲನ ಸಂತಸದಿ ಎಲ್ಲ ಮರೆತು!

ಮಾತಿನ್ನೂ ಮುಗಿದಿಲ್ಲ ಸವಿಯೊಳಗೆ,
ಪಯಣವದು ಗಡಿ ರಕ್ಷೆಯ ಕರೆ,
ಮಣ ಭಾರದ ಮನಸು ದೇಶ ಕಾಯಲು!

ಶರಣೆಂದೆ ನಿನ್ನಪ್ಪುಗೆಯಿಲ್ಲದ ರಾತ್ರಿ
ಬಲುದೂರ, ಕಹಿ, ನೀನಿಲ್ಲದ ನಿದ್ದೆ
ಉಳಿವಿಲ್ಲ ನೀನಿಲ್ಲದೆಯೇ ನನ್ನೊಳಗೆ!

-ಅಕುವ

ಶಿರ್ಡಿಯ ಹಾದಿಯಲಿ


ಶಿರ್ಡಿಯ ಹಾದಿಯಲಿ

ಮೊಳಕೆ ಒಡೆಯುವ ಜೀವ
ಟಿಸಿಲು ಬಿರಿಯುವ ಸದ್ದು
ಧಾನ್ಯದಲಿದ್ದ ಮುನಿಯು ಎದ್ದನು
ಕತ್ತಲೆಯು ಸೀಳಿ ಬೆಳಕು ಕಣ್ಣು ಕುಟ್ಟಿದೆ

ಎಲ್ಲಿ ಗುಡಿಯೋ ಏನು ಮಂದಿರವೋ
ಗಾಡಿ ಗಾಲಿಯೊಡನೆ ಮನಸ್ಸಿನ ಓಟ
ಸ್ಥಿತನೋ ಅಸ್ಥಿರನೋ ಆದರೂ ಅಚಲ
ಕೂಡಿಟ್ಟ ಮರ್ಕಟದ ವಿಷಯ ನಿಶ್ಚಲ

ಅರೆ ನಿದ್ರೆಯ ಬಾಯಾರಿಕೆಯ
ಸೋಲುವ ದೇಹ ಹೊತ್ತು
ಏನು ನೋಡ ಬಂದೆ ..
ಏನೂ ಬೇಡದೆ ನಿಂದೆ

ಶಿರ್ಡಿಯ ಹಾದಿಯಲಿ ಬೇಡಿಕೆಯ
ಪಟ್ಟಿ ಕಳೆದು ಹೋದುದೇ ??
ಏನೂ ಬೇಡದೆ ಬಂದೆನೇ ???
ನಾನೆಂಬುದನು ಕಳೆದೇನೆ !

- ಅಕುವ
೧೭.೦೫.೨೦೧೨



ಸೀಳುಮರ


   ಸೀಳುಮರ

ಸಿಡಿಲೊಡೆದ ಮರ ಬಾನಂಗಲದಲಿ
ಅದರೊಳೊಂದು ಮನೆಮಾಡಿತ್ತು ಗಿಳಿ
ಮೇಲೆ ಬಿಸಿಲು ಎಲ್ಲೂ ಇಲ್ಲ ನೆರಳು!

ಸುಳಿವಿಲ್ಲದೆ ಐತನ ಮಡು ಗರಗಸ
ದೊಪ್ಪನೆ ಇಳೆಗೆರಗಿತು ಎಲ್ಲಾ ನಿಶಬ್ದ
ಸಾಹೀಬ್ರು ಎಣಿಸಿದರು ದಿಮ್ಮಿ ಪಕ್ಕಾಸ್ಸು
ಖುಷಿಯೆಂದ ಜೇಬು ತುಂಬಲು ಚಿಕ್ಕಾಸು !

ಯಾರ ಮಣ್ಣು ಒಯ್ಯದವರಾರು ನೀರು
ಎಲ್ಲ ಸೇರುವುದು ಒಂದೇ ತೇರು
ತಿರುಗಿ ಬಂದ ಹಕ್ಕಿಗೆ ಹುಡುಕಾಟ
ಅರ್ಥವಾಗದೆ ಎನೋ ಕೂಗಾಟ ! ತಡಕಾಟ !

ಅಕುವ
15/03/2011

ಋಣ


ಋಣ

ಒಟ್ಟಿಗಿರುವಾಗ ಅದು ನಿನ್ನದು
ಅವರು ನಿನ್ನವರು,
ಇವರು ನನ್ನವರಂದೆ
ನಿನ್ನ ಬಿಟ್ಟು ಹೋದ ಕ್ಷಣ
ಬಿಡದೆ ಕಣ್ಣೀರು ಸುರಿಸಿದೆ
ಒಮ್ಮೆ ಅನಿಸಿತು ನನಗೆ
ಯಾಕೆ  ಸುಮ್ಮನೆ ಸತ್ತೆ
ಮಗದೊಮ್ಮೆ ನೆನಪಾಯಿತು
ಎಷ್ಟೋ ಸಲ ನೀ ಬೈದಿದ್ದೆ ಕತ್ತೆ
ಈಗ ನಾ ಬೇಕೆನ್ನುವೆ ಯಾತಕ್ಕೆ ?
ಎದ್ದು ಬರುವೆನೆಂದರೆ ದೇಹವಿಲ್ಲ
ಮತ್ತೆ ನಿಮ್ಮೆಲ್ಲರ ಋಣ
ಬೇಡೆಂದು ಸುಮ್ಮನಾದೆ !

-ಅಕುವ

ಪ್ರತಿಬಿಂಬ


ಪ್ರತಿಬಿಂಬ

ಜೀಕುತಿಹ ಜೋಕಾಲಿಗೆ
ನೇತು ಹಾಕುತ್ತಿದ್ದಾಗ
ಮುಗಿಲಿಗೆ  ಮುಖವಾದೆ
ರವಿ ನೆತ್ತಿಗೇರಿದ್ದ ...ಸುಖವಾಗಿದ್ದ

ಸ್ತುತಿಯ ಆಕಾರವಲ್ಲ..
ಆದರೂ ಪಕ್ಕದ ಬಾವಿಯಲ್ಲಿ
ಕಂಡಿದ್ದ.....
ಸುಪ್ತನಾಗಿ ಇಬ್ಬನಿಯಲ್ಲೂ
ಅಡಗಿದ್ದ.....
ಸಂಜೆ ಗೌಜಿಯಲಿ ನಮ್ಮೂರ
ಓಣಿಯ ಬೇಲಿಯಾಚೆ ಮನೆ
ಮಾಡಿದ್ದ....
ಸಡ್ಡು ಹಿಡಿದವನಂತೆ ಮತ್ತೆ
ನರ್ಸಿ ಕೆರೆಯಲ್ಲಿ
ಮುಂಜಾನೆ  ಪ್ರತ್ಯಕ್ಷನಾಗಿದ್ದ !

-ಅಕುವ

ನಿನಗಾಗಿ


  ನಿನಗಾಗಿ

ಹಾಲು ಗಲ್ಲದ ಹುಡುಗಿಯ ಅಂದು ಕಂಡು
ಕಂಬಳದ ಗದ್ದೆಯಲ್ಲಿ ಉದ್ದಿನ ಮೊಟೆಯನು
ಹೊರುವಾಗ ಉದ್ದ ಲಂಗದಲ್ಲಿ  ಸಣ್ಣ ಹೆಜ್ಜೆ
ಕದವ  ದೂಡಿ ಎನ್ನ ಹೃದಯದಲಿ  ಅಡಿ ಇಟ್ಟೆ......

ಟೊಂಕದಾಟದಲಿ ಸಿಕ್ಕಿಬೀಳುತ್ತಾ
ಕಣ್ಣಮುಚ್ಚಾಳೆಗೆ ಒಟ್ಟೊಟ್ಟು ಅಡಗಿದಾಗ
ಹುಟ್ಟಿಕೊಂಡ ಪ್ರೀತಿ ಮಾತಿಲ್ಲದ ಬರಿ ಮೌನ
ಬೇಸಿಗೆಗೆ ನದಿಗೆ ಗಾಳ ಹಾಕುವಾಗ ಸಿಕ್ಕಿ
ಬೆಸೆದು ಕೊಂಡ ಬೆಸುಗೆ...ಮೆಲ್ಲನೆ ನಕ್ಕಿದ್ದು !

ಉದ್ಯಾವರದ ಜಾತ್ರೆಯಲ್ಲಿ ಮಲ್ಲಿಗೆ ಕೊಡಿಸಿದ್ದೆ
ಚಿಕ್ಕಮ್ಮನ  ಜೊತೆ ಬಂದಿದ್ದ ನೀನು
ಚಿಕ್ಕ ಓಣಿಯಲಿ ಎದುರಾದಾಗ ಧಾವಣಿ ಸಿಕ್ಕುಸಿಕ್ಕದಾಗ
ಬಿಡಿಸಿದ ನನ್ನ ಕೆನ್ನೆಗೆ ಬಿಸಿ ಮುತ್ತು ಸವರಿತ್ತು !

ಸಂಪಾದನೆಯ ಗುಂಗು ಹಿಡಿದು ದೂರದ ಮುಂಬೈಗೆ
ಹೊರಟಾಗ ಉಡುಪಿ ಶ್ರೀಕೃಷ್ಣನ ಪ್ರಸಾದ ಕೊಟ್ಟಿದ್ದೆ
ಅಲ್ಲಿಂದಲೇ ನೀ ನನ್ನ ರಾಧೆಯಾದೆ..ದೂರವಾದೆ
ಪತ್ರದಲ್ಲೊ ನೆನೆಪಲ್ಲೊ ನೀ ಮನದ  ರಾಣಿಯಾದೆ

ನಿನಗಾಗಿ ಇಂದು ಬಂದು ಕಾದಿರುವೆ....ಅದ್ಯಾಕೊ
ನೀ ಭರದ ಹೊಳೆಯಲಿ ನಿನ್ನವರ ದಾಟಿಸಲು ಹೋದೆ..
ಮತ್ತೆಂದು ಹಿಂದಿರುಗಿ ಬಾರದ ಹಾಗೆ....
ಕಣ್ಣು ತುಂಬಿ ಧಾರೆಯಾಗಿದೆ....ಅದೇ ಹೊಳೆ
ಜಿನುಗುತಿದೆ ಮತ್ತೆ ಮಳೆ ಏಕಾಂಗಿ ಕಾದಿರುವೆ
ಬರುವಿಗಾಗಿ....ನಿನಗಾಗಿ........

-ಅಕುವ

ನೆನಪಿಲ್ಲ


ನೆನಪಿಲ್ಲ

ಬರುತ್ತಿಲ್ಲ ಒಂದೂ ಸಾಲು
ಮರೆತು ಹೋದ ನಿನ್ನ ಓಡನಾಟದ !
ತುಳುಕಿ ಹರಿದ ಪ್ರೇಮಧಾರೆ
ಸುಳಿವಿಲ್ಲದೆ ಬತ್ತಿ ಬರಡಾಗಿದೆ!
ಹೆಜ್ಜೆ ಗುರುತಿಲ್ಲ ಗೆಜ್ಜೆ ಸದ್ದಿಲ್ಲ
ಅಡ್ದ ಬಂಡೆಯ ಎಡೆಯ ಗುರುತಿಲ್ಲ !
ನಿನ್ನೊಡನೆ ಹಾಡಿದ ಒಂದೂ
ಸಾಲು ನೆನಪಿಲ್ಲ !

-ಅಕುವ

ನಾಮಕರಣ


ನಾಮಕರಣ

ಹುಟ್ಟಿದೆ ಮಗುವಾಗಿ
ಸಂಸಾರದ ನಗುವಾಗಿ
ಹೆತ್ತವರ ಆರ್ತಿಗಾಗಿ

ನಾಮಕರಣದ ನೆಪಮಾತ್ರ
ಧರ್ಮದ ಸಂಕೋಲೆ ಬಿಗಿದಿರಿ
ನನಗೆ ಆಯ್ಕೆಯ ವಯಸ್ಸಲ್ಲ
ಎಲ್ಲಾ ನೀವೇ ಮುಗಿಸಿದಿರಿ

ಇಂದಾದರೂ ಒಂದು ದಿನ
ಮಾನವನಾಗಲು ಬಿಡುವಿರಾ?
ಸಂಕೋಲೆ ಕಡಿದು ಬಿಡಿ !

-ಅಕುವ
೨೭.೦೬.೨೦೧೧

ಮುಗ್ಧ



ಮುಗ್ಧ

ಇಳೆಯಲಿ ಎಲೆಯು
ಬಾಡದೆ ಬೀಳದು.
ಹಣ್ಣಾಗುವ ತನಕ
ಕಾಯುವುದು !
ಹಸುಳೆಯು ಹಸಿವಿಗೆ
ಅಳದಿರುವುದೇ?
ಹಾಳು ಬಾವಿಗೆ ಬಿದ್ದ ಪಶು
ಈಜಾಡದಿರುವುದೇ?
ತನ್ನ ಸುತ್ತ ಇರುವರ  ಅರಿಯದ
ಮನುಜ ಮುಗ್ಧನೇ?
ಇದನೆಲ್ಲಾ ಕಣ್ಣಿದ್ದೋ
ಕಾಣದೆ ನೋಡುವ
ದೇವ ನಿಜವಾಗಿಯೂ ಮುಗ್ಧ !

-ಅಕುವ

ಮುಚ್ಚುತ್ತಿರುವ ಶಾಲೆಗಳೇ ??


ಮುಚ್ಚುತ್ತಿರುವ ಶಾಲೆಗಳೇ ??

ಮಣ್ಣು ಮೆತ್ತಿದ ಚಪ್ಪಲಿಲ್ಲದ
ನಸುಗೆಂಪು ಕಾಲುಗಳು
ಕೇಳುತಿದೆ ಶಾಲೆಯ ಗಂಟೆ
ಕೇಕೆ ಹಾಕುತ್ತ ತುಂಬಿದ ಮೈದಾನ
ಧ್ವಜ ಸ್ತಂಭದ ಮುಂದೆ ಪ್ರಾರ್ಥನೆ
ಹಾರುತ್ತಿದ್ದ ಬಾವುಟ ..ಹೂಮಳೆ..
ನೆತ್ತಿ ಮೇಲೆ ಬಿರುಬಿಸಿಲು...
ಧ್ಯಾನವೆಲ್ಲಾ ಮರದಿ ಕೂತ
ಓತಿಕೇತದ ಮೇಲೆ !

ಹರಿದ ಚಡ್ಡಿ ಬಣ್ಣದರಿವೆಯ ತೇಪೆ
ಕಾಲೆಳೆಯುವ ಕಬಡ್ಡಿ !
ನಾಗರ ಬೆತ್ತದ ಶ್ರೀನಿವಾಸ ಮೇಷ್ಟ್ರು
ಡೆಸ್ಕು ಒಳಗೆ ದೇವರ ಪೂಜೆ
ಬೆಂಚು ಸುಟ್ಟ ಊದುಬತ್ತಿ...!
ಪ್ರಸಾದ ತಿಂದ ಹಿಂದಿ ಪಂಡಿತರು !

ನಾವೇ ನೆಟ್ಟ ತೆಂಗಿನ ಗಿಡ
ರಾಟೆಯಲ್ಲಿ  ಇಳಿದ ಬಾವಿಯ ನೀರು !
ಎಲ್ಲದಕ್ಕೂ  ಸಾಲು ಸಾಲು
ಸಂಜೆಯ ಆಟ...ಓಡುವುದೇ ಪರಿಪಾಠ!

ಸರಿದ ದಿನಗಳು...ಬದಲಾದ ಸರಕಾರಿನಿಯಮಗಳು
ಮುಚ್ಚುತ್ತಿವೆ ಶಾಲೆಗಳು....ಮಾಸುತ್ತಿದೆ ಸ್ಥಾವರ
ಪಾಚಿ ಗಟ್ಟಿದ ಗೋಡೆ !
ಜಂಗಮನ ಜ್ಞಾನ  ದೇಗುಲ ...ಮತ್ತೊಮ್ಮೆ ಘಂಟೆ
ಒಳಗೊಳಗೆ ಬಡಿದು ಪೂಜೆ ಗೈದಿದೆ !

-ಅಕುವ

ಮರಳಿ...ಗೂಡಿಗೆ?


ಮರಳಿ...ಗೂಡಿಗೆ?

ಮಣ್ಣೊಳಗೆ ಬೆರೆತು ಮೊಳಕೆ
ಬಿರಿಯಲು ನೆಲವ ಅಪ್ಪಿಹಿಡಿಯುತ
ತನ್ನನ್ನೇ ಕಳೆದು ಕೊಳ್ಳುವ ಪರಿ
ಸಿಟಿಲೊಡೆದ ಹಸುಳೆ ಮೊಗ್ಗು
ಬೇರು ಹೊಕ್ಕುತಿದೆ ಮರಳಿಮಣ್ಣಿಗೆ

ಬಳ್ಳಿ ಸವರಿದೆ ಗಿಡ ಮರವಾಗಿದೆ
ಉಡಿ ತುಂಬಿ ತಳಿರೆಲೆ ಹಾಯಾಗಿದೆ
ಹೂಬಿಟ್ಟು ಕಾಯಾಗಿ ನೆಲಕೆ ಉದುರಿದೆ
ಮಣ್ಣ ಸೇರಿ ಮತ್ತೆ ಬೆರೆತು ಮೊಳಕೆ
ಬೀಸುಗಾಳಿ ಮಳೆಯು ಸೇರಿ ಗಿಡ ತೂಗಿದೆ

ಮಾಂಸರಕ್ತ ಸೇರಿ ಮಗುವಾಗಿದೆ
ಅಪ್ಪನಅಕ್ಕರೆ ಅಮ್ಮನಪೋಷಣೆ
ಮಗ ಬಿರಿದಾಗಿದೆ ಮನಸ್ಸು ಕಿರಿದಾಗಿದೆ
ಹಿಡಿತ ಸಡಿಲಾಗಿದೆ ನೆಲವ ಬಿಟ್ಟಾಗಿದೆ
ಮರಳಿ ಪಡೆಯುವುದೇ ಕಷ್ಟವಾಗಿದೆ
ಬೀಸುಗಾಳಿಯಲ್ಲೂ ಅವನಿಲ್ಲ..ಹಾರಿಯಾಗಿದೆ
ಹಣ್ಣೆಲೆ ಉದುರಿದೆ  ಕಣ್ಣು ಕಾಯುತಿದೆ..
ಬರುವನೆಂದು ಮರಳಿಗೂಡಿಗೆ....


-ಅಕುವ
೨೨/೦೮/೨೦೧೧

ಮರಳ ಹೆಜ್ಜೆ




ಮರಳ ಹೆಜ್ಜೆ

ಭಾರ ಬಿದ್ದಷ್ಟು ಹೂತು ಹೋಗಿದೆ
ಹೊರಲಾರೆ ಎಂದಿದೆ ಹೊಯ್ಗೆ ರಾಶಿ
ದಾಪುಗಾಲು ಹಾಕಲಾಗಲಿಲ್ಲ
ನಡೆಯದೆ ನನಗೆ ದಾರಿಯಿಲ್ಲ

ಕಂಡದ್ದು ಮುಗಿಲು ಇಳಿಯುವವರೆಗೆ
ಜಲ ಮುತ್ತುತಿತ್ತು ಆಗಸಕೆ
ದಿಗ್ಭ್ರಮೆ! ಜಗತ್ತು ಅಲ್ಲೇ ಕೊನೆಗೊಂಡಿದೆ.
ಮತ್ತೂ ಎವೆಯಿಕ್ಕದೆ ನೋಡುತ್ತಲೇ ಇದ್ದೆ.

ಉಪ್ಪು ನೀರು ಪಾದ ಮುಟ್ಟುತಿತ್ತು
ಮತ್ತೆ ಮೇಲೆ ಹಜ್ಜೆ ಹಾಕಿದೆ
ಉಸುಕು ಪಾದ ಕಳಚಿಕೊಳ್ಳುತಿತ್ತು
ಮುಸುಕು ಬೆಳಕ ಓಡಿಸಿತ್ತು .

- ಅಕುವ

ಮಳೆ ಎಂಬುದೆ ಹಾಗೆ !



ಮಳೆ  ಎಂಬುದೆ ಹಾಗೆ !

ಮಳೆ ಎಂಬುದೇ ಹಾಗೆ
ಎಲ್ಲಾ ನೆನೆಸಿ
ಒಮ್ಮೆ ನೆನಪಿಸಿ
ಮತ್ತೆ  ಮರುಕಳಿಸಿ
ಬಾಲ್ಯಕ್ಕೆ !

ಮಳೆ ಸುರಿದಿದೆ ಹೇಗೆ
ಕೈ ಕೈಯ ಹಿಡಿದು
ಬಿಡದಂತೆ
ಹೆಜ್ಜೆ ಹೆಜ್ಜೆಗೆ ಬಿಗಿಯಾದ
ರಭಸದಲಿ
ನವಪ್ರೇಮಿಗಳ
ಅಪ್ಪುಗೆಯಂತೆ !

ಮಳೆ ಮೆರೆದಿದೆ ಹೀಗೆ
ನನ್ನಜ್ಜಿಯು ಹಟ್ಟಿಯ
ಒಲೆಯ ಮುಂದೆ
ನಮ್ಮೆಲ್ಲರ ಸೇರಿಸಿ
ಪಟ ಪಟ
ಕಥೆ ಹೇಳಿದಂತೆ !

--ಅಕುವ

ಕುರುಕ್ಷೇತ್ರ


ಕುರುಕ್ಷೇತ್ರ

ನನ್ನ  ಮನೆಯ ದೇವಿ  ಸದಾ
ದೀಪಕಳಾಗಿ   ಬೆಳಗುತಿರುವಳು
ಉಪನದಿಯ ಇಕ್ಕೆಲದಲಿ
ಮೊರ್ತಳಾಗಿ ಹರಸುತಿಹಳು
ಊರಿಗೆ ಗ್ರಾಮದೇವತೆ ಇವಳೇ !

ನಿತ್ಯಪೂಜೆಯ  ಸಂಭ್ರಮ
ತೆಂಗುಮರಗಳ ತಂಪು ಗಾಳಿಗೆ
ಮೈಯ್ಯೊಡ್ಡುವಳು....
ಹಸುರಬಯಲ ಲೀಲಾಜಾಲದಲಿ
ತೂಗುವಳು....
ಘಂಟೆ ಘೋಷಗಳ ಭಕ್ತಿಭಾವದ ಹೂವಿನ
ಪೂಜೆಗೆ ಪ್ರಸನ್ನಳು !
ಮಕ್ಕಳ್ಳೀಯುತ್ತಿದ್ದ ಶಾರದ ಸೇವೆಗೆ
ಬೆರಗಾಗುತಿದ್ದಳು.....!

ಮೊನ್ನೆ ಮೊನ್ನೆ  ಬಯಲ  ನಡುವೆ  ಸೀಳಿ ಹೋದ
ಕೊಂಕಣರೈಲು...
ಗದ್ದೆ ಪಡೆದವರು ಕಾಂಚಣ ಬಿಚ್ಚಲು
ಮಕ್ಕಳ ಮನವು  ಕದಡಿ ರಾಡಿಯಾಗಿದೆ  !

ಮರೆತೆ  ಬಿಟ್ಟರಲ್ಲ ನಿಮ್ಮಿರುವಿಕೆಯನ್ನ!
ದಾಯಾದಿ  ಕಲಹದಲಿ ಮೈಮರೆಯಲು
ತುಂಡು ಭೂಮಿಯ ನೆಪ ಮಾಡಿ...
ಸಮರಕ್ಕೆ  ಸಜ್ಜಾಗಿಹರು....
ನಿನ್ನೊಡಲೆ ಮತ್ತೆ ಕುರುಕ್ಷೇತ್ರ !

-ಅಕುವ

ಕಾಯಲಿಲ್ಲ


ಕಾಯಲಿಲ್ಲ

ಮತ್ಯಾಕೆ ಮೊನ್ನೆ ಸಿಕ್ಕಿದಾಕೆ ..
ಉದ್ಗಾರ ತೆಗೆದಳು ...ಕಾಯಲಿಲ್ಲ ..
ಇನ್ನು ಬಿಸುಟ್ಟಿಲ್ಲವೇ ಸವಿ ನೆನಪನ್ನು !

ಕಾಯಲೇನು?
ವರುಷ ಕಳೆದು ಬರುವ ವಸಂತವೇ?
ಕಾಲವ ನೀಡಲು  ....ನೀ ಕೈ ಕೊಟ್ಟೆ .
ಆದರೂ ಆರೋಪ ನಾನೇ ಹೊತ್ತೆ...!

ಕಾಯುವುದು ಅದ್ಯಾವ ಪುರುಷಾರ್ಥ?
ನನ್ನ ಅಭಾಗ್ಯನ ಮಾಡಿದುದಕ್ಕೆ?
ಹದಿಮೂರೇ ಮಾಸದಲಿ ಬತ್ತಿತ್ತಲವೇ ಹೃದಯ
ಒಡೆಯಿತಲ್ಲವೇ ಒಡಲು...ಸುಟ್ಟೆನಲ್ಲವೇ
ಎಲ್ಲಾ ಆ ದಿನ......
ಒಡಲಿಲ್ಲದವಗೆ ಇನ್ನು  ಕಾಯುವೆಯಾ?

- ಅಕುವ

ಕಾಣದ ನಾಳೆಗೆ


ಕಾಣದ ನಾಳೆಗೆ

ಸುಳಿವಿಲ್ಲ ಕಂಡಿಲ್ಲ
ಬಾರದೆ ಇರುವ ನಾಳೆಗೇಕೆ
ಕೊರಗು ?
ಸದ್ದಿಲ್ಲದ  ಗದ್ದಲವ ಮಾಡಿ
ಇಂದು ಜಾರುತಿದೆ
ಮುದ್ದು ಮಾಡಿ ನಿನ್ನದಾಗಿಸೋ
ಗದ್ದೆಗಳ ಹದಮಾಡಿ
ಸಜ್ಜನಿಕೆಯ ಬೀಜವ ಬಿತ್ತೋ
ಕತ್ತರಿಯ ಅರಮಾಡಿ
ಕಿತ್ತೊಗೆಯೋ ಕಳೆಯ
ಮತ್ತ್ಯಾಕೆ ಚಿಂತೆ ನಾಳೆಯ ?

-ಅಕುವ

ಕದವ ತೆರೆದೊಮ್ಮೆ


ಕದವ ತೆರೆದೊಮ್ಮೆ


ಮನದ ಕದವ ತೆರೆದು
ಬಟ್ಟ ಬಯಲಲಿ ಎಲ್ಲವ ಓದಿ(ಡಿ)ಸಿ
ದಿಟದ ಸಾಕ್ಷಾತ್ಕಾರವ ಮಾಡಿದ
ತೊದಲು ನಾಲಿಗೆಯಲಿ ಅಮ್ಮನ
ಕರೆಸಿದ ಕಸ್ತೂರಿ ಕನ್ನಡಕೆ ನಮನ.

ಸಿಕ್ಕುಗಳ ಜಗತ್ತಿನಲಿ ಲೆಕ್ಕದಲೇ
ಮರೆತಿರುವಾಗ ಕಗ್ಗಗಳ ಬಿಡಿಸಿ
ಜೀವನದ ಸುಗ್ಗಿಯ ಬಡಿಸಿ
ಇಂದು ಹಿಗ್ಗುತ್ತಿರಲು ಮತ್ತೆ
ಕಣ್ಮುಚ್ಚಿ ನೆನೆವೆ ಕನ್ನಡವ....!

ಕಳವಳದಿ ಜಗವ ಅರಿಯಲಂಜುತ
ಹೆಜ್ಜೆ ಹೆಜ್ಜೆಗೆ ಜಿಜ್ನಾಸೆಯ ಉತ್ತರಿಸುತ
ಉದ್ಧರಿಸಿದ ಕನ್ನಡಾಂಬೆ ಶಿರವ ಬಾಗುವೆ......

-ಅಕುವ

ಹೆದ್ದಾರಿ


  ಹೆದ್ದಾರಿ

ಸುಳಿವಿಲ್ಲದೆ ಬಂದರವರು
ಬೀಳಿಸುತಾ ಹೋದರವರು
ಬುಡಮೇಲಾಗಿ ನೂಕಿದರವರು
ಬಲವಂತ ಮಾಡಿದರವರು !
ನಿಂತಿದ್ದೆವು ನಾವು ನಮ್ಮಷ್ಟಕ್ಕೆ
ಸದ್ದು ಗದ್ದಲದ್ದಲ್ಲೂ ಇಕ್ಕೆಲಕೆ
ಮಂತ್ರಿ ಕಾರು ಬರುವುದಿದ್ದರೆ
ಬಣ್ಣ ಬಳಿವರು ಅವಸರದಿ
ತೂಗುವೆವು ನೆರಳನೊಡ್ಡುವೆವು
ನಿಮ್ಮ ದಾರಿಯುದ್ದ ಹಾರೈಸುವೆವು
ಮತ್ತೂ ಯಾಕೆ ನಾವು ಬೇಡವಾದೆವೇ?
ನಿಮ್ಮ ಹೆದ್ದಾರಿಗೆ ಅಡ್ಡವಾದೆವೇ?

-----ಅಕುವ

ಗೂಡು ಮರೆಯುವ ಮುನ್ನ


ಗೂಡು ಮರೆಯುವ ಮುನ್ನ


ನಳನಳಿಸಿದ ವನದಲಿ ಲೀಲಾಜಾಲ
ಪಾದಗಳೋಡಿದ ನದಗಳ ಬೀಡಿಗೆ
ಜುಳು ಜುಳು ನದಿಗಳ ಸರಸದ ವೇಗಕ್ಕೆ
ತುಂಬಿದೆ ಉತ್ಸದ ಕಂಪು .

ಹಕ್ಕಿ ಗೂಡಲ್ಲಿ ಇಲ್ಲ, ಪ್ರತಿ ವರುಷ ಕೇವಲ
ದಿನದ ನೆಪ ಮಾತ್ರ  ಹಾರಾಲಾಗದೆ
ದೃಷ್ಟಿ ಕ್ಷೀಣವೋ ಮರೆವ ರೋಗವೋ
ಹಿಡಿಯ ತುಂಬದ ನೆನಪುಗಳು ಜಾರಿದ್ದವು !

ಹೊಸ ಮಣ್ಣು ತಂದು
ತೇಪೆ ಹಾಕಿದೆ ಗೂಡಿಗೆ ಇಂದು !
ಸುಣ್ಣ ಬಳಿದು ಶುದ್ಧ ಮಾಡಿದೆ
ಹಕ್ಕಿ ಮಾತ್ರ ಗೂಡಿಗೆ ಬಂದಿಲ್ಲ
ನಳ ನಳಿಸುವ ಉತ್ಸವ ಸಂಭ್ರಮ ಅದಕ್ಕಿಲ್ಲ
ಗೂಡು ಮರೆತಾಗಿದೆ ಹಕ್ಕಿ........
ಬಳಿದ ಸುಣ್ಣ ಮಂಕಾಗಿದೆ
ತಾಯ ಕಣ್ಣೀರಲಿ ಕದಡಿ ಹರಿದಿದೆ !

-ಅಕುವ

ಬೆಲ್ಲದ ಅಂಗಡಿ


 ಬೆಲ್ಲದ ಅಂಗಡಿ

ನೆನಪಿನ ಗರಿಗೆದರಿ ಕಣ್ಣು ಮಿಟುಕಿಸಿದಾಗ
ಪಕ್ಕನೆ ಹಾಯ್ದ ಕನಸು ಕಬ್ಬಿನಾಲೆ ಓಡಾಡಿದೆ
ರಸ್ತೆಯುದ್ದಕ್ಕೆ ಕಬ್ಬು ಸಿಗಿದು ರಸ ಉಂಡಿದ್ದು
ಕೋಣಗಳ ಗಾಣಕ್ಕೆ ಕಟ್ಟಿದ ಕೇಕೆ ನೆನಪು !

ಬೆಳ್ಳಂಬೆಳಗೆ ಸಿಹಿ ಕಳ್ಳು ಹೀರಿ ಉಪ್ಪಿನ ಕಾಯಿ ಚಪ್ಪರಿಸಿ
ಕಬ್ಬಿನ ಗದ್ದೆಗೆ ಕೊಯ್ಲಿಗೆ ಕಚ್ಚ ಕಟ್ಟಿ ನಿಂತದ್ದು
ಹತ್ತರ ಹೊತ್ತಿಗೆ ಗಂಜಿಯೊಡನೆ ಒಣ ಮೀನು ಚಟ್ನಿ
ಹೊತ್ತು ಕಬ್ಬು ರಾಶಿಗಳ ಗಾಣಕ್ಕೆ ಬಲಿಕೊಟ್ಟು ...!

ತೆಂಗಿನ ಗರಿಗಳ ನೇಯ್ದ ತಟ್ಟಿಗಳ ಚಪ್ಪರ
ಘಮಘಮಿಸುವ ಉರುಂಡೆ ಬೆಲ್ಲದ ಗೋಣಿ
ಮೂಗಿಗೆ ಬಡಿಯುತಿದ್ದ ಕಬ್ಬಿನ ಹಾಲಿನ ಉತ್ಕನನ
ಸಟ್ಟುಕೋಲಿನಿಂದ ಅಡಿಮೇಲಾಗುವ ಬೆಲ್ಲದ ರಸ

ಗಿರಿಯ ಪೂಜಾರಿಯ ದೊಡ್ಡ ಗಾಣದಲ್ಲಿ
ಉಂಡೆ ಕಟ್ಟುವ ಪುಂಡರು
ಬಿಸಿ ಬಿಸಿ ಬೆಲ್ಲವ ಸುರಿವಾಗ ಜೊಲ್ಲು ಬಿಟ್ಟು
ತಟ್ಟಿಹರಿದು ಬಿಸಿ ಬೆಲ್ಲ ನೆಕ್ಕುವ ನನ್ನ ಬೆರಳುಗಳು
ಎಲ್ಲಾ ಸಿಹಿ  ಅದು ಬೆಲ್ಲದ ಅಂಗಡಿ !.

---- ಅಕುವ

ಅನ್ವೇಷಣೆ


ಅನ್ವೇಷಣೆ

ದಿನಾ ಬೆಳಿಗ್ಗೆ ಬಾಲ್ಕನಿಗೆ ಮುಖಕ್ಕೊಟ್ಟು
ಈ ಕಾಗೆಯ ಕೂಗು
ಬಾಯಾರಿದೆ ಎಂದು ತಟ್ಟೆ ಇಟ್ಟರೆ
ಕೊಕ್ಕು  ಕುಕ್ಕಿಸಿ ಗುಟುಕು ಹೀರಿತು
ನಿಂತಿತಲ್ಲ ಅಂದರೆ ಮತ್ತೆ  ಅದೇ ಕಾಕಾ !
ಬಿಸ್ಕತ್  ಹುಡಿ ಮಾಡಿ  ತಿನ್ನು ಅಂದರೆ
ಹೆಕ್ಕಿ ತುಂಡು ಹಾರಿಸಿತ್ತು !.

ಮತ್ತೆ  ಮರುದಿನ  !
ಒಳಗೆ ನೋಡಿ ಕಿಟಕಿಯಲಿ ರಾಗ
ಏನೊ ಇರಬೇಕೆಂದು ಹುಡುಕಾಡಿದೆ
ಪಕ್ಕದ ಅಶೋಕ ಮರದಲಿ ಗೂಡು
ಇಣುಕುತಿತ್ತು ಸಣ್ಣ ಕೊಕ್ಕು ...
ಕಾಗೆಗೆ ಭಯ !
 
-ಅಕುವ

ಚಿರಂಜೀವಿ -ಕಥೆ



     ಚಿರಂಜೀವಿ

ಆ ದಿನ ಪತ್ರಿಕೆಯಲ್ಲಿ ಕಾಲೇಜು ವಿಶ್ವ ವಿದ್ಯಾಲಯಗಳ ಫಲಿತಾಂಶ ಪ್ರಕಟವಾಗಿತ್ತು. ಎಂದಿನಂತೆ ದಿನ ಪತ್ರಿಕೆಯ ಪುಟತಿರುವುತ್ತ ಅತ್ತ ಕಡೆ ಕಣ್ಣು ಹಾಯಿಸುತ್ತಿದ್ದ ಕಾಲೇಜು ತೃತೀಯ ವರ್ಷದ ರಾಜೇಶನ  ಕಣ್ಣಿಗೆ ಬಿದ್ದದ್ದು ಫಲಿತಾಂಶದ ವಿಜೇತರ ಪಟ್ಟಿಯ ಪಕ್ಕದಲ್ಲೇ ಹಾಕಿದ್ದ ವಿದ್ಯಾರ್ಥಿಯ ಆತ್ಮಹತ್ಯೆ ತಲೆಬರಹ. ಅದನ್ನು ಓದಿಮುಗಿಸಿದಾಗ ಆತನ ಕಣ್ಣು ತುಂಬಿ ನೀರು ಗಲ್ಲದ ಮೇಲೆ ತೊಟ್ಟಿಕ್ಕತೊಡಗಿದವು. ಒಂದೆಡೆ ತಮ್ಮ ಕಾಲೇಜಿಗೆ RANK ಬಂದ ಸಂತಸ, ಇನ್ನೊಂದೆಡೆ RANK ಪಡೆದ ವಿದ್ಯಾರ್ಥಿ ಅಜಯನ ಆತ್ಮಹತ್ಯೆಸುದ್ದಿ. ಅಜಯನ ಹೆಣದ ಮುಖವನ್ನಾದರೂ ನೋಡಬೇಕೆಂದು ಅವನ ಮನೆಯ ಕಡೆ ರಾಜೇಶ ನಾಗಾಲೋಟದಿ ಓಡಲಾರಂಭಿಸಿದ. ದಾರಿಯಲ್ಲೇ ಎಲ್ಲಾ ಗೆಳೆಯರಿಗೂ ಸುದ್ದಿಯನ್ನು ಮುಟ್ಟಿಸಿದೆನು. ಇನ್ನೂ ಒಂದೇ ಎರಡು ಗಳಿಗೆಯಲ್ಲಿ ಅಜಯನ ಹೆಣವು ಶ್ಮಶಾನದ ಕಡೆಗೆ ಹೊರಡಲು ಅನುವಾಗುತ್ತಿದ್ದಾಗ ರಾಜೇಶ ಮತ್ತು ಗೆಳೆಯರು ಬಂದಿದ್ದರು. ಮಗನನ್ನು ಕಳೆದುಕೊಂಡ ಆ ಮಮತೆಯ ಮೂರುತಿ ಅಜಯ್ ನ ಅಮ್ಮ ಗಿರಿಜಕ್ಕಳ ಕೂಗು ಮುಗಿಲು ಮುಟ್ಟಿತ್ತು , ಅಜಯನ ತಮ್ಮಂದಿರು, ಒಬ್ಬಳೇ ಒಬ್ಬ ತಂಗಿ ಸಂಜನಾಳಿಗೆ ದುಃಖ ತಡೆದು ಕೊಳ್ಳಲಾಗಲಿಲ್ಲ .ಇದನ್ನು ಕಂಡೇ ಸ್ನೇಹಿತರೂ ಕಣ್ಣೀರ ಕಡಲಲ್ಲೇ ಮುಳುಗಿದರು.
ಕಾಟದ ರಾಶಿಯ ಮೇಲೆ ತೇಜದ ಮುಖವನ್ನೊಂದಿದ ಆ ದೇಹವು ಕೆಲವೇ ಕ್ಷಣಗಳಲ್ಲಿ ಭಸ್ಮವಾಗಿ ಪಂಚಭೂತಗಳಲ್ಲಿ ಲೀನವಾಗಿತ್ತು. ರಾಜೇಶ್ ದುಃಖದ ಮಡುವಲ್ಲಿ ಕೊಚ್ಚಿಹೋದ !  ರಾಜೇಶ್ ಮತ್ತು ಅಜಯ್ ಇಬ್ಬರೂ ಕಾಲೇಜಿನಲ್ಲಿ ಅಂಟುಹಿಡಿದವರಂತೆ ಇದ್ದವರು.ರಾಜೇಶ್,  ಅಜಯ್ ನ ಮನೆಯ ಪರಿಸ್ಥಿಯನ್ನು ನೋಡಿದ್ದನು. ಕಡು ಬಡತನ. ಆದರೂ ತಾನು ಮುಂದೆ ಏನಾದರೂ ಸಾಧಿಸಬೇಕೆಂದಿದ್ದ ಅಜಯ್ ಯಾಕೀಗೆ ಮಾಡಿದನೆಂಬುದೇ ರಾಜೇಶನಿಗೆ ಚಿಂತೆ ಹತ್ತಿಸಿತ್ತು. ಆದರೆ ಅಜಯ್ ಅಷ್ಟರಲ್ಲೇ ದೂರವಾಗಿ ಎಲ್ಲೋ ನಿಂತು ಈ ಭೂಮಿಯನ್ನು ನೋಡುತ್ತಿದ್ದಾನೆ!. ಇನ್ನೇನ್ನಾದರೂ ಇದ್ದರೆ ಅವನಿದ್ದನೆಂಬ ಭಾಸ ಮಾತ್ರ! 
ಅಂದು ಕಾಲೇಜಿನಲ್ಲಿ ಅಜಯ್ ನ ಆತ್ಮಕ್ಕೆ ಶಾಂತಿ ಕೋರಿ ವಿದ್ಯಾರ್ಥಿ ಬಳಗ ಹೊರಬೀಳುತಿತ್ತು. ರಾಜೇಶ್ ಗೆ ಪ್ರತಿಯೊಂದು ವಿಷಯವನ್ನೂ ತಪ್ಪದೆ ಹೇಳುತಿದ್ದ ಅಜಯ್ ಏನು ಮುಚ್ಚಿಟ್ಟ ? ರಾಜೇಶ್ ಕಸಿವಿಸಿಗೊಂಡು ತಲೆ ಕೆರೆಯ ತೊಡಗಿದ. "ರಾಜೇಶ್ ಕೆಲವೊಮ್ಮೆ ನನಗೆ ಬದುಕೇ ಬರಡೆನಿಸುತ್ತದೆ, ಕೆಲವೊಮ್ಮೆ ನಾನು ಕಾಲೇಜು ಸೇರಿದ್ದೆ ತಪ್ಪೇನಿಸುತ್ತದೆ! ಎಲ್ಲಿಯಾದರೂ ಕೂಲಿ ನಾಲಿ ಮಾಡಬಹುದಿತ್ತು. ದರಿದ್ರ ನನ್ನ ತಲೆ ಮಂಕಾಗ ಬಾರದಿತ್ತೇ ? ದುಡಿದು ದುಡಿದು ಬೇಸತ್ತ ತಂದೆ ! ಒಮ್ಮೊಮ್ಮೆ ನನ್ನ ಬಾಳು ಕೊಳಕು ಯಾತನೆ ಎನಿಸುತ್ತದೆ" ಹೇಳುತಿದ್ದ ಅಮರ್ ನ  ಮಾತುಗಳು ಇನ್ನೂ ರಾಜೇಶನ ಕಿವಿಯಲ್ಲಿ ಹಾಗೆ ಉಳಿದುಹೋಗಿದೆ. "ವೇಬರನ ಸಿದ್ಧಾಂತ ಎಲ್ಲಾ ಕಲಿತು ಜೀವನ ರದ್ದಾಂತ ಆಗಿ ನನ್ನ ಬಾಳು ಶೂನ್ಯದಲ್ಲಿ ಕೊನೆಗೊಳ್ಳದಿದ್ದರೆ ಸಾಕು, ಕೆಲವೊಮ್ಮೆ ನನಗೆ ನಾನು ಉಸಿರಾಡುತ್ತೇನೋ ಇಲ್ಲವೋ ತಿಳಿಯುತ್ತಿರಲಿಲ್ಲ" ಇವೆಲ್ಲಾ ಅಜಯ್ ಹೇಳಿದ ಮಾತುಗಳು ರಾಜೇಶನ ಸ್ಮೃತಿ ಪಟಲದಲ್ಲಿ ಇನ್ನೂ ಅಚ್ಚು ಅಚ್ಚಾಗಿ ಮುದ್ರಿತವಾಗಿತ್ತು. ಏನೂ ಮಾಡಿದರೂ ಅಜಯ್ ನ ನೆನಪು ಮತ್ತೆ ಮತ್ತೆ ಮರುಕಳಿಸಿದವು.ಎಲ್ಲರೂ ಕೂಡಾ ಅಸಮಾಧಾನಗೊಂಡಿದ್ದರು ಅಜಯ್ ನ ಈ ಕೃತ್ಯದಿಂದಾಗಿ. "ಏಕಾದರೂ ಈ ರೀತಿ ಮಾಡಿದ ?" ಎಂದು ಹೇಳದವರೆಲ್ಲರೂ ಹೇಳಿ ಮುಗಿಸಿದ್ದರು. "ಯಾಕೆ ... ಸತ್ತ ? ಯಾಕೆ ಸತ್ತ? " . ಅಷ್ಟರಲ್ಲಿ ವಿನಯ ಪ್ರಿನ್ಸಿಪಾಲ್ ರೂಮಿಂದ ಒಂದು ಪತ್ರವನ್ನು ಹಿಡಿದು ಓಡುತ್ತಾ ಓಡುತ್ತಾ ರಾಜೇಶ ನಲ್ಲಿಗೆ ಬಂದಳು. "ಇದು ಅಜಯ್ ನಿನಗೆ  ಬರೆದ ಪತ್ರ , ಇವತ್ತು ರಿಜಿಸ್ಟ್ರೆಡ್ ಪೋಸ್ಟ್ ನಲ್ಲಿ  ಬಂದಿದೆ. "ಆ ಪತ್ರವನ್ನು ನನಗೆ ಕೊಡು, ಬೇಗ ಕೊಡು ,ಬೇಗ ಕೊಡು" ರಾಜೇಶ್ ನ ಕೈ ಕಾಲು ನಡುಗ ತೊಡಗಿದವು !  
ಅದು ಪೆಬ್ರುವರಿ ೧೪ ನೇ ತಾರೀಕು. ಬೇಗ ಎದ್ದು ರಾಜೇಶ್ ನನ್ನು ಕಾಲೇಜಿಗೆ ಕರೆಯಲು ಬಂದಿದ್ದ ಅಜಯ್ ಸೀದಾ ರಾಜೇಶನ ಬೆಡ್ ರೂಮ್ ಗೆ ಬಂದಿದ್ದ. ಇನ್ನೂ ಹೊದಿದ್ದ ಹೊದಿಕೆಯಲ್ಲೇ ಇದ್ದ. "ವಿನಯ ಪತ್ರ ಬೇಗ   ಕೊಡು ,ಕೊಡು" ಎಂದು ತಡವರಿಸುತ್ತಿದ್ದ ! ಮುಖಕ್ಕೆ ನೀರೆರಚಿದ್ದ ಅಜಯ್. ಒಮ್ಮೆಲ್ಲೆ ಎಚ್ಚೆತ್ತ ರಾಜೇಶ್ ಗಾಬರಿಯಿಂದ  ಎದ್ದು ಕುಳಿತ. ಕೈಕಾಲು ನಡುಗುತಿತ್ತು ,ಹೆದರಿದ ಕಣ್ಣುಗಳಿಂದ ಅಜಯ್ ನನ್ನು ದಿಟ್ಟಿಸಿದ. ಕಣ್ಣುಜ್ಜಿಕೊಂಡು ಖಚಿತವಾದ ಮೇಲೆ ಅಜಯ್ ನ ಸಮೀಪಕ್ಕೆ ಬಂದನು. ಒಮ್ಮೆ ಮುಟ್ಟಿ ಕೂಡಾ ನೋಡಿದ.  ತಾನು ಕಂಡಿದ್ದು ಕನಸು ಎಂದು ರುಜುವಾಗಿ  "ಅಹ್ಹ ಹ್ಹಹ ......." ನಗಲಾರಂಬಿಸಿ " ಅಜಯ್ ನೀನು ಬದುಕಿಬಿಟ್ಟೆ !" ಅಜಯ್ ತಬ್ಬಿಬಾದ ! "ಎನೋ ಇವತ್ತಿನ ಕನಸಿನಲ್ಲಿ ಏನು ನೋಡಿದ್ದೆ ? ನನ್ನನ್ನು ಸಾಯಿಸಿಲಿಲ್ಲ ತಾನೇ ?"  ಆಗಾಗಲೇ ಗೋಡೆ ಗಡಿಯಾರ ಎಂಟು ಬಾರಿ ಹೊಡೆದುಕೊಂಡಿತ್ತು. "ಎಲ್ಲಾ ನಿನಗೆ ಕಾಲೇಜು ಮುಟ್ಟಿದನಂತರ ಹೇಳ್ತೇನೆ, ಈಗ ಬೇಗ ಹೊರಡೋಣ "ಅಂತ   ಬಾತ್ ರೂಮ್ ಗೆ ಹೋದವನು ೫ದೇ ನಿಮಿಷದಲ್ಲಿ ತಯಾರಾಗಿದ್ದ. "ರಾಜ! ರಾಜ!" ಅಜ್ಜಿ ಕರೆದದ್ದು ಕೇಳಿ ರಾಜೇಶ್ "ಏನಜ್ಜಿ ? " "ಚಹಾ ಕುಡಿದು ಹೋಗಿ, ಮಕ್ಕಳೇ " ಅಂತ ಹೇಳಿ ಹಠಹಿಡಿದಳು. ಅಜ್ಜಿಗೆ ಮಣಿದ  ಇಬ್ಬರೂ ಗಬಗಬನೆ ತಿಂಡಿ ಮುಗಿಸಿ ಆಗಲೇ ಬಸ್ ಸ್ಟಾಂಡ್ ಕಡೆ ಶರವೇಗದಲ್ಲೆ ನಡೆದರು. ಶಾರದಾಂಬ ಬಸ್ಸು ಕಾಲೇಜು ಸ್ಟಾಂಡ್ ಗೆ ಬಂದಾಗಲೇ ವಿನಯ, ಶರತ್, ದೀಪಿಕಾ ಮತ್ತು ಜಾಹ್ನವಿ ಎದುರು ನೋಡುತ್ತಿದ್ದರು. 
ಕ್ಲಾಸು ಆರಂಭಕ್ಕೆ ಇನ್ನೂ ಮುಕ್ಕಾಲು ಗಂಟೆ ಬಾಕಿ ಇತ್ತು. ಮೇಪ್ಲವರ್ ಮರ ಆಗಾಗಲೇ ಚಿಗುರೆಲೆ ತುಂಬುತಿತ್ತು. ಮರದ ನೆರಳಲ್ಲಿ  ಆರೂ ಮಂದಿ ಕುಳಿತು ಸಂವಾದ ಶುರುವಾಯಿತು. ಅಜಯ್ ಶುರು ಹಚ್ಚಿದ "ರಾಜೇಶ್ ಮತ್ತೆ ಕನಸಿನಲ್ಲಿ ವಿನಯಳ ಹೆಸರು ತೆಗೆಯುತಿದ್ದ , ವಿನಯ ಇವತ್ತಾದರೂ ಇವನಿಗೆ  ನೀ ಪ್ರೊಪೊಸ್ ಮಾಡೆ ! ಹೇಗೊ ವೆಲೆಂಟೈನ್ ಡೇ ಕೂಡಾ !  ಏನ್ ಹೇಳ್ತೀಯಾ? " ವಿನಯ ನಾಚಿಕೆಗೊಂಡಳು. ಮನಸ್ಸಿನಲ್ಲಿ ಭಾವನೆ ಇದ್ರೂ ಕೂಡಾ  ಹೇಳಿಕೊಳ್ಳಿಲಿಕ್ಕೆ ಏನೋ ಭಯ. "ಮತ್ತೆ ಎನೋ ಪತ್ರ ಪತ್ರ ಹೇಳ್ತಿದ್ದ ! Love Letter ಅಲ್ಲಾ ತಾನೇ? " ಅಜಯ್   ರಾಜೇಶ್ ನನ್ನು ತರಾಟೆಗೆ  ತಕ್ಕೊಂಡಿದ್ದ. ರಾಜೇಶ್ "ಹೇಳ್ತೇನಪ್ಪ ! ಸ್ವಲ್ಪ ಸುಮ್ಮನಿರತ್ತೀರಾ? ಮೊದಲು ವಿನಯಳಿಗೆ ಪ್ರೋಪೊಸ್ ಮಾಡಲು ಹೇಳಿ ". ಅಂತು ಇಬ್ಬರೂ ಮನಸ್ಸು ಬಿಚ್ಚಿದ್ದು ಎಲ್ಲರಿಗೂ ಖುಷಿ ಕೊಟ್ಟಿತ್ತು. ಒಂದು ಚೆಂಗುಲಾಬಿಯ ವಿನಿಮಯ ಇಬ್ಬರ ಹೃದಯದ ಪ್ರೇಮಕ್ಕೆ ನಾಂದಿ ಹಾಡಿತು!. ರಾಜೇಶ್ ಕನಸನ್ನು ವಿವರಿಸಿದ. ಎಲ್ಲರೂ ನಕ್ಕು ನಲಿದಿದ್ದರು. ಪಕ್ಕದಲ್ಲಿಯೇ ಅಜಯ್ ಎದ್ದುಬಿದ್ದು ನಗುತ್ತಿದ್ದ. ಜಾಹ್ನವಿ ನಡುವೆ ಬಾಯಿ ಹಾಕಿ "ಅಲ್ಲಾ  ಪತ್ರ ಏನಾಯಿತೋ ?" ಶರತ್, ದೀಪಿಕಾ ಕೂಡಾ "ಎನಾಯಿತು ಪತ್ರದ ವಿಚಾರ? ಬೇಗ ಹೇಳು. ಅಷ್ಟರಲ್ಲಿ peon ಮಾರ್ಕ್ಸ್ ಓಡೋಡಿ ಬಂದ "ಪ್ರಿನ್ಸಿಪಾಲರು ನಿಮ್ ಆರು ಮಂದಿನ ಚೇಂಬರ್ ಗೆ ಕರೆದಿದ್ದಾರೆ " ನಾವು ಆರು ಮಂದಿಗೂ ನಡುಕ ಹುಟ್ಟಿತು. ಹೆದರುತ್ತಲೇ  ಪ್ರಿನ್ಸಿಪಾಲರ ಎದುರು ಹೋಗಿ ಒಂದೇ ಸಾಲಲ್ಲಿ ಅಪರಾಧಿಗಳ ನಿಂತಿದ್ದರು. ಎಲ್ಲರೂ ದೃಷ್ಟಿಯನ್ನು ನೆಲದ ಕಡೆ ಇರಿಸಿದ್ದರು. ಪ್ರಿನ್ಸಿಪಾಲ್ ಡೇಸರ ಕೈಯಲ್ಲೊಂದು ಅಂಚೆ ಲಕೋಟೆ ಇತ್ತು. ರಾಜೇಶ್ ಗೆ ಮತ್ತೆ ಕನಸಿನ ಲಕೋಟೆ ಕಾಣತೊಡಗಿತು. ಅಜಯ್ ಒಮ್ಮೆ ರಾಜೇಶ್ ಕಡೆ ನೋಡಿದ ! ತಬ್ಬಿಬ್ಬಾದರು! ಡೇಸರು ಶುರುವಾದರು "ನಮ್ಮ ಕಾಲೇಜು "ಮಲ್ಲಿಗೆ"ಗೆ ಅತ್ಯುತ್ತಮ ಮ್ಯಾಗಸಿನ್ ಪ್ರಶಸ್ತಿ ಬಂದಿದೆ . Congratulations to   all six of  you, for  this Success ". ಆರು ಮಂದಿಗೂ ಹೋದ ಜೀವ ಮರುಕಳಿಸಿದಂತಾಯಿತು !.ಮುಖವೆತ್ತಿ ಮುಗುಳ್ನಕ್ಕರು !  
              ---------   ಅಕುವ
೧೩/೧೧/೨೦೧೦



ದಿಬ್ಬಣ -ಕಥೆ


ದಿಬ್ಬಣ 

ಇಂದು, ಮುತ್ತು ಮಾತ್ರ ಎಲ್ಲಿಲ್ಲದ ಸಂತೋಷದಿಂದ ಪಡುಮನೆಯಲ್ಲಿ ಸಂಭ್ರಮದಿಂದ ತಿರುಗುತ್ತಿದ್ದಾಳೆ. ಎಲ್ಲಾ ನೆಂಟರಿಷ್ಟರೂ ತುಂಬಿಕೊಂಡು ಪಡುಮನೆಯಲ್ಲಿ ಯಾವುದೇ ಶುಭ ಸಂಭ್ರಮ ನಡೆಯುವ ರೀತಿಯಲ್ಲಿ ಕಾಣುತ್ತಿತ್ತು. ನಾಲ್ಕಾರು ಜನರು ಪಡುಮನೆಯ ಮೆಟ್ಟಿಲೇರಿ ಹೋಗುತ್ತಿದ್ದಾಗ ನಾನು ಅವರನ್ನು ವಿಚಾರಿಸಿದಾಗ "ಇಂದು ಮುತ್ತುವಿನ ಎರಡನೇ ಮಗಳು ಸುನೀತಳ ಮದರಂಗಿ" (ಮದುವೆಯ ದಿನದ ಹಿಂದಿನ ರಾತ್ರಿಯಲ್ಲಿ ಮದುಮಗ/ಳಿಗೆ ಮದರಂಗಿ ಇಡುವ ಸಮಾರಂಭ) ಎಂದಿದ್ದರು. "ಒಳ್ಳೆಯದಾಗಲಿ ಪಾಪ! ಮುತ್ತುವಿಗೆ ಗಂಡು ಮಕ್ಕಳ ಗುರಿಯಿಲ್ಲ,ನಡೆಯಲಿ ಶುಭ ಸಮಾರಂಭ ! ದೇವರು ಒಳ್ಳೆಯದು ಮಾಡಲಿ" ಎಂದು ನಾನು ಮುಂದೆ ನಡೆದೆ. ರಾತ್ರಿ ಸುಮಾರು ಹನ್ನೆರಡು ಗಂಟೆ ತನಕ ಪಡುಮನೆ ತುಂಬಾ ಗದ್ದಲ ತುಂಬಿತ್ತು. ಆಗ ಇನ್ನೂ ಕೂಡಾ ಕರೆಂಟ್  ಎಂಬುದು ಹೇರೂರಿನ ಮೆಟ್ಟಿಲು ಕೂಡಾ ತುಳಿದಿರಲಿಲ್ಲ.ಊರಿನಲೆಲ್ಲಾ ಸುದ್ದಿ ಹರಡಿತ್ತು ಮುತ್ತುವಿನ ತಮ್ಮ ತಮ್ಮಯ್ಯ ಈ ಮದುವೆಯನ್ನು ಮಾಡುತ್ತಿದ್ದಾನೆ. ಸುನೀತ ಕೂಡಾ ತನ್ನ ಮಾವ ಈಗಲಾದರೂ ನಮಗೊಂದು ಒಳ್ಳೆಯ ಕಾರ್ಯ ಮಾಡಲು ಹೊರಟಿದ್ದಾರೆ,ಎಂದು ಕೊಂಡು ತುಂಬಾ ಗೌರವದಿಂದ ಕಾಣುತ್ತಿದ್ದಳು.ಮುತ್ತುವಿನ ದೊಡ್ಡಮಗಳು ಸುನಂದ ಕೂಡಾ ತನ್ನ ಸಂಸಾರ ಸಮೇತ ಉಡುಪಿಯ ತನ್ನ ಗಂಡನ ಮನೆಯಿಂದ ಆಗಾಗಲೇ ಬಂದು ಎಲ್ಲಾ ಕಾರ್ಯಗಳ ಮೇಲುಸ್ತುವಾರಿ ತೆಗೆದು ಕೊಂಡಿದ್ದಳು. ಸುನಂದಳ ಗಂಡ ಭಾಸ್ಕರ ಬಂಗಾರದಂತಹ ಮನುಷ್ಯ ತನ್ನ ನಾದಿನಿಗೆ ಮದುವೆ ಮಾಡಬೇಕೆಂದು ಎಷ್ಟೆಲ್ಲಾ ಕಷ್ಟಪಟ್ಟು ಕೊನೆಗೊಂದು ವರನನ್ನು ಗೊತ್ತುಮಾಡಿ ಈ ಮದುವೆಗೆ ಇಳಿದಿದ್ದಾನೆ. ಆದರೆ ಗಂಡು ದಿಕ್ಕಿಲ್ಲದ ಮುತ್ತುವಿಗೆ ತನ್ನ ಅಳಿಯನೇ ಸರ್ವಸ್ವವಾಗಿದ್ದನು. ಅಳಿಯನಿಗೂ ಕೂಡಾ ಮಾವ ಬಾಬು , ಮುತ್ತು ಅತ್ತೆಯರನ್ನು ಕಂಡರೆ ಎಲ್ಲಿಲ್ಲದ ಗೌರವ. ಸುನಂದಳ ನಾಲ್ಕು ಮಕ್ಕಳು ಕೂಡಾ ಆ ಮಬ್ಬಾದ ಗ್ಯಾಸ್ ಲೈಟ್ ನ ಬೆಳಕಲ್ಲಿ ಆಡುತ್ತಿದ್ದರು. ಮಕ್ಕಳಿಗೆ ಮನೆಯಲ್ಲಿ ಸಂಭ್ರಮ ನಡೆಯುತ್ತಿದ್ದರೆ ಸರಿ ಖುಷಿಯೋ ಖುಷಿ. ಅಂತು ಸುಮಾರು ಒಂದು ಗಂಟೆ- ಎರಡು ಗಂಟೆಯ ಹೊತ್ತಿನ ಆಚೆ ಈಚೆ ಇರಬಹುದು, ಪಡುಮನೆಯ ಸುತ್ತ ಸ್ತಬ್ಥತೆ ಆವರಿಸಿತ್ತು. ನನಗನ್ನಿಸುತ್ತದೆ ನಾಳೆ ಬೆಳ್ಳಗ್ಗೆ ಬೇಗ ಏಳಬೇಕೆಂದು, ಎಲ್ಲರೂ ಮಲಗಿರಬೇಕು, ನಾನೂ ಸುಮ್ಮನಾದೆ, ನಾನು ನೀರವತೆಯನ್ನು ಅಪ್ಪಿಕೊಂಡು ವಾಸ್ತವದಲ್ಲಿ ಜಾರಿಹೋದೆ.

ಸುಮಾರು ನಾಲ್ಕು ಗಂಟೆ ಮುಂಜಾವು ಇರಬೇಕು, ಗೂಟದಲ್ಲಿ ಕಟ್ಟಿದ ಕೋಳಿ ಟಪ್ ಟಪ್ ಬಡಿದುಕೊಂಡು ಕೂಗತೊಡಗಿತು. ಅದರ ಆ ಗದ್ದಲಕ್ಕೆ ನಾನು ಎದ್ದೆ ಬಿಟ್ಟೆ! ನಾನು ಎಚ್ಚರವಾದದ್ದೆ ತಡ, ಮುತ್ತುವಿಗೆ ಎಚ್ಚರವಾಗಿರಬೇಕು ಎದ್ದು ಬಿಟ್ಟಳು! "ಎಷ್ಟೊಂದು ಸಣ್ಣ ಜೀವ , ಪಾಪ ಕೆಲಸಮಾಡಿ! ಮಾಡಿ ನೆಲಕ್ಕೆ ಬಾಗಿ ಹೋಗಿದ್ದಾಳೆ, ಆದರೂ ಇವಳ ಹುಮ್ಮಸ್ಸು ನೋಡು, ದೇವರು ಇವಳನ್ನು ಇನ್ನೂ ಚೆನ್ನಾಗಿ ಇಟ್ಟಿರಲಿ" ಎಂದುಕೊಂಡು ಮುತ್ತುವಿಗೆ ಇನ್ನೊಮ್ಮೆ ಹಾರೈಸಿದ್ದೆ. ನನ್ನ ಪರಿಚಯ ನಿಮಗೆ ಖಂಡಿತ ಇಲ್ಲ. ಯಾಕೆಂದರೆ ನಾನು ನಿಮಗೆ ಕಾಣುವುದೇ ಇಲ್ಲ, ಆದರೆ ನಾನು ನಿಮ್ಮೊಂದಿಗೆ ಕೂಡಾ ಇದ್ದೇನೆ, ಸದಾ ಇರುತ್ತೇನೆ, ನಿಮಗೆ ನಾನು ಕಳೆದ ಮೇಲೆ ಮಾತ್ರ ತಿಳಿಯುವುದು, ನಾನು ವರ್ತಮಾನ! ನಿಮಗೆ ನನ್ನನ್ನು ಪರಿಚಯಿಸುವುದರಲ್ಲಿ ನಾನು ಜಾರಿದ್ದೆ ನನಗೆ ತಿಳಿಯಲಿಲ್ಲ !. ಸುಮಾರು ಎಂಟು ಗಂಟೆ ಕಳೆದು ಎಂಟೂವರೆ ದಾಟಿದೆ, ಆಗಾಗಲೇ ಸುನೀತಳನ್ನು ಮದುಮಗಳಾಗಿ ಸಿಂಗರಿಸಿ, ಮೊಹೂರ್ತಶೇಷೆ ನಡೆಯುತ್ತಿತ್ತು, ನನಗೆ ನೆನಪಿದೆ ಗರಡಿ ಮನೆಯ ಕಳತ್ತೂರು ಮುದ್ದು ಪೂಜಾರಿಯವರು ಇಂತಹ ಕೆಲಸದಲ್ಲಿ ಯಾವಾಗಲೂ ಮುಂದಕ್ಕೆ, ಇಂದೂ ಕೂಡಾ ಅವರದೇ ಮುಂದಾಳುತ್ವ, ಮದುಮಗಳು, ಮಾವ ತಮ್ಮಯ್ಯ, ಅತ್ತೆ ಕಮಲಮ್ಮ, ಸುನಂದ, ಭಾವ ಭಾಸ್ಕರ, ಸಂಬಂಧಿಕರು, ಕುಟುಂಬಸ್ಥರು, ಊರಿನ ಗೃಹಿಣಿಯರು ಹೀಗೆ ಎಲ್ಲರೂ ತುಂಬಾ ಸಂತೋಷದಿಂದ ಅಕ್ಷತಾಶೇಷೆಯನ್ನು ಹಾಕಿ ಮದುಮಗಳನ್ನು ಹರಸಿದರು.ಪೋಸ್ಟು ಮ್ಯಾನ್ ರಾಗಣ್ಣ ಮೂರು ಸಿಡಿಮದ್ದನ್ನು ಎಸೆದರು, ಸಿಡಿಮದ್ದಿನ ಸದ್ದಿನೊಂದಿಗೆ ಗುರುದೇವರ ಆಶೀರ್ವಾದದೊಂದಿಗೆ ಸುನೀತಳ ದಿಬ್ಬಣ ಹೊರಟಿತ್ತು. ಇಡೀ ಹೇರೂರಿನ ಊರವರು ಎಲ್ಲರೂ ಒಟ್ಟಾಗಿದ್ದರು. ಇದಕ್ಕೆ ಇರಬೇಕು "ಬಡವನಿಗೆ ಜನಬಲ, ಶ್ರೀಮಂತನಿಗೆ ಹಣಬಲ,ಅನ್ನುವುದು ಬಲ್ಲವರು!. ಹಾಗೆ ನೆರೆದಿತ್ತು ಜನಸಮೂಹ. ಅಂತು ದಿಬ್ಬಣ ಹೇರೂರಿನ ಕಟ್ಟಪುಣಿಯ ತುಂಬಾ ಭಾರಿ ಮೆರವಣಿಗೆಯಂತೆಯೇ ಸಾಗಿತ್ತು. ನಾನು ಈಗ ಮದುಮಗಳೊಂದಿಗೆ ಇದ್ದೇನೆ. ಅವಳ ಮುಖದ ತುಂಬಾ ಸಂತಸ ಅರಳಿತ್ತು!. ಹೆಣ್ಣಿಗೆ ಮದುವೆಯೆಂಬುದು ಒಂದೇ ಸಲ! ಅವಳು ಯೋಚಿಸಿರಬೇಕು ನನಗೆ ಬೆಳಕಾಗಿ ಬರುವ ಪ್ರಿಯತಮನೊಡನೆ,ನಾನು ಮೆರೆಯಬೇಕೆಂದು!.ತಪ್ಪಲ್ಲ ಎಲ್ಲಾ ಹೆಣ್ತನವು ಯೋಚಿಸುವುದು ಇದನ್ನೇ, ಅದೂ ಕೂಡಾ ತುಂಬಾ ಕರಾಳ ದಿನಗಳನ್ನು ಕಂಡಿದ್ದ ಸುನೀತಳಲ್ಲಿ ಕೆಲವೊಮ್ಮೆ ನನಗೆ ಈ ಜನ್ಮದಲ್ಲಿ ಮದುವೆ ಇದೆಯೋ, ಇಲ್ಲವೋ ಎಂಬ ಗೊಂದಲಗಳು ಕೂಡಾ ಎಬ್ಬಿಹೋಗಿದ್ದವು. ಕಿತ್ತು ತಿನ್ನುತಿರುವ ಬಡತನ. ಆಗ ಯಾವ ಬಂಧುವೂ ಇಲ್ಲ, ನೆಂಟರೂ ಇಲ್ಲ, ಕುಟುಂಬಸ್ಥರೂ ಇಲ್ಲವೇ ಇಲ್ಲ! ಸುನೀತ ಕೆಲವೊಮ್ಮೆ ನಾನು ಯಾಕೆ ಹೆಣ್ಣಾಗಿ ಹುಟ್ಟಿದೆ, ಗಂಡಾಗಿ ಹುಟ್ಟಬಾರದಿತ್ತೇ ? "ಇವೆಲ್ಲವನ್ನು ಅನುಭವಿಸುವುದೂ ಕೂಡಾ ಒಂದು ಜನ್ಮವೇ, ಇದಕ್ಕಿಂತ ನಾಯಿ ಜನ್ಮವೇ ಲೇಸು" ಎಂದು ಕೊಂಡಿದ್ದ ದಿನಗಳೂ ಕೂಡಾ ಉಂಟು. ಅದು ನನಗೆ ಮಾತ್ರ ತಿಳಿದಿತ್ತು! ಆದರೆ ಈಗ ಅದು ವರ್ತಮಾನವಲ್ಲ! ನಾನು ಸುಳಿಯುತ್ತಲೇ ಇದ್ದೇನೆ ಸುನೀತಳ ಸುತ್ತ ಆದರೆ ಆಕೆಯ ಮುಖದಲ್ಲಿ ಯಾವತ್ತು ಕಾಣದ ನಗುವಿನ ಗೆರೆಯೊಂದು ಕಾಣುತಿತ್ತು ತುಂಬಾ ಸಂತಸದಿಂದ ಹೆಜ್ಜೆ ಹಾಕಿ ಮುನ್ನಡೆದಿದ್ದಳು ಮದುಮಗಳಾಗಿ ಸುನೀತ. ಮತ್ತೊಮ್ಮೆ ಮುತ್ತುವಿನ ಬಳಿ ಹೋದೆ !ಇತ್ತ ಮುತ್ತು ತುಂಬಾ ಸಂಭ್ರಮದಿಂದ ತಯಾರಾಗಿದ್ದಳು, ಬಾಬು ಕೂಡಾ ತುಂಬಾ ರಾಜಮರ್ಜಿಯಲ್ಲಿಯೇ ತಮ್ಮ ಮಗಳನ್ನು ಧಾರೆಯೆರೆದು ಕೊಡುವ ಆತುರದಲ್ಲಿ ನಡೆಯುತ್ತಿದ್ದರು. ಹಿಂದಿನಿಂದ ಸುನಂದ ತನ್ನ ನಾಲ್ಕು ಮಕ್ಕಳೊಂದಿಗೆ ಪತಿ ಭಾಸ್ಕರನೊಂದಿಗೆ ಹೆಜ್ಜೆ ಹಾಕುತ್ತಿದ್ದಾಳೆ, ಆ ಹೆಜ್ಜೆಯ ಮೆರೆಗೇ ಬೇರೆಯಾಗಿತ್ತು !

ಅಷ್ಟರಲ್ಲೇ ನಾನು ದಿಬ್ಬಣ ಸಮೇತ ಬನ್ನಂಜೆಯ ಕಲ್ಯಾಣ ಮಂಟಪವನ್ನು ಸೇರಿ ಆಗಿತ್ತು. ೧೦.೧೫ರ ಮೊಹೂರ್ತಕ್ಕೆ ಸರಿಯಾಗಿ ಮದುಮಗಳು ಬಂದು ಇಳಿದಾಗಿತ್ತು,ಆಗಲೇ ಬಂದಿದ್ದ ವರನ ಕಡೆಯ ಸುಮಂಗಲೆಯರು ಮದುಮಗಳನ್ನು ಶಾಸ್ತ್ರೋಕ್ತವಾಗಿ ಬರಮಾಡಿಕೊಂಡರು.ಕಲ್ಯಾಣಮಂಟಪಕ್ಕೆ ಕರೆದೊಯ್ದ ಮದುಮಗಳಿಗೆ ಧಾರೆಸೀರೆಯನ್ನು ಹಸ್ತಾಂತರಿಸಲಾಯಿತು. ಇನ್ನು ನನಗೆ ಮಾತ್ರ ಬಿಡುವು. ಇನ್ನು ಮದುಮಗಳು ಧಾರೆ ಸೀರೆ ಉಟ್ಟು ಬರುವಾಗ ಒಂದು ಅರ್ಧ ಗಂಟೆಯಾದರೂ ತಗಲುತ್ತಿತ್ತು. ಹಾಗೆ ನನ್ನ ಸವಾರಿಯನ್ನು ಗಂಡಸರು ನಿಂತುಕೊಂಡು ಗುಂಪಾಗಿ ಚರ್ಚಿಸುತ್ತಿದ್ದ ಕಡೆ ನಾನು ಬೆಳೆಸಿದೆ. ಭಾಸ್ಕರ, ತಮ್ಮಯ್ಯ, ಮುದ್ದಣ್ಣ ಇವರು ಮೂವರನ್ನು ಬಿಟ್ಟರೆ ಉಳಿದವರೆಲ್ಲಾ ಗಂಡಿನ ಕಡೆಯವರು, ಅಷ್ಟರಲ್ಲೇ ತಲೆಗೆ ಬಾಸಿಂಗ ತೊಟ್ಟ ಮದುಮಗ ಕೂಡಾ ಅಲ್ಲಿಗೆ ಬಂದು ಸೇರಿದ್ದ. ಅಷ್ಟರಲ್ಲಿಯೇ ನನಗೆ ತಿಳಿಯಿತು ಇದು ಏನೂ ವಿಷಯ ಗಂಭೀರವಾದುದೆ ಎಂದು. ಆದರೂ ಏನೂ ಮಾಡುವುದು ನಾನಾಗಿ ಕೇಳುವ ಹಾಗಿಲ್ಲ, ನೋಡುವ !ಎಂದು ಕಾಯುತ್ತಾ ಕುಳಿತೆ. ಮದುಮಗನನ್ನು ಕುರಿತು ಅವನ ಕಡೆಯವರು "ಲಕ್ಷ್ಮಣ, ಅವರು ಹಣವನ್ನು ಪೂರ್ತಿಯಾಗಿ ತರಲಿಲ್ಲ" ಎಂದದ್ದು ಕೇಳಿಸಿಕೊಂಡೆ. ಈಗ ನನಗೆ ಖಾತ್ರಿಯಾಯಿತು ಇದು ವರದಕ್ಷಿಣೆಯದ್ದೇ ವಿಷಯ. ಆವಾಗ ಅಲ್ಲಿಗೆ ಭಾಸ್ಕರ ಬಂದು ಸಮಾಧಾನ ಪಡಿಸಿದ, ಭಾಸ್ಕರ ಲಕ್ಷ್ಮಣನಿಗೆ ಏನೋ ಹೇಳುತ್ತಿದ್ದ. ಲಕ್ಷ್ಮಣನೂ ಕೂಡಾ ತಲೆ ಅಲ್ಲಾಡಿಸಿ, ಒಳಗೆ ನಡೆದು ಅಗ್ನಿ ಹೋಮದ ಮುಂದೆ ಕುಳಿತು ಪೂಜೆಗೆ ತಯಾರಾದ.ವಧುವು ನವ ಸೀರೆಯೊಂದಿಗೆ ಅಗ್ನಿ ಹೋಮದ ಮುಂದೆ ಬಂದು ಆಸೀನಳಾದಳು.ಭಟ್ರು ಗಟ್ಟಿ ಮೇಳ ! ಅಂದದ್ದೇ ತಡ ಲಕ್ಷ್ಮಣ ಸುನೀತಳಿಗೆ ತಾಳಿಯನ್ನು ಕಟ್ಟಿದ್ದ! ಇನ್ನೇನೊ ನವ ವಧು - ವರರು ಹಿರಿಯರ ಆಶೀರ್ವಾದಕ್ಕಾಗಿ ಮಾವ ತಮ್ಮಯ್ಯನನ್ನು ಹುಡುಕುತ್ತಿದ್ದಾಗ ತಮ್ಮಯ್ಯ ಮತ್ತು ಕಮಲಮ್ಮ ಅಲ್ಲಿಂದ ಮಾಯವಾಗಿದ್ದರು!ಯಾಕಿರಬಹುದು? ನಾನು ಕೂಡಾ ತುಂಬಾ ಯೋಚಿಸತೊಡಗಿದೆ. ಆದರೆ ಉತ್ತರ ಹೊಳೆಯಲೇ ಇಲ್ಲ! ನನಗೆ ತುಂಬಾ ಗಾಬರಿಯಾಯಿತು. ಇದರಲ್ಲೇನೋ ಆಟ ಇದೆ! ಎಂದು ನಾನು ಮದುವೆಯ ಮಂಟಪ ತೊರೆದು ತಮ್ಮಯ್ಯನ ಬೆನ್ನು ಹಿಡಿಯುವ ಯೋಚನೆ ಮಾಡಿದ್ದೆ! ಆದರೆ ನನ್ನ ಮನಸ್ಸು ತಡೆಯಲಾಗಲಿಲ್ಲ! ನಾನು ಅಲ್ಲೇ ಉಳಿದು ಬಿಟ್ಟೆ !ಲಕ್ಷ್ಮಣ ಬಂದು ಭಾಸ್ಕರನೊಂದಿಗೆ ಮಾತುಕತೆ ನಡೆಸಿರಬೇಕು. ಸುನಂದಳ ಕಣ್ಣಲ್ಲಿ ನೀರು ಆಗಲೇ ಇಳಿದಿತ್ತು! "ಬಡವರನ್ನು ದೇವರು ಪರೀಕ್ಷಿಸುವ ರೀತಿಯೋ ಇದು" ಎಂದು ನಿಟ್ಟುಸಿರು ಬಿಟ್ಟಿದ್ದಳು. ಮುತ್ತು, ಮದುಮಗಳಿಗೂ ಕೂಡಾ ವಿಷಯ ತಿಳಿದಿರಬೇಕು ಅವರು ಆಳುತ್ತಿದ್ದಳು! ನಾನು ಅಸಹಾಯಕನಾಗಿ ನಿಂತಿದ್ದೆ! ಇಂತಹ ಸಂಭ್ರಮದ ಹೊತ್ತಲ್ಲಿ ಈ ದುಃಖವೇ? ನನಗೆ ತುಂಬಾ ಬೇಸರವಾಗಿತ್ತು. ಆದರೂ ಕೂಡಾ ನಾನು ನಿಸ್ಸಹಾಯಕನಾಗಿದ್ದೆ!. ಸುನೀತಳನ್ನು ದುಃಖದಲ್ಲಿಯಲ್ಲಿಯೇ ಬೀಳ್ಕೊಡಲಾಯಿತು. ಮುತ್ತು, ಬಾಬು,ಸುನಂದ ಮತ್ತು ಭಾಸ್ಕರ ತುಂಬಾ ಚಿಂತೆಯಲ್ಲೇ ಮುಳುಗಿಹೋದರು.  

ನಾನು ಸೀದಾ ಪ್ರಯಾಣ ಪಡುಮನೆಗೆ ಬೆಳೆಸಿಬಿಟ್ಟೆ. ಸುಮಾರು ಆರು ಗಂಟೆ ಸಮಯವಾಗಿರಬೇಕು.ಗಂಡನ ಮನೆಗೆ (ವರನ ಮನೆಗೆ) ಹೋಗಿದ್ದ ಮದುಮಗಳು ಮನೆಗೆ ವಾಪಾಸ್ಸು ಬಂದಿದ್ದಳು.ಗಂಜಿ ಅಂಬಲಿ ಇದ್ದಿಲು ಬಟ್ಟಲಲ್ಲಿ ಹಿಡಿದುಕೊಂಡು ಮುತ್ತು ಮದುಮಗಳ ದೃಷ್ಠಿ ತೆಗೆಯಲು ಎದುರಾದಳು. ನೆರೆಹೊರೆಯವರೆಲ್ಲಾ ಬಂದಿದ್ದರು ಮದುಮಗಳನ್ನು ನೋಡಲು, ಈಗ ಮಾತ್ರ ನನಗೆ ಒಂದು ವಿಷಯ ತಿಳಿದಾಗಿತ್ತು! ಸುನೀತಳನ್ನು ಬರಮಾಡಿ ,ಮಕ್ಕಳನ್ನು ಸಂತೈಸಿ ಕೊಳ್ಳುತ್ತಿದ್ದ ಸುನಂದಳ ಕಿವಿಗೆ ಒಂದು ಆಘಾತಕಾರಿ ಸುದ್ದಿ ಬಿತ್ತು. ಒಡನೆ ಸುನಂದ ಮಾವ ತಮ್ಮಯ್ಯನ ಮನೆಗೆ ಹೋದಳು. ಅವಳಲ್ಲಿ ಅಷ್ಟೊಂದು ತಡೆದು ಕೊಳ್ಳುವ ಸಹನೆ ಇರಲಿಲ್ಲ!.

ಈಗಾಗಲೇ ನನಗೆ ಇಷ್ಟು ವಿಷಯ ಮಾತ್ರ ಚೆನ್ನಾಗಿ ತಿಳಿದಿತ್ತು.ಗಂಡು ದೆಸೆ ಇಲ್ಲದ ಮುತ್ತುವಿಗೆ ಬೊಂಬಾಯಿಯಲ್ಲಿದ್ದ ಅವಳ ಹಿರಿಯಕ್ಕನ ಮಕ್ಕಳು, ಕಿರಿಯಕ್ಕಳ ಮಕ್ಕಳು ಮದುವೆಗೆ ಸಹಾಯ ಮಾಡುವುದಾಗಿ ಭರವಸೆ ಕೊಟ್ಟು ಹೋಗಿದ್ದರು. ಬೊಂಬಾಯಿಗೆ ತಮ್ಮಯ್ಯ ಹೋಗಿ ನಲ್ವತ್ತು ಸಾವಿರ ರೂಪಾಯಿ ಒಟ್ಟು ಮಾಡಿದ್ದಾನೆ ಎಂಬ ಸುದ್ದಿ ತಿಳಿಯಿತು.ಮದುವೆಗೆ ಎರಡೋ ಮೂರೋ ದಿನ ಇರುವಾಗ ಬೊಂಬಾಯಿಂದ ಬಂದ ತಮ್ಮಯ್ಯ, ಹೋದದ್ದು ಹೆಚ್ಚು ಪ್ರಯೋಜನವಾಗಿಲ್ಲ ಎಂದು ಹೇಳಿ ಕೇವಲ ಇಪ್ಪತ್ತು ಸಾವಿರವನ್ನು ಮುತ್ತುವಿನ ಕೈಗೆ ಕೊಟ್ಟು ಇಷ್ಟೆ ಬೊಂಬಾಯಿಯಲ್ಲಿ ಒಟ್ಟಾದ ಹಣ ಅಂದಿದ್ದ. ಆಗಲೀ ಎಂದು ಮುತ್ತು ಮುಗ್ಧಳಾಗಿ ಹೆಚ್ಚು ವಿಚಾರಣೆಗೆ ಹೋಗದೆ ತಮ್ಮನ ಮೇಲಿನ ವಿಶ್ವಾಸದಿಂದ ಸ್ವೀಕರಿಸಿದ್ದಳು. ಇದಕ್ಕೆ ಸುದ್ದಿ ಹರಡಿದ್ದು ಮದುವೆ ತಮ್ಮಯ್ಯ ಮಾಡುವುದು ಎಂದು! ಆದರೆ ಈ ತಮ್ಮಯ್ಯ ಉಳಿದ ಇಪ್ಪತ್ತು ಸಾವಿರವನ್ನು ತನ್ನ ಜೇಬಿನಲ್ಲಿ ಇರಿಸಿಕೊಂಡು ಮದುವೆಗೆ ಬಂದಿದ್ದ!

ಅಲ್ಲಿ ಲಕ್ಷ್ಮಣನ ಕಡೆಯವರು ಅಂತಿಮ ವರದಕ್ಷಿಣೆಯ ಹಣವನ್ನು ಕೇಳಿದಾಗ ಅದರಲ್ಲಿ ಇಪ್ಪತ್ತು ಸಾವಿರದ ಕೊರತೆಯಾಗಿತ್ತು! ಗಂಡಿನ ಕಡೆಯವರು ಒಪ್ಪಲೇ ಇಲ್ಲ. ಮಾತುಕತೆಯಾಗುವಾಗ ತಮ್ಮಯ್ಯ ಕೂಡಾ ಒಟ್ಟಿನಲ್ಲೇ ಇದಿದ್ದ! ಮದುವೆ ನಿಂತು ಹೋಗುವ ಸಂಭವವೂ ಇತ್ತು! ಅಷ್ಟರಲ್ಲಿ ಭಾಸ್ಕರ ಲಕ್ಷ್ಮಣನಿಗೆ ಭರವಸೆಯನ್ನಿತ್ತು "ನಾಡಿದು ಹತ್ತು ಗಂಟೆಗೆ ನಿನ್ನ ಹಣ ಕೈ ಸೇರುತ್ತದೆ , ಮದುವೆ ಮಾತ್ರ ನಿಲ್ಲಿಸಬೇಡ " ಭಾಸ್ಕರ ಮಾನ ಉಳಿಸಿದ. ತಮ್ಮಯ್ಯನ ಇರಾದೆ ಮದುವೆಯನ್ನು ನಿಲ್ಲಿಸುವುದೇ ಅಗಿತ್ತೊ ಏನೋ ? ಆದರೆ ಅವನ ಲೆಕ್ಕ ತಲೆಕೆಳಗಾಗಿ ಹೋದವು. ಅವನು ಒಳಗಿಂದಲೇ ಕುದಿಯ ತೊಡಗಿದನು! ನಾನು ಆಗಲೇ ಎಣಿಸಿ ಕೊಂಡೆ ನಿನಗೂ ಕೂಡಾ ಇಬ್ಬರು ಹೆಣ್ಣು ಮಕ್ಕಳ್ಳಿದ್ದಾರೆ! ಅಲ್ಲಿ ಅವನಿಗೆ ಮುಖ ತೋರಿಸಲು ಆಗಲಿಲ್ಲ. ಆದ್ದರಿಂದ ಕೂಡಲೇ ಹೊರಟು ಬಿಟ್ಟು ಮನೆಯದಾರಿ ಹಿಡಿದಿದ್ದ. ಸೀದಾ ಮನೆಗೆ ಹೋಗಬಹುದಿತ್ತು! ಆದರೆ ಅವನ ಬಾಯಿಂದಲೇ ಅವನ ಕುಕೃತ್ಯ ಹೊರಬಿದ್ದದು ಹೇರೂರು ಗುತ್ತುವಿನ ಮನೆಯಲ್ಲಿ!. ಗುತ್ತುವಿಗೆ ಬಂದವನೇ ಜಗುಲಿಯಲ್ಲಿ ಕುಳಿತಿದ್ದ ಹಿರಿಯಣ್ಣ ಶೆಟ್ಟಿಗೆ "ಇಲ್ಲಿ ನೋಡಿ, ನನ್ನಲ್ಲಿ ಇಪ್ಪತ್ತು ಸಾವಿರ ರೂಪಾಯಿ ಇದೆ" ಎಂದು ಜೇಬಿನಲ್ಲಿದ್ದ ನೋಟಿನ ಕಂತೆಯನ್ನು ತೆಗೆದು ತೋರಿಸಿದ "ನಾನು ವರದಕ್ಷಿಣೆಗೆ ಈ ಹಣ ಕೊಡಲಿಲ್ಲ, ಅಲ್ಲಿ ಅವರಿಗೆ ವರದಕ್ಷಿಣೆಗೆ ಹಣ ಕಡಿಮೆ ಬಿತ್ತು, ನಾನು ಯಾಕೆ ಕೊಡಬೇಕು? ನಾನು ಬೊಂಬಾಯಿಗೆ ಹೋಗಿ ಈ ಹಣವನ್ನು ತಂದದ್ದು! ನಾನು ಹೋಗಿರದಿದ್ದರೆ ಅವಳಿಗೆ ಒಂದು ನಯ ಪೈಸೆ ಕೂಡಾ ಯಾರೂ ಕೊಡುತ್ತಿರಲಿಲ್ಲ. ಆ ಭಾಸ್ಕರನಿಗೆ ಒಂದು ಗತಿ ಕಾಣಿಸಬೇಕು" ಎಂದು ಹೇಳಿ ಪಡುಮನೆಯ ಕಡೆ ಹೊರಟಿದ್ದ. ಮತ್ತೂ ಬೇಸರವೆಂದರೆ ತಮ್ಮಯ್ಯನ ಹೆಂಡ್ತಿ ಕಮಲ ಕೂಡಾ  ಅವನೊಂದಿಗಿದ್ದು ಗಂಡನಿಗೆ  ವಿರೋಧದ  ಒಂದು  ಮಾತು ಆಡಲಿಲ್ಲ ! ಇಬ್ಬರು ಹೆಣ್ಣು ಮಕ್ಕಳ  ತಾಯಿಯಾಗಿ  ಅವಳ ಕರುಳು ಮರುಗಲಿಲ್ಲ!.

ಈ ವಿಷಯವನ್ನು ತಿಳಿದ ಮುತ್ತು ಅಳತೊಡಗಿದಳು.ಆದರೆ ಸುನಂದಳ ಸಿಟ್ಟು ನೆತ್ತಿಗೇರಿ ಹೋಯಿತು. ಸೀದಾ ಮನೆಗೆ ನುಗ್ಗಿ ಮಾವನನ್ನು ವಿಚಾರಿಸಿದಳು "ಮಾವ!  ನೀವೇನು ಅಷ್ಟು ಬೇಗ ಹೇಳದೆ ಕೇಳದೆ ಬಂದದ್ದು?" "ಏನಿಲ್ಲ! ತಲೆ ಸುತ್ತಿದ ಹಾಗಾಯಿತು!" ತಮ್ಮಯ್ಯ ಅಸಡ್ಡೆಯ  ಉತ್ತರ ಕೊಟ್ಟ. "ತಲೆ ಸುತ್ತದೆ ಮತ್ತೇನೋ, ಜೇಬಿನಲ್ಲಿ ಧರ್ಮದ್ದು ಇಪ್ಪತ್ತು ಸಾವಿರ ರೂಪಾಯಿ ಇರುವಾಗ ತಲೆಯೂ ಸುತ್ತುತ್ತದೆ, ನಿಮಗೆ ಸೀದಾ ಮನೆಯಲ್ಲಿ ಬಂದು ಕೂರ ಬಹುದಿತ್ತು, ಯಾಕೆ ಗುತ್ತುವಿನಲ್ಲಿ ಹಣವನ್ನು ತೋರಿಸಿ ಮೆಚ್ಚಿಸಿ ಬಂದದ್ದು....?" ಸುನಂದ ಅಳುತ್ತಿದ್ದಾಳೆ!  ಮತ್ತೆ ಮುಂದುವರಿದಳು "ಇದಕ್ಕಿಂತ ನಮ್ಮ ಕುತ್ತಿಗೆ ಹಿಡಿದು ಸಾಯಿಸಿ ಬರಬಹುದಿತ್ತು!" ತಮ್ಮಯ್ಯನ  ಒಂದೇ  ಒಂದು ಸ್ವರ ಕೂಡಾ ಬರಲಿಲ್ಲ. "ಬಡವರೆಂದು ನಮ್ಮನ್ನು ಈ ರೀತಿ ಮಾಡಬಾರದಿತ್ತು! ಇದು ನಿಮಗೆ ಖಂಡಿತಾ  ಒಳ್ಳೆಯದಾಗುವುದಿಲ್ಲ, ಮೇಲಿರುವ ದೇವರು ನಿಮ್ಮನ್ನು ನೋಡಿದರಾಯಿತು" ಎಂದು ಹೇಳಿ ದರದರನೆ ಅವರ ಮನೆಯಿಂದ ಹೊರನಡೆದಳು. ಈಗಲೂ ಆತ ಮಾಡಿದ ತಪ್ಪನ್ನು ಸರಿಪಡಿಸ ಬಹುದಿತ್ತು.ಅವನಿಂದ ಅದು ಸಾಧ್ಯವಾಗಲಿಲ್ಲ. ಬದಲಾಗಿ ತಮ್ಮಯ್ಯ " ಬಸ್ಸಿನವನ ಐದುಸಾವಿರ ರೂಪಾಯಿ ನನಗೆ ಕೊಡು" ಎಂದು ತಮ್ಮಯ್ಯ ಸುನಂದಳಲ್ಲಿ ಹಣ ಕೇಳಲು ಶುರುಮಾಡಿದ್ದ. ಆದರೆ ಈಗಾಗಲೇ ಕೈ ಖಾಲಿ ಮಾಡುಬಂದಿದ್ದ ಅವರು ಸಾವಿರವನ್ನು ತರುವುದಾದರೂ ಎಲ್ಲಿಂದ? ಅದಕ್ಕೆ ತಮ್ಮಯ್ಯನೇ ದಾರಿ ತೋರಿಸಿದ್ದ! "ಹಣವಿಲ್ಲ ಎನ್ನುವುದು ಬೇಡ! ಉಡುಗೊರೆ ಬಂದಿದೆಯಲ್ಲ ಅದರ ಕವರನ್ನು ಒಡೆದು ನನ್ನ ಹಣ ಕೊಡಿ, ಆ ಬಸ್ಸಿನವರು, ಹೂವಿನವರು ಕೇಳುವಾಗ ನನಗೆ ನಾಚಿಕೆಯಾಗುತ್ತದೆ" ಎಂದು ತಮ್ಮಯ್ಯ ತನ್ನ ಜಿಡ್ದು ಬಿಡಲಿಲ್ಲ. ಸುನಂದ ಎಲ್ಲಾ ಉಡುಗೊರೆ ತುಂಬಿದ್ದ ಪೆಟ್ಟಿಗೆಯನ್ನು ಅವರೆದುರು ದಡ ದಡ ಬಿಸಾಡಿ , " ಎಲ್ಲಾ ಕವರು ಹೊಡೆಯಿರಿ, ನಿಮ್ಮ ಐದುಸಾವಿರ ತೆಗೆದು ಕೊಂಡು ಹೋಗಿ , ಇಂದಿನಿಂದ ನಿಮಗೂ ನಮಗೂ ಯಾವ ಸಂಬಂಧನೂ ಇಲ್ಲ!" ಎಂದು ರೋಷದಿಂದಲೇ ಗದರಿದಳು. ತಮ್ಮಯ್ಯನ ಕಣ್ಣು  ಆಗಲಾದರೂ ತೆರೆಯಬೇಕಿತ್ತು !  ಆದರೆ  ನಾ  ಎನಿಸಿಕೊಂಡಂತೆ  ನಡೆಯಲಿಲ್ಲ.  ತಮ್ಮಯ್ಯ ನಿರ್ದಾಕ್ಷಿಣ್ಯವಾಗಿ ಉಡುಗೊರೆ ಬಂದ ಹಣದಲ್ಲಿ ಐದುಸಾವಿರ ಕೊಂಡು ಹೋದ. ಮುತ್ತು ಆಳುತ್ತಲೇ ಇದ್ದಳು.  ಆಳದೇ ಇನ್ನೇನೂ ಮಾಡುವಂತಿರಲಿಲ್ಲ!. ಸುನೀತ, ಭಾಸ್ಕರ ,ಮತ್ತು ಮಕ್ಕಳು ಈ ಘಟನೆಗೆ ಮೂಕ ಸಾಕ್ಷಿಯಾದರು. ಊರಿನವರು ನೋಡುತ್ತಲ್ಲೇ ಇದ್ದರು. ಯಾರು ಏನೂ ಮಾಡುವುದು ತಿಳಿಯದೇ ಹೋದರು. ನಾನೂ ಮೊದಲೇ ಮೂಕ ! ಕೇವಲ ದರ್ಶಕನಾಗಿದ್ದೆ. ಅಲ್ಲಿಂದ ಮುತ್ತು-ತಮ್ಮಯ್ಯನ ಸಂಸಾರದ ನಡುವೆ ಅನ್ನನೀರು ಸಂಪೂರ್ಣ ನಿಂತು ಹೋಗಿತ್ತು!.

ನನಗೆ ಈಗ ಮತ್ತೊಂದು ಯೋಚನೆ ಶುರುವಾಯಿತು. ಅಲ್ಲಿ ಭಾಸ್ಕರ , ಲಕ್ಷ್ಮಣನಿಗೆ ಮಾತು ಕೊಟ್ಟಿದ್ದಾನೆ.ಏನು ಮಾಡುತ್ತಾನೋ ಈತ ? ಅಂದುಕೊಂಡು , ಬೆಳಿಗ್ಗೆ ಬೆಳಿಗ್ಗೆ ಮತ್ತೆ ನಾನು ಪಡುಮನೆಗೆ ಬಂದೆ. ಭಾಸ್ಕರ ಮನೆಯಲ್ಲಿ ಕಾಣಿಸಲಿಲ್ಲ .ಸುಮಾರು ರಾತ್ರಿ ಎಂಟು ಗಂಟೆಯಾಗಿರಬೇಕು !  ಭಾಸ್ಕರ ಪಡುಮನೆಗೆ ವಾಪಸ್ಸಾಗಿದ್ದ ! ಮರುದಿನ ಎದ್ದವನೇ ಖಾಲಿ ಚಾ ಕುಡಿಯುತ್ತಲೇ, ಭಾಸ್ಕರ ಹೊರಟು ಹೋದ. "ಎಲ್ಲಿಗೆ? ಹೋಗ್ತಿರಾ? " ಸುನಂದಳ ಪ್ರಶ್ನೆಗೆ "ಉಡುಪಿ...." ಅಂತ ಹೇಳಿ ಮರುಮಾತಿಗೆ ಕಾಯದೆ ಹೊರಟೆಬಿಟ್ಟ.ಊರಲ್ಲಿ ಕಾಡ್ಗಚ್ಚಿನಂತೆ ಹರಡಿತ್ತು ತಮ್ಮಯ್ಯನ ದುಶೃಕತ್ಯದ ಸುದ್ದಿ. ಎಲ್ಲರೂ ಅವನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಸಂಜೆ ಐದುಗಂಟೆಯಾಗುತ್ತಲೇ ಭಾಸ್ಕರ ಬಂದ. ಅವನ ಮುಖದಲ್ಲಿ ಏನೋ ಸಮಾಧಾನದ ಕಳೆ ಕಂಡೆನು. ಸುನಂದ ಎದುರು ನೋಡುತ್ತಲೇ ಇದ್ದಳು. ಭಾಸ್ಕರನ ಕೊರಳಲ್ಲಿದ್ದ ಚಿನ್ನದ ಸರ ಮಾಯವಾಗಿತ್ತು! ಕೈಯಲ್ಲಿದ್ದ ಎರಡು ಉಂಗುರಗಳೂ ಕೂಡಾ ಮಾಯವಾಗಿದ್ದವು! ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ತೆಗೆದು ಕೊಂಡಳು ಸುನಂದ, ಅದರಲ್ಲಿ ಕಾರ್ಪೋರೇಶನ್ ಬ್ಯಾಂಕಿನ ಪೇಪರೊಂದು ಕಾಣಿಸುತ್ತಿತ್ತು. ಎಫ್ ಡಿ ಸರ್ಟಿಪಿಕೇಟ್ ಕ್ಯಾಂಸಲ್ ಆಗಿತ್ತು! ಸುನಂದಳ ಕಣ್ಣಲ್ಲಿ ನೀರು ಬಂತು! ನಾಲ್ಕು ಮಕ್ಕಳು ಅಪ್ಪ ಅಪ್ಪ ಅಂತ ಬಂದಿದ್ದರು .ಮನೆಯಲ್ಲಿ ಏನೂ ನಡೆಯುತ್ತಿದೆ ಎಂಬುದು ಅವರ ಬುದ್ದಿಗೆ ತಿಳಿಯದೇ ಹೋಯಿತು. ಅಂತು ಭಾಸ್ಕರ ಮಾರ್ಯಾದೆ ಉಳಿಸಿದ್ದ! 

ಈ ದಿನ ತಮ್ಮಯ್ಯನ ಮನೆಯ ಮುಂದೆ ಎಲ್ಲರೂ ಚಪ್ಪರ ಹಾಕುವುದರಲ್ಲಿ ನಿರತರಾಗಿದ್ದರು. ನನಗೆ ಆಮೇಲೆ  ತಿಳಿಯಿತು. ಇನ್ನು  ನಾಲ್ಕೆ ದಿನಗಳಲ್ಲಿ ತಮ್ಮಯ್ಯನ ಮೊದಲ ಮಗ ಶೇಖರನ ಮದುವೆ ಮನೆಯಲ್ಲಿಯೇ ನಡೆಯುತ್ತಿದೆ. ಶೇಖರ, ದಿನಕರ , ರಮೇಶ , ಸುರೇಶ ತಮ್ಮಯ್ಯನ ಗಂಡು ಮಕ್ಕಳು , ಜಯಂತಿ , ಗೀತಾ ಹೆಣ್ಣು ಮಕ್ಕಳು. ಈಗ ಮುತ್ತು ಮತ್ತು ತಮ್ಮಯ್ಯನ ನಡುವೆ ರಾಜಿ ಪಂಚಾಯಿತಿ ಆಗಿ  ಎರಡು ವರ್ಷಗಳು ಕಳೆದೇ ಹೋಗಿದ್ದವು. ತಮ್ಮಯ್ಯನ ಮನೆಯ ತುಂಬಾ ಸಂಭ್ರಮ ನಡೆಯುತಿತ್ತು. ಸುನೀತ ಕೂಡಾ ಬಂದಿದ್ದಳು. ಈಗಾಗಲೇ ಅವಳ ಮೂರು ತಿಂಗಳ ಮಗುವೊಂದು ತೀರಿ ಕೊಂಡಿತ್ತು. ಲಕ್ಷ್ಮಣ ಕೂಡಾ ಪಡುಮನೆಯಲ್ಲೇ ಇದ್ದಾನೆ. ಸುನಂದ ಭಾಸ್ಕರ ಮತ್ತು ಮಕ್ಕಳೂ ಕೂಡಾ ಮದುವೆಗೆ ಬಂದಿದ್ದಾರೆ. ಬಾಬು ಕೂಡಾ ಇದ್ದಾರೆ. ಎರಡೂ ಮನೆಯಲ್ಲಿ ಜನ ಮಂದಿ ತುಂಬಿ ಗಿಜಿ ಗಿಜಿ ಅನ್ನುತ್ತಿದ್ದಾರೆ ಬರುವ ಗುರುವಾರ ತಾನೇ ಮದುವೆ ತಮ್ಮಯ್ಯನ ಮನೆ ತುಂಬಾ ವಿಜೃಂಭಿಸುತ್ತಿದೆ. ಬುಧವಾರ ಬೆಳಿಗ್ಗೆ ಎಲ್ಲರೂ ಎದ್ದಿದ್ದರು. ಆದರೆ ಮುತ್ತು ಇನ್ನೂ ಕೂಡಾ ಮಲಗೇ ಇದ್ದರು. ಸುನೀತ ಬಂದು "ಅಮ್ಮ ಅಮ್ಮ ಹೊತ್ತು ಇಷ್ಟಾಯಿತು, ಏಳುವುದಿಲ್ಲವೇ ?" ಎಂದು ಕೈ ಹಿಡಿದು ಕುಲುಕಿದಳು. ಮುತ್ತು ಮಾತಾಡಲೇ ಇಲ್ಲ. ಒಮ್ಮೆಲೇ ಸುನೀತ ಚೀರತೊಡಗಿದಳು.ಅಷ್ಟು ಸಂಭ್ರಮದಿಂದ ಕೂಡಿದ್ದ ಪಡುಮನೆಯಲ್ಲಿ ಎಲ್ಲರೂ ಇದಕ್ಕಿದ್ದಂತೆ ಅಳತೊಡಗಿದರು. ಮುತ್ತು ಮಲಗಿದಲ್ಲಿಯೇ ಹೆಣವಾಗಿದ್ದಳು. ಪಡುಮನೆ ದುಃಖದಲ್ಲಿ ಮುಳುಗಿ  ಹೋಯಿತು .ಊರಿಗೆ ಊರೇ ಸೇರಿಕೊಂಡು ಅಂತ್ಯ ಸಂಸ್ಕಾರ ಮುಗಿಯಿತು. ತಮ್ಮಯ್ಯನ ಮಗನಿಗೆ ನಾಳೆ ಮದುವೆ, ತಮ್ಮಯ್ಯನಿಗೆ ದೇವರು ಒಡ್ಡಿದ ಪರೀಕ್ಷೆ! ತನ್ನ ಮಗನ ಮದುವೆಯ ಮಂಟಪದಿಂದ ಹೊರಗೆ ಉಳಿಯ ಬೇಕಾಯಿತು.ಗುರುವಾರ ಮದುವೆ ನಡೆಯುತಿತ್ತು!.ಪಡುಮನೆಯಲ್ಲಿ ಯಾರೂ ಬಂದಿರಲಿಲ್ಲ.ತಮ್ಮಯ್ಯ ಚಪ್ಪರದ ಹೊರಗೇ ಉಳಿದು ಹೋದ!.

ದೇವರು ಕಷ್ಟವನ್ನು ಕೊಡುತ್ತಾನೆ? ನಿಮ್ಮಲ್ಲಿ ನೀವೇ ಕೇಳಿ ಕೊಳ್ಳಿ ! ಅಲ್ಲ ದೇವರು ಪರೀಕ್ಷೆಗೆ ಒಡ್ಡುವಾಗ ಒಂದರ ಮೇಲೊಂದು ಪರೀಕ್ಷೆಯನ್ನು ತಂದೊಡ್ಡುತ್ತಾನೆ. ಮಗುವನ್ನು ಕಳೆದು ಕೊಂಡ ಸುನೀತಳಿಗೆ ಮೊತ್ರ ಕೋಶದ ಕಾಯಿಲೆ ಹಿಡಿದು ಕೊಂಡಿತ್ತು.ಲಕ್ಷ್ಮಣನ ದುರಾದೃಷ್ಟವೋ? ಮದುವೆಯಾದ ಎರಡೇ ವರ್ಷದಲ್ಲಿ ತನ್ನ ಎಲ್ಲಾ ಹಣ,ಸಂಪತ್ತನ್ನು ಆಸ್ಪತ್ರೆಯ ದಾರಿ ತೋರಿಸಿದ್ದ.ಅವಳ ಒಂದು ಮೊತ್ರ ಪಿಂಡ ಈಗ ನಿಷ್ಕ್ರಿಯವಾಗಿತ್ತು. ಈಗ ಸ್ವಲ್ಪ ಸುಧಾರಣೆಗೆ ಬಂದಿತ್ತು. ಆದರೂ ಗುಳಿಗೆ, ಇಂಜೆಕ್ಷನ್ ಗಳೂ ಮುಂದುವರಿಯುತ್ತಲೇ ಇದ್ದವು. ದೀಡಿರನೆ ಕೆಲವೊಮ್ಮೆ ನೋವಿನಿಂದ ಚೀರಿ ಕೊಳ್ಳುತ್ತಿದ್ದಳು. ಆದರೆ ಸುನೀತ ಈಗ ಹಾಸಿಗೆಯನ್ನು ಹಿಡಿದಿದ್ದಳು. ಬೇರೆ ದಾರಿಯಿಲ್ಲದೆ ಈಗ ಸುನಂದಳಿಗೆ ತಂಗಿಯ ಆರೈಕೆಗೆ ಉಡುಪಿಯಿಂದ ಬಂದು ಪಡುಮನೆಯಲ್ಲಿ ಉಳಿಯಬೇಕಾಯಿತು. ಅಪ್ಪನ ಜವಾಬ್ದಾರಿ ಕೂಡಾ ಅವಳ ತಲೆಯ ಮೇಲೆಯೇ ಇದ್ದಿತ್ತು. ಹೀಗೇಯೇ ಸುಮಾರು ಆರು ತಿಂಗಳು ಕಳೆದಿರಬೇಕು.ತಮ್ಮಯ್ಯನ ದೊಡ್ಡ ಮಗಳು ಜಯಂತಿಗೆ ಮದುವೆ ನಿಶ್ಚಯವಾಗಿತ್ತು .ನಾಲ್ಕು ಮಂದಿ ಅಣ್ಣಂದಿರಿದ್ದು ಕೂಡಾ ತಮ್ಮಯ್ಯ ಇಂದು ಬೊಂಬಾಯಿಗೆ ಹೊರಟಿದ್ದ ! ಮಗಳ ಮದುವೆಗೆ ಹಣ ಸಂಗ್ರಹಿಸಲು! .ತಂದೆಯ ಶಾಪದಿಂದಲೋ ಏನೋ ಅದೇ ಕಾಲಕ್ಕೆ ಎಲ್ಲರೂ ಕೈ ಖಾಲಿ ಮಾಡಿ ಕೂತಿದ್ದರು .ತಮ್ಮಯ್ಯ ಈಗ ಖಂಡಿತ ಎಣಿಸಿರಬೇಕು,ತಾನು ಹಿಂದೊಮ್ಮೆ ಇದೇ ರೀತಿ ಹಣಕ್ಕಾಗಿ ಬೊಂಬಾಯಿಗೆ ಬಂದದ್ದು ,ಆದರೆ ಆಗ ಕೇಳುವ, ಬೇಡುವ ಅವಶ್ಯಕತೆ ಇರಲಿಲ್ಲ!. ಆದರೆ ಈಗ ಅವನು ಬೇಡಲೇ ಬೇಕಿತ್ತು!.ವಿಷಯ ಯಾರಿಗೂ ತಿಳಿಯದಿರಲಿಲ್ಲ. ದಿಡೀರನೇ ಮಗಳ ಮದುವೆಯ ಮಾಡುವ ಪ್ರಸಂಗ ಅವನ ಪಾಲಿಗೆ ಬಂದೊದಗಿತ್ತು ! ತಮ್ಮಯ್ಯ ಈಗ ನಿಸ್ಸಾಹಾಯಕನಾಗಿದ್ದ. ಮಗಳನ್ನು ಮದುವೆ ಮಾಡಿ ಕೂಡಲೇ ಬೇಕಿತ್ತು. ಇಲ್ಲದಿದ್ದರೆ ಮಾರ್ಯಾದೆಯ ಪ್ರಶ್ನೆ ! ಕಮಲಮ್ಮ ಕೂಡಾ ಊರಿನಲ್ಲಿ ಯಾರಿಗೂ ಮುಖ ತೋರಿಸುತಿರಲಿಲ್ಲ !.

ನಾನು ಒಮ್ಮೆ ತಮ್ಮಯ್ಯನ ಮನೆಯಲ್ಲಿ ತಿರುಗಾಡುವಾಗ ಈ ವಿಷಯ ಕಿವಿಗೆ ಬಿತ್ತು. ಜಯಂತಿ ಆಗಲೇ ಎರಡು ತಿಂಗಳ ಗರ್ಭಿಣಿಯಾಗಿದ್ದಳು.ಅವಳನ್ನು ಮದುವೆಯಾಗುವ ಗಂಡು ಯಾವಾಗಲೂ ಅವಳಿಗೆ ಸಿಗಲು ಮನೆಗೆ ಬರುತ್ತಿದ್ದ. ಅವನೊಂದಿಗೆ ಈಕೆ ತಿರುಗಾಡಲು ಕೂಡಾ ಹೋಗುತ್ತಿದ್ದಳು. ಅವನಿಗೂ ಕೂಡಾ ವಿಷಯ ಗೊತ್ತಿತ್ತು. ಅವನು ಮದುವೆ ಮಾಡಿ ಕೊಡಿ, ನನ್ನ ಅಭ್ಯಂತರ ಏನೂ ಇಲ್ಲ. ನಾನು ಅವಳನ್ನು ಸ್ವೀಕರಿಸುತ್ತೇನೆ ಎಂದಿದ್ದ!. ಆದರೆ ಮದುವೆಯ ವಿಷಯ ಮಕ್ಕಳಲ್ಲಿ ಪ್ರಸ್ತಾಪಿಸಿದಾಗ "ನಾವು ಈಗ ತುಂಬಾ ನಷ್ಟದಲ್ಲಿದ್ದೇವೆ, ಬರುವ ದೀಪಾವಳೀಗೆ ಮಾಡುವ" ಎಂದು ಮುಂದಕ್ಕೆ ಹಾಕಿದ್ದರು.ವಿಷಯವನ್ನು ತಿಳಿಸಿದಾಗ ಕೂಡಾ ಮಕ್ಕಳು ಈ ರೀತಿ ನುಡಿದಿದ್ದು ಉಚಿತವೆನಿಸಿತ , "ಊರಿನ ಹೆಣ್ಣು ಮಕ್ಕಳಿಗೆಲ್ಲಾ ಹೇಳುತ್ತೀರಾ ?ಎಲ್ಲಾ ಸಭೆ ಸಮಾರಂಭಗಳಿಗೆ ಹೋಗುತ್ತೀರೆಂದು, ಆದರೆ ನಿಮ್ಮ ಮಗಳನ್ನು ಹದ್ದು ಬಸ್ತಿನಲ್ಲಿ ಇಡಲು ನಿಮ್ಮಿಂದ ಆಗಲಿಲ್ಲವೇ" ಈಗ ಖಂಡಿತ ಒಬ್ಬ ತಂದೆಯ ಮನಸ್ಸು ಖಂಡಿತ ನೊಂದಿರಲೇ ಬೇಕು!. ಮಗಳಿಗಾಗಿ ಅಲ್ಲದಿದ್ದರೂ ಪೊಳ್ಳು ಘನತೆಗಾಗಿ!.ನಾನು ಗಮನಿಸುತ್ತಲೇ ಇದ್ದೆ, ತಮ್ಮಯ್ಯ ಏನೋ ತನ್ನಷ್ಟಕ್ಕೆ ಅಂದು ಕೊಳ್ಳುತ್ತಿದ್ದ ,  "ನನ್ನಂತ ಪಾಪಿಗೆ ಇದೇ ಸರಿಯಾದ ಶಿಕ್ಷೆ, ಈಗ ದೇವ ನನ್ನ ಮಾರ್ಯಾದೆಯನ್ನು ಉಳಿಸಪ್ಪ!"

ಅಂತು ಬೇಡಿ ತಂದ ಹಣದಿಂದ ಮದುವೆಗೆ ದಿನ ನಿಶ್ಚಿತವಾಗಿತ್ತು. ಇಂದು ತಮ್ಮಯ್ಯನ ಮನೆಯಲ್ಲಿ ಮಗಳ ಮದುವೆಯ ಸಂಭ್ರಮಕ್ಕೆ ತಯಾರಿ ನಡೆಯುತಿತ್ತು. ಕಟಪಾಡಿ ದೇವಸ್ಥಾನದಲ್ಲಿ ಮದುವೆ. ಮದುವೆಗೆ ಬಂದಿದ್ದ ನೆಂಟರೆಲ್ಲರೂ ಸುನೀತಳನ್ನು ಕಾಣಲು ಪಡುಮನೆಗೆ ನಡೆದಿದ್ದರು.ಸುನೀತ ಮಂಚದ ಮೇಲೆ ಕುಳಿತು ಕೊಂಡಿದ್ದಳು. ತಾನು ಕೂಡಾ ಮದುವೆಗೆ ಬರುತ್ತೇನೆಂದು ಅಕ್ಕ ಸುನಂದಳಲ್ಲಿ ಹಠ ಮಾಡಿದ್ದಳು. ಲಕ್ಷ್ಮಣ ಕೂಡಾ ಅಲ್ಲೇ ಕೂತಿದ್ದ. ಸುನೀತ ಮೆಲ್ಲಗೆ ಸ್ವರದಲ್ಲಿ "ಏನ್ರೀ !ಏನ್ರೀ! ನಾನು ಕೂಡಾ ಮದುವೆಗೆ ಬರುತ್ತೇನೆ, ನನಗೆ ಜಯಂತಿಯ ಮದುವೆ ನೋಡಬೇಕೆಂದು ತುಂಬಾ ಆಸೆಯಾಗಿದೆ, ನಾವು ಟಾಕ್ಸಿ ಮಾಡಿ ಕೊಂಡು ಹೋಗುವ" ಎಂದು ಗಂಡನಲ್ಲಿ ಪ್ರಾರ್ಥಿಸಿದ್ದಳು. ಅಂತೂ ಸುನಂದಳ ಮಾತು ಕೂಡಾ ಕೇಳಲೇ ಇಲ್ಲ. ತನ್ನ ಧಾರೆ ಸೀರೆಯನ್ನುಟ್ಟು ಹಣೆಗೆ ಕುಂಕುಮವಿಟ್ಟು, ಬಲೆಯನ್ನು ತನ್ನ ಗಂಡನ ಕೈಯಲ್ಲಿ ಕೊಟ್ಟು "ನೋಡಿ ಇದನ್ನು ತೊಡಿಸಿ ನನ್ನ ಕೈ ನೋಯುತ್ತಿದೆ, ಸ್ವಲ್ಪ ಮೆತ್ತೆಗೆ ತೊಡಿಸಿ ನೋಡುವ" ಎಂದು ಲಕ್ಷ್ಮಣನ ಎದುರು ಕೈ ನೀಡಿದಳು. ತನ್ನ ಗಂಡನ ಮುಖವನ್ನೇ ನೋಡುತ್ತಿದ್ದಾಳೆ ಸುನೀತ. "ನಿಮ್ಮನ್ನು ಗಂಡನಾಗಿ ಪಡೆಯಲು ನಾನು ಎಷ್ಟು ಪುಣ್ಯ ಪಡೆದಿರಬೇಕು,ಕೇವಲ ಎರಡೇ ವರ್ಷದಲ್ಲಿ ನನಗೆ ಮಾಡಬಾರದ ಚಾಕರಿಯನ್ನೆಲ್ಲಾ ಮಾಡಿದಿರಿ, ಆದರೆ ಈ ಜನ್ಮದಲ್ಲಿ ಇನ್ನು ನಿಮ್ಮೊಂದಿಗಿರಲು ನನಗೆ ಭಗವಂತ ಮಾತ್ರ ಅಲ್ಪ ಆಯುಷ್ಯವನ್ನೇ ಕರುಣಿಸಿದ್ದಾನೆ.ನನ್ನನ್ನು ನೀವು ಕ್ಷಮಿಸಬೇಕು" ಎಂದು ಹೇಳುತ್ತಾ ಗಂಡನ ಎದೆಗೆ ಎರಗಿದಳು.ಸುನೀತಳ ಕಣ್ಣಲ್ಲಿ ನೀರು ತುಂಬಿತ್ತು.ಲಕ್ಷ್ಮಣ ಆಕೆಯ ತಲೆಯನ್ನು ಸವರಿ ಸಮಾಧಾನ ಪಡಿಸಿದ.

ಸುನಂದಮತ್ತು ಭಾಸ್ಕರ ಕೂಡಾ ತಯಾರಾದರು. ಬಾಬು ಕೂಡಾ ತಯಾರಾಗಿ ನಿಂತಿದ್ದರು.ಸುನಂದ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿವಳಿದ್ದಳು. ಜಯಂತಿಯ ದಿಬ್ಬಣ ಆಗಾಗಲೇ ಹೊರಡಿತ್ತು. ಪೋಸ್ಟ್ ಮ್ಯಾನ್ ರಾಗಣ್ಣ ಇಂದೂ ಕೂಡಾ ಸಿಡಿಮದ್ದು ಸಿಡಿಸಿದ್ದರು. ಸುನೀತ ಮನೆಯಂಗಳದಲ್ಲಿ ತುಳಸೀಕಟ್ಟೆಗೆ ಒಂದು ಸುತ್ತು ಬಂದು ತನ್ನ ತಾಳಿಗೆ ಗಂಧ ಪ್ರಸಾದವನ್ನು ಹಚ್ಚಿದಳು. ಇನ್ನೇನೊ ಮದುಮಗಳ ಕಾರು ಹೋಗಿ ಆಗಿತ್ತು.ತಮ್ಮಯ್ಯ ಮತ್ತು ಕಮಲಮ್ಮ ಹಿಂದಿನ ಕಾರಿನಲ್ಲಿ ಹೋಗುವುದೆಂದು ಹಿಂದೆ ಉಳಿದಿದ್ದರು. ಸುನೀತಳಿಗಾಗಿ ಮಾಡಿದ್ದ ಟ್ಯಾಕ್ಸಿ ಬಂದು ಹಾರ್ನ್ ಹಾಕುತ್ತಿತ್ತು. ಆದರೆ ದೈವಸ್ಥಾನದ ಮುಂದೆ ದೇವರಿಗೆ ಅಡ್ಡ ಬಿದ್ದಿದ್ದ ಸುನೀತ ಇನ್ನೂ ಕೂಡಾ ಎದ್ದಿರಲಿಲ್ಲ. ಲಕ್ಷ್ಮಣನಿಗೆ ಗಾಬರಿಯಾಯಿತು,ಓಡಿಹೋಗಿ ಎಬ್ಬಿಸಿದ್ದ. ಸುನೀತ ಮಾತನಾಡಲೇ ಇಲ್ಲ! ಕೂಡಲೇ ಡಾಕ್ಟರಿಗೆ ಪೋನು ಮಾಡಿದರು, ಪಡುಮನೆ ತುಂಬಾ ಮತ್ತೊಮ್ಮೆ ಬೊಬ್ಬೆ ಪ್ರಾರಂಭವಾಯಿತು.ಎಲ್ಲರೂ ಓಡಿ ಬಂದಿದ್ದರು.ದಿಬ್ಬಣದಲ್ಲಿದ್ದ ನಾಡಿ ವೈದ್ಯ ವಿಠಲ ಶೆಟ್ಟಿ ಕೈಯನ್ನು ಪರೀಕ್ಷಿಸಿದರು "ಏನೂ ಗಾಬರಿಯಿಲ್ಲ ನಾಡಿ ಸರಿಯಾಗಿ ಬಡಿಯುತ್ತಿದೆ" .ಅಷ್ಟರಲ್ಲೇ ಸುನೀತ ಕಣ್ಣು ತೆರೆದಿದ್ದಳು. ಎಲ್ಲರ ಮುಖದಲ್ಲಿ ಮತ್ತೊಮ್ಮೆ ನಗೆ ತುಂಬಿತ್ತು."ನಾನು ನಿಮ್ಮನ್ನು ಪರೀಕ್ಷಿಸಿದ್ದು " ಅಂದು ಕೊಂಡುನಕ್ಕಳು.ಗಂಡನ ತೊಡೆಯ ಮೇಲಿಂದ ಎದ್ದು ಮತ್ತೆ ದಿಬ್ಬಣದೊಂದಿಗೆ ನಡೆದಳು.ಡಾಕ್ಟರರಿಗೆ ವಾಪಾಸು ಪೋನು ಮಾಡಿ ಹೇಳಲಾಯಿತು.

ಈಗ ಟ್ಯಾಕ್ಸಿಯಲ್ಲಿ ಗಂಡನ ಎದೆಗೆ ತಲೆಯುಟ್ಟು ನಿದ್ರಿಸುತ್ತಿದ್ದಾಳೆ ಸುನೀತ ಪಕ್ಕದಲ್ಲಿ ಅಕ್ಕ ಸುನಂದ ಕುಳಿತಿದ್ದಾಳೆ. ಭಾವ ಭಾಸ್ಕರ ಮುಂದೆ ಕುಳಿತಿದ್ದಾನೆ. ತನ್ನ ಮಗ್ಗುಲು ಬದಲಾಯಿಸಿ ಅಕ್ಕನ ಹೆಗಲಲ್ಲಿ ತಲೆ ಇಟ್ಟು ಮಲಗಿ ಕೊಂಡಳು. ಸುನೀತ ಮಲಗಿರಲಿಲ್ಲ, ಕೇವಲ ಕಣ್ಣು ಮಾತ್ರ ಮುಚ್ಚಿ ಕೊಂಡಿದ್ದಳು. ಅಕ್ಕಳ ಸ್ಪರ್ಶದ ಕೊನೆಯ ಅನುಭವವನ್ನು ಅನುಭವಿಸಿ ಆನಂದಿಸಿದ್ದಳು." ದೇವರೇ ನನ್ನ ಪತಿ ಅಕ್ಕ ಭಾವ ಮಕ್ಕಳನ್ನೂ ಚೆನ್ನಾಗಿಟ್ಟಿರಪ್ಪ" ಎಂದು ಬೇಡಿ ಕೊಂಡಳು ಅಷ್ಟರಲ್ಲಿ ಕಟಪಾಡಿ ದೇವಸ್ಥಾನ ಬಂದಾಗಿತ್ತು. ಮದುಮಗಳ ಕಾರು ಆಗಾಗಲೇ ಮುಟ್ಟಿ , ಮೊರ್ತ ಶೇಷೆಯಾಗುತಿತ್ತು. ಟ್ಯಾಕ್ಸಿಯ ಬಾಗಿಲು ತೆರೆದು, ಇಳಿದು ಅಕ್ಕಳೊಂದಿಗೆ ಎರಡು ಹೆಜ್ಜೆ ಹಾಕಿದ ಸುನೀತ ಮುಗ್ಗರಿಸಿ ಬಿದ್ದು ಬಿಟ್ಟಳು. ಸುನಂದ "ಅಯ್ಯೋ ದೇವರೇ, ಸುನೀತ! ಸುನೀತ !" ಎನ್ನುವಷ್ಟರಲ್ಲಿ ಲಕ್ಷ್ಮಣ ಸುನೀತಳನ್ನು ಎಬ್ಬಿಸಲು ಪ್ರಯತ್ನ ಮಾಡಿದ, ಆದರೆ ಏನೂ ಪ್ರಯೋಜನವಾಗಲಿಲ್ಲ. ಸುನೀತ ಪರಲೋಕ ಸೇರಿ ಆಗಿತ್ತು. ಎಲ್ಲರೂ ಒಮ್ಮೇಲೆ ರಾಶಿ ಬಿದ್ದರು. ಮಾವ ತಮ್ಮಯ್ಯ, ಅತ್ತೆ ಕಮಲಮ್ಮ ಕೂಡಾ ಓಡಿ ಬಂದಿದ್ದರು.ಸುನಂದ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.ಭಾಸ್ಕರ ತನ್ನ ಕಣ್ಣನ್ನು ಸವರಿ ಕೊಂಡ.ಲಕ್ಷ್ಮಣನ ಕಣ್ಣಲ್ಲಿ ನೀರೂರಿತು.ತಮ್ಮಯ್ಯನ ಕಣ್ಣು ಕೂಡಾ ತೇವದಿಂದ ತುಂಬಿತ್ತು.ಸುನೀತ ಈಗ ಮುತ್ತೈದೆಯಾಗಿ ತನ್ನ ಗಂಡನ ತೊಡೆಯ ಮೇಲೆ ಚಿರ ನಿದ್ರೆಯಲ್ಲಿದ್ದಾಳೆ.ತಮ್ಮಯ್ಯ ತನ್ನ ಮಗಳಿಗೆ ಧಾರೆ ಎರೆಯುವ ಹಾಗೆ ಇರಲಿಲ್ಲ, ತನ್ನ ಭಾವ ಮತ್ತು ಹೆಂಡತಿಗೆ ಹೇಳಿ,ಸೊಸೆಯ ಶವಸಂಸ್ಕಾರಕ್ಕಾಗಿ ಪಡುಮನೆಗೆ ವಾಪಾಸ್ಸು ನಡೆದಿದ್ದ!. 

                                                                      --- ಅಕುವ

ಮಿಂಚು - ಕಥೆ


                                                           ಮಿಂಚು

ಅಂದು ಜನವರಿ ತಿಂಗಳ ಹದಿನೆರಡನೇ ತಾರೀಕು, ಬೆಳಗ್ಗೆ ಏಳುತ್ತಲೇ ನಮ್ಮ ಮನೆಗೆ ದಿನೇಶ ಹಾಜರಾಗಿದ್ದ!  "ಏನು, ಮಹಾರಾಯ, ಬೆಳಗ್ಗೆ! ಬೆಳಗ್ಗೆ! ಇವತ್ತು ಆದಿತ್ಯವಾರ ಕೂಡಾ ಇಲ್ವ ನಿಂಗೆ , ಸವಾರಿ ಏನು ಈ ಕಡೆ " ಎಂದು ಒಂದೇ ಉಸಿರಿಗೆ ಕೇಳಿಬಿಟ್ಟೆ.  "ಇವತ್ತು ತಾರೀಕು ಎಷ್ಟು? " ಪ್ರಶ್ನಿಸಿದ ದಿನೇಶ.  ಕ್ಯಾಲೆಂಡರ್ ಮೇಲೆ ಕಣ್ಣು ಹಾಯಿಸಿ, ಪಕ್ಕ ಮಾಡಿಕೊಂಡು "ಇವತ್ತು ಹನ್ನೆರಡಲ್ಲವೇ" ಅಂದು ಬಿಟ್ಟೆ. "ಅಬ್ಬಾ ಅಷ್ಟಾದರೂ ನೆನಪಿದೆಯಲ್ಲಾ!" ಎಂದು ನಿಟ್ಟುಸಿರು ಬಿಟ್ಟಿದ್ದ ದಿನೇಶ. "ಯಾಕೆ ಮಾರಾಯ ಒಗಟಾಗಿ ಮಾತಾಡುತ್ತೀಯಾ, ಏನು ಹೇಳಬೇಕು ನೇರವಾಗಿ ಹೇಳಿ ಬಿಡು , ನನಗೆ ಇನ್ನು ನಿದ್ದೆ ಬಿಟ್ಟಿಲ್ಲ" ಅಂತ ಕೇಳಿದೆ. "ಇವತ್ತು ಜೆಸಿಂತಳ ಬರ್ಥ್ ಡೇ ಅಲ್ಲವೇ ?" ಎಂದು ಪ್ರಶ್ನಾರ್ಥವಾಗಿ ಕೇಳಿದಾಗ ನಾನು ತಲೆ ಬಡಿದುಕೊಂಡು"ಛೇ ಛೇ ಮರತೇ ಬಿಟ್ಟಿದ್ದೆ ತುಂಬಾ ಒಳ್ಳೆದಾಯಿತು ನೆನಪಿಸಿದ್ದು ,ಸಂಜೆ ಹೋದರೆ ಆಯಿತು ತಾನೇ?" ನಾನು ಇನ್ನು ಕೂಡಾ ಉದಾಸೀನ ದಲ್ಲಿದ್ದೆ.  "ಅವರು ಅಲ್ಲಿ ಮಧ್ಯಾಹ್ನವೇ ಎಲ್ಲಾ ರೆಡಿಯಾಗಿ ನಿನ್ನನ್ನ ಹನ್ನೆರಡು ಗಂಟೆಗೆ ಬಾ ಏಂದು ಕರೆಯಲು ನನಗೆ ಪೋನ್ ಮಾಡಿದ್ದರು" ಎಂದು ಬಿಟ್ಟ. "ಹಾಗಾದರೆ ನೀವು ಈಗ ಹೋಗಿ ನಾನು ಬರುತ್ತೇನೆ, ನೀವು ಕೂಡಾ ಅಷ್ಟೊತ್ತಿಗೆ ಅಲ್ಲಿಗೆ ಬನ್ನಿ" ಎನ್ನುವಷ್ಟರಲ್ಲಿ ದಿನೇಶ್ " ನಾನು ಹೋಗುತ್ತೇನೆ" ಎಂದು ಕಾಳ್ಕಿತ್ತಿದ್ದ. ಅಂದು ಶನಿವಾರವಾಗಿತ್ತು. ಊರಿಗೆ ಹೋಗಿ ಬಂದಿದ್ದ ನಾನು ಇನ್ನೂ ಕೂಡಾ ಕೆಲಸಕ್ಕೆ ಸೇರಿರಲಿಲ್ಲ. ಸೋಮವಾರ ಸೇರಿದರಾಯಿತು ಎಂದು ಮನೆಯಲ್ಲಿಯೇ ಇದ್ದೆ. ಆಗ ನಾವು ನಾಲ್ಕು ಬ್ಯಾಚುಲರ್ಸ್ ಗಳು ಒಟ್ಟಿಗೆ ಇದ್ದದ್ದು. ನಮ್ಮ ರೂಮ್ ಬೊರಿವಲಿ ವೆಸ್ಟ್ ನಲ್ಲಿತ್ತು. ದಿನೇಶ ಕೂಡಾ ಬೊರಿವಲಿಯ ನನಗೆ ಹತ್ತಿರದಲ್ಲಿಯೇ ವಾಸಿಸುತ್ತಿದ್ದ. ಏನೂ  ಇದ್ದರೂ ನಾನು ಮತ್ತು ದಿನೇಶ್ ಒಟ್ಟಿಗೆ  ಹೋಗುವುದು ,ತರುವುದೆಲ್ಲಾ  ಇತ್ತು . ಸಂಡೇ ಕ್ರಿಕೆಟ್ ಆಡಲು ಎಲ್ಲೆಲ್ಲಿ  ಅಲೆದಾಡುತಿದ್ದೆವು.

ಜೆಸಿಂತ ಮೇರಿ ಆಂಟಿಯ ಮಗಳು. ಈ ಮೇರಿ ಯಾರು?  ಮೇರಿ ಸವಿತಳ ಚಿಕ್ಕಮ್ಮ. ಈ ಸವಿತ ಮತ್ತೆ ಯಾರೂ ಅಲ್ಲ ನನ್ನ ತಂಗಿ. ಸವಿತ ನನ್ನ ಒಡಹುಟ್ಟಿದ ತಂಗಿ ಅಲ್ಲ ನಾನು ಮತ್ತು ಸವಿತ ಎಂಟನೇ ತರಗತಿಯಿಂದ ಒಟ್ಟಿಗೆ ಕಲಿತವರು. ಅವಳು ಆಗಲಿಂದಲೇ ನನ್ನನ್ನು ಸಹೋದರನಾಗೇ ಕಾಣತಿದ್ದಳು. ಅದಕ್ಕಾಗಿ ಈ ಸಂಬಂಧ ನಾವು ಇಬ್ಬರೂ ದ್ವೀತಿಯ ಪಿ.ಯು.ಸಿ ತನಕ ಒಂದೇ ಕ್ಲಾಸಿನಲ್ಲಿ ಕಲಿತು ಪಾಸಾದವರು. ಬಬಿತ ಸವಿತಳ ಅಕ್ಕ, ಪ್ರಾಯದಲ್ಲಿ ನನಗೂ ಕೂಡಾ ಅಕ್ಕಳೇ, ಒಂದು ವರ್ಷ ಡುಮುಕಿ ಹೊಡೆದು , ದ್ವೀತಿಯ ಪಿ.ಯು.ಸಿ ಯಲ್ಲಿ ನಮ್ಮ ಕ್ಲಾಸಿನಲ್ಲಿಯೇ ಸಿಕ್ಕಿದ್ದಳು. ಅಂತಹ ಸವಿತ - ಬಬಿತ ಇಬ್ಬರೂ ಒಟ್ಟಿಗೆ ಹೋಗುತ್ತಿದ್ದರೆ ಅವಳಿ ಜವಳಿಯೆಂದೇ ಹೇಳಬೇಕಿತ್ತು. ಅಂತು ಸುಬ್ರಮಣ್ಯ ಜೋಡಿಯೊಂದಿಗೆ ಒಳ್ಳೆಯ ನಂಟು ಬೆಳೆದಿತ್ತು .ನಮಗೆ ಕಲಿಕೆಯಲ್ಲಿ ಪೈಪೋಟಿ ಹೇಳತೀರದು. ಒಮ್ಮೆ ಬಬಿತ ಪ್ರಥಮ , ಒಮ್ಮೆ ಸವಿತ ಮಗದೊಮ್ಮೆ ಪ್ರಥಮ ನಂತರದ ಸರದಿ ನನ್ನದಾಗಿತ್ತು. ಅಂತು ಪಿ.ಯು.ಸಿ ಮುಗಿಯುತ್ತಲೇ ನಮ್ಮ ತ್ರಿಮೂರ್ತಿಗಳ ನಂಟು ಸಡಿಲಿಸುತ್ತಾ ಬಂತು, ಬಬಿತ ನರ್ಸಿಂಗ್ ಮಾಡಲು ಮಂಗಳೂರಿಗೆ ಹೋದಳು.ಸವಿತ ಬಿ.ಬಿ.ಎಮ್ ಮಾಡಲು ಉಡುಪಿಗೆ ತೆರಳಿದಳು.ನಾನು ಅದೇ ಕಾಲೇಜಿನಲ್ಲಿ ಬಿ.ಕಾಂ ಮುಂದುವರಿಸಿದೆ.ನಂತರ ನಾವು ಭೇಟಿಯಾದುದು ತುಂಬಾ ಅಪರೂಪ. ಆದರೂ ಪತ್ರದ ಮೂಲಕ ನಮ್ಮ ನಂಟು ಜೋಡಿಕೊಂಡಿತ್ತು. ಕಾಲೇಜು ಮುಗಿಯುತ್ತಲೇ ನಾನು ಬೊಂಬಾಯಿಯ ದಾರಿ ಹಿಡಿದೆ. ಬಬಿತ ಮಂಗಳೂರು, ಸವಿತ ಉಡುಪಿಯಲ್ಲಿ ಕಂಪ್ಯೂಟರ್ ಕೋರ್ಸ್ ಮಾಡುತ್ತಿದ್ದಳು. ಬೊಂಬಾಯಿಗೆ ಬರುವುದಕ್ಕಿಂತ ಮುಂಚಿನ ದಿನ ನಾನು ಉಡುಪಿ ಶ್ರಿ ಕೃಷ್ಣನ ದರ್ಶನಕ್ಕೆ ಹೋಗಿದ್ದೆ. ಆಕಸ್ಮಾತ್ ಸಿಕ್ಕಿದ ಸವಿತ ನನ್ನನ್ನ ಅವರ ಮನೆಗೆ ಕರೆದೊಯ್ದಳು. ಅಲ್ಲಿ ನನ್ನ ಮತ್ತು ಮೇರಿ ಆಂಟಿಯ ಪ್ರಥಮ ಭೇಟಿ. ಬೊಂಬಾಯಿಯಲ್ಲಿ ಎನೂ ಮಾಡುತ್ತೀಯಾ? ಎಂದು ಪ್ರಶಿಸಿದ ಮೇರಿ ಆಂಟಿಗೆ "ಸಿ.ಎ. ಯ ಹತ್ತಿರ ಒಂದು ಕೆಲಸ ನೋಡಿದ್ದೇನೆ, ನೋಡುತ್ತೇನೆ  ಮುಂದೆ ಏನಾಗುತ್ತದೆ? " ಎಂದು ಉತ್ತರ ಕೊಟ್ಟಿದ್ದೆ. ಒಂದು ಬಿಳಿಯ ಡ್ರೆಸ್ ಹಾಕಿಕೊಂಡಿದ್ದರು.ಸರಿಯಾಗಿ ತುಳು ಬರುತ್ತಿರಲಿಲ್ಲ. ಕನ್ನಡ ಕೂಡಾ ತೊದಲುತಿತ್ತು. ಮೇರಿಯ ಅಮ್ಮ , ಲಿಲ್ಲಿಬಾಯಿಯನ್ನು ಅಜ್ಜಿ ಎಂದು ಸವಿತ ಪರಿಚಯಿಸಿದಳು. ಸವಿತಳಿಂದ ಬೀಳ್ಕೊಂಡ ನಾನು ಪುನಃ ಸವಿತಳನ್ನು ಭೇಟಿ ಮಾಡಿದ್ದು ಮುಂಬೈನಲ್ಲಿ , ೨೦೦೧ನೇ ಇಸವಿಯ ಅಗಸ್ಟ್ ೧೫ ರಂದು ಅಂದು ರಕ್ಷಾ ಬಂಧನವಾಗಿತ್ತು. ನನ್ನನ್ನು ಸವಿತ ಮನೆಗೆ ಕರೆದಿದ್ದಳು. ನಾವು ಅಂದು ಭೇಟಿಯಾದುದು , ದಾದರ್ ರೈಲ್ವೆ ಸ್ಟೇಶನ್ ನಲ್ಲಿ, ನನ್ನ ಇತರ ಇಬ್ಬರೂ ಗೆಳತಿಯರು ಕೂಡಾ ಆ ಸಮಯದಲ್ಲಿ ಹಾಜರಿದ್ದರು. ಮೇರಿ ಆಂಟಿ ಕೂಡಾ ಬಂದಿದ್ದರು. ಜೆನೆಟ್ ಎಂಬ ಸಣ್ಣ ಹುಡುಗಿಯನ್ನು ಕೂಡಾ ಕರೆತಂದಿದ್ದರು. ಜೆನೆಟ್ ಳನ್ನು  ಮೇರಿಯ ಮಗಳೆಂದು ಗ್ರಹಿಸಿದೆ. ಮೇರಿ ಆಂಟಿ ನನ್ನನ್ನು  ಮನೆಗೆ ಬಾ ಎಂದು ಆಹ್ವಾನಿಸಿದರು.  ಸವಿತ ಕೂಡಾ ಒತ್ತಾಯ ಮಾಡಿದಳು .ನನಗೆ ನಿರಾಕರಿಸಲು ಸಾಧ್ಯವಾಗಲಿಲ್ಲ. ಅವರ ಸಂತಕ್ರೂಸಿನಲ್ಲಿದ್ದ ರೂಮಿಗೆ ನಡೆದೆ. ಜೆನೆಟ್ ಬಗೆಗಿನ ಗ್ರಹಿಕೆ ತಪ್ಪು ಆಗಿತ್ತು. ಅದು ಮೇರಿಯ ತಂಗಿ ಸೆಲಿನಳ ಮಗಳು. ಸೆಲಿನ ಕೂಡಾ ಬೊಂಬಾಯಿಯಲ್ಲಿಯೇ ಕೆಲಸ ಮಾಡುತ್ತಿದ್ದಳು. ಜೀನ್ಸ್ ಪ್ಯಾಂಟ್, ಮತ್ತೊಂದು ಟಾಪ್ ಹಾಕಿ ಮಾಡರ್ನ್ ಹುಡುಗಿಯ ಹಾಗೆ ವಿನ್ಯಾಸ ಮಾಡಿ ಕೊಂಡಿದ್ದ  ಮೇರಿಆಂಟಿಯ ಕಂಡಾಗ ಇವರಿಗೆ ಸ್ಟೈಲ್ ತುಂಬಾ ಇದೆ, ಅಂದು ಕೊಂಡಿದ್ದೆ ಆದರೇ ನಂತರ ತಿಳಿದದ್ದು ಕೇಳಿದಾಗ ನಗು ಬರುತ್ತದೆ ಅವರಿಗೆ ಸೀರೆ ಉಡಲು ಬರುತ್ತಿರಲಿಲ್ಲ!. ಚೂಡಿದಾರದ ಅಭ್ಯಾಸವೇ ಇರಲಿಲ್ಲ!. ಕೇವಲ ಪ್ಯಾಂಟ್ ಶರ್ಟ್ ಟಾಪ್ ಇದೇ ಅವರ ಉಡುಗೆಯಾಗಿತ್ತು. ಸಂಜೆಯ ತನಕ ಕಾಲ ಹರಣ ಮಾಡಿದ ನಂತರ ನಾನು ಹೋಗುತ್ತೇನೆ. ಎಂದಾಗ "ಹೇಗಾಯಿತು ನಮ್ಮ ಮನೆ, ನಾವು ಹೀಗೆಯೇ ಫ್ರೀಯಾಗಿರುತ್ತೇವೆ ನಾವು .ಇಲ್ಲಿ ಎನೂ ಸಂಕೋಚ ಮಾಡಬಾರದು, ಇನ್ನೊಮ್ಮೆ ಬಾ, ಜುಹು ಬೀಚ್ ತಿರುಗಿಕೊಂಡು ಬರುವಾ , ಬರುವ ಭಾನುವಾರ ಬಾ" ಎಂದು ಮೇರಿ ಆಂಟಿಯಿಂದ ನಾನು ಬೀಳ್ಕೊಂಡೆ. ನನ್ನ ಮನಸ್ಸಿಗೆ ತುಂಬಾ ಆನಂದವಾಗಿತ್ತು . ನಾನು  ಸಂತಕ್ರೂಸ್ ಸ್ಟೇಷನ್ ಗೆ ಹೋಗಲು ಬೆಸ್ಟ್ ಬಸ್ ಹತ್ತಿದೆ.

ನಾನು ವಾರಕ್ಕೆ ಒಂದು ಸಲವಾದರೂ ಸವಿತಳಿಗೆ ಪೋನ್ ಮಾಡುತ್ತಲೇ ಇದ್ದೆ. ಮತ್ತು ರವಿವಾರ ಮನೆಗೆ ಕರೆಯುತ್ತಿದ್ದಳು.ನಿಜ ಹೇಳಬೇಕಾದರೆ ಜುಹು ಬೀಚ್, ರಾಣಿಬಾಗ್, ಪಾರ್ಕ್ ನಾನು ಸುತ್ತ ತೊಡಗಿದ್ದು ಮೇರಿಆಂಟಿಯ ಸಹವಾಸದ ನಂತರವೇ ಹೇಳಬೇಕು. ಅವರು ನಮ್ಮೊಂದಿಗೆ ಚಿಕ್ಕಮ್ಮ ಅಥಾವ ತಾಯಿಯ ಅಧಿಕಾರದಲ್ಲಿ ಇರಲಿಲ್ಲ, ನಾವು ಅವರ ಗೆಳೆಯ, ಗೆಳತಿಯರಂತೆ ಅವರೊಡನೆ ನಾನು ವರ್ತಿಸುತ್ತಿದ್ದೆವು. ಒಂದು ದಿನ ಇದಕ್ಕಿಂತ ನನ್ನ ಆಫೀಸಿಗೆ ಸವಿತಳ ಫೋನ್ ಬಂತು, "ಹಲೋ ಏನು ಸಮಾಚಾರ "ಎಂದು ಕೇಳಿದ್ದೆ "ಬರುವ ಆದಿತ್ಯವಾರ ನೀನು ಹನ್ನೆರೆಡು ಗಂಟೆಯ ಒಳಗೆ ಮನೆಗೆ ಬರಬೇಕು, ನಾನಿನ್ನು ಇಡುತ್ತೇನೆ" ಎಂದು ಸವಿತ ಪೋನ್ ಕೆಳಗಿಟ್ಟಿದ್ದಳು. ಅಂದು ಶುಕ್ರವಾರವಾಗಿತ್ತು. ಇನ್ನೊಮ್ಮೆ ಪೋನ್ ಮಾಡಿ ಯಾಕೆ? ಏನು? ಎಂದು ವಿಚಾರಿಸಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ನೇರವಾಗಿ ಆದಿತ್ಯವಾರ ಅವರ ಸಂತಕ್ರೂಸಿನ ಮನೆಯಲ್ಲಿ ಹನ್ನೆರೆಡು ಗಂಟೆಗೆ ಹಾಜರಾಗಿಬಿಟ್ಟೆ. ನಾನು ಆಗ ಡೊಂಬಿವಲಿಯಲ್ಲಿ ವಾಸಿಸುತ್ತಿದ್ದೆ. ಆಗಲೂ ಕೂಡಾ ಸಿ.ಎ ಯ ಹತ್ತಿರವೇ ಕೆಲಸ ಮಾಡುತ್ತಿದ್ದೆ.

ನನಗೆ ಮತ್ತೆ ತಿಳಿಯಿತು ಅಂದು ಜೆನೆಟಳ ಹುಟ್ಟಿದ್ದ ಹಬ್ಬದ ಆಚರಣೆಗೆ ತಯಾರಿ ನಡೆಯುತ್ತಿತ್ತು. ಛೇ ಮಗುವಿಗೆ ಏನೂ ಕೂಡಾ ಉಡುಗೊರೆ ತಾರದೆ, ಖಾಲಿ ಕೈಯಲಿ ಬಂದು ಬಿಟ್ಟೆ ಎಂದು ಬೇಸರವಾಗಿತ್ತು. ಜೆನೆಟಳ ತಾಯಿ ಸೆಲಿನ ಕೂಡಾ ಮನೆಯಲ್ಲಿದ್ದರು. ಜೆನೆಟ್ ಆರು ವರ್ಷದ ಮಗಳು ಆಗ ತಾನೇ ಎರಡನೇ ಕ್ಲಾಸ್ ಇಂಗ್ಲೀಷ್ ಮೀಡಿಯಂನಲ್ಲಿ ಓದುತ್ತಿದ್ದಳು. ಯಾರ ತಂಟೆಗೆ ಹೋಗದೆ ತನ್ನಷ್ಟಕ್ಕೆ ಆಡುತ್ತಿದ್ದಳು "ಅಶೋಕ ನೀನು ಮಾಂಸ ತಿನ್ನುತ್ತೀಯಲ್ಲ ಎಂದು ಪ್ರಶ್ನಿಸಿದರು ಮೇರಿ ಆಂಟಿ ನನ್ನನ್ನು, ನಾನು ಆಗ ಮೀನು ಮಾಂಸ ತಿನ್ನುತ್ತಿರಲಿಲ್ಲ. ಆದರೂ ಬಿರಿಯಾನಿ ಮಾಡುತ್ತಿದ್ದ ಮೇರಿ ಆಂಟಿ ನನಗಾಗಿ ಮಾಂಸ ಹಾಕುವುದಕ್ಕೆ ಮುಂಚಿತವಾಗಿ ಗೀರೈಸನ್ನು ತೆಗೆದಿಟ್ಟರು. ಅಷ್ಟರಲ್ಲಿ ಅವರು ಒಬ್ಬರು ನೆಂಟರಿಗಾಗಿ ಪದೇ ಪದೇ ಹೋಗಿ ಹೊರಗೆ ನೋಡುತ್ತಿದ್ದರು, ನನಗೆ ಅದು ಗೋಚರಕ್ಕೆ ಬರಲಿಲ್ಲ. ನಾನು ಸವಿತಳೊಂದಿಗೆ ಮಾತನಾಡುತ್ತಾ ಕುಳಿತ್ತಿದ್ದೆ. ಅಷ್ಟರಲ್ಲಿ ಒಂದು ಕುಳ್ಳ ಜೀವದ ಪ್ರವೇಶವಾಯಿತು. "ಇವರು ದಿನೇಶ್ , ನನ್ನ ಪಾರ್ಲರ್ ನ ಹತ್ತಿರದಲ್ಲೇ ಟೈಲರಿಂಗ್ ಕೆಲಸ ಮಾಡುತ್ತಾರೆ," ಎಂದು ಆ ಹೊಸ ವ್ಯಕ್ತಿಯ ಪರಿಚಯ ಮಾಡಿದರು ಮೇರಿ ಆಂಟಿ. ಅದೇ ನನ್ನ ಮತ್ತು ದಿನೇಶರ ಮೊದಲ ಭೇಟಿ . ಅವರು ಬರುವಾಗ ಜೆನೆಟಳಿಗೆ ಉಡುಗೊರೆ ತಂದಿದ್ದರು. ಪ್ರಾಯಶಃ ಅವರಿಗೆ ಈ ಬಗ್ಗೆ ಮೊದಲೇ ತಿಳಿದಿರಬೇಕು. "ನನಗೆ ಮಾತ್ರ ಇವರು ಮಂಗ ಮಾಡಿದ್ದು" ಎಂದು ಮನಸ್ಸಿನಲ್ಲಿಯೇ ಸವಿತಳಿಗೆ ಬೈದು ಬಿಟ್ಟೆ. ದಿನೇಶರು ನನಗಿಂತ ಕೂಡಾ ಎತ್ತರದಲ್ಲಿ ಕಡಿಮೆ ಇದ್ದರು, ಆದರೆ ದೇಹ ಕಟ್ಟು ಮಸ್ತಾಗಿತ್ತು, ಇವರು ಕೂಡಾ ಟೈಟ್ ಪಿಟ್ ಜೀನ್ಸ್ ಹಾಕಿದ್ದರು. ನನಗೊಬ್ಬ ಬೇಸರಕ್ಕೆ ಜನ ಸಿಕ್ಕಿದ ಎಂದು ಕೊಂಡು ಹರಟೆಗೆ ಕುಳಿತು ಎಲ್ಲಾ ವಿಚಾರ ವಿನಿಮಯವಾಗ ತೊಡಗಿತು."ನೀವು ಎಲ್ಲಿರುವುದು?" ನಾನೇ ಆರಂಭಿಸಿದೆ "ಜೋಗೇಶ್ವರಿ" ಎಂದು ದಿನೇಶರಿಂದ ಉತ್ತರ ಬಂದಿತ್ತು, ನಂತರ ಎಲ್ಲಾ ಸಕಲ ಕಷ್ಟ ಸುಖ ವಿನಿಮಯ ತೊಡಗಿತು. ಅವರ ಮನೆ ಪೋನ್ ನಂಬರ್ ಕೂಡಾ ನನಗೆ ಕೊಟ್ಟರು, ನನಗೆ ತುಂಬಾ ಆತ್ಮೀಯರಾಗಿ ಬಿಟ್ಟರು. ಇತ್ತೀಚೆಗೆ ನನ್ನ ಕೆಲಸ ಅಂಧೇರಿಯ ಖಾಸಗಿ ಕಂಪೆನಿಯೊಂದರಲ್ಲಿ ಆಯಿತು. ಆಗ ನಾನು ನನ್ನ ವಾಸವನ್ನು ಬೊರಿವಲಿಗೆ ಬದಲಾಯಿಸಿ ನಾವು ಬ್ಯಾಚುಲರ್ಸ್ ವಾಸಿಸಲು ಪ್ರಾರಂಭ ಮಾಡಿದೆವು. ನಂತರ ದಿನೇಶ ಮತ್ತು ನಾನು ಪ್ರತಿ ರವಿವಾರ ಮೇರಿ ಆಂಟಿಯ ಮನೆಗೆ ಹೋಗಿ ವಾರದ ರಜೆಯನ್ನು ತುಂಬಾ ಸಂಭ್ರಮದಿಂದ ಆಚರಿಸ ತೊಡಗಿದೆವು. ಹೀಗೆ ಸಲುಗೆ, ಮಾತಿನ ಚಕಮುಕಿ ನಮ್ಮಲ್ಲಿ ನಡೆಯುತ್ತಲೇ ಇತ್ತು. ಇಷ್ಟಾಗುವಾಗ ನಾನು ಸವಿತಳ ಸಂಸಾರದ ಬಗ್ಗೆ ವಿಚಾರಿಸತೊಡಗಿದೆ. ಸೆಲಿನಳ ಗಂಡಾ ಅಬುದಾಬಿಯಲ್ಲಿ ಕೆಲಸ ಮಾಡುತ್ತಾನೆಂದು ತಿಳಿಯಿತು. ಮೇರಿ ಆಂಟಿಗೆ ಕೂಡಾ ಒಬ್ಬಳು ಮಗಳಿದ್ದಾಳೆ, ಜೆಸಿಂತ, ಅವಳು ಮಂಚಕಲ್ ನಲ್ಲಿ ತನ್ನ ಅಜ್ಜಿಯೊಂದಿಗೆ (ಅಲ್ಲಿಬಾಯಿ) ಇದ್ದಾಳೆ, ಅಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆಗೆ ಹೋಗುತ್ತಿದ್ದಳು, ಈಗ ಜೆಸಿಂತ ಏಳನೇಯ ತರಗತಿ, ಎಂಟನೆಯ ತರಗತಿಗೆ ಅವಳನ್ನು ಮುಂಬೈಗೆ ತರಿಸುವ ಅಂದಾಜಿನಲ್ಲಿದ್ದರು. ಮೇರಿ ಆಂಟಿ ಗಂಡ ಕೂಡಾ ಅಬುದಾಬಿಯಲ್ಲಿದ್ದಾರೆ ಅಂದು ಕೊಂಡಿದ್ದೆ!.

ಒಂದು ಭಾನುವಾರ ನಾನು, ಸವಿತ, ದಿನೇಶ ಮತ್ತು ಮೇರಿ ಆಂಟಿ ಜುಹು ಬೀಚಿಗೆ ಹೋಗಿದ್ದೆವು. ಏನೋ ಮಾತಾಡುತ್ತಾ, ಮಾತಾಡುತ್ತಾ "ನನಗೆ ಯಾರೂ ಇಲ್ಲ, ನಾನು ಇಷ್ಟು ಕಷ್ಟ ಪಡುತ್ತೇನೆ, ನನಗೆ ಯಾರು ನೋಡುವವರು ಇಲ್ಲ "ಎಂದು ದಿನೇಶನೊಡನೆ ಮೇರಿ ಆಂಟಿ ಕಣ್ಣೀರುಡುತ್ತಾ ಹೇಳುತ್ತಿದ್ದರು. ನಾನು ಎಣಿಸಿಕೊಂಡೆ "ಇವರದ್ದು ಇದ್ದದ್ದೇ ಸ್ವಲ್ಪ ತದ್ವಿರುದ್ದ ಮಾತಾಡಿದರೆ ನಾನು ಅದು ಇದು ಮಾಡಿಕೊಳ್ಳುತ್ತೇನೆ ಅಂತ ಹೋಗುತ್ತಾರೆ". ದಿನೇಶ ಹೇಗೊ ಅವರನ್ನು ಸಮಾಧಾನ ಪಡಿಸಿದ , ನಾನು ಮತ್ತು ಸವಿತ ನಮ್ಮ ಆಫೀಸಿನ ವಿಷಯ ಮಾತನಾಡುತ್ತಾ ಕಾಲಕಳೆದಿದ್ದೆವು. ಬರಬರುತ್ತಾ ನಾನು ಮೇರಿ ಆಂಟಿಯ ಬಗ್ಗೆ ಇಷ್ಟನ್ನು ಮಾತ್ರ ತಿಳಿದು ಕೊಂಡಿದ್ದೆ "ಮೇರಿ ಆಂಟಿ ಎಂದೂ ಸೀರೆ ಉಟ್ಟದ್ದು ನಾನು ಕಂಡಿಲ್ಲ, ಅವರು ಕರಿಮಣಿ ಎಂದೂ ಹಾಕುತ್ತಿರಲಿಲ್ಲ, ಪ್ಯಾಂಟ್ ಮತ್ತು ಟಾಪ್ ಅವರ ಉಡುಗೆ, ಲಿಪಿಸ್ಟಿಕ್ ಹಚ್ಚುವ ಹುಚ್ಚ್ಚು ಮಾತ್ರ ಇತ್ತು. ನೋಡುವವರಿಗೆ ನವೀನಯುಗದ ಹೆಂಗಸಿನಂತೆ ಕಾಣುತ್ತಿದ್ದರು.ತಾನು ಯಾರಿಗೂ ಹೆದರುತ್ತಿರಲಿಲ್ಲ ದೇವರೊಬ್ಬನಿಗೆ ಬಿಟ್ಟು ! ಗಂಡಸಿನ ವ್ಯವಾಹಾರಿಕ ಬುದ್ಧಿ ಅವರಲ್ಲಿತ್ತು. ಆದರೇ ಅವರಿಗಿದ್ದದ್ದು ಒಂದೇ ಕೊರತೆ, ತನಗೆ ಬೆಂಗಾವಲಾಗಿ ನಿಲ್ಲುವವರು ಯಾರು ಇಲ್ಲವೆಂದು, ನಮ್ಮೊಂದಿಗೆ ಎಂದೂ ತಾಯಿ ದರ್ಪ ತೋರಿದವರಲ್ಲ , ಅದನ್ನು ತೋರಿಸಬೇಕಾದ ಸನ್ನಿವೇಶವನ್ನೂ ನಾವು ಸೃಷ್ಠಿದವರಲ್ಲ, ಯಾವಾಗಲೊಮ್ಮೆ ಮಾತಿನ ಹದ್ದು ಮೀರಿದರೆ, ಕಣ್ಣ ಸನ್ನೆಯನ್ನೇ ಮಾಡುತ್ತಿದ್ದರು, ಆಗ ನನಗೆ ಅರ್ಥವಾಗುತ್ತಿತ್ತು. ನನ್ನ ಮಾತನ್ನ ಮೊಟಕುಗೊಳಿಸಬೇಕೆಂದು, ಇಲ್ಲಿ ಕೆಲವೊಮ್ಮೆ ನಾನು ಮುಂದುವರಿದು ಪೂರ್ತಿಯಾಗಿ ಹೇಳಬೇಕಾದನ್ನ ಹೇಳಿಬಿಡುತ್ತಿದ್ದೆ, ಆಗ ನನ್ನನ್ನು ಓಡಿಸಿ ಕೊಂಡು ಬಂದದ್ದು ಉಂಟು, ನಾನು ಅವರಲ್ಲಿ ತಾಯಿಯ ಔದರ್ಯವನ್ನು ಕಂಡಿದ್ದೆ. ದಿನೇಶರಿಗೆ ಅವರು ಆಪ್ತ ಗೆಳತಿಯಾಗಿದ್ದರು.ಯಾವ ಮುಚ್ಚುಮರೆ ಇಲ್ಲದೆ ನಾವು ಚರ್ಚಿಸುತ್ತಿದ್ದೆವು.

ಅದೊಂದು ಡಿಸೆಂಬರ್ ತಿಂಗಳ ರವಿವಾರ ಸಂಜೆ ಸುಮಾರು ಆರು ಗಂಟೆ ಸಮಯ,ನಾನು ಬಬಿತ, ಸವಿತ ಮತ್ತು ಜೆನೆಟ್ ಜುಹು ಬೀಚಿಗೆ ಹೋಗುವ ತರಾತುರಿಯಲ್ಲಿದ್ದೆವು. ಮೇರಿಆಂಟಿ ತನ್ನ ಪಾರ್ಲರ್ ನಿಂದ ನೇರವಾಗಿ ಅಲ್ಲಿಗೆ ಬರುವವರಿದ್ದರು. ದಿನೇಶ ಕೂಡಾ "ನನ್ನ ರಿಲೇಶನ್ ರವರ ಮದುವೆ ಇದೆ ನಾನು ಕೂಡಾ ನೇರವಾಗಿ ಅಲ್ಲಿಗೆ ಬರುತ್ತೇನೆ" ಅಂದಿದ್ದರು. ನಾವು ೭ ಗಂಟೆಗೆ ಸಮುದ್ರ ತೀರವನ್ನು ಸೇರಿಯಾಗಿತ್ತು. ಜೆನೆಟ್ ಒಬ್ಬಳೇ ತನ್ನಷ್ಟಕ್ಕೆ ಮರಳಿನಲ್ಲಿ ಆಡುತ್ತಿದ್ದಳು.ನಾನು ಆ ದಿನ ತಾನೇ ನರ್ಸಿಂಗ್ ಮುಗಿಸಿಕೊಂಡು  ಮುಂಬೈಗೆ ಬಂದಿದ್ದ ಬಬಿತಳನ್ನು ವಿಚಾರಿಸುತ್ತಿದ್ದೆ."ಬಬಿತ ನಾವು ಎಷ್ಟು ಸಮಯದ ನಂತರ ಮುಖಾಮುಖಿ ಬೇಟಿಯಾಗುವುದು" ನಾನೇ ಕೇಳಿದೆ -" ಐದು ವರ್ಷದ ನಂತರ, ಹೌದಲ್ಲ ಪಿ.ಯು.ಸಿ ಫಲಿತಾಂಶದ ದಿನ ನಾನು ನಿನ್ನನ್ನು ಕಡೇ ಸಲ ನೋಡಿದ್ದು ಏನೂ ಬದಲಾಗಲಿಲ್ಲ, ನಿನ್ನದು ಖಂಡಿತ ಗ್ಯಾರಂಟಿ ಕಲರ್" ಎಂದು ಮೋಡಿಮಾಡಿದಳು."ನಿಂದೂ  ಕೂಡಾ ನೀರೆರೆದ ಕೆಂಡದ ಬಣ್ಣ " ಎಂದು ಪ್ರತಿಉತ್ತರ ನೀಡಿದೆ. ಒಮ್ಮೆ ದಿಟ್ಟಿಸಿನೋಡಿ  ಕೋಪಿಸಿ  ಮತ್ತೆ  ಸುಮ್ಮನಾದಳು.

ಆಂಟಿ ಬಂದ್ರು ಆಂಟಿ ಬಂದ್ರು ಅಂತಹ ಜೆನೆಟ್ ಕೂಗುತ್ತಾ ಬಂದಳು , ಆ ಜನ ಜಂಗುಳಿ ಇನ್ನೇನು ಮುಳುಗಿತ್ತು ಸೂರ್ಯ ,ಗಿಜಿ ಗಿಜಿ ವ್ಯಾಪಾರ, ವಾಡ ಪಾವ್ , ಕಲಾ ಕಟ್ಟ ಈ ಎಲ್ಲದರ ನಡುವೆ ಜೆನೆಟ್ ಆಂಟಿಯನ್ನು ಎಲ್ಲಿ ಕಂಡಿದ್ದಳೋ ಅವರು ಹತ್ತಿರಕ್ಕೆ ಬಂದ ಮೇಲೆಯೇ ನಮಗೆ ತಿಳಿದದ್ದು .ಮಕ್ಕಳ ದೃಷ್ಠಿಯೋ ಹಾಗೇ ನೋಡಿ ಎಲ್ಲವನ್ನು ಕಂಡು ಹಿಡಿಯುತ್ತವೆ." ಬನ್ನಿ ಬನ್ನಿ " ಅಂತ ಸ್ವಾಗತಿಸಿದೆ ನಾಟಕೀಯವಾಗಿ. "ಎಲ್ಲಿದೆ ನಿಮ್ಮ ಜೋಡಿದಾರು, ಇನ್ನು ಅವರನ್ನು ಎಲ್ಲಿ ಹುಡುಕಬೇಕು" ಎಂದು ಸವಿತ ಆಂಟಿಯನ್ನು ಕೆಣಕಿದರು.   ದಿನೇಶ್ ಇನ್ನೂ ಕೂಡಾ ಬಂದಿರಲಿಲ್ಲ. ಮೇರಿಆಂಟಿ, ಸವಿತ, ಬಬಿತರ ಮಾತೃ ಭಾಷೆ ಕೊಂಕಣಿ. ಕೆಲವೊಮ್ಮೆ ಅರ್ಥವಾಗಬಾರದ ಸಂಭಾಷಣೆಯನ್ನು ಅದರಲ್ಲೇ ಮಾಡುತ್ತಿದ್ದರು. ಆದರೂ ನನಗೆ ಅರ್ಥಮಾಡಿ ಕೊಳ್ಳುವುದರಲ್ಲಿ ಕಷ್ಟವೇನೂ ಆಗುತ್ತಿರಲಿಲ್ಲ. "ನೋಡು ನಿನ್ನ ಆತ್ಮೀಯ ಗೆಳತಿ ಬಂದಿದ್ದಾಳೆ, ಅವಳಿಗೆ ಇವತ್ತು ಎಲ್ಲಿ ಪಾರ್ಟಿ ಕೊಡುವುದು?" ಎಂದು ಬಬಿತಳನ್ನು ತೋರಿಸಿ ನನಗೆ ಹೇಳಿದರು ಮೇರಿ ಆಂಟಿ. "ಇಲ್ಲೇ ಉಂಟಲ್ಲ - ವಡಾ ಪಾವು, ಸಮೋಸ ಪಾವ್, ಇದು ಬೊಂಬಾಯಿಯ ಎರಡು ಶ್ರೇಷ್ಠ ತಿನಸುಗಳೆಂದು ಅವಳಿಗೆ ತಿನ್ನಿಸಿದರಾಯಿತು" ಎಂದದ್ದಕ್ಕೆ ಎಲ್ಲರೂ ನಕ್ಕರು. "ಒಡ್ಲೆ ಪಿಟ್ಟಾಸಿನೋ" ಎಂದು ಕೊಂಕಣಿಯಲ್ಲಿ ಗೊಣಗೊಡುತ್ತಾ ಸವಿತಳ ಕಿವಿಯಲ್ಲಿ ಹೇಳಿದರು. "ಅವಳಿಗೆ ಹೇಳುವ ಅವಶ್ಯಕತೆ ಇಲ್ಲ ಅವಳೂ ಕೂಡಾ ಹಾಗೆ " ಎಂದು ನಗೆಯ ಹೊನಲು ಬರಿಸಿದೆ ನಾನು. ಅಷ್ಟರಲ್ಲೇ ದಿನೇಶನ ಸವಾರಿ ಬಂತು. "ಏನು ತಡವಾಯಿತು?, " ಮೇರಿಆಂಟಿ ವಿಚಾರಿಸಿದರು. "ಎಲ್ಲಿ ಲೇಟ್ ನಾನು ಸರಿಯಾಗಿಯೇ ಬಂದು ಮುಟ್ಟಿದ್ದೇನೆ, ನೀವು ಬೇಗ ಬಂದಿದ್ದರೆ ನಾನು ಏನೂ ಮಾಡ್ಬೇಕು?" ದಿನೇಶರು ಹಾರಿಕೆಯ ಉತ್ತರ ಕೊಟ್ಟರು. " ಹೋಗುವ ಅವಸರದಲ್ಲಿ ನನ್ನ  ಮಧ್ಯಾಹ್ನದ ಚಾ ಕುಡಿಯಲು ಬಿಡಲಿಲ್ಲ " ಎಂದು ಸವಿತ ಬಬಿತಳನ್ನು ತರಾಟೆ ಮಾಡಿದೆ. "ಬಸ್ ತುಂಬಾ ಹುಷಾರಾಗಿದ್ದೀಯಾ!" ಎಂದು ಸವಿತ ತನ್ನ ಕೈ ಉಗುರಿನಿಂದ ಚಿವುಟಿದಳು. 

ನಾವು ಸ್ವಲ್ಪ ಮಾತಾಡುತ್ತಾ ಕುಳಿತೆವು. ದಿನೇಶರು ಹೋಗಿ ಕಾದಜೋಳದ ತೆನೆ ತಂದರು.ನಾವು ಎಲ್ಲರೂ ಒಟ್ಟಾಗಿ ತಿಂದೆವು. "ಇಲ್ಲೇ ಕುಳಿತು ಏನೂ ಮಾಡುವುದು, ಒಂದು ಸುತ್ತು ಹಾಕುವ" ಎಂದು ಆಂಟಿ ಎದ್ದು ನಿಂತರು, ಎಲ್ಲರೂ ಎದ್ದು ನಿಂತೆವು, ಶುರುವಾಯಿತು ಮರಳಿನ ಮೇಲೆ ಪುಟ್ಟ ಹೆಜ್ಜೆ ಹಾಕಿ ಹಾಕಿ ನಾವು ಸಮುದ್ರ ತೀರದಲ್ಲಿ ನಡೆಯತೊಡಗಿದೆವು.ಸೂರ್ಯ ಆವಾಗಲೇ ಕತ್ತಲೆಯ ಸಾಮ್ರಾಜ್ಯದಲ್ಲಿ ಮುಳುಗಲು ಹೋಗಿದ್ದ ಚಂದ್ರ ತಾನು ಪೂರ್ಣವಲ್ಲದಿದ್ದರೂ ಆಕಾಶದಲ್ಲಿ ಮೆರೆಯುತ್ತಿದ್ದ ಅದೇ ಚಂದ್ರನನ್ನು ನೋಡಿ ಕೆಲವು ನಕ್ಷತ್ರಗಳು ಚಂದ್ರನೊಡನೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದವು. ಪಾಪ ನಕ್ಷತ್ರಗಳೂ ಕೂಡಾ ತಿಳಿದಿದ್ದವು ಚಂದ್ರನ ಕಥೆ ಆದರೇ ನಾನು ಮಾತ್ರ ತಿಳಿಯದೇ ಹೋದೆ ಮೇರಿಯ ಕಥೆ. 
ಇಂದು ಜನವರಿ ತಿಂಗಳ ಹನ್ನೆರಡನೇ ತಾರೀಕು, ಜೆಸಿಂತಳ ಬರ್ತ್ ಡೇ ತುಂಬಾ ಸಂಭ್ರಮವಾಗಿಯೇ ನಡೆದಿತ್ತು. ಎಲ್ಲಾ ನೆಂಟರೂ ಕೂಡಾ ಹೋಗಿ ಆಗಿತ್ತು, ನಂತರ ದಿನೇಶರ ಸವಾರಿ ಬಂತು. ನಾನು ಬಬಿತ,ಸವಿತ,ಅಲ್ಲಿ ಬಾಯಿ (ಮೇರಿಯ ತಾಯಿ) ಜೆನೆಟ್ , ಆಂಟಿ ಮಾತ್ರ ಮನೆಯಲ್ಲಿದ್ದೆವು. "ಇದು ಬರುವ ಹೊತ್ತೇ ಬರ್ತ್ ಡೇ ಎಲ್ಲಾ ಮುಗಿಯಿತು, ಇನ್ನೂ ಯಾಕೇ ಬಂದದ್ದು ಉಳಿದ್ದದ್ದು ಎಷ್ಟು ಅಂತ ನೋಡೋಕ?" ದಿನೇಶರನ್ನು ನಾನು ತಮಾಷೆಯಾಗಿ ಕೇಳಿ ಬಿಟ್ಟೆ. "ಊಟ ಮಾಡುವೀಯಂತೆ" ಅಂತ ಹೇಳಿ ಬಿರಿಯಾನಿ, ಮಟನ್ ಗ್ರೇವಿ ಎಲ್ಲಾ ತಂದು ದಿನೇಶನ ಮುಂದಿಟ್ಟರು ಆಂಟಿ. ಅರ್ಧ ಗಂಟೆ ಹಾಗೆಯೇ ಹರಟುತ್ತಾ ಕಳೆದೆವು. "ಸವಿತ ಇವತ್ತು ಎಲ್ಲಿಗೆ ಹೋಗುವ ಪ್ಲಾನ್ ಇದೆ?" ಅಂತ ಕೇಳಿ ಬಿಟ್ಟೆ "ನನಗೆ ಸುಸ್ತಾಗಿ ಹೋಗಿದೆ, ಎಲ್ಲಿಗೂ ಬೇಡ ಮನೆಯಲ್ಲೇ ಕೂರುವ" ಎಂಬ ಉತ್ತರ ಬಂತು. ನನಗೆ ತುಂಬಾ ಸಂತೋಷವೇ ಆಯಿತು. ಆದರೆ ಇದು ಮಾತ್ರ ಜೆಸಿಂತಳಿಗೆ ಖುಷಿ ಕೊಡಲಿಲ್ಲ. ಅವಳಿಗೆ ಎಲ್ಲಿಯಾದರೂ ತಿರುಗಲು ಹೋಗ ಬೇಕಿತ್ತು . ಆಂಟಿಯತ್ರ ಹಠಮಾಡ ತೊಡಗಿದಳು. "ನಿನಗೆ ಈಗ ಕೈಗೆ ಸಿಕ್ಕಿರುವ ಹಣವನ್ನು ಖರ್ಚು ಮಾಡುವ ತನಕ ದಿಗಿಲು ಇಲ್ಲ" ಎಂದು ಹೇಳಿ ಮೇರಿಆಂಟಿ ಮುಂದುವರಿಸಿ "ಇವತ್ತು ಎಲ್ಲಿಗೂ ಇಲ್ಲ , ಎಲ್ಲರೂ ಮನೆಯಲ್ಲಿಯೇ ಇರುವ" ಅಂದರು. ಆದರೆ ಜೆಸಿಂತ ಮತ್ತೂ ಮತ್ತೂ ತಾಯಿಯಲ್ಲಿ ಹಟ ಹಿಡಿದಳು. ತಾಯಿ ಸಮಾಧಾನ ಮಾಡುತ್ತಲೇ ಬಂದರು. ಇವರು ಸುಮ್ಮನ್ನಿದ್ದಷ್ಟು ಅವಳ ಹಠವೇರುತ್ತಿತ್ತು. ಸುಮ್ಮನಿರುವಂತೆ ಸನ್ನೆ ಮಾಡಿದರೂ ಕೂಡಾ ಜೆಸಿಂತ ಕೇಳಲೇ ಇಲ್ಲ. ತಾಯಿ ಲಿಲ್ಲಿಬಾಯಿಗೆ ಬೈಯ್ಯಲು ಶುರುಮಾಡಿದಳು. ಅಜ್ಜಿಲಿಲ್ಲಿ ಸಾಕಿದ ಮೊಮ್ಮಗಳು ಆದಕ್ಕೆ.  ಮತ್ತೂ ಹಠ ನಿಲಲಿಲ್ಲ. ಜೆಸಿಂತ ಹದ್ದು ಮೀರಿದ್ದಳು. ಸ್ವಲ್ಪವೂ ತಾಯಿಯ ಹೆದರಿಕೆ ಇರಲಿಲ್ಲ. ಇನ್ನು ತಡೆದು ಕೊಳ್ಳಲು ಆಗದೆ, ಕೈಗೆ ಸಿಕ್ಕಿದ ಸ್ಕೇಲ್ ನಿಂದ ಹೊಡೆದು ಬಿಟ್ಟರ. "ನಿನ್ನ ಬರ್ತ್ ಡೇ ಅಂತ ಸುಮ್ಮನಿದ್ದೆ, ಇಲ್ಲದಿದ್ದರೆ ಬೇಗನೇ ಬೆನ್ನಿಗೆ ಬೀಳುತ್ತಿತ್ತು. ದರಿದ್ರ ತಂದೆಯ ಸಂತಾನದ ಗುಣವೇ ಬಂದಿದೆ" ಎಂದು ಸಂತಾನದ ಬಗ್ಗೆ ಬೈಯಲಾರಂಭಿಸಿದರು. ಅಂತು ಸನ್ನಿವೇಶ ಈಗ ಹತೋಟಿಗೆ ಬಂದು, ಜೆಸಿಂತ ಸುಮ್ಮನಾಳದಳು.ನಾವು ಹೊರಡುತ್ತೇವೆ ಎಂದು ನಾನು ಮತ್ತು ದಿನೇಶ ಎದ್ದು ನಿಂತೆವು. ನಾನು ಕೂಡಾ ಬಸ್ ಸ್ಟಾಪ್ ತನಕ ಬರುತ್ತೇನೆ ಎಂದು ನಮ್ಮೊಂದಿಗೆ ಮೇರಿ ಆಂಟಿ ಕೂಡಾ ಹೊರಬಿದ್ದರು. ಮುಂಚೆ ನಡೆದ ಘಟನೆಯ ಬಗ್ಗೆ ಮಾತಾಡುತ್ತಾ ಮಾತಾಡುತ್ತಾ ನಾನು ಕೇಳಿದೆ. "ನೀವು ಅವಳ ತಂದೆಗೆ ಅವರ ಸಂತಾನಕ್ಕೆ ಯಾಕೆ ಬೈಯ್ಯುತ್ತೀರಿ ? ಮಕ್ಕಳೆದುರಿಗೆ ಹಾಗೆಲ್ಲಾ ಹೇಳಿದರೆ ನಾವು ಕ್ಷುಲಕವಾಗಿ ಬಿಡುತ್ತೇವೆ, ಎಲ್ಲಾ ವಿಷಯಗಳು ಕೆಲವೊಮ್ಮೆ ಮಕ್ಕಳಿಗೆ ತಿಳಿದಿರ ಕೂಡದು" ಎಂದು ನಾನು ಮಾತು ಮುಗಿಸುವಷ್ಟರಲ್ಲಿ "ಯಾವ ತಂದೆ ಯಾರವನು?" ಎಂದು ವಿಚಿತ್ರವಾಗಿ ಉತ್ತರಿಸಿದರು. "ಏನು ಮಾತಾಡುತ್ತಿದ್ದೀರಿ ನಿಮಗೆ ತಲೆಗಿಲೆ ಕೆಟ್ಟಿಲ್ಲ ತಾನೇ? ನಾನು ನಿಮ್ಮ ಗಂಡ, ಜೆಸಿಂತಳ ತಂದೆಯ ಬಗ್ಗೆ ಮಾತಾಡುತ್ತಿದ್ದೇನೆ" ಎಂದು ಜೋರಾಗಿಯೋ ಹೇಳಿ ಬಿಟ್ಟ. ದಿನೇಶ ನನ್ನ ಹೆಗಲಮೇಲೆ ಕೈ ಹಾಕಿದ, ನನಗೆ ಕಣ್ಣ ಸನ್ನೆ ಮಾಡಿದ. ನಾನು ಸುಮ್ಮನಾದೆ. ನಾನು ಪರಿಸ್ಥಿತಿಯನ್ನು ತಿಳಿಯದೇ ಹೋದೆ. ಇಷ್ಟು ಸಮಯ ಅವರೊಂದಿಗೆ ಒಡನಾಟದಲ್ಲಿದ್ದು ಚಂದ್ರನಲ್ಲಿದ್ದ ಕಪ್ಪು ಚುಕ್ಕೆಗಳನ್ನು ಗುರುತಿಸದಾದೆನೇ? ಪ್ರಾಯಶಃ ನನಗೆ ಹುಣ್ಣಿಮೆಯ ಚಂದ್ರನನ್ನು ಕಾಣುವ ಅವಕಾಶವೇ ಸಿಗಲಿಲ್ಲ ಎನ್ನಬೇಕು. ಏಕೆಂದರೆ ನಾನು ಮುಗ್ಧನಾಗಿದ್ದೆ ಆಂಟಿ ಜೀವನದ ದುರಂತವನ್ನು ತಿಳಿಯದೇ ಹೋಗಿದ್ದೆ!.
.....

ಅದು ಪೆರ್ನಾಲ್ ಚರ್ಚ್ ನ ಹೊರಾಂಗಣ ಜನ ಕಿಕ್ಕಿರಿದು ತುಂಬಿದ್ದಾರೆ. ಯಾವುದೋ ಮದುವೆ ನಡೆಯುತ್ತಿದೆ. ಜನರು ಹೋಗುತ್ತಿದ್ದಾರೆ ಚರ್ಚ್ ಕಡೆ ಮದುಮಗಳು ಮೇರಿ ಬಿಳಿಯ ವಸ್ತ್ರದಲ್ಲಿ ತಾನು ಸಿದ್ಧಳಾಗಿ ಬಂದಿದ್ದಾಳೆ. ಪಕ್ಕದಲ್ಲೇ ಮದುಮಗ ಡೇನಿಯಲ್ ಶೋಭಿಸುತ್ತಿದ್ದಾನೆ.ಅದು ಮೇರಿಯ ಮದುವೆಯ ಸಂಭ್ರಮ ಇಂದು ಮೇರಿ ದಾಂಪತ್ಯ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಅಣಿಯಾಗುತ್ತಿದ್ದಳು. ಮದುಮಗ ಡೇನಿಯಲ್ ಕೂಡಾ ಅದೇ ಊರಿನವ ಇದು ಲವ್ ಮ್ಯಾರೇಜ್ ಅಲ್ಲ ಖಂಡಿತಾ ಅಲ್ಲ , ಮೇರಿಯ ಮನಸ್ಸು ತುಂಬಾ ಸಂಭ್ರಮದಿಂದ ಕೂಡಿತ್ತು. ಮದುವೆ ಎಂದರೇ ಎಲ್ಲರಿಗೂ ಸಂಭ್ರಮ ತಾನೇ , ಎಲ್ಲಾ ಗುರುಹಿರಿಯರು ವಧು ವರರನ್ನು ನೂರು ಕಾಲ ಸುಖವಾಗಿ ಬಾಳಿ ಎಂದು ಹರಿಸಿದ್ದರು. ಅವರ ಆಶೀರ್ವಾದದಂತೆ ಆಗಿರುತ್ತಿದ್ದರೆ ಪಾಪ ಮೇರಿ ಇವತ್ತು ಎಷ್ಟು ಸುಖವಾಗಿರುತ್ತಿದ್ದಳೋ ಏನೋ! 

ವಧು ವರರನ್ನು ಆಶೀರ್ವದಿಸಿ ವಧುವನ್ನು ವರನ ಮನೆಗೆ ಬೀಳ್ಕೊಡುವುದು ಸಂಪ್ರದಾಯ, ಮೇರಿ ಕೃಷ್ಣವರ್ಣೆಯಾಗಿದ್ದರು ಕೂಡಾ ತುಂಬಾ ಲಕ್ಷಣವಾಗಿ ಕಾಣುತ್ತಿದ್ದಳು. ಮೇರಿ ಡೇನಿಯಲ್ ಹೇಳಿ ಮಾಡಿಸಿದ ಜೋಡಿಯಾಗಿತ್ತು. ತನ್ನ ಪ್ರಥಮ ರಾತ್ರಿಯಲ್ಲಿ ಮೇರಿ ಅದೆಷ್ಟೊ ಕನಸುಗಳನ್ನು ಕಟ್ಟಿದ್ದಳೋ ಏನೋ ಡೇನಿಯಲ್ ನನ್ನು ಮದುವೆಯಾದದ್ದು ತನ್ನ ಪುಣ್ಯವೆಂದು ನಂಬಿದ್ದಳು. ನವದಂಪತಿಗಳು ತುಂಬಾ ಸಂತೋಷದಿಂದ ಮಧುಚಂದ್ರವನ್ನು ಮುಗಿಸಿಕೊಂಡು ಬಂದರು. ಮೇರಿಯ ಮನೆಯವರು, ಡೇನಿಯಲ್ ನ ಮನೆಯವರು ತುಂಬಾ ಸಂತೋಷವಾಗಿದ್ದರು. ಒಂದು ದಿನ ಗಂಡನ ಮನೆಯಲ್ಲಿ ಮೇರಿ ತನ್ನ ಮಾವ ಮತ್ತು ಅತ್ತೆ ಈ ರೀತಿ ಮಾತಾನಾಡಿ ಕೊಂಡದ್ದನ್ನು ಕೇಳಿದ್ದಳು," ಇನ್ನಾದರೂ ಡೇನಿಯಲ್ ಒಬ್ಬ ಒಳ್ಳೆಯ ಮನುಷ್ಯನಾಗಿ ಮೇರಿಯೊಡನೆ ಬಾಳಿದರೆ ಸಾಕು ಓ ಯೇಸು ಅಷ್ಟಾದರೂ ಮಾಡಪ್ಪ". ಮೇರಿಗೆ ಮದುವೆಯ ಉತ್ಸಾಹದಲ್ಲಿ ಈ ವಿಷಯ ತಲೆಗೆ ಹತ್ತದೇ ಹೋಯಿತು!. 

ಇನ್ನೂ ೨೦ ದಿನಗಳು ಕಳೆದಿರಲಿಲ್ಲ ಮದುವೆಯಾಗಿ ಡೇನಿಯಲ್ ಮುಂಬೈಗೆ ಹೊರಡಲು ಅನುವಾಗಿ ನಿಂತನು ಈ ಡೇನಿಯಲ್. ತಂದೆ ತಾಯಿಯ ಮುಖದಲ್ಲಿ ದುಗುಡ ತುಂಬಿತ್ತು. ಹೊಸದಾಗಿ ಆ ಪರಿವಾರವನ್ನು ಸೇರಿದ ಮೇರಿ ಅದನ್ನು ತಿಳಿಯದೇ ಹೋದಳು. ಡೇನಿಯಲ್ ಮುಂಬೈಯ ದಾರಿ ಹಿಡಿದ. ಕೇವಲ ಒಂದು  ತಿಂಗಳು ಕಳೆದಿರಬೇಕಷ್ಟೆ ಇದ್ದಕ್ಕಿಂತೆ ಒಂದು ದಿನ ಮೇರಿಯ ಎದುರು ಡೇನಿಯಲ್ ಪ್ರತ್ಯಕ್ಷವಾಗಿಬಿಟ್ಟ. "ಒಂದು ಪೋನು ಕೂಡಾ ಮಾಡ್ಬರದಿತ್ತಾ ಏನು ? ದಿಢೀರನೆ ಬಂದು ಬಿಟ್ಟಿರಲ್ಲ!" ಕೇಳಿಯೇ ಬಿಟ್ಟಿದ್ದಳು ಮೇರಿ. "ಏನಿಲ್ಲ ನಿನ್ನ ನೆನಪು ತುಂಬಾ ಬರುತಿತ್ತು . ಅದಕ್ಕೆ ಹೇಳದೆಯೇ ಬಂದು ಬಿಟ್ಟೆ " ಎಂದು ತಪ್ಪಿಸಿಕೊಂಡ. ಪಾಪ ಮುಗ್ಧ ಮೇರಿಗೆ ಮನದಲ್ಲಿ ಖುಷಿಯಾಗಿತ್ತು. ಆದರೆ ಡೇನಿಯಲ್ ನ  ಹೆಜ್ಜೆ ಹಿಡಿಯಲು ಅವಳು ಅಸಫಲಳಗಿದ್ದಳು!.

    ಮೇರಿ ತಾಯಿಯ ಮನೆಗೆ ಹೋಗಿದ್ದಳು. ಡೇನಿಯಲ್ ಇನ್ನು ಊರಿನಲ್ಲೇ ಇದ್ದ. ಎಲ್ಲೊ ಹೊರಗೆ ಹೋಗಿರಬೇಕು. ಡೇನಿಯಲ್ ತಂದೆ ಮತ್ತು ತಾಯಿ ಮಗನ ನಡವಳಿಕೆಯಿಂದ  ಗಾಬರಿಯಾಗಿದ್ದರು ."ಎನ್ರೀ ಡೇನಿಯಲ್ ಮತ್ತ್ಯಾಕೆ ಬಂದಿದ್ದಾನೆ ಗೊತ್ತಾ?" ಅತ್ತೆಯ ಸ್ವರ, "ನಮ್ಮ ಮಗ ಮುಂಬೈಯಿಂದ ಓಡಿ ಬಂದಿದ್ದಾನೆ, ಅವನಿಗಾಗಿ ಪೋಲಿಸರು ಹುಡುಕಿತ್ತಿದ್ದಾರಂತೆ, ಇದೇನಾದರೂ ಮೇರಿಗೆ ತಿಳೀದು ಬಿಟ್ಟರೇ....." ಮಾತು ಮುಗಿಸುವಷ್ಟರಲ್ಲಿ ಮೆರಿ ಬಂದೇ ಬಿಟ್ಟಿದ್ದಳು. ಬಿಕ್ಕಿ ಬಿಕ್ಕಿ ಅಳತೊಡಗಿದಳು, ಗಂಡ ಬರಲಿ, ಅವನನ್ನೇ ಕೇಳುವುದೆಂದು ನಿರ್ಣಯಿಸಿ ಒಳಮನೆಯನ್ನು ಸೇರಿದ್ದಳು.ಹೊತ್ತು ಮುಳುಗುತ್ತಲೇ ಡೇನಿಯಲ್ ಪೇಟೆಯಿಂದ ಮನೆಗೆ ಬಂದ. ಚಾವಡಿಯನ್ನು ಪ್ರವೇಶಿಸುತ್ತಲೇ "ನಿಲ್ಲಿ ಇವತ್ತು ನೀವು ನನಗೆ ಹೇಳಲೇ ಬೇಕು, ನೀವು ಮುಂಬೈಯಲ್ಲಿ ಎಲ್ಲಿ ಕೆಲಸ ಮಾಡುತ್ತೀರಾ ?" ಎಂದು ಮೇರಿ ಕೇಳಿಬಿಟ್ಟಳು. ಡೇನಿಯಲ್ ದಂಗಾಗಿ ಹೋದ. ಇವಳಿಗೆ ಅಷ್ಟು ಬೇಗ ತಿಳಿದೇ ಹೋಯಿತ,"ನಾನು ಅಂಧೇರಿಯಲ್ಲಿ ಟ್ರಾವೆಲ್ ಏಜೆಂಟ್ ಕೆಲಸ ಮಾಡುವುದು" ಎಂದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಅಷ್ಟರಲ್ಲಿ ಮಾವ ಅತ್ತೆಯ ಪ್ರವೇಶವಾಯಿತು." ನಿಜ ಹೇಳಿ ನೀವು ಯಾರೊಟ್ಟಿಗೆ ಕೆಲಸ ಮಾಡುತ್ತಿದ್ದೀರಾ?"  "ಅಂದರೆ?" ಮೇರಿಯನ್ನೊಮ್ಮೆ ದುರುಗುಟ್ಟಿ ನೋಡಿದ. "ನಿಮ್ಮ ಗ್ಯಾಂಗ್ ನ ಹೆಸರೇನು?" ಮೇರಿ ಎದುಸಿರು ಬಿಡುತಿದ್ದಳು.   ತಲೆಗೆ ಸಿಡಿಲು ಬಡಿದಂತಾಯಿತು ಡೇನಿಯಲ್ ಗೆ. ಗಾಬರಿಗೊಂಡ. ಮೇರಿ ದುಃಖ ತಡೆಯಲಾರದೆ "ನಿಮಗೆ ಮದುವೆ ಯಾಕೆ ಬೇಕಿತ್ತು? ಯಾಕೆ ಈ ಮಾಂಗಲ್ಯ ನನ್ನ ಕೊರಳಿಗೆ ಕಟ್ಟಿದ್ದೀರಿ?ನೀವು ಯಾಕೆ ನನಗೆ ಮೋಸ ಮಾಡಿದಿರಿ? ಹೇಳಿ ಹೇಳಿ" ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಅವನ ಪಾದಕ್ಕೆ ಬಿದ್ದಳು. ಡೇನಿಯಲ್ ಮೇರಿಯನ್ನು ಎಬ್ಬಿಸಲು ಪ್ರಯತ್ನಿಸಿದ, "ಮುಟ್ಟಬೇಡಿ ಆ ಕೊಳಕು ಕೈಗಳಿಂದ !". ಇದು ಬಲವಾಗಿ ಡೇನಿಯಲ್ ಹೃದಯಕ್ಕೆ ನಾಟಿತ್ತು. ಮೇರಿ ಕಣ್ಣೀರಿನ ಕೋಡಿಯಲ್ಲಿ ಮುಳುಗಿ ಹೋದಳು. ಅವಳು ಕಟ್ಟಿದ್ದ ಆಶಾಗೋಪುರ ಕೇವಲ ತಂಗಾಳಿಗೆ ಧೂಳಿಪಟವಾದುದನ್ನು ಅವಳು ಕಂಡು ಪರಿತಪಿಸಿದಳು. ತನ್ನಷ್ಟಕ್ಕೆ ಎನಿಸತೊಡಗಿದಳು. ನನ್ನ ಕನಸು ಇನ್ನು ಈ ಜನ್ಮದಲ್ಲಿ ನನಸಾಗುವಂತೆ ಇಲ್ಲ.ಗೊತ್ತಿದ್ದು ಕೂಡಾ ತನಗೆ ಇಂತಹ ಮದುವೆಯನ್ನು ಮಾಡಿದ್ದ ಮಾವ ಅತ್ತೆಯನ್ನು ದ್ವೇಷಿಸತೊಡಗಿದಳು ಮೇರಿ. ಡೇನಿಯಲ್ ಗೆ ಮುಂಬೈಗೆ ಹೋಗುವಂತಿರಲಿಲ್ಲ . ಊರಿನಲ್ಲಿಯೇ ಇದ್ದು ಸುಮಾರು ತಿಂಗಳು ಸುಧಾರಿಸಿಕೊಂಡ. ಮೇರಿ ಮನಸಿನಲ್ಲಿ" ಇನ್ನು ಇವರು ಸುಧಾರಿಸಿದ್ದಾರೆ"  ಅಂದು ಕೊಂಡಳು.  ಏಳೆಂಟು ತಿಂಗಳು ಕಳೆದದ್ದೇ ತಿಳಿಯಲಿಲ್ಲ.ಆದರೆ ಅವನ ಕೃತ್ಯಗಳು ಅವನನ್ನೇ ಕೈ ಬೀಸಿ ಕರೆಯುತ್ತಿದ್ದವು. ಅವನು ಬಿಟ್ಟು ಹೋಗಿದ್ದ  ಜೀವನ ಮರುಕಳಿಸಿ ತನ್ನೊಡೆಗೆ ಕರೆಯುತ್ತಿತ್ತು.  ಈಗ ತನ್ನ ಮನೆಗೂ ಕೂಡಾ ಎಲ್ಲಾ ವಿಷಯಗಳು ತಿಳಿದಿದ್ದವು ಎಂದು ಮೇರಿ ನೊಂದುಕೊಂಡಳು .  

ಆಗಲೇ ಮದುವೆಯಾಗಿ ಒಂಭತ್ತು ತಿಂಗಳು ಕಳೆದಿತ್ತು. ಡೇನಿಯಲ್ ನನ್ನು ಮುಂಬೈ ಎಳೆಯುತ್ತಿತ್ತು.ಅವನು ತನ್ನ ಹಿಂದಿನ ವೃತ್ತಿಯನ್ನು ಬಿಡಲು ಸುತರಾಂ ಒಪ್ಪಲಿಲ್ಲ. ಅವನು ಬಿಡುವ ಮನಸ್ಸು ಮಾಡಿದರೂ ಮುಂಬೈ ಅವನನ್ನು ಕೈಬೀಸಿ ಕರೆಯುತಿತ್ತು. ಈ ನಡುವೆ ಮೇರಿ ನಾಲ್ಕು ತಿಂಗಳ ಗರ್ಭಿಣಿ ಕೂಡಾ ಆಗಿದ್ದಳು. "ನಮ್ಮ ಮಗುವಿನ ಭವಿಷ್ಯಕ್ಕಾದರೂ ನೀವು ಊರಿನಲ್ಲೇ ಕುಳಿತುಕೊಳ್ಳಿ"ಎಂದು ಅಂಗಲಾಚಿ ಬೇಡಿದರೂ ಕೂಡಾ ಡೇನಿಯಲ್ ಗೆ ಹೃದಯ ಕರಗಲೇ ಇಲ್ಲ. ಈಗ ಮೇರಿ ಒಂದು ಮಹತ್ತರವಾದ ನಿರ್ಧಾರಕ್ಕೆ ಬಂದಿದ್ದಳು. ಡೇನಿಯಲ್ ನಲ್ಲಿ ವಿಚ್ಛೇದನ ಕೇಳಿದ್ದಳು. ಡೇನಿಯಲ್ ಎನೂ ಸುತರಾಒ  ಅನ್ನದೆ ಡೈವೊರ್ಸ್ ಪೇಪರ್ಗೆ ಸಹಿ ಹಾಕಿದ್ದ! . ಪಂಜರದ ಬಾಗಿಲು ತೆರೆದಂತಾಯಿತು ಹೆಬ್ಬುಲಿಗೆ ! ಡೇನಿಯಲ್ ಮುಂಬೈಗೆ ಹಾರಿದ್ದನು. ಮೇರಿ ತನ್ನ ತಾಯಿ ಮನೆ ಸೇರಿದ್ದಳು.

ಅಲ್ಲಿ ಬಾಯಿಯ ಮನೆ, ಪುಟ್ಟ ಮೂರು ತಿಂಗಳ ಮಗುವೊಂದು ಅಳುತಿತ್ತು. ಮೇರಿ ಮಗುವಿಗೆ ಹಾಲುಣಿಸುತ್ತಿದ್ದಳು. ಈಗ ಮೇರಿ ತನ್ನ ಮಗಳು ಜೆಸಿಂತಳ ಬಗ್ಗೆಯೇ ಯೋಚಿಸತೊಡಗಿದಳು. "ನಾನು ನನ್ನ ಮಗಳನ್ನು ಚೆನ್ನಾಗಿ ಸಾಕಬೇಕು, ಅವಳಿಗೆ ಒಳ್ಳೆಯ ಭವಿಷ್ಯವನ್ನು ಕೊಡಬೇಕು" ಎಂದು ನಿರ್ಧರಿಸಿದವಳೇ ಮೂರು ತಿಂಗಳ ಮಗುವನ್ನು ತಾಯಿಯ ಮಡಿಲಲ್ಲಿ ಹಾಕಿ ಮೇರಿ ದುಬಾಯಿಗೆ ಲಗ್ಗೆ ಹಾಕಿದಳು. ದುಬಾಯಿ ಜೀವನ ತಿಳಿದವರಿಗೆ ಗೊತ್ತು. ಅಲ್ಲಿಯ ಭವಣೆ, ಅರಬ್ಬರ ದಬ್ಬಾಳಿಕೆ, ಆದರೂ ಮೇಲಿನ ತನ್ನ ಮಗಳ ಭವಿಷ್ಯ ಮುಖ್ಯವಾಗಿತ್ತು. ಆದರೆ ಮೇಲಿನ ಒಂದು ವಿಷಯ ಅರ್ಥವಾಗಲಿಲ್ಲ. ಆಕೆ ಯೋಚಿಸಿದ್ದು ಮಗುವಿನ ಭವಿಷ್ಯ ಮಾತ್ರ, ಆದರೆ ಆಕೆಗೆ ತಾಯಿ ಪ್ರೀತಿ ಕೊಡುವಲ್ಲಿ ಅವಳು ವಿಫಲಳಾಗಿದ್ದಳು. ಇದು ದುರಂತ. ದುಬಾಯಿ ಬಿಸಿಲಿನ ಬೇಗೆ, ಚಳಿಯ ಕಾಟ ಎರಡಕ್ಕೂ ಈಗ ಮೇರಿ ಹೊಂದಿ ಕೊಂಡಿದ್ದಳು. ಅಷ್ಟರಲ್ಲಿ ತನ್ನ ಮಗುವನ್ನು ನೋಡಬೇಕೆನಿಸಿತೋ ಏನೋ ಮೂರು ವರ್ಷಗಳ ನಂತರ ಊರಿಗೆ ಬಂದಿದ್ದಳು ಮೇರಿ .ಈಗ ಪರಿಸ್ಥಿತಿ ಸುಧಾರಣೆಯಾಗಿತ್ತು. ಮೂರು ವರ್ಷದ ಮಗಳು ಜೆಸಿಂತ ಆಗ ತಾನೇ ಎಲ್.ಕೆ.ಜಿ ಗೆ ಹೋಗುತ್ತಿದ್ದಳು. ಮಾತೃ ಹೃದಯ ಸಂತೋಷದಿಂದ ಕುಪ್ಪಳಿಸಿತ್ತು. ತಾನು ಸಾಧಿಸಿದೆ. ಸಾಧಿಸಿದೆ. ಎಂದು ಒಳಗಿನಿಂದಲೇ ಹೆಮ್ಮೆ ಪಡುತ್ತಿದ್ದಳು. ಆದರೆ ಇದನ್ನು ಹಂಚಿಕೊಳ್ಳಲು ಅವಳಿಗೆ ಸಂಗಾತಿ ಇಲ್ಲದೇ ಹೋಯಿತು. ಒಂದು ವಿಷಯ ಮಾತ್ರ ಮೇರಿಗೆ ತುಂಬಾ ಸಂಕಟವನ್ನು ತಂದಿತ್ತು. ಮಗಳು ಜೆಸಿಂತ ಯಾವ ರೀತಿಯಲ್ಲೂ ಮೇರಿಯನ್ನು ಹೋಲುತ್ತಿರಲಿಲ್ಲ. ತನ್ನ ತಂದೆಯನ್ನೇ ಹೋಲುತ್ತಿದ್ದಳು. ಈಗ ಮೇರಿಗೆ ಅವನ ಹೆಸರು ಎತ್ತಿದ್ದರೂ ಕೋಪ ನೆತ್ತಿಗೆ ಏರುತ್ತಿತ್ತು. ಮತ್ತೆ ಅವನ ಬಗ್ಗೆ ತಿಳಿದು ಕೊಳ್ಳುವ ಯಾವುದೇ ಪ್ರಯತ್ನ ಮೇರಿ ಮಾಡಿರಲಿಲ್ಲ.

ಇಷ್ಟು ವಿಷಯ ಹೇಳುವಷ್ಟರಲ್ಲಿ ಮೇರಿ ಆಂಟಿಯ ಕಣ್ಣಿನಲ್ಲಿ ನೀರು ತುಂಬಿ ಕೊಂಡಿತ್ತು . ನಾನು ಕೂಡಾ ದುಃಖದಲ್ಲಿ ಮುಳುಗಿದೆ. ದಿನೇಶರ ಕಣ್ಣುಗಳು ಸಹ ತೇವದಿಂದ ತುಂಬಿದವು . ಒಟ್ಟಾರೆ ಅವರ ಬದುಕಿನಲ್ಲಿ ಸೂರ್ಯನು ಮಧ್ಯಾಹ್ನವೇ ಮುಳುಗಲು ಹೋಗಿದ್ದ. ಅವಳಿಗಿದ್ದ ಕೊರತೆ ಒಂದೇ ನನಗೆ ಬೆನ್ನು ತಟ್ಟುವವರಿಲ್ಲ. ಈ ಬರ್ತ್ ಡೇಗೆ ಜೆಸಿಂತಳಿಗೆ ಹದಿಮೂರು ವರ್ಷ ತುಂಬಿತ್ತು. ನನಗೆ ಆಶ್ಚರ್ಯವೇ ಆಗಿ ಹೋಯಿತು. ಖಂಡಿತ ನಾನು ಇಷ್ಟೊಂದು ದೊಡ್ಡ ದುರಂತವನ್ನು ಆಂತಿಯ ಬಾಳಿನಲ್ಲಿ ಎಣಿಸಿದವನೇ ಅಲ್ಲ. ಅದು ಕೂಡಾ ನಾನು ಎಣಿಸುವುದಕ್ಕೆ ಮುಂಚೆಯೇ ಆಗಿ ಹೋಗಿತ್ತು. ಯಾರು ನನಗೆ ತಿಳಿಸಿರಲಿಲ್ಲ !.

ಜನವರಿ ೧೩ನೇ ತಾರೀಕು ೨೦೦೨ ನಾನು ಮನೆಯಲ್ಲಿಯೇ ಇದ್ದೆ. ಕೈಗೆ ಸಿಕ್ಕಿದ Times of India ವನ್ನು ಒದುತ್ತಾ ಕುಳಿತಿದ್ದೆ. "Rajans Aide shot Dead" ನಾಮದಡಿಯಲ್ಲಿ ಓದುತ್ತಾ ಮುಂದುವರಿದೆ. "It is reported that Rajans Aide Mr. Daniel Mathias was shot dead yesterday late night when he was eacaping from the police. As per the prior information to the police he was coming meet the Rajans men at Chembur. ನಾನು ಒಂದು ನಿಟ್ಟುಸಿರುನ್ನು ತೆಗೆದೆ. ಅಷ್ಟರಲ್ಲೇ ದಿನೇಶರವರ ಪೋನು ಬಂದಿತ್ತು. ನಾನು ಓದಿದೆ ಅಂದು ಬಿಟ್ಟೆ. ಮೇರಿಯ ಜೀವನಕ್ಕೆ ಬಡಿದ ಕೋಲ್ಮಿಂಚು, ಇಂದು ಕೂಡಾ ತನ್ನ ಪರಿಣಾಮವನ್ನು ತೋರುತ್ತಿತ್ತು. ಅದರ ಪರಿಣಾಮ ಇಂದು ಕೂಡಾ ಆಗಾಗ  ಅವಳ ಶಾಂತಿಯನ್ನು ಕದಡುತ್ತಿತ್ತು. ಆದರೆ ಆ ಮಿಂಚು ಆಡುತ್ತಿದ್ದ ಆಟಕ್ಕೆ ಇಂದು ಕೂಡಾ ಮೇರಿ ಏಕಾಂಗಿಯಾಗಿ  ನಿಂತಿದ್ದಾಳೆ.

- ಅಕುವ
......................................................................................................................................................................