Sunday, July 6, 2014

ಕನ್ನಡ ವೈಭವ

ಕನ್ನಡ ವೈಭವ

ಪುರಾತನ ಶಾಸನಗಳ ಮಳಿಗೆಯಲ್ಲಿ
ವಿನೂತನ ಪರಂಪರೆಯ ನೆಲೆಯಲ್ಲಿ
ಟಿಸಿಲೊಡೆದ ತ್ರಿಪದಿ ಸಾಲುಗಳಲ್ಲಿ
ಕನ್ನಡದ ಅಕ್ಷರಗಳ ಉದಯ
ಹೀಗೆನ್ನ ಕಸ್ತೂರಿ ಕನ್ನಡವು ಉದಯಿಸಿತಣ್ಣ !

ಕವಿರಾಜಮಾರ್ಗದ ಅಲಂಕಾರದಲಿ
ಶಬ್ದಮಣಿಯ ಮಾಣಿಕ್ಯ ಪೋಣಿಸುತ
ವಡ್ಡರಾಧನೆಯ ಗದ್ಯ ರೂಪದಲ್ಲಿ
ರಾಷ್ಟ್ರಕೂಟ ಕದಂಬರ ಬಾದಾಮಿ ಚಾಲುಕ್ಯ
ಹೊಯ್ಸಳರು ಕೊಂಡಾಡಿ ಅಂಬೆಗಾಲಿಕಿತ್ತೆನ್ನ ಕನ್ನಡ !

ಉತ್ತುಂಗಕ್ಕೇರಿದ ಚಂಪೂ ಕಾವ್ಯವನು
ಪಂಪ ಪೊನ್ನ ರನ್ನ ದಿಗ್ಗಜರು ಪಸರಿದರು
ಕುಮಾರವ್ಯಾಸನು ಹಾಡಿದ ಗುದುಗಿನ ಭಾರತ
ಕರ್ಣಾಟಕ ದೇಶಕ್ಕೆ ಸೊಬಗು !

ಭಾಮಿನಿ ಷಟ್ಪದಿಯ ಕಾವ್ಯದ ಇಂಪು
ರಾಘವಾಂಕ ವರ್ಣಿಸಿದ ಹರಿಶ್ಚಂದ್ರನ ನೆಂಪು
ರಗಳೆಯಲ್ಲೇ ನಿರರ್ಗಳ ಕಥೆ ಹೇಳಿದ ಹರಿಹರ
ಲಕ್ಷೀಶನ ಜೈಮಿನಿ ಭಾರತ ವೈಭವ
ಇವೆಲ್ಲಾ ಕೇಳಿದರೆ ಕನ್ನಡದ ಕಿವಿ ಕಂಪು .!

ಊರೆಲ್ಲ ನೆಂಟರು ಕೇರಿಯೆಲ್ಲವು ಬಳಗ
ಜೀವನವೇ ಕಥೆಯಾಗಿ ಸಾರಿದ ಸರ್ವಜ್ನ
ಬಾಯಿ ಮಾತು ಹಾಡಾದ ವಚನ ವೈಶಿಷ್ಟ್ಯ
ಹಾಡುಗಬ್ಬದ ಬಸವಯುಗ ಶರಣರಿಗಿದೇ ಸೊಗಸು
ಕನ್ನಡಕ್ಕೆ ಆಗ ಇದೆಲ್ಲಾ ಹೊಸತು !

ತಂಬೂರಿ ಕೀರ್ತನೆ ದಾಸರ ಆಚರಣೆ
ಭಕ್ತಿಯ ಮಾರ್ಗ ಇಷ್ಟವೂ ಅವರಿಗೆ
ಉಪನಿಷತ್ತುಗಳೇ ಸೊತ್ತಾಗಿ ಒಟ್ಟಾದ ಸಾಹಿತ್ಯ
ಕನಕನ ರಾಮಧಾನ್ಯ , ಹರಿಭಕ್ತಿ, ಮೋಹನ ತರಂಗಿಣಿ
ನಾಡಿನುದ್ದಕ್ಕೂ ವಿಸ್ತರಿಸಿದುದು ಹೀಗೆ !

ಕುಮಾರವಾಲ್ಮೀಕಿ ರತ್ನಾಕರವರ್ಣಿ ವೈಭವಿವಿಲ್ಲಿ
ಮುದ್ದಣ್ಣ ಮನೋರಮ ಸಾಹಿತ್ಯ ಸಲ್ಲಾಪದಲ್ಲಿ
ಮುಂಗೋಳಿ ಕೂಗಿ ಅದ್ಭುತ ರಾಮಾಯಣ ಹಾಡಿ
ಯಕ್ಷಗಾನ ಸಾಹಿತ್ಯಕ್ಕೆ ನಂದಾದೀಪವಾಗಿ
ಜಾನಪದದೊಳು ಕನ್ನಡ ಬೆಳೆಯಿತೆನ್ನಿ !

ಇಂಗ್ಲೀಷ್ ಗೀತೆಗಳ ಶ್ರೀಯವರು ತಂದರು
ಕಗ್ಗವ ಹಿಡಿದುಕೊಂಡು ಡಿ.ವಿ.ಜಿ ಬಂದರು
ರಾಮಾಯಣದ ನಿಜ ಆನಂದದಲ್ಲಿ ಕುವೆಂಪು ಮಿಂದರು!
ಗರಿ ಬಿಟ್ಟ ಹಾರುಹಕ್ಕಿಯ ಬೇಂದ್ರೆ ನೋಡಿ ಕುಣಿದರು
ಹೀಗೆನ್ನ ಕನ್ನಡದಲಿ ಸಂಭ್ರಮದಿ ನಲಿದರು !

ಚಿಕ್ಕಚಿಕ್ಕ ಕಥೆಗಳ ಹೊಸೆದರು ಶ್ರೀನಿವಾಸ
ಪುರಾಣ ಇತಿಹಾಸಗಳ ಸರಿಬರೆದರು ದೇವುಡು
ಕಟ್ಟುವೆವು ನಾಡೊಂಡ ಸಾರಿದರು ಅಡಿಗ
ಒಟ್ಟೊಟ್ಟಿಗೆ ಬೆಳೆದರು ತರಾಸು ಗೊರೂರು
ಹಿರಿದಾಯಿತನ್ನ ಕನ್ನಡದ ಜಗತ್ತು ಇವರೆಲ್ಲಾ ಸೇರಿ !

ಕಡಲ ತಡಿ ಉದ್ದಕ್ಕೂ ಕಾರಂತರ ಲೋಕ
ಕಾದಂಬರಿಯ ಮೂಕಜ್ಜಿಯ ಕನಸಿನ ಲೋಕ
ಮೈಸೂರು ಮಲ್ಲಿಗೆ ಪಸರಿಸಿದ ಭೂಪ
ದಾಂಪತ್ಯ ಕೆ.ಎಸ್ ನ ಕವನದ ಸ್ವರೂಪ
ಜೀವನ ಎಳೆತಂದರು ಕನ್ನಡಕ್ಕೆ ಎಲ್ಲರೂ !.

ಗೋಕುಲ ನಿರ್ಗಮಿಸುತ ಪುತಿನ ಬಂದರು
ಕಟ್ಟಿಮನಿ ಗೋವಿಂದ ಪೈ ತಾವೆಲ್ಲಾ ಇದ್ದೇವೆ ಎಂದರು
ಕನ್ನಡ ಉಳಿಸಲು ಅನಕೃ ನಾಯಕರು
ನಿರಂಜನ ಅಲನಹಳ್ಳಿ ಮುಗಳಿ ಮೂರ್ತಿ ಕಂಡರು
ದಾಪುಗಾಲಾಕಿತು ಕನ್ನಡ ಎನ್ನಿ !

ನಾಟಕದ ರಂಗ ಪ್ರವೇಶಿದರು ಕಾರ್ನಾಡಧ್ವಯರು
ಕಾದಂಬರಿ ಸಾರಥ್ಯಕ್ಕೆ ಭೈರಪ್ಪ ಸೈ ಎಂದರು
ಲಂಕೇಶ ತೇಜಸ್ವಿ ತೇಜಸ್ಸು ಮೆರೆಯಿತು
ದೇವನೂರ ಕಂಬಾರ ಶ್ರೇಷ್ಠತೆ ಹಿರಿದಾಯಿತು
ಕನ್ನಡ ಜಗದ್ವಿಖ್ಯಾತ ವಾಯಿತು !

ಇನ್ನಿಹರು ಎನಿಸಲಾಗದ ನಕ್ಷತ್ರಮಣಿಗಳು
ಗ್ರಂಥೋಪಗ್ರಂಥಗಳ ಕರ್ತೃಗಳು
ಹಿರಿಯರು ಕಿರಿಯರು ಮನೆಯವರು
ಹೊರನಾಡಿನವರು ಗಡಿನಾಡಿನವರು
ಶ್ರೀಮಂತ ಕನ್ನಡ ಹೃದಯಗಳು
ಸದಾ ಕನ್ನಡವನ್ನೇ ಮಿಡಿಯುವರು... !

- ಅಶೋಕ ಕುಮಾರ್ ವಳದೂರು ( ಅಕುವ)

No comments:

Post a Comment