Tuesday, November 16, 2010

ಚಿರಂಜೀವಿ

                   ಆ ದಿನ ಪತ್ರಿಕೆಯಲ್ಲಿ ಕಾಲೇಜು ವಿಶ್ವ ವಿದ್ಯಾಲಯಗಳ ಫಲಿತಾಂಶ ಪ್ರಕಟವಾಗಿತ್ತು. ಎಂದಿನಂತೆ ದಿನ ಪತ್ರಿಕೆಯ ಪುಟತಿರುವುತ್ತ ಅತ್ತ ಕಡೆ ಕಣ್ಣು ಹಾಯಿಸುತ್ತಿದ್ದ ಕಾಲೇಜು ತೃತೀಯ ವರ್ಷದ ರಾಜೇಶನ ಕಣ್ಣಿಗೆ ಬಿದ್ದದ್ದು ಫಲಿತಾಂಶದ ವಿಜೇತರ ಪಟ್ಟಿಯ ಪಕ್ಕದಲ್ಲೇ ಹಾಕಿದ್ದ ವಿದ್ಯಾರ್ಥಿಯ ಆತ್ಮಹತ್ಯೆ ತಲೆಬರಹ. ಅದನ್ನು ಓದಿಮುಗಿಸಿದಾಗ ಆತನ ಕಣ್ಣು ತುಂಬಿ ನೀರು ಗಲ್ಲದ ಮೇಲೆ ತೊಟ್ಟಿಕ್ಕತೊಡಗಿದವು. ಒಂದೆಡೆ ತಮ್ಮ ಕಾಲೇಜಿಗೆ RANK ಬಂದ ಸಂತಸ, ಇನ್ನೊಂದೆಡೆ RANK ಪಡೆದ ವಿದ್ಯಾರ್ಥಿ ಅಜಯನ ಆತ್ಮಹತ್ಯೆಸುದ್ದಿ. ಅಜಯನ ಹೆಣದ ಮುಖವನ್ನಾದರೂ ನೋಡಬೇಕೆಂದು ಅವನ ಮನೆಯ ಕಡೆ ರಾಜೇಶ ನಾಗಾಲೋಟದಿ ಓಡಲಾರಂಭಿಸಿದ. ದಾರಿಯಲ್ಲೇ ಎಲ್ಲಾ ಗೆಳೆಯರಿಗೂ ಸುದ್ದಿಯನ್ನು ಮುಟ್ಟಿಸಿದೆನು. ಇನ್ನೂ ಒಂದೇ ಎರಡು ಗಳಿಗೆಯಲ್ಲಿ ಅಜಯನ ಹೆಣವು ಶ್ಮಶಾನದ ಕಡೆಗೆ ಹೊರಡಲು ಅನುವಾಗುತ್ತಿದ್ದಾಗ ರಾಜೇಶ ಮತ್ತು ಗೆಳೆಯರು ಬಂದಿದ್ದರು. ಮಗನನ್ನು ಕಳೆದುಕೊಂಡ ಆ ಮಮತೆಯ ಮೂರುತಿ ಅಜಯ್ ನ ಅಮ್ಮ ಗಿರಿಜಕ್ಕಳ ಕೂಗು ಮುಗಿಲು ಮುಟ್ಟಿತ್ತು , ಅಜಯನ ತಮ್ಮಂದಿರು, ಒಬ್ಬಳೇ ಒಬ್ಬ ತಂಗಿ ಸಂಜನಾಳಿಗೆ ದುಃಖ ತಡೆದು ಕೊಳ್ಳಲಾಗಲಿಲ್ಲ .ಇದನ್ನು ಕಂಡೇ ಸ್ನೇಹಿತರೂ ಕಣ್ಣೀರ ಕಡಲಲ್ಲೇ ಮುಳುಗಿದರು.ಕಾಟದ ರಾಶಿಯ ಮೇಲೆ ತೇಜದ ಮುಖವನ್ನೊಂದಿದ ಆ ದೇಹವು ಕೆಲವೇ ಕ್ಷಣಗಳಲ್ಲಿ ಭಸ್ಮವಾಗಿ ಪಂಚಭೂತಗಳಲ್ಲಿ ಲೀನವಾಗಿತ್ತು. ರಾಜೇಶ್ ದುಃಖದ ಮಡುವಲ್ಲಿ ಕೊಚ್ಚಿಹೋದ !

                          ರಾಜೇಶ್ ಮತ್ತು ಅಜಯ್ ಇಬ್ಬರೂ ಕಾಲೇಜಿನಲ್ಲಿ ಅಂಟುಹಿಡಿದವರಂತೆ ಇದ್ದವರು.ರಾಜೇಶ್, ಅಜಯ್ ನ ಮನೆಯ ಪರಿಸ್ಥಿಯನ್ನು ನೋಡಿದ್ದನು. ಕಡು ಬಡತನ. ಆದರೂ ತಾನು ಮುಂದೆ ಏನಾದರೂ ಸಾಧಿಸಬೇಕೆಂದಿದ್ದ ಅಜಯ್ ಯಾಕೀಗೆ ಮಾಡಿದನೆಂಬುದೇ ರಾಜೇಶನಿಗೆ ಚಿಂತೆ ಹತ್ತಿಸಿತ್ತು. ಆದರೆ ಅಜಯ್ ಅಷ್ಟರಲ್ಲೇ ದೂರವಾಗಿ ಎಲ್ಲೋ ನಿಂತು ಈ ಭೂಮಿಯನ್ನು ನೋಡುತ್ತಿದ್ದಾನೆ!. ಇನ್ನೇನ್ನಾದರೂ ಇದ್ದರೆ ಅವನಿದ್ದನೆಂಬ ಭಾಸ ಮಾತ್ರ! ಅಂದು ಕಾಲೇಜಿನಲ್ಲಿ ಅಜಯ್ ನ ಆತ್ಮಕ್ಕೆ ಶಾಂತಿ ಕೋರಿ ವಿದ್ಯಾರ್ಥಿ ಬಳಗ ಹೊರಬೀಳುತಿತ್ತು. ರಾಜೇಶ್ ಗೆ ಪ್ರತಿಯೊಂದು ವಿಷಯವನ್ನೂ ತಪ್ಪದೆ ಹೇಳುತಿದ್ದ ಅಜಯ್ ಏನು ಮುಚ್ಚಿಟ್ಟ ? ರಾಜೇಶ್ ಕಸಿವಿಸಿಗೊಂಡು ತಲೆ ಕೆರೆಯ ತೊಡಗಿದ. "ರಾಜೇಶ್ ಕೆಲವೊಮ್ಮೆ ನನಗೆ ಬದುಕೇ ಬರಡೆನಿಸುತ್ತದೆ, ಕೆಲವೊಮ್ಮೆ ನಾನು ಕಾಲೇಜು ಸೇರಿದ್ದೆ ತಪ್ಪೇನಿಸುತ್ತದೆ! ಎಲ್ಲಿಯಾದರೂ ಕೂಲಿ ನಾಲಿ ಮಾಡಬಹುದಿತ್ತು. ದರಿದ್ರ ನನ್ನ ತಲೆ ಮಂಕಾಗ ಬಾರದಿತ್ತೇ ? ದುಡಿದು ದುಡಿದು ಬೇಸತ್ತ ತಂದೆ ! ಒಮ್ಮೊಮ್ಮೆ ನನ್ನ ಬಾಳು ಕೊಳಕು ಯಾತನೆ ಎನಿಸುತ್ತದೆ" ಹೇಳುತಿದ್ದ ಅಮರ್ ನ ಮಾತುಗಳು ಇನ್ನೂ ರಾಜೇಶನ ಕಿವಿಯಲ್ಲಿ ಹಾಗೆ ಉಳಿದುಹೋಗಿದೆ. "ವೇಬರನ ಸಿದ್ಧಾಂತ ಎಲ್ಲಾ ಕಲಿತು ಜೀವನ ರದ್ದಾಂತ ಆಗಿ ನನ್ನ ಬಾಳು ಶೂನ್ಯದಲ್ಲಿ ಕೊನೆಗೊಳ್ಳದಿದ್ದರೆ ಸಾಕು, ಕೆಲವೊಮ್ಮೆ ನನಗೆ ನಾನು ಉಸಿರಾಡುತ್ತೇನೋ ಇಲ್ಲವೋ ತಿಳಿಯುತ್ತಿರಲಿಲ್ಲ" ಇವೆಲ್ಲಾ ಅಜಯ್ ಹೇಳಿದ ಮಾತುಗಳು ರಾಜೇಶನ ಸ್ಮೃತಿ ಪಟಲದಲ್ಲಿ ಇನ್ನೂ ಅಚ್ಚು ಅಚ್ಚಾಗಿ ಮುದ್ರಿತವಾಗಿತ್ತು. ಏನೂ ಮಾಡಿದರೂ ಅಜಯ್ ನ ನೆನಪು ಮತ್ತೆ ಮತ್ತೆ ಮರುಕಳಿಸಿದವು.ಎಲ್ಲರೂ ಕೂಡಾ ಅಸಮಾಧಾನಗೊಂಡಿದ್ದರು ಅಜಯ್ ನ ಈ ಕೃತ್ಯದಿಂದಾಗಿ. "ಏಕಾದರೂ ಈ ರೀತಿ ಮಾಡಿದ ?" ಎಂದು ಹೇಳದವರೆಲ್ಲರೂ ಹೇಳಿ ಮುಗಿಸಿದ್ದರು. "ಯಾಕೆ ... ಸತ್ತ ? ಯಾಕೆ ಸತ್ತ? " . ಅಷ್ಟರಲ್ಲಿ ವಿನಯ ಪ್ರಿನ್ಸಿಪಾಲ್ ರೂಮಿಂದ ಒಂದು ಪತ್ರವನ್ನು ಹಿಡಿದು ಓಡುತ್ತಾ ಓಡುತ್ತಾ ರಾಜೇಶ ನಲ್ಲಿಗೆ ಬಂದಳು. "ಇದು ಅಜಯ್ ನಿನಗೆ ಬರೆದ ಪತ್ರ , ಇವತ್ತು ರಿಜಿಸ್ಟ್ರೆಡ್ ಪೋಸ್ಟ್ ನಲ್ಲಿ ಬಂದಿದೆ. "ಆ ಪತ್ರವನ್ನು ನನಗೆ ಕೊಡು, ಬೇಗ ಕೊಡು ,ಬೇಗ ಕೊಡು" ರಾಜೇಶ್ ನ ಕೈ ಕಾಲು ನಡುಗ ತೊಡಗಿದವು !

                  ಅದು ಪೆಬ್ರುವರಿ ೧೪ ನೇ ತಾರೀಕು. ಬೇಗ ಎದ್ದು ರಾಜೇಶ್ ನನ್ನು ಕಾಲೇಜಿಗೆ ಕರೆಯಲು ಬಂದಿದ್ದ ಅಜಯ್ ಸೀದಾ ರಾಜೇಶನ ಬೆಡ್ ರೂಮ್ ಗೆ ಬಂದಿದ್ದ. ಇನ್ನೂ ಹೊದಿದ್ದ ಹೊದಿಕೆಯಲ್ಲೇ ಇದ್ದ. "ವಿನಯ ಪತ್ರ ಬೇಗ ಕೊಡು ,ಕೊಡು" ಎಂದು ತಡವರಿಸುತ್ತಿದ್ದ ! ಮುಖಕ್ಕೆ ನೀರೆರಚಿದ್ದ ಅಜಯ್. ಒಮ್ಮೆಲ್ಲೆ ಎಚ್ಚೆತ್ತ ರಾಜೇಶ್ ಗಾಬರಿಯಿಂದ ಎದ್ದು ಕುಳಿತ. ಕೈಕಾಲು ನಡುಗುತಿತ್ತು ,ಹೆದರಿದ ಕಣ್ಣುಗಳಿಂದ ಅಜಯ್ ನನ್ನು ದಿಟ್ಟಿಸಿದ. ಕಣ್ಣುಜ್ಜಿಕೊಂಡು ಖಚಿತವಾದ ಮೇಲೆ ಅಜಯ್ ನ ಸಮೀಪಕ್ಕೆ ಬಂದನು. ಒಮ್ಮೆ ಮುಟ್ಟಿ ಕೂಡಾ ನೋಡಿದ. ತಾನು ಕಂಡಿದ್ದು ಕನಸು ಎಂದು ರುಜುವಾಗಿ "ಅಹ್ಹ ಹ್ಹಹ ......." ನಗಲಾರಂಬಿಸಿ " ಅಜಯ್ ನೀನು ಬದುಕಿಬಿಟ್ಟೆ !" ಅಜಯ್ ತಬ್ಬಿಬಾದ ! "ಎನೋ ಇವತ್ತಿನ ಕನಸಿನಲ್ಲಿ ಏನು ನೋಡಿದ್ದೆ ? ನನ್ನನ್ನು ಸಾಯಿಸಿಲಿಲ್ಲ ತಾನೇ ?" ಆಗಾಗಲೇ ಗೋಡೆ ಗಡಿಯಾರ ಎಂಟು ಬಾರಿ ಹೊಡೆದುಕೊಂಡಿತ್ತು. "ಎಲ್ಲಾ ನಿನಗೆ ಕಾಲೇಜು ಮುಟ್ಟಿದನಂತರ ಹೇಳ್ತೇನೆ, ಈಗ ಬೇಗ ಹೊರಡೋಣ "ಅಂತ ಬಾತ್ ರೂಮ್ ಗೆ ಹೋದವನು ೫ದೇ ನಿಮಿಷದಲ್ಲಿ ತಯಾರಾಗಿದ್ದ. "ರಾಜ! ರಾಜ!" ಅಜ್ಜಿ ಕರೆದದ್ದು ಕೇಳಿ ರಾಜೇಶ್ "ಏನಜ್ಜಿ ? " "ಚಹಾ ಕುಡಿದು ಹೋಗಿ, ಮಕ್ಕಳೇ " ಅಂತ ಹೇಳಿ ಹಠಹಿಡಿದಳು. ಅಜ್ಜಿಗೆ ಮಣಿದ ಇಬ್ಬರೂ ಗಬಗಬನೆ ತಿಂಡಿ ಮುಗಿಸಿ ಆಗಲೇ ಬಸ್ ಸ್ಟಾಂಡ್ ಕಡೆ ಶರವೇಗದಲ್ಲೆ ನಡೆದರು.

                ಶಾರದಾಂಬ ಬಸ್ಸು ಕಾಲೇಜು ಸ್ಟಾಂಡ್ ಗೆ ಬಂದಾಗಲೇ ವಿನಯ, ಶರತ್, ದೀಪಿಕಾ ಮತ್ತು ಜಾಹ್ನವಿ ಎದುರು ನೋಡುತ್ತಿದ್ದರು. ಕ್ಲಾಸು ಆರಂಭಕ್ಕೆ ಇನ್ನೂ ಮುಕ್ಕಾಲು ಗಂಟೆ ಬಾಕಿ ಇತ್ತು. ಮೇಪ್ಲವರ್ ಮರ ಆಗಾಗಲೇ ಚಿಗುರೆಲೆ ತುಂಬುತಿತ್ತು. ಮರದ ನೆರಳಲ್ಲಿ ಆರೂ ಮಂದಿ ಕುಳಿತು ಸಂವಾದ ಶುರುವಾಯಿತು. ಅಜಯ್ ಶುರು ಹಚ್ಚಿದ "ರಾಜೇಶ್ ಮತ್ತೆ ಕನಸಿನಲ್ಲಿ ವಿನಯಳ ಹೆಸರು ತೆಗೆಯುತಿದ್ದ , ವಿನಯ ಇವತ್ತಾದರೂ ಇವನಿಗೆ ನೀ ಪ್ರೊಪೊಸ್ ಮಾಡೆ ! ಹೇಗೊ ವೆಲೆಂಟೈನ್ ಡೇ ಕೂಡಾ ! ಏನ್ ಹೇಳ್ತೀಯಾ? " ವಿನಯ ನಾಚಿಕೆಗೊಂಡಳು. ಮನಸ್ಸಿನಲ್ಲಿ ಭಾವನೆ ಇದ್ರೂ ಕೂಡಾ ಹೇಳಿಕೊಳ್ಳಿಲಿಕ್ಕೆ ಏನೋ ಭಯ. "ಮತ್ತೆ ಎನೋ ಪತ್ರ ಪತ್ರ ಹೇಳ್ತಿದ್ದ ! Love Letter ಅಲ್ಲಾ ತಾನೇ? " ಅಜಯ್ ರಾಜೇಶ್ ನನ್ನು ತರಾಟೆಗೆ ತಕ್ಕೊಂಡಿದ್ದ. ರಾಜೇಶ್ "ಹೇಳ್ತೇನಪ್ಪ ! ಸ್ವಲ್ಪ ಸುಮ್ಮನಿರತ್ತೀರಾ? ಮೊದಲು ವಿನಯಳಿಗೆ ಪ್ರೋಪೊಸ್ ಮಾಡಲು ಹೇಳಿ ". ಅಂತು ಇಬ್ಬರೂ ಮನಸ್ಸು ಬಿಚ್ಚಿದ್ದು ಎಲ್ಲರಿಗೂ ಖುಷಿ ಕೊಟ್ಟಿತ್ತು. ಒಂದು ಚೆಂಗುಲಾಬಿಯ ವಿನಿಮಯ ಇಬ್ಬರ ಹೃದಯದ ಪ್ರೇಮಕ್ಕೆ ನಾಂದಿ ಹಾಡಿತು!. ರಾಜೇಶ್ ಕನಸನ್ನು ವಿವರಿಸಿದ. ಎಲ್ಲರೂ ನಕ್ಕು ನಲಿದಿದ್ದರು. ಪಕ್ಕದಲ್ಲಿಯೇ ಅಜಯ್ ಎದ್ದುಬಿದ್ದು ನಗುತ್ತಿದ್ದ. ಜಾಹ್ನವಿ ನಡುವೆ ಬಾಯಿ ಹಾಕಿ "ಅಲ್ಲಾ ಪತ್ರ ಏನಾಯಿತೋ ?" ಶರತ್, ದೀಪಿಕಾ ಕೂಡಾ "ಎನಾಯಿತು ಪತ್ರದ ವಿಚಾರ? ಬೇಗ ಹೇಳು. ಅಷ್ಟರಲ್ಲಿ peon ಮಾರ್ಕ್ಸ್ ಓಡೋಡಿ ಬಂದ "ಪ್ರಿನ್ಸಿಪಾಲರು ನಿಮ್ ಆರು ಮಂದಿನ ಚೇಂಬರ್ ಗೆ ಕರೆದಿದ್ದಾರೆ " ನಾವು ಆರು ಮಂದಿಗೂ ನಡುಕ ಹುಟ್ಟಿತು. ಹೆದರುತ್ತಲೇ ಪ್ರಿನ್ಸಿಪಾಲರ ಎದುರು ಹೋಗಿ ಒಂದೇ ಸಾಲಲ್ಲಿ ಅಪರಾಧಿಗಳ ನಿಂತಿದ್ದರು. ಎಲ್ಲರೂ ದೃಷ್ಟಿಯನ್ನು ನೆಲದ ಕಡೆ ಇರಿಸಿದ್ದರು. ಪ್ರಿನ್ಸಿಪಾಲ್ ಡೇಸರ ಕೈಯಲ್ಲೊಂದು ಅಂಚೆ ಲಕೋಟೆ ಇತ್ತು. ರಾಜೇಶ್ ಗೆ ಮತ್ತೆ ಕನಸಿನ ಲಕೋಟೆ ಕಾಣತೊಡಗಿತು. ಅಜಯ್ ಒಮ್ಮೆ ರಾಜೇಶ್ ಕಡೆ ನೋಡಿದ ! ತಬ್ಬಿಬ್ಬಾದರು! ಡೇಸರು ಶುರುವಾದರು "ನಮ್ಮ ಕಾಲೇಜು "ಮಲ್ಲಿಗೆ"ಗೆ ಅತ್ಯುತ್ತಮ ಮ್ಯಾಗಸಿನ್ ಪ್ರಶಸ್ತಿ ಬಂದಿದೆ . Congratulations to all six of you, for this Success ". ಆರು ಮಂದಿಗೂ ಹೋದ ಜೀವ ಮರುಕಳಿಸಿದಂತಾಯಿತು !.ಮುಖವೆತ್ತಿ ಮುಗುಳ್ನಕ್ಕರು !

ಅಕುವ ೧೩/೧೧/೨೦೧೦