Tuesday, January 21, 2014

ವೃದ್ಧಾಶ್ರಮ

ವೃದ್ಧಾಶ್ರಮ 

ಎಪ್ಪತ್ತರ ಹರೆಯದ ಮುದಿಕಂಗಳಲ್ಲಿ 
ಇನ್ನೂ ಉಳಿದಿದೆ ದೃಷ್ಟಿಯೆಂಬ ಬೆಳಕು 
ಆಶ್ರಮದ ಗೇಟು ಬಳಿ ನಿಂದು ದಾರಿ ಕಾಣಲು 
ದೂರದೂರಿಂದ ಬರುವ ಮನೆಯ ಅತಿಥಿಗೆ !

ಮೆಲ್ಲಗೆ ಸುರಿದ ಕಣ್ಣೆವೆಯ ಹನಿಗಳು 
ಮನದಾಳದ ಮಂಥನದ ಕಲಹವ
ಜತನದಿಂದ ಕಥೆಯಾಗಿ ಬಿತ್ತರಿಸಿದೆ !

ಪರಿವೆಯಿಲ್ಲದೆ ಕಳೆದ ಸಂತಸದ ಕ್ಷಣಗಳು
ಒಲವಿನಲ್ಲಿ ಹಾಡಿದ ನಂಟಿನ ಪದಗಳು
ಚಿಗುರೊಡೆದ ಲಲನೆಯ ಕೂಸುಗಳು
ತ್ಯಾಗ ಸಮರ್ಪಣೆಯ ಉದಯರಾಗಗಳು
ಸಾಲದುದಕ್ಕೆ ಸಾಲದ ಭಾರೀ ಹೊರೆಗಳು !

ಇಂದು ಮಾತಿಲ್ಲ ಎಲ್ಲಾ ಮೌನ ! ಒಳಗೊಳಗೆ ಗೌಣ
ಸುಗ್ಗಿಯ ಹಾಡಿಲ್ಲ , ಹಿಗ್ಗಿನ ಕುಣಿತವಿಲ್ಲ
ಗಾಂಭೀರ್ಯದ ಹೆಜ್ಜೆ ಇಲ್ಲ ಮಾಧುರ್ಯದ ಸ್ವರವಿಲ್ಲ
ಹಚ್ಚಿ ಮಾತಾಡಲು ಅಚ್ಚುಮೆಚ್ಚಿನವರಿಲ್ಲ !

ಅಕ್ಕರೆಯ ನುಡಿಯೊಂದು ಒಪ್ಪೊತ್ತು ಸಾಕೆಂದೆ
ತ್ರಾಣವಿಲ್ಲದ ಮೈಗೆ ಊರುಗೋಲು ಅದೆಂದೆ
ದೂಡಿದರು ದೂರದ ವಾಸಕೆ...ಅಪಹಾಸ್ಯಕೆ
ತಬ್ಬಿ ಮುದ್ದಾಡುವ ಹೃದಯ ಬೇಕೆಂದೆ !

ನಿನ್ನವರ  ನೀನೆಂದೂ ಜರೆಯಲಿಲ್ಲ
ಕಾಲವನ್ನೇ ಕೆಟ್ಟದೆಂದೆ...ಕಾಲವೇ ಕೆಟ್ಟಿತ್ತೆಂದೆ!
ಇಂದಾದರೂ ಬರುವನೆಂದು.....
ಕದಡದೆ ನಿಂದೆ ಆಶ್ರಮದ ಬಾಗಿಲೊಳು..........!

- ಅಶೋಕ್ ಕುಮಾರ್ ವಳದೂರು (ಅಕುವ)

No comments:

Post a Comment