Monday, January 20, 2014

ಬೊಳ್ಜೆ ಯ ನೆನಪು

ಬೊಳ್ಜೆ  ಯ ನೆನಪು 

ಬೊಳ್ಜೆ ನನ್ನ ಹುಟ್ಟೂರು. ನನ್ನ ಜನ್ಮ ವಳದೂರಿನಲ್ಲಿ ಆದರೂ ನನಗೆ ಬೊಳ್ಜೆಯ ನಂಟು ಜಾಸ್ತಿಯೇ. ಬಹುಶ: ಅದು  ನನ್ನ ತಂದೆ ಮನೆಯಾಗಿದ್ದರಿಂದ . ನಂದ ನಂತಹ ಸಹಪಾಠಿ ಸಿಕ್ಕಿದ್ದರಿಂದ. ನನ್ನ ಮೊದಲ ಕವಿತೆ "ನದಿ" ಯನ್ನು ನಾನು ಬರೆದದ್ದು ನನ್ನ ತಂದೆ ಮನೆ ಬೊಳ್ಜೆ ಯಲ್ಲಿ.  ತಂದೆ ಮನೆಯ ಎದುರಿಗೆ  ಹರಿಯುವ ತೊರೆಯೇ ನನ್ನ "ನದಿ". ಪಾದೂರಿನ ಗುಡ್ಡ-ಕಾಡು , ಬಂಡೆ ಹತ್ತಿದ ನನಗೆ ತಂದೆಯ ಊರು ಹಿಡಿಸಿದ್ದು ಎರಡು ಕಾರಣ ಗಳಿಂದ . ಒಂದು ತೆಂಗಿನ ಮರಗಳ ಕಾಡಿನ ತಂಪಾದ ವಾತಾವರಣ  ಬಯಲು ಗದ್ದೆ.  ಎರಡನೆಯದಾಗಿ ಅಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಗಳಿಂದ. ನನ್ನಲ್ಲಿ ಕವಿ ಹುಟ್ಟಿ ಕೊಂಡದ್ದೇ ಅಲ್ಲಿ ನಡೆಯುತ್ತಿದ್ದ  ಭಜನೆ ಗಳಿಂದ  ಅನಿಸುತ್ತದೆ. ಗರಡಿ ಗದ್ದೆಯಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟ. ಕೇದಾರ್ ಬ್ರಹ್ಮಲಿಂಗೆಶ್ವರ ಸನ್ನಿಧಿಯ ವರುಷದ ಆಟಗಳು , ಮಂಗಲೋತ್ಸವಗಳು. ಲಕ್ಷ್ಮಿ ನಾರಾಯಣ ಭಜನಾ ಮಂಡಳಿಯ ನಗರ ಭಜನೆಗಳು ಇವೆಲ್ಲಾ ಒಟ್ಟಾರೆಯಾಗಿ ನನ್ನ ಸಾಹಿತ್ಯದ ಹುಚ್ಚನ್ನು ಹೆಚ್ಚಿಸಿವೆ. ಲಯ ಬದ್ಧವಾದ ಅವರ ಕುಣಿತ , ತಾಳವನ್ನು ನಾನು ಗಮನಿಸುತಿದ್ದೆ. ಅವರ ಭಜನೆಗಳಲ್ಲಿ ನಾನು ಹುಡುಕುತಿದ್ದದು ಸಾಹಿತ್ಯವನ್ನು ಮಾತ್ರ . 

ತಂದೆಯರೊಂದಿಗೆ ತಪ್ಪದೆ  ಯಕ್ಷಗಾನವನ್ನು ನೋಡಲು ಹೊಗುತ್ತಿದೆ. ಉಡುಪಿ ಮಠವನ್ನು  ಸುತ್ತು ಹಾಕುವುದು ನಮ್ಮಲ್ಲಿ ಒಂದು  ವಾಡಿಕೆಯಂತೆ ಬೆಳೆದಿತ್ತು. ಅಲ್ಲಿ ಹೋದಾಗಲೆಲ್ಲ ದಾಸರ ಕೀರ್ತನೆಯಾ ಪುಸ್ತಕವನ್ನು ತಪ್ಪದೆ ಕೊಂಡು ಕೊಳ್ಳುವುದು ಅಭ್ಯಾಸವಾಗಿ ಬಿಟ್ಟಿತ್ತು . ಇದೇ ಮುಂದೆ ಮನೆಯಲ್ಲಿ  ಸಂಜೆ ಭಜನೆ ಹಾಡುವ ಪದ್ದತಿಯನು ರೂಢಿಸಿತು.ಇದರೊಂದಿಗೆ ತಾಳ ಕೂಡ ಮನೆಯ ದೇವರ ಸ್ಟ್ಯಾಂಡ್ ಕೆಳಗಡೆ ತೂಗಾಡ ತೊಡಗಿತು .

ರವಿವಾರ ರಜೆ ಬರಲು ನನ್ನ ಸವಾರಿ ಉದ್ಯಾವರ ದ ಬಸ್ಸು ಹಿಡಿಯುತ್ತಿತು. ರಸ್ತೆ ಉದ್ದಕ್ಕೂ ಮಾತಾಡುತ್ತ ಮನೆ ಸೇರುವಾಗಲೇ ಕತ್ತಲಾಗುತ್ತಿತ್ತು . ಗಾಳ ಹಾಕಿ ಮೀನು ಹಿಡಿಯುವ ಪಡ್ಡೆ ಹುಡುಗರ ಗುಂಪು ನಮ್ಮದಾಗುತಿತ್ತು . ಲಗೋರಿ ಆಟದ ಚಿನ್ನರ ಸಂತೆ ಕೆಲವೊಮ್ಮೆ . "ಅಂಡಿ" ಆಟದ ಕುಟ್ಟಿ-ದೊಣ್ಣೆ ಯಲ್ಲಿ  ಪೆಟ್ಟು ಮಾಡುವ ಹುಡುಗರಾಗುತ್ತಿದ್ದೆವು. ಗೇರುಬೀಜ , ತೆಂಡೊಲಿ ಗಳನ್ನೂ ಕಿಸೆಯಲ್ಲಿ ತುರುಕಿ ಕೊಂಡು ಹರಿದು ಕೊಂಡಿದ್ದೆವು. ಈ ಆಟದಲ್ಲಿ ನಂದನದು ಯಾವಾಗಲು ಮೇಲುಗೈ.  ಕ್ರಮೇಣ ಕ್ರಿಕೆಟ್ ಈ ಎಲ್ಲ ಆಟಗಳನ್ನು ನುಂಗಿ ಬಿಟ್ಟಿತ್ತು . 

ಜೀವನದ ಅನಿವಾರ್ಯತೆ ಉದರಪೋಷಣೆ  .  ಉದ್ಯೋಗದ  ಬೆನ್ನತ್ತಿದ ನಾವು ಪಟ್ಟಣವನ್ನು ಸೇರಿ ಬದುಕು ಯಾಂತ್ರಿಕ ವಾದಾಗ ಈ ನೆನಪುಗಳು ಕೊಡುವ ಸುಖ , ಖುಷಿ ಬೆಲೆ ಕಟ್ಟಲಾಗದ್ದು.    

            
- ಅಶೋಕ್ ಕುಮಾರ್ ವಳದೂರ್ (ಅಕುವ)

No comments:

Post a Comment