http://www.panjumagazine.com/?p=8552
"ಒಂದೇ ಜಾತಿ, ಒಂದೇ ಧರ್ಮ,ಒಬ್ಬನೇ ದೇವರು" ಎಂದು ಮನುಕುಲ ಕುಟುಂಬಕ್ಕೆ ಸಾರಿ ವಿಶ್ವ ಮಾನವ ಸಂದೇಶವನ್ನು ಕೇರಳದಿಂದ ಪ್ರಾರಂಭ ಮಾಡಿ ದೇಶದೆಲ್ಲೆಡೆ ಹಬ್ಬಿಸಿದ ಮಹಾನ್ ಸಂತ ಶ್ರೀ ನಾರಾಯಣ ಸ್ವಾಮಿ. "ಯಾರನ್ನೂ ದ್ವೇಷಿಸ ಬೇಡಿ, ಸಂಘಟನೆಯಿಂದ, ಶಿಕ್ಷಣದಿಂದ, ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ದೇಶದ ಉನ್ನತಿಯನ್ನು ಸಾಧಿಸೋಣ" ಎಂದು ಒಂದು ಶತಮಾನಗಳ ಹಿಂದೆ ಈ ಜನಕ್ಕೆ ಸಾರಿದ ಗುರು ನಾರಾಯಣರ ಸಂದೇಶವು ವಾಸ್ತವದ ಅರ್ಥವನ್ನು ಪಡೆಯುವುದು ನಾವು ಕಾಣುತ್ತೇವೆ.
ಹದಿನೆಂಟು ಹತ್ತೊಂಭತ್ತನೆಯ ಶತಮಾನಗಳು ಈ ನಾಡಿನಲ್ಲಿ ಐರೋಪ್ಯರು ವಸಾಹತುಗಳನ್ನು ಸ್ಥಾಪಿಸಿ ಭಾರತದ ರಾಜಕೀಯ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಭಾರತೀಯರನ್ನು ಗುಲಾಮರನ್ನಾಗಿಸಿದ ಕರಾಳ ಇತಿಹಾಸವಾಗಿತ್ತು. ಇದು ರಾಜಕೀಯರಂಗದ ಗೋಳಾದರೆ ಸಾಮಾಜಿಕ ಕ್ಷೇತ್ರದ್ದು ಇನ್ನು ನೋವಿನ ಕತೆಯಾಗಿತ್ತು. ಆ ಕಾಲದಲ್ಲಿ ಜಾತಿಯಲ್ಲಿ ಹಿಂದುಳಿದ ವರ್ಗದವರ ಶೋಷಣೆಯೇ ನಡೆದಿತ್ತು. ಕೇರಳದ ಬಹುಸಂಖ್ಯಾತ ಈಳವ (ಬಿಲ್ಲವ) ಜನಾಂಗದವರು ಕೂಡಾ ಅಸ್ಪೃಶ್ಯ ವರ್ಗಕ್ಕೆ ಸೇರಿದ್ದರು. ದೇವಾಲಯದಲ್ಲಿ ಪ್ರವೇಶವಿರಲಿಲ್ಲ. ಮೇಲು ಜಾತಿಯವರು ನಡೆಯುವ ದಾರಿಯಲ್ಲಿ ನಡೆಯುವಂತಿಲ್ಲ, ಮಹಿಳೆಯರು ಕುಪ್ಪಸ್ಸ ತೊಡುವಂತಿರಲಿಲ್ಲ, ಆಭರಣ ಧರಿಸುವಂತೆಯೇ ಇರಲಿಲ್ಲ, ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ. ಅವಿದ್ಯೆಯಿಂದಾಗಿ ಸಾಮಾಜಿಕವಾಗಿ ಕ್ರೂರ ಶೋಷಣೆಗೆ ಒಳಗಾದ ಈ ಈಳವರಿಗೆ ತಮ್ಮ ದುಃಸ್ಥಿತಿಯ ಅರಿವೂ ಕೂಡಾ ಇರಲಿಲ್ಲ. ಈ ಮೌಢ್ಯತೆಯನ್ನು ಕಂಡ ಸ್ವಾಮಿ ವಿವೇಕಾನಂದರೇ "ಕೇರಳವೊಂದು ಹುಚ್ಚರ ಆಸ್ಪತ್ರೆ " ಎಂಬ ಉದ್ಗಾರ ತೆಗೆದಿದ್ದರು.
೧೮೫೪ನೇ ಯ ಇಸವಿಯ ಕೇರಳದಲ್ಲಿ ಒಣಂ ಹಬ್ಬದ ಮೂರನೆಯ ದಿನ ಹುಣ್ಣಿಮೆಯ ಶುಭ ಸಂದರ್ಭದಂದು ಮಾದನ್ ಆಶಾನ್ ಮತ್ತು ಕುಟ್ಟಿ ದಂಪತಿಯ ಕೊನೆಯ ಪುತ್ರನಾಗಿ ವಿಶ್ವ ಮಾನವತೆಯ ಹರಿಕಾರನೆಂದು ಎಲ್ಲೆಡೆ ಪರಿಗಣಿಸಲ್ಪಟ್ಟ , ದೀನ ದಲಿತರಿಗೆ, ಅಸ್ಪ್ರಶ್ಯರಿಗೆ ಬದುಕಿನ ಹೊಸ ಭರವಸೆಯನ್ನು ಒದಗಿಸಿ ಕೊಟ್ಟು ಶ್ರೀ ನಾರಾಯಣ ಗುರು ಮಹಾನ್ ಸಂತನ ಜನನವಾಯಿತು . ಶ್ರೀ ಗುರುಗಳ ಬಾಲ್ಯದ ಹೆಸರು " ನಾಣು" ಎಂದು. ಅವರು ತನ್ನ ಅತೀ ಕಿರಿಯ ವಯಸ್ಸಿನಲ್ಲಿಯೇ ಚಟುವಟಿಕೆಯಿಂದ ಕೂಡಿದ್ದು ಸದಾ ಚಿಂತೆಯಲ್ಲಿಯೇ ಮಗ್ನನಾಗಿ ವೈಚಾರಿಕತೆಯ ಆತನಲ್ಲಿ ಮೈಗೂಡಿತ್ತು. ಮನುಕುಲದ ಸಂತಸವೇ ದೇವರಿಗೆ ಪೂಜೆ ಎಂದು ಬಾಲ್ಯದಲ್ಲಿಯೇ ದೇವರಿಗೆ ಇರಿಸಿದ್ದ ಹಣ್ಣು ಹಂಪಲುಗಳನ್ನು ತಿಂದು ತೇಗಿ "ಮನುಷ್ಯನ ಹೊಟ್ಟೆ ತುಂಬಿ ತೃಪ್ತಿಯಾದರೆ ದೇವರು ಸಿಟ್ಟಾಗುತ್ತಾನೇನು? ಅವನಿಗೆ ಅದರಿಂದ ಸಂತೋಷವಾಗುತ್ತದೆ" ಎಂದು ಪಟ ಪಟ ಅನ್ನುತ್ತಿದ್ದನಂತೆ. ಮೇಲು ಜಾತಿಯವರನ್ನು ಬೇಕೆಂದೇ ಮುಟ್ಟಿ ಬಿಡುತ್ತಿದ್ದ . "ಈಗ ನಿಮ್ಮ ಜಾತಿ ಹೋಗಿ ಬಿಡ್ತಾ ಎಲ್ಲಿ ಕಾಣಿಸೋದಿಲ್ಲ " ಎಂದು ಕೈ ತಟ್ಟಿ ನಗುತ್ತಿದ್ದ. ನಾಣುವಿಗೆ ಚಿಕ್ಕಂದಿನಿಂದಲೇ ಬಡವರು ನೊಂದವರು ಅಂದರೆ ಆತ್ಮೀಯತೆ ಭೌತಿಕ ಸುಖಗಳ ಕಡೆಗೆ ನಿರಾಸಕ್ತಿ.
ಗುರುಗಳು ಸದಾ ಚಲಿಸುತ್ತಾ ಸಮಾಜದ ಎಲ್ಲೆ ಎಲ್ಲೆಯನ್ನೂ , ಕಂದಾಚಾರ , ಮೂಢನಂಬಿಕೆಗಳನ್ನು , ಅವಿಚಾರಗಳನ್ನು ನಿಂತ ಗಳಿಗೆಯಿಂದಲೇ ಟೀಕಿಸಿ ಸರಿಪಡಿಸುತ್ತಿದ್ದರು. ಹಸಿದವರು, ಬಳಲಿದವರು, ದೀನದಲಿತರನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ ತುಂಬಿಕೊಂಡಿತ್ತು. ಅವರ ಬೋಧನೆಗಳಲ್ಲಿ ದೇವರು ಒಬ್ಬನೇ ನಮ್ಮ ಆತ್ಮದ ಒಳದನಿಯನ್ನು ನಾವು ಆಲಿಸಬೇಕು. ಇನ್ನೊಬ್ಬರಿಗೆ ಕೆಡುಕಾಗುವ ಅಲ್ಪ ಕಾರ್ಯಕ್ಕೆ ಕೈಹಾಕಬಾರದು. ಹೃದಯಾಂತರಾಳದಿಂದ ದೇವರನ್ನು ಪೊಜಿಸಬೇಕು. ಪರಿಪಕ್ವವಾದ ಮನಸ್ಸು ಬೇಕು. ಔದಾರ್ಯ ಪ್ರೇಮ ಅನುಕಂಪ ಇವು ಜೀವನ ಮೌಲ್ಯಗಳು. ಪ್ರೇಮದ ಸೆಲೆ ಬತ್ತಿದವನು ಕೇವಲ ಯಂತ್ರ ಮಾತ್ರ, ಅವನು ಬದುಕಿದ್ದಾನೆ. ಎನ್ನುವ ಹಾಗಿಲ್ಲ ಎಂಬ ಸಂದೇಶಗಳು ಇಂದಿಗೂ ಹೃದಯದ ಕದಗಳನ್ನು ತಟ್ಟುತ್ತಿರುತ್ತವೆ. ಈ ಜಗತ್ತಿನಲ್ಲಿ ಇರುವುದು ಒಂದೇ ಜಾತಿ ಅದು ಮಾನವ ಜಾತಿ ಎಲ್ಲರ ಎದೆಯಲ್ಲೂ ಬೆಳಗುವ ಜ್ಯೋತಿಯೊಂದಿಗೆ ಅದು ಎಲ್ಲವನ್ನೂ ಗಮನಿಸುತ್ತದೆ. ಅಲ್ಲದಕ್ಕೂ ಸಾಕ್ಷಿಯಾಗಿದೆ ಎಂಬ ಸಂದೇಶವನ್ನು ತನ್ನ ಜೀವನದುದ್ದಕ್ಕೂ ಸಾರಿ ಜನರಲ್ಲಿ ದೀನದಲಿತರಲ್ಲಿ ಬೆಳಕು ಮೂಡಿಸಿದವರು ಶ್ರೀ ನಾರಾಯಣ ಗುರುಗಳು. ಈ ಮಹಾ ಸಂತನ ಭೋಧನೆ ಮಹಾಸಾಗರದಂತೆ ನಾವಿಲ್ಲಿ ಕಾಣುವುದೂ ಕೇವಲ ಹನಿಗಳನ್ನೂ ಮಾತ್ರ. ಅವುಗಳನ್ನು ಅರ್ಥೈಸಿ ಅನುಸ್ಥಾಪಿಸಲು ಪ್ರಯತ್ನಿಸಿದರೆ ಸಾಕು ನಮ್ಮ ಉದ್ಧಾರ ತನ್ನಿಂದ ತಾನೇ ಆಗುತ್ತದೆ. ವ್ಯಕ್ತಿಯ ಉದ್ಧಾರದಿಂದ ಸಮಾಜದ ಉದ್ಧಾರ ಅದರಿಂದ ವಿಶ್ವ ಮಾನವ ಪ್ರಜ್ಞೆ ಮೂಡುತ್ತದೆ.
"ಕೇರಳದ ನಾರಾಯಣ ಗುರುಗಳಿಗೆ ಸರಿಸಮಾನರಾದ ಮಹಾಪುರುಷನನ್ನು ನಾನು ಎಲ್ಲೂ ಕಂಡಿಲ್ಲ" ಎಂದು ವಿಶ್ವಕವಿ ರವಿಂದ್ರನಾಥ ಠಾಗೂರರು ಉದ್ಗರಿಸಿದ್ದರು. ಗಾಂಧೀಜಿಯವರು ತಮ್ಮ ಹರಿಜನೋದ್ಧಾರಕ್ಕಾಗಿ ಸ್ಫೂರ್ತಿ ಪಡೆದದ್ದು ನಾರಾಯಣ ಗುರುಗಳಿಂದ. "ನಾರಾಯಣ ಗುರುಗಳ ಸಾಮಾಜಿಕ ಕಾರ್ಯಕ್ರಮಗಳಿಗೂ ಗಾಂಧೀಜಿಯವರ ಸಾಮಾಜಿಕ ಚಟುವಟಿಕೆಗಳಿಗೂ ಬಹಳಷ್ಟು ಹೋಲಿಕೆ ಇರುವುದನ್ನು ನಾವು ಕಾಣಬಹುದು" ಎಂದು ರೋಮನ್ ರಾಲೆಂಡ್ ಉದ್ಗರಿಸಿದ್ದಾರೆ.
೧೯೨೮ ರ ಫೆಬ್ರುವರಿಯಲ್ಲಿ ಗುರುಗಳು ತೀವ್ರ ಕಾಯಿಲೆಗೆ ತುತ್ತಾಗಿದ್ದರು. ಯಾವ ರೀತಿಯ ಚಿಕಿತ್ಸೆ ಫಲಕಾರಿಯಾಗಲಿಲ್ಲ. ೧೯೨೮ ರ ಸೆಪ್ಟೆಂಬರ್ ೨೦ ರಂದು ಸಂಜೆ ನಾಲ್ಕರ ಹೊತ್ತಿಗೆ ಮಹಾಸಮಾಧಿಯನ್ನು ಹೊಂದಿದರು. ಆಗ ಅವರಿಗೆ ೭೨ ವರ್ಷ. ಸಮಾಧಿಯ ಮುಂಚೆ "ಯೋಗ ವಿಶಿಷ್ಟಂ" ಗ್ರಂಥದ ಶ್ಲೋಕವನ್ನು ಕೇಳುತಿದ್ದು , ಗ್ರಂಥದ ಮೋಕ್ಷ ಪ್ರಾಪ್ತಿ ಅಧ್ಯಾಯವನ್ನು ತಲುಪುತ್ತಿದ್ದಂತೆ ಗುರುಗಳು ಮೋಕ್ಷವನ್ನು ಹೊಂದಿದ್ದರು. ಅವರ ನಿಧನ ದ ಬಗ್ಗೆ ಕೇರಳದ ಪತ್ರಿಕೆಯೊಂದು "ಮುಂದಿನ ತಲೆಮಾರಿನವರು ನಾರಾಯಣ ಗುರುಗಳನ್ನು ದೇವರ ಅವತಾರ ಎಂದು ಪೂಜಿಸುವರು " ಎಂದು ಬರೆಯಿತು.
ಇಂತಹ ಮಹಾನ್ ಚೇತನವೊಂದನ್ನು ಗುರುವಾಗಿ ಪೂಜಿಸುವುದು ನಮ್ಮೆಲ್ಲರ ಭಾಗ್ಯ. ಅವರು ಕೇವಲ ಈಳವ ಅಥವಾ ಬಿಲ್ಲವ ಜನಾಂಗಕ್ಕೆ ಸೀಮಿತವಾದರೆ ಅವರ ತತ್ವಗಳಿಗೆ ಅನ್ಯಾಯವಾಗುತ್ತದೆ. ಇನ್ನೂ ಮುಖ್ಯವಾಗಿ ಗುರುವನ್ನು ಕೇವಲ ಮೂರ್ತಿ ಮಾಡಿ ಕೇವಲ ಕಲ್ಲಿಗೆ ಪೂಜೆ ಸಲ್ಲದಿರಲಿ, ಅವರ ಸಂದೇಶಗಳನ್ನು ಮೈಗೂಡಿಸಿ ನಮ್ಮಲ್ಲಿ ಅಳವಡಿಸೋಣ. ಸಾಧ್ಯವಾದಷ್ಟು ಅವರು ಹೇಳಿಕೊಟ್ಟ ಶಾಂತಿ ಪಥದಲ್ಲಿ ನಡೆಯೋಣ. ಆ ದಾರಿಯಲ್ಲಿ ನಡೆದು ಕೃತಾರ್ಥರಾಗಲು ಪ್ರಯತ್ನಿಸೋಣ. ನಾರಾಯಣ ಗುರುಗಳು ಕೇವಲ ಒಂದು ಜನಾಂಗದ ಗುರುವಲ್ಲ, ಮಾನವ ಜನಾಂಗದ ಗುರು ,ವಿಶ್ವ ಮಾನವ ಗುರು , ಸಾಮಾಜಿಕ ಕ್ರಾಂತಿಯ ಹರಿಕಾರ.
!! ಓಂ ಶ್ರೀ ಬ್ರಹ್ಮ ನಾರಾಯಣ ಗುರುವೇ ನಮ: !!
ನಾರಾಯಣ ಗುರುಗಳು ಸ್ಥಾಪಿಸಿದ ದೇವಾಲಯವೊಂದಕ್ಕೆ
ReplyDeleteಇತ್ತೀಚಿಗೆ ಕೇರಳಕ್ಕೆ ಹೋದಾಗ ಹೋಗಿದ್ದೆವು. ಅಲ್ಲಿ ಚಹಾ ಮತ್ತು ಬೇಯಿಸಿದ ಕಾಳು ಪ್ರಸಾದವಾಗಿ ಕೊಟ್ಟಿದ್ದರು.
ಚೆನ್ನಾಗಿದೆ
ಶ್ರೀ ನಾರಾಯಣ ಗುರು ವಿಶ್ವ ಮಾನವತೆಯನ್ನು ಸಾರಿದ ಮಹಾ ದಾರ್ಶನಿಕ. ಆದರೆ ಇತ್ತೀಚೆಗೆ ನಡೆಯುತ್ತಿರುವ ವಿಧ್ಯಮಾನಗಳು ಅವರನ್ನು ಬಸವಣ್ಣ, ಕನಕದಾಸರಂತೆ ಸಂಕುಚಿತ ಗೊಳಿಸುತ್ತಿರುವುದು ದುರ್ದೈವ.
ReplyDelete