Saturday, July 5, 2014

ಕುರುಂಬಿಲನ ಪಂಚಾಂಗ


ಕುರುಂಬಿಲನ ಪಂಚಾಂಗ


ಶೈಲೇಶ ಅದೆಷ್ಟು ವರ್ಷಗಳ ನಂತರ ಉಡುಪಿಗೆ ಬಂದಿದ್ದ. ಸದ್ಯ ಕಟಪಾಡಿಯಲ್ಲಿರುವ ತನ್ನ ಅಕ್ಕನ ಮನೆಗೆ ಬಂದು ಇಳಿಯುವುದೇ ಸುಲಭವಾಗಿ ಬಿಟ್ಟಿದ್ದೆ. ಅದು ಹೈವೇಗೆ ತಾಗಿ ಕೊಂಡೆ ಇರುವುದು ಕಾರಣ ಕೂಡಾ. ಮುಂಬೈಯಿಂದ ಬಸ್ಸು ಹಿಡಿದರೆ ಮನೆಯ ಅಂಗಳದಲ್ಲೇ ಉಳಿಯುವ ವ್ಯವಸ್ಥೆ ಅದು.ಇತ್ತೀಚೆಗೆ ತಾನು ಹುಟ್ಟಿ ಬೆಳೆದ ಅಜ್ಜನ ಊರು ಹೇರೂರಿನ ಕಡೆ ಹೋಗದೆ ಅನೇಕ ವರ್ಷಗಳೇ ಕಳೆದಿದ್ದವು.ಕಟಪಾಡಿಯಿಂದ ಒಳಮಾರ್ಗ ಶಂಕರಪುರದಿಂದ ಕಾರ್ಕಳ ಕಡೆ ಹೋಗುವ ಬಸ್ಸನ್ನು ಕಂಡಾಗ ಒಮ್ಮೆ ಹೇರೂರಿಗೆ ಹೋಗಿ ಬರುವ ಮನಸ್ಸಾಯಿತು.
ಅಂದು ಶನಿವಾರ. ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಬಿಡುವು ಮಾಡಿಕೊಂಡು ಹೇರೂರಿಗೆ ಪ್ರಯಾಣ ಬೆಳೆಸಿದ. ಜೊತೆಯಲ್ಲಿ ಮಗ ಪ್ರಣವನನ್ನು ತನ್ನ ಹುಟ್ಟೂರು ತೋರಿಸಲು ಕರೆತಂದಿದ್ದ.ಹೇರೂರು ಮೂಡುಮನೆಗೆ ಬಂದು ಸೇರಿದಾಗ ಸಂಜೆಯಾಗಿತ್ತು. ಮನೆಯಲ್ಲಿ ಕುರುಂಬಿಲ ಅಜ್ಜನ ಹೆಂಡತಿ ಶಾಂತಜ್ಜಿ ಮತ್ತು ಅವರ ಮೊಮ್ಮಗಳು ಚಿತ್ರ ಮಾತ್ರ ಇದ್ದರು. ಶೈಲೇಶ್ ಮೂಡುಮನೆಗೆ ಬಂದು ಸುಮಾರು ೧೨ ವರ್ಷಗಳೇ ಕಳೆದು ಹೋಗಿದೆ. ಶೈಲೇಶನ ಅಪ್ಪ ನಾರಾಯಣ ಇಲ್ಲಿಯ ಆಸ್ತಿ ಬೇಡವೆಂದು ಮುಂಬೈ ಸೇರಿದ್ದ. ನಂತರ ಹೇರೂರಿನ ಸಂಪರ್ಕ ಅಷ್ಟ ಕಷ್ಟೆ ಇತ್ತು. ಕೇವಲ ಕುರುಂಬಿಲಜ್ಜನ ಪ್ರೀತಿಯಿಂದಾಗಿ ಆವಾಗ ಈವಾಗ ಅಪ್ಪನ ಮಾತುಕತೆ ನಡೆಯುತ್ತಿತ್ತು. ಶೈಲೇಶ ಕೂಡಾ ಅಪ್ಪನ ಮನೆಗೆ ಆಸ್ತಿಗೆ ಆಸೆ ಪಟ್ಟವನಲ್ಲ. ಮಗ ಪ್ರಣವ್ ಮತ್ತು ಚಿತ್ರ ಆಡಲು ಆರಂಭಿಸಿದರು. ಶಾಂತಜ್ಜಿಯಲ್ಲಿ ಕುರುಂಬಿಲಜ್ಜನವರ ಕೊನೆಯ ದಿನಗಳ ಬಗ್ಗೆ ಶೈಲೇಶ್ ಕೇಳಿದ . "ನಿನ್ನಜ್ಜ ಇರೋ ತನಕ ಈ ಮನೆ ವೈಭವದ ಮನೆಯಾಗಿತ್ತು. ಅವರು ಕುಟುಂಬದ ಕೊಂಡಿಯಾಗಿದ್ದರು. ಮನೆದೈವದ ಅರ್ಚಕ ಅಂತಹ ಎಲ್ಲರೂ ಅವರಿಗೆ ಮನ್ನಣೆ ಕೊಡುತ್ತಿದ್ದರು. ಈಗ ಮಾತ್ರ ನಮ್ಮನ್ನು ಯಾರು ಕೇಳುವವರಿಲ್ಲ" ಎಂಬ ಶಾಂತಜ್ಜಿಯ ವಿಷಾದದ ನುಡಿ ಶೈಲೇಶನಿಗೆ ಬೇಸರ ತಂದಿತ್ತು. ಅವರನ್ನು ಸಮಾಧಾನಿಸುತ್ತಾ "ಹಾಗೇನು ಇಲ್ಲ ಈ ಮನೆಯ ಗೌರವ ಇನ್ನೂ ಇದೆ ಮತ್ತೆ ಎಲ್ಲಾ ಒಂದಾಗುತ್ತಾರೆ. ಈ ನೆಲದ ಗುಣ ಹಾಗೆ ಇದೆ, ನೋಡಿ ನಾನ್ಯಾಗೆ ನಿಮ್ಮನ್ನು ಹುಡುಕಿಕೊಂಡು ಬಂದೆ, ಹಾಗೆ ಎಲ್ಲರೂ ಬರುತ್ತಾರೆ" ಶಾಂತಜ್ಜಿಯ ಮುಖ ಅರಳಿತು.
ಶಾಂತಜ್ಜಿ ಚಹಾ ಮಾಡಲು ಅಡುಗೆ ಮನೆಗೆ ಹೋದರು. ಎದ್ದು ಮನೆಯ ಚಾವಡಿಯಲ್ಲಿ ಕಣ್ಣಾಡಿಸಿದಾಗ ಶೈಲೇಶನಿಗೆ ಕೃಷ್ಣ ಪಂಚಾಂಗದ ಕಡೆ ದೃಷ್ಟಿ ಹರಿಯಿತು.ಅದೂ ಕೂಡಾ ಪ್ರಸಕ್ತ ವರ್ಷದ್ದು. ಮೆಲ್ಲನೆ ತಿರುವಿ ಹಾಕಿದ. ಹೊಸ ಪಂಚಾಂಗ ಎಪ್ರಿಲ್ ಸಂಕ್ರಾತಿಯ ನಂತರದ್ದು.ವಿಜಯ ಸಂವತ್ಸರ ಆರಂಭವಾಗಿತ್ತು. ಅಲ್ಲಲ್ಲಿ ಏನೋ ಗುರುತು ಹಾಕಿದ್ದು ಕಾಣಿಸಿದವು. ಶೈಲೇಶನಿಗೆ ಕುತೂಹಲ ಹೆಚ್ಚಾಯಿತು. "ಈಗಲೂ ಇಲ್ಲಿ ಯಾರೂ ಪಂಚಾಗದಲ್ಲಿ ಗುರುತು ಹಾಕುವವರು?" ತನ್ನಲ್ಲಿ ಪ್ರಶ್ನೆ ಕೇಳಿ ಕೊಂಡ ಅಷ್ಟರಲ್ಲೇ ಅಲ್ಲೊಂದು ನೋಟು ಪುಸ್ತಕ ಸಿಕ್ಕಿತ್ತು. ಅದರ ಲೇಬಲ್ ಮೇಲ್ಗಡೆ "ಪ್ರಶಾಂತ್ ಕುಮಾರ್" ಹೆಸರಿತ್ತು. ಹತ್ತನೆ ತರಗತಿಯ ಪಠ್ಯ ಕೂಡಾ ಅಲ್ಲೇ ಇತ್ತು. ಆವಾಗ ಹೊಳೆಯಿತು. ಕುರುಂಬಿಲಜ್ಜನ ಒಬ್ಬನೇ ಮಗ ಶೇಖರನ ಮಗ ಇರಬೇಕು. ಆದರೆ ಆ ಮಗುವಿನ ಹೆಸರು ಶೈಲೇಶನಿಗೆ ನೆನಪಿರಲಿಲ್ಲ. ಆಗ ಡಿಸೆಂಬರ್ ಕ್ರಿಸ್ಮಸ್ ರಜೆ ಆದ್ದರಿಂದ ಬಹುಶಃ ಅವನು ತನ್ನ ಅಜ್ಜಿ (ತಾಯಿಯ ಅಮ್ಮ)ಯ ಮನೆಗೆ ಹೋಗಿರಬೇಕೆಂದು ಶೈಲೇಶ ಕಲ್ಪಿಸಿಕೊಂಡ. ಅಷ್ಟರಲ್ಲಿ ಶಾಂತಜ್ಜಿ "ಬಾ ಮಗ ಚಾ ಕುಡಿ ಅದೆಷ್ಟು  ವರ್ಷವಾಯಿತು,ಈ ಮನೆಯ ನೀರು ಕುಡಿದು" ಎಂದು ಉದ್ಗಾರ  ತೆಗೆದಳು. " ಹೌದು" ಎನ್ನುತ್ತಾ ಶೈಲೇಶ್ ತಲೆ ಅಲ್ಲಾಡಿಸಿದ. ಪಂಚಾಗದ ಕಡೆ ಕೈ ತೋರಿಸಿ "ಈಗಾಲೂ ಈ ಮನೆಯಲ್ಲಿ  ಪಂಚಾಂಗ ಯಾರು ಬರೆಯುತ್ತಾರೆ ?" ಎಂದು ಅಜ್ಜಿಯನ್ನುಕೇಳಿದ."ನನ್ನ ಮೊಮ್ಮಗ ಪ್ರಶಾಂತ" ಎಂದು  ಅಜ್ಜಿ ಸುಮ್ಮನಾದಳು.
" ಶೇಖರಣ್ಣನ ಮಗನೇ.?"."ಹೌದು ಮಗ… "  ಎನ್ನುವಾಗ ಅಜ್ಜಿಯ ಹೃದಯ ಭಾರವಾಗಿತ್ತು.  ಶೇಖರಣ್ಣ ಎಲ್ಲೋ ಘಟ್ಟದ ಮೇಲೆ ಹೋಟೆಲ್ ಇಟ್ಟು ಕೊಂಡಿದ್ದು ನೆನಪಾಯಿತು. ಯಾವುದೋ ರಸ್ತೆ ಅಪಘಾತದಲ್ಲಿ ಹೆಂಡತಿ ಮತ್ತು ಅವರು ತೀರಿಕೊಂಡ ನಂತರ ಮೊಮ್ಮಗನನ್ನು ಇವರೇ ಸಾಕುತ್ತಿದ್ದಾರೆಂದು ಮುಂಬೈಯಲ್ಲಿ ಸಂಬಂಧಿಕರೊಬ್ಬರು ಹೇಳಿದ್ದರು. ಶೇಖರಣ್ಣ ನೆನಪಿಸಿದಕ್ಕೆ  ಶೈಲೇಷ್ ಸಂಕಟ ಪಟ್ಟ.
"ಅಜ್ಜನವರು ಮೊಮ್ಮಗನಿಗೆ  ತಲೆಗೆ ಕೈ ಇಟ್ಟಿದ್ದಾರೆ" ತಮಾಷೆಯಾಗಿ ಶೈಲೇಶ್ ಹೇಳಿದ. ಮುಖದಲ್ಲಿ ಹಸನಾಗುತ್ತಾ ಶಾಂತಜ್ಜಿ "ಹೌದು ಮಗ ಅಜ್ಜನ ಎಲ್ಲಾ ಗುಣಗಳೂ ಬಂದಿವೆ. ಅವನೇ ಪ್ರತಿವರ್ಷ ಪಂಚಾಂಗ ತಂದು ಎಲ್ಲವನ್ನೂ ಗುರುತು ಹಾಕುತ್ತಾನೆ. ಅಜ್ಜನಂತೆ ದನ ಕರು ಹಾಕಿದ ದಿನ, ಊರಿನಲ್ಲಿ ಯಾರಿಗಾದರೂ ಹೆರಿಗೆಯಾದ ದಿನ ಮಗು ಹೆಣ್ಣು ಗಂಡೋ, ಕಂಬಳದ ಗದ್ದೆಗೆ ಬಿತ್ತು ಹಾಕಿದ್ದು, ಮಳೆಗಾಲ ಪ್ರಾರಂಭವಾಗಿ ಗಂಗಾವತರಣವಾದ ದಿನ ಎಲ್ಲಾ ದಿನಗಳನ್ನು ಕರಾರುವಕ್ಕಾಗಿ ಅಜ್ಜನಂತೆ ಪ್ರಶಾಂತ ಕೂಡಾ ತಪ್ಪದೇ ಗುರುತು ಹಾಕಿದ್ದ.
ಹಾಗೇ  ಮಾತಾಡುತಿದ್ದ  ಶೈಲೇಶನಿಗೆ ಅಜ್ಜನ ಪಂಚಾಂಗದಲ್ಲಿ ಸಿಕ್ಕಿದ ಒಂದು ಮಹತ್ತರ ದಿನಾಂಕದ ನೆನಪಾಯಿತು. ಆವಾಗ ಶೈಲೇಶನಿಗೆ ಹದಿನಾರನೇಯ ವರುಷ. ತಂದೆ ಮುಂಬೈಯಿಂದ ಊರಿಗೆ ಬಂದಿದ್ದರು.ಶೈಲೇಶ ಕಾಪುವಿನಲ್ಲಿ ತನ್ನ ಅಜ್ಜಿ (ತಾಯಿಯ ಅಮ್ಮ)ಯ ಮನೆಯಲ್ಲಿ ಶಾಲೆಗೆ ಹೋಗುತ್ತಿದ್ದ ಸಮಯ. ಅಪ್ಪ ಬಂದರೆ ಅವನ ಪ್ರಯಾಣ ಹೇರೂರಿಗೆ ಬರುತ್ತಿತ್ತು. ಆಗ ರಜಾಕಾಲದ ಸಮಯ. ಮೇ ಮೊದಲ ವಾರದಲ್ಲೇ ಮಳೆಯಾಗಿತ್ತು. ಹೇರೂರಿಗೆ ಬಂದ ಶೈಲೇಶ ಮನೆಯಲ್ಲಿ ಉಳಿಯಬೇಕಾಯಿತು.  ಆವಾಗ ಕುರುಂಬಿಲಜ್ಜನ ಕೋಣೆಯಲ್ಲಿ ಅವರೊಡನೆ ಹರಟೆ ಹೊಡೆಯುತ್ತ ಏನೇನೋ ಕೇಳುತ್ತಿದ್ದ, ಅವನಿಗೆ ಸಮಾಧಾನವಾಗುವ  ಉತ್ತರ ಕುರುಂಬಿಲಜ್ಜ ನೀಡುತ್ತಿದ್ದರು." ಈ ಪಂಚಾಗದಲ್ಲಿ ನೀವೇನೆಲ್ಲಾ ಬರೆಯೂತ್ತೀರಿ ಅಜ್ಜ ?" ಅಂತ ಕೇಳಿದ್ದ. ಅವರು ಒಂದು ಪಂಚಾಂಗ ಅವನ ಕೈಗೆ ಕೊಟ್ಟು ನೀನೇ ಓದಿಕೋ ನಿನಗೆ ತಿಳಿಯುತ್ತೆ ಅಂತ ಕೊಟ್ಟರು.
"ಗುತ್ತುವಿನ ಮನೆಯ ಕಪ್ಪು ದನ ೨ನೇ ಕರು ಹಾಕಿದ್ದು"
"ಹೊಸ ಮನೆಯ ನಾರಾಯಣ ಶೆಟ್ಟಿಗೆ ಮೊದಲು ಹೆಣ್ಣು ಮಗು ಆದದ್ದು "
"ಕಲ್ಲೊಟ್ಟೆಯ ವಾರಿಜ ಗಂಡು ಹೆತ್ತಿದ್ದು."
"ಶೀನನು ಹೊಸ ಕೋಣ ತಂದದ್ದು "
"ತೋಟದ ಮನೆ ಕೊಲ್ಲಕ್ಕ ತೀರಿಕೊಂಡದ್ದು"
ಹೀಗೆ ಓದುತ್ತಾ ಶೈಲೇಶನ ಕುತೂಹಲ ಹೆಚ್ಚಾಯಿತು. ಅವನ ಮನಸ್ಸಿನಲ್ಲಿ ಇನ್ನೊಂದು ವಿಚಾರ ಹೊಳೆಯಿತು. ಹಾಗಾದರೆ ನಾನು ಹುಟ್ಟಿದ ದಿನ ಕೂಡಾ ದಾಖಲಾಗಿರಬೇಕು. ಹುಡುಕಲು ಶುರು ಮಾಡಿದ ಅಂತು ೧೯೭೭ ರ ಪಂಚಾಂಗ ಅವನ ಕೈ ಸಿಕ್ಕಿತು. ತುಂಬಾ ಧೂಳು ಹಿಡಿದಿತ್ತು. ಅವನ ಹತ್ತನೆ ತರಗತಿಯ ಅಂಕ ಪಟ್ಟಿಯ ದಿನಾಂಕದ ಮೇರೆಗೆ ಮೇ ತಿಂಗಳಲ್ಲಿ ಹುಡುಕಿದ. ಯಾವ ದಾಖಲೆಯೂ ಲಭ್ಯವಾಗಲಿಲ್ಲ . ಮುಂದುವರಿಯುತ್ತಾ ಜೂನು ತಿಂಗಳಲ್ಲಿ ಆರನೇ ತಾರೀಕಿಗೆ ಒಂದು ಗುರುತು ಸಿಕ್ಕಿತು. ಪಂಚಾಂಗವನ್ನು ಸ್ಪಷ್ಟ ಬೆಳಕಿಗೆ ಹಿಡಿದು ಓದಿದ.
"ನಾರಾಯಣನಿಗೆ ಗಂಡು ಮಗು, ಉಡುಪಿ ಆಸ್ಪತ್ರೆಯಲ್ಲಿ"  ಶೈಲೇಶನನ್ನು ಜಾನಕಿ ಹೆತ್ತಿದ್ದು ಉಡುಪಿಯ ಅಜ್ಜರ್ ಕಾಡು ಆಸ್ಪತ್ರೆಯಲ್ಲಿ. ಶೈಲೇಶನಿಗೆ ಒಮ್ಮೆಲೇ ತನ್ನ ನಿಜ ಹುಟ್ಟಿದ ದಿನಾಂಕ ಸಿಕ್ಕಿದ್ದಕ್ಕೆ ಸಂತೋಷವಾಯಿತು. ಆದರೆ ಶಾಲೆಯ ದಾಖಲಾತಿಯಲ್ಲಿ ಒಂದು ತಿಂಗಳು ಮುಂಚೆಗೆ ದಿನಾಂಕವನ್ನು ನಮೂದಿಸಿದಕ್ಕೆ ಬೇಸರವು ಒಟ್ಟೊಟ್ಟಿಗೆ ಆಯಿತು. ಒಂದು ಲಿಖಿತ ಪುರಾವೆ ಅವನ ಹುಟ್ಟಿದ ದಿನವನ್ನು ಸಮರ್ಥಿಸುವುದು ಸಂತೋಷ ತಂದಿತ್ತು. ಅಂದಿನಿಂದ ಅದೇ ದಿನವನ್ನು ಹುಟ್ಟಿದ ದಿನವಾಗಿ ಧೃಢ ಮಾಡಿಕೊಂಡ. ಅಂದಿನಿಂದ ಯಾವುದೇ ಕೆಲಸಕ್ಕೆ ಒಳ್ಳೆಯ ದಿನವನ್ನು ನೋಡಬೇಕಾದರೆ ತಂದೆಗೆ ಹೇಳಿಸಿ ಅಜ್ಜಿನಿಂದಲೇ ಕೇಳುತ್ತಿದ್ದ. 
ಪ್ರಶಾಂತನ ಪಂಚಾಂಗದ ಗುರುತುಗಳೂ ಶೈಲೇಶನಲ್ಲಿ ಕುತೂಹಲವನ್ನು ಹುಟ್ಟಿಸಿದವು. ಅಜ್ಜನ ಕಲೆ , ಬುದ್ದಿಮತ್ತೆ ಸಿದ್ಧಿಯಾದದ್ದು ಸಂತೋಷವೆನಿಸಿತು. ಮೂರು ವರ್ಷದ ಹಿಂದಿನ ಪಂಚಾಂಗದಲ್ಲಿ ಕಣ್ಣಾಡಿಸಿದಾಗ "ಕುರುಂಬಿಲಜ್ಜನವರು ತೀರಿಕೊಂಡದ್ದು " ಎಂದು ಎಪ್ರಿಲ್ ೨೦ನೇ ತಾರೀಕಿಗೆ ಗುರುತಾಗಿದ್ದು ಕಂಡುಬಂತು.
****

No comments:

Post a Comment