Sunday, July 6, 2014

"ಮುಂಬಯಿ ಮನೆ" ಯಲ್ಲಿ ಇದ್ದು ಬಂದಾಗ

"ಮುಂಬಯಿ ಮನೆ" ಯಲ್ಲಿ ಇದ್ದು ಬಂದಾಗ

    ಡಾ|| ಜಿ. ಡಿ ಜೋಶಿಯವರ ಆಯ್ದು ಪ್ರಬಂಧಗಳ ಸಂಕಲನ "ಮುಂಬಯಿ ಮನೆ" ಯನ್ನು ಓದುತ್ತಾ ಎಲ್ಲೋ ನಾನು ಮುಂಬೈಯ ಗಲ್ಲಿ, ವಾಡ ಪಾವ್ ಸೆಂಟರ್, ಜುಂಕ ಬಾಕರ್ , ಭೇಲ್ ಪುರಿ ರಸಾನುಭವಗಳ ಉಂಡಷ್ಟು ಸಂತೋಷ ಪಟ್ಟೆ. ಒಬ್ಬ ಪ್ರಬಂಧಕಾರನಲ್ಲಿರಬೇಕಾದ ಲೋಕಾನುಭವ, ಸೂಕ್ಸ್ಮ ದೃಷ್ಟಿ, ವಿನೋದ ದೃಷ್ಟಿ ಮತ್ತು ಅಷ್ಟೆ ಲವಲವಿಕೆ ಡಾ|| ಜೋಶಿಯವರ ಬರಹಗಳಲ್ಲಿ ಮೈಗೂಡಿದೆ. ಈ ಸಂಕಲನದಲ್ಲಿರುವ ಹದಿನಾರು ಪ್ರಬಂಧಗಳನ್ನು ಓದುವಾಗ ನಾವೂ ಕೂಡಾ ಅದರಲ್ಲೊಂದು ಪಾತ್ರದಂತೆ  ಸ್ವಂತ ಅನುಭವವನ್ನು ನೆನಪಿಸಿದರೆ ಅತಿಶಯೋಕ್ತಿಯಲ್ಲ. ಒಂದು ಮನೆಯಲ್ಲಿ ನಡೆಯುವ ಪ್ರಸಂಗದಂತೆ ಎಲ್ಲವನ್ನೂ ಕ್ರೋಢಿಕರಿಸಿ ವಾಸ್ತವದ ಬಿಸಿಯನ್ನು ಅಲ್ಲಲ್ಲಿ ಮುಟ್ಟಿಸುತ್ತಾ ತಮ್ಮ ರಸಾನುಭೂತಿಯನ್ನು ನಮ್ಮ ಮುಂದಿಟ್ಟಿದ್ದಾರೆ.

    ಮೊದಲ ಕಥೆ "ಬಿಲ್ಲುಗಳು" ಶೋಕಿಯ ಇಂದಿನ ಹಳ್ಳಿಯಿಂದ ಬಂದ ಯುವ ಜನಾಂಗ ಹಣದ ಹಿಂದೆ ಬಿದ್ದು ಮೌಲ್, ಕಾಫಿ ಶಾಪ್ ಗಳಲ್ಲಿ ದುಂದುವೆಚ್ಚ ಮಾಡುತ್ತಾ ಬಿಲ್ಲುಗಳನ್ನು ಕಂಡು ಪಜೀತಿ ಪಡುತ್ತಾ ಕ್ರೆಡಿಟ್ ವ್ಯವಸ್ಥೆಗೆ ಬಲಿಯಾಗುವುದನ್ನು ನಮ್ಮ ಮುಂದಿಡುತ್ತದೆ. ಬಡವ ಶ್ರೀಮಂತರ ನಡುವಿನ ಕಂದರ ಯಾವ ರೀತಿ ಹೆಚ್ಚಾಗುತ್ತಿದೆ. ವಸಾಹತುಶಾಹಿ ಕಂಪೆನಿಗಳು ಮಾಡುವ ಸುಲಿಗೆ ಮನದಟ್ಟು ಮಾಡುತ್ತವೆ. ರಾಮರಾಯರ ಕುರ್ಚಿ ಮತ್ತು ಟೇಬಲ್ ನಡುವಿನ ಆತ್ಮೀಯತೆಯನ್ನು ಸುಂದರರಾಯರಿಗೆ ಶಿಷ್ಯರು ನೀಡಿದ ಬೆತ್ತದ ಛತ್ರಿಯ ಬೆಲೆಯನ್ನು "ಭಾವನಾತ್ಮಕ ಬೆಲೆ" ಯಲ್ಲಿ ನಾವು ಕಾಣಬಹುದು. ಸಂಗ್ರಹ ಪ್ರವೃತ್ತಿಯ ಮಾನವ ಭಾವನಾತ್ಮಕವಾದ ನೆಲೆಗಟ್ಟಿನಲ್ಲಿ ತನಗೆ ಇಷ್ಟವಾದ ವಸ್ತುವನ್ನು ಜೋಪಾನವಾಗಿ ಕಾಪಡುವ ಪ್ರಸಂಗಗಳು ನಮ್ಮ ಮುಂದೆ ಹಾದು ಹೋಗುತ್ತವೆ.

    ಬುದ್ಧಿವಂತ ಮನುಷ್ಯ ತನ್ನ ಕಾವ್ಯ ಸಾಧನೆಗೆ ಪರೋಕ್ಷ ವಿಧಾನಗಳನ್ನು ಬಳಸುವ ಬಹು ಮುಖಗಳನ್ನು "ಪರೋಕ್ಷ ಸಾಧನಂ" ದಲ್ಲಿ ಹೆಂಡತಿಯಿಂದ ಹಿಡಿದು ನಮ್ಮನ್ನು ನಡೆಸುವ ಸರಕಾರಗಳು ಮಾಡುವ ಕಸರತ್ತುಗಳನ್ನು ಡಾ|| ಜೋಶಿಯವರು ಉದಾಹರಿಸುತ್ತಾರೆ. "ಮೃದಂಗೋ ಮುಖ ಲೇಪನ ಕರೋತಿ ಮಧುರ ಧ್ವನಿಂ" ಸರಿತಪ್ಪುಗಳೆನಿಸದೆ ಪರೋಕ್ಷ ಸಾಧನೆಯ ಗೀಳು ಮಾನವನಿಗೆ ಅಂಟಿಕೊಂಡಿದೆ.

    "ಕ್ಷಮಿಸಿ ಚಿಲ್ಲರೆ ಇಲ್ಲ " ಹರಟೆಯಲ್ಲಿ ವಾಸ್ತವ ಬದುಕಿನ್ನಲ್ಲಿ ಸಾಮಾನ್ಯರು ಚಿಲ್ಲರೆಯಿಂದಾಗಿ ಪಡುವ ಕಷ್ಟ ತೊಂದರೆಗಳನ್ನು ತುಂಬಾ ವಿನೋದವಾಗಿ ಬಿಡಿಸಿಟ್ಟಿದ್ದಾರೆ. ಚಿಲ್ಲರೆ ಅಭಾವ ಪ್ರಸ್ತುತ ಸಮಾಜವನ್ನು ಕಾಡುವ ಒಂದು ನಿತ್ಯದ ಸಮಸ್ಯೆ . ಬಸ್ಸು , ಟ್ಯಾಕ್ಸಿ , ಬೀಡಾ ಅಂಗಡಿ ರೈಲ್ವೆ ಟಿಕೇಟ್ ಸರದಿ , ಹೋಟೆಲ್ ಗಳಲ್ಲಿ ಟಿಪ್ಸ್ ಗಾಗಿ ಚಿಲ್ಲರೆಯನ್ನು ತಡಕಾಡಬೇಕಾಗುತ್ತದೆ. ಒಂದಲ್ಲ ಒಂದು ವಿಧಾನದಿಂದ ಇದು ಜನರ ಹಣವನ್ನು ಉಳಿಸುತ್ತೆ ದೇಶಸೇವೆ ಆಗುತ್ತೆ ಎಂಬ ಆಶೋತ್ತರ ಲೇಖಕರದು.

    ಮುಂಬೈ ಬದುಕಿನ ಆಕರ್ಷಣೆ ತಾತ್ಕಾಲಿಕರು ಮತ್ತು ಬಾಧಕರೆಂಬ ಎರಡು ವರ್ಗವನ್ನು ಮೋಹಗೊಳಿಸಿ ತನ್ನ ಬಾಲದಲ್ಲಿ ಬಂಧಿಯಾಗಿಸುವ ಪ್ರಕ್ರಿಯಯನ್ನು "ಮುಂಬಯಿ ಮೋಹ" ಪ್ರಬಂಧದಲ್ಲಿ ಲೇಖಕರು ವಿವರಿಸುತ್ತಾರೆ. ಊರಿನಿಂದ ಬಂದ ಸಂಗಣ್ಣ ಮಂಗಣ್ಣನಾದ ಕತೆ, ಇಲ್ಲಿ ಗಮನ ಸೆಳೆಯುತ್ತದೆ. ರೋಗಗಳನ್ನು ಮುಚ್ಚಿಟ್ಟುಕೊಂಡು ನಿರೋಗಿಯಾಗಿ ಬದುಕುವ ಮಾನವ ಪ್ರವೃತ್ತಿಯ ತ್ರಿಶಂಕು ಸ್ಥಿತಿಯ ಬಗ್ಗೆ "ರೋಗಗಳನ್ನು ಮುಚ್ಚಿಟ್ಟುಕೊಂಡು ಬೆಳಿಸಿರಿ "  ಬೆಳಕು ಚೆಲ್ಲುತ್ತದೆ , ಆಧುನಿಕತೆಯೊಂದಿಗೆ ಮಾಯವಾಗುವ ಮಾನವೀಯ ಮೌಲ್ಯಗಳು, ಹೆಚ್ಚುತ್ತಿರುವ ನಿರ್ಲಕ್ಷಿತ ಅಪರಾಧಗಳು , ಮನೆಬಾಡಿಗೆ ಕೊಟ್ಟು ಕಿರಿಕಿರಿ ಅನುಭವಿಸುವ ಮಾಲಿಕ , ಸಾಲಕೊಟ್ಟು ಮರುಪಡೆಯಲಾಗದ ಧನಿಕನ ಸಮಸ್ಯೆಗಳು, ದಿನನಿತ್ಯ ಜೀವನದ ಸಣ್ಣ ಕಳ್ಳರು, ಕುರುಡರಿಗೆ ಪರೋಕ್ಷವಾಗಿ ಸಹಾಯಮಡುವ ಸರಕಾರಗಳು. ಅವುಗಳ ನಡುವೆ ಕಾನೂನು ಕತ್ತೆಯಾಗುವ ಪ್ರಸಂಗಗಳನ್ನು ವಾಸ್ತವಕ್ಕೆ ಹಿಡಿದ ಕನ್ನಡಿಯಂತೆ "ಏನು ಬಂತಪ್ಪಾ ಕಾಲ" ದಲ್ಲಿ ಚರ್ಚಿಸುತ್ತಾರೆ.

    ಇಂದಿನ ಶಿಕ್ಷಣ ಪದ್ಧತಿಯಲ್ಲಿ ಪಾಲಕರಾದವರು ಸಹಿಸಬೇಕಾದ ತೊಂದರೆ ಆರ್ಥಿಕ , ಸಾಮಾಜಿಕ ಮತ್ತು ಮಾನಸಿಕವಾಗಿ ಎಷ್ಟೆಂಬುದನ್ನು ಕೆ.ಜಿ ಯಿಂದ ಹಿಡಿದು ಉನ್ನತ ಶಿಕ್ಷಣದ ಉದಾಹರಣೆಯೊಂದಿಗೆ ವಿವರಿಸುತ್ತಾರೆ. ಪಾಲಕರು ನೂತನ ಶೋಷಿತ ವರ್ಗಕ್ಕೆ ಸೇರ್ಪಡೆಯಾಗುತ್ತಿರುವ ಎಚ್ಚರಿಕೆಯನ್ನು ಲೇಖಕರು "ಪಾಲಕರ ಗೋಳು" ನಲ್ಲಿ ಮುಂದಿಡುತ್ತಾರೆ.

    ಮುಂಬಯಿಯಲ್ಲಿ ವ್ಯಾಪಾರ ಮಾಡಲು ಅವಕಾಶ ದೊರೆಯುವುದು ಸುಲಭ, ನೌಕರಿ ದೊರೆಯುವುದು ಕಠಿಣ ಸಾಧ್ಯ, ಮನೆ ದೊರೆಯುವುದು ಅಸಾಧ್ಯ ಎಂಬ ಉಕ್ತಿಯೊಂದಿಗೆ ವಾಸಕ್ಕೆ ಯೋಗ್ಯವಾಗ ಮನೆಯನ್ನು ಬಡವ ಶ್ರೀಮಂತ ಮತ್ತು ಮಧ್ಯಮ ವರ್ಗದವರು ಅವರವರ ಅನುಕೂಲ ಅನುಸಾರವಾಗಿ ಪಡೆದುಕೊಳ್ಳುವ ಪರಿಯನ್ನು ಚರ್ಚಿಸಿದ್ದಾರೆ. ಶ್ರೀಮಂತರ ಪಾಶ್ ಮನೆಗಳು, ಮಲಗಲು ಜಾಗವಿರದ ಬಡವರ ಚಾಳ್ ಗಳು, ಸುಧಾರಿಸಿ ಕಷ್ಟಪಡುವ ಮಧ್ಯಮ ವರ್ಗದ ಸಣ್ಣ ಸಣ್ಣ ಪ್ಲ್ಯಾಟ್ ಮತ್ತು ಬಾಡಿಗೆ ಮನೆಗಳು ಈ ಮಧ್ಯೆ ಕಮೀಶನ್ ಎಜೆಂಟ್ ಗಳು ಪಗಡಿ ಮಾಲೀಕರು ಮನಸ್ಸು ದೊಡ್ಡದು ಎಂಬ ಸತ್ಯವನ್ನು ನಮ್ಮೊಂದಿಗೆ ಲೇಖಕರು ಮುಂಬಯಿ ಮನೆಯಲ್ಲಿ ಹಂಚಿದ್ದಾರೆ.

    ಆಧುನಿಕ ಉಪಕರಣಗಳ ಬಳಕೆಯಿಂದ ಸೋಮಾರಿಯಾದ ಮಾನವ ಸಮಯವಿಲ್ಲ ವೆಂಬ ಪೊಳ್ಳು ನೆಪ ಮಾಡಿಕೊಂಡು ಕೆಲಸ ತಪ್ಪಿಸುಕೊಳ್ಳುವ ಬುದ್ಧಿಯನ್ನು ಬೆಳೆಸುತ್ತಿದ್ದಾನೆ ಎಂಬ ಎಚ್ಚರಿಕೆಯನ್ನು ಲೇಖಕರು ಈ ಪ್ರಬಂಧದಲ್ಲಿ ಚರ್ಚಿಸಿದ್ದಾರೆ. ಬಿಟ್ಟಿ ತಿನ್ನುವ ವ್ಯಕ್ತಿಗಳ ಚಪಲದ ಇತಿಹಾಸವನ್ನು "ಪರಾನ್ನ ಭೋಜನ " ಪ್ರಬಂಧದಲ್ಲಿ ವಿನೋದಮಯವಾಗಿ ನಮ್ಮ ಮುಂದಿಟ್ಟಿದ್ದಾರೆ. ಇಲ್ಲಿ ಲೇಖಕರ ವಿನೋದ ಪ್ರಜ್ನೆಯನ್ನು ಗುರುತಿಸಬಹುದು. ಇಂದಿನ ಸಭೆ ಸಮಾರಂಭಗಳ ಕರೆಯೋಲೆಯ ತಳವಾಣಿ ಪ್ರೀತಿ ಭೋಜನದ ವ್ಯವಸ್ಥೆ  ಇದೆ. ನೆನಪಿಸುವುದು ಇಲ್ಲಿ ಸಮಂಜಸ ವಾಗುತ್ತದೆ. ಓಸಿ ಜೀವನವೇ ಲೇಸು ಸರ್ವಜ್ನ್ಯ ಎನ್ನುವವರ ಪುಕ್ಕಟ್ಟೆ ತಿನ್ನುವವರ ಬಾಯಿರುಚಿಯನ್ನು ತಿನ್ನುವುದಕ್ಕಾಗಿ ಮಾಡುವ ಕಸರತ್ತುಗಳನ್ನು ಸ್ವಾರಸ್ಯವಾಗಿ ನಮ್ಮ ಮುಂದಿಡುತ್ತಾರೆ.

    "ಸೆಕೆಂಡ್ ಒಪೀನಿಯನ್" ನ ಅನಿವಾರ್ಯತೆ ಮತ್ತು ಪ್ರಾಮುಖ್ಯತೆಯ ಬಗ್ಗೆ ಲೇಖಕರು ಲಘುವಾಗಿಯೇ ಲೇವಡಿ ಮಾಡುತ್ತಾ ಒಂದು ಗೀಳಿಸಿ ತರಹ ಈ ಪೃವೃತ್ತಿ ಬೆಳೆಯುವುದನ್ನು ಗಮನಿಸುತ್ತಾರೆ. ಮಾನವ ಸ್ವಂತ ನಿರ್ಧಾರ ಕೈಗೊಳ್ಳುವ ಶಕ್ತಿ ಸಾಮರ್ಥ್ಯವನ್ನು ಆತ್ಮ ಸ್ಥೈರ್ಯ ಮತ್ತು ಧೃಡತೆಯನ್ನು ಕಳೆದುಕೊಳ್ಳುತ್ತಿದ್ದಾನೆಂಬುದನ್ನು ಪರೋಕ್ಷವಾಗಿ ತಿಳಿಯಪಡಿಸುತ್ತಾರೆ. ಇಂದು ವ್ಯೆದ್ಯಕೀಯ , ಶೈಕ್ಷಣಿಕ ಸಾಮಾಜಿಕ ಮತ್ತು ವೈಯಕ್ತಿಕ ನಿರ್ಧಾರಗಳನ್ನು ತೆಗೆದು ಕೊಳ್ಳುವುದಕ್ಕೂ ದ್ವಿತೀಯ ಅಭಿಪ್ರಾಯವನ್ನು ಪಡೆಯಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ , ವ್ಯೆದ್ಯರ ತಪಾಸಣೆಯ ರಿಪೋರ್ಟು ಇರಬಹುದು, ಮಕ್ಕಳ ಕಾಲೇಜ್ ಸೇರ್ಪಡೆ , ಮಗಳ ಮದುವೆ ವಿಷಯದಲ್ಲೂ ನಾವು ದ್ವಿತೀಯ ಅಭಿಪ್ರಾಯದ ದಾಸರಾಗಿದ್ದೇವೆ . ಇದು ಇಂದಿನ ಅನಾವಶ್ಯಕ ದಾಸ್ಯ ಎಂದು ಲೇಖಕರು ಬೊಟ್ಟು ಮಾಡುತ್ತಾರೆ.

    ಭಕ್ಷೀಸು ಅಥವ ಖುಷಿ ಕೊಡುವ ಪರಂಪರೆ ರಾಜ ಮಹಾರಾಜರುಗಳ ಕಾಲದಿಂದಲೇ ರೂಢಿಯಲ್ಲಿತ್ತು . ದೀಪಾವಳಿ , ಕ್ರಿಸ್ ಮಸ್, ಹೊಸವರುಷ, ಈದ್ ಗಳ ಸಂದರ್ಭದಲ್ಲಿ ಪೋಸ್ಟ್ ಮ್ಯಾನ್ ಮುನ್ಸಿಪಾಲಿಟಿ , ಕಸಗುಡಿಸುವವ , ಆಫೀಸಿನ ಚಾಕರಿಯವ ಆ ಖುಷಿಗಾಗಿ ಕಾಯುತ್ತಿರುತ್ತಾರೆ. ಗಂಡಾಗುಂಡಿ ಮಾಡಿಯಾದರೂ ಗಡಿಗೆ ತುಪ್ಪ ಕುಡಿಯ ಬೇಕೆನ್ನುವ ಪ್ರಸ್ತುತ ಸಮಾಜದಲ್ಲಿ ಸಾಲ ಮಾಡಿಯಾದರೂ ಅದ್ದೊರಿ ಹಬ್ಬಗಳ ಆಚರಣೆಗೆ ಇಳಿದು ಬಿಟ್ಟಿದ್ದೇವೆ.ಶ್ರೀಮಂತರಿಗೆ ಪುಡಿಕಾಸದ ಆ ಖುಷಿ ಕೊಡುವ ಹಣ ತಿಂಗಳ ಸಂಬಳವನ್ನು ನಂಬಿರುವ ಮಧ್ಯಮ ವರ್ಗದವನಿಗೆ ಹೊರೆ ಅಥಾವ ಕಿರಿಕಿರಿಯಾಗುವುದು ಖುಷಿ ಕೊಡುವ ಪದ್ಧತಿ ಒತ್ತಾಯದ ಮಾಘ ಸ್ನಾನದಂತೆ ಎಂಬ ಅಭಿಪ್ರಾಯವನ್ನು ಲೇಖಕರು ತಾಳುತ್ತಾರೆ.

    ಪಟ್ಟಣದಲ್ಲಿ ಆಳುಗಳ ಕೊರತೆ ಯಾವತ್ತೂ ಇದ್ದೇ ಇದೆ. ಮನೆಕೆಲಸಕ್ಕೆ ವಿಶ್ವಾಸ ಪೂರ್ವಕವಾದ ಆಳುಗಳನ್ನು ಪಡೆಯುವುದು ಕಷ್ಟ ಪಡೆದರೂ ಆಳಿನ ಸಕಲ ಕುಶಲೋಪರಿಗಳ ಬಗ್ಗೆ ಎಚ್ಚರವಹಿಸಬೇಕು. ಆಳುಗಳದ್ದೇ ಯೂನಿಯನ್ ಇರುವ ಈ ಯುಗದಲ್ಲಿ ಆಳಿನ ಹಾವಳಿ ಯಿಂದ ತಪ್ಪಿಸಲು ನಮ್ಮ ಕೆಲಸವನ್ನು ನಾವೇ ಮಾಡಲು ಮುಂದಾಗಬೇಕು. ಊರುಗಳಲ್ಲೇ ಆಳು ಸಿಗದ ಇಂದಿನ ಪರಿಸ್ಥಿತಿಯನ್ನು ಇಲ್ಲಿ ನೆನಪಿಸ ಬಹುದು.

    ಬಾಯಿ ರುಚಿ ಚಪಲಕ್ಕೆ ಅಂಟಿಕೊಂಡ ಮಾನವ ನಾಲಿಗೆಯ ದಾಸನಾಗುವ ಮತ್ತೊಂದು ಪ್ರಸಂಗವನ್ನು ಲೇಖಕರು ಭೇಲ್ ಪುರಿ ಪ್ರಬಂಧದಲ್ಲಿ ವಿಸ್ತಾರವಾಗಿ ವಿವರಿಸುತ್ತಾರೆ. ರಸ್ತೆ ಬದಿಯ ಭೇಲ್ ಪುರಿಗಳು ಮನುಷ್ಯನನ್ನು ನಿಯಂತ್ರಿಸುವ ಬಗೆಯನ್ನು ತಿಳಿಸುತ್ತಾರೆ. ನಾಲಿಗೆಯ ದಾಸನಾದ ಮಾನವ ರುಚಿಯ ಮುಂದೆ ಕುಬ್ಜನಾಗುತ್ತಾನೆ. ಭಿನ್ನಾ ರುಜೇರ್ಹಿ ಲೋಕಃ ಕವಿ ಕಾಳಿದಾಸನ ನೆನಪಾದರೆ ಅತಿಶಯೋಕ್ತಿಯಲ್ಲ.

    ಪುರಾಣದ ದ್ರೊಪದಿಯ ಶ್ರೀಮುಡಿಯಿಂದ ಹಿಡಿದು ಇಂದಿನ ಬಾಬ್ ಕಟ್ ಯುಗದಲ್ಲೂ ಎಲ್ಲರಿಗೂ ಕೂದಲು ಎಂದರೆ ಅಲಂಕಾರಿಕ ಆಸ್ತಿ ಕೇಶಾಲಂಕಾರ ಇಂದು ಉದ್ಯಮವಾಗಿಯೇ ಬೆಳೆದಿದೆ. ಮಾಧ್ಯಮದಲ್ಲಿ ಪ್ರಸರವಾಗುವ ೫೦ ಪ್ರತಿ ಶತಃ ಜಾಹೀರಾತುಗಳು ಕೇಶದ ಬಗ್ಗೆಯೇ ಇರುತ್ತವೆ. ಚಿಕ್ಕ ಮಕ್ಕಳಿಂದ ಹಿಡಿದು ಇಂದಿನ ಮಾಡರ್ನ್ ಅಜ್ಜಿಯಂದಿರಿಗೂ ಕೂದಲು ಸುಂದರವಾಗಿ ಕಾಣ ಬೇಕೆಂಬ ಹಂಬಲ. ಹಿಂದಿನ ಕಾಲದ ಶೃಂಗಾರ ಸಾಧನಗಳು ಮಾಯವಾಗಿ ಆಧುನಿಕ ಸೆಂಟ್ ಪೌಡರ್ , ಕ್ಲಿಪ್ ಮಾಚಿಂಗ್ ಸೆಟ್ , ಟಿಕಲಿಗಳು ಸೌಂದರ್ಯ ವರ್ಧಕಗಳಾಗಿ ಮಾರ್ಪಡಾಗಿವೆ, ಪುರುಷರಲ್ಲಿಯೂ ಕೇಶಾಲಂಕಾರದ ಹುಚ್ಚಿಗೆ ಸಚಿನ್ ನಂತಹ ದಿಗ್ಗಜರು ಗುಂಗುರು ಕೂದಲನ್ನು ನೇರವಾಗಿಸಿದ್ದೆ ಸಾಕ್ಷಿ. ಅಂತು ಕೇಶಾಲಂಕಾರ ಸಮಸ್ಯೆ ಕೂದಲು ಲತೆ ತುಂಬಾ ಇರುವ ತನಕ ತಪ್ಪಿದ್ದಲ್ಲ.

    ಒಟ್ಟು ಹದಿನಾರು ಹರಟೆಗಳ ಮುಂಬಯಿ ಮನೆ ಒಂದೇ ಸಮನೆ ಓದಿಸಿಕೊಂಡು ಹೋಗುತ್ತದೆ. ಇಲ್ಲಿ ಬರುವ ಎಲ್ಲಾ ಘಟನೆಗಳು ನಮ್ಮ ಸಮಕಾಲೀನ ಜೀವನದಲ್ಲಿ ನಡೆದಂತೆ ಭಾಸವಾಗುವುದು ಡಾ!! ಜೋಶಿಯವರಿಂದ ಕನ್ನಡ ಸಾಹಿತ್ಯಲೋಕ ಇನ್ನೂ ಸಮೃದ್ಧವಾಗಲಿ ಎಂದು ಹಾರೈಸುತ್ತೇನೆ.

ಅಶೋಕ್ ಕುಮಾರ್ ವಳದೂರು (ಅಕುವ)
೧೦/೭/೨೦೧೩.

No comments:

Post a Comment