Friday, September 28, 2012

ಶಂಕರಪುರ ಮಲ್ಲಿಗೆ


 ಶಂಕರಪುರ ಮಲ್ಲಿಗೆ

ಮೊನ್ನೆ  ನನ್ನ ಮುಂಬೈ ನ ಬಾಲ್ಕನಿಯಲ್ಲಿ ನೆಟ್ಟಿದ ಮಲ್ಲಿಗೆ ಗಿಡದಲ್ಲಿ ೩  ಹೂವು ಕಾಣಿಸಿಕೊಂಡಿತ್ತು. ಅದೆಷ್ಟೋ ದಿನಗಳಿಂದ ಕಾಯುತ್ತ ಇದ್ದೆ. ಈ  ಹಿನ್ನಲೆಯಲ್ಲಿ ಸುಮ್ಮನೆ ಕೆಳಗಿನ ಸಾಲುಗಳು ........................................


ಮಲ್ಲಿಗೆ ಯಾರಿಗೆ ಇಷ್ಟ ಇಲ್ಲ  ಹೇಳಿ ?  ಎಲ್ಲಾ  ಶುಭ ಸಮಾರಂಭಗಳಿಗೆ ನಮ್ಮ ಉಡುಪಿಯಲ್ಲಿ ಮಲ್ಲಿಗೆ ಬೇಕೇ ಬೇಕು. ಮಲ್ಲಿಗೆ ಇಲ್ಲದ ಪೂಜೆ ಇಲ್ಲ . ನಮ್ಮ ದೇವರುಗಳಿಗೂ ಮಲ್ಲಿಗೆ ಅಂದ್ರೆ ಪ್ರಿಯ. ಬಹುಶ: ಮಲ್ಲಿಗೆಯ ಸುಹಾಸನೆಗೆ ಇರಬೇಕು.  ನಮ್ಮೂರ ಕಡೆ ಒಂದು ಸಂಪ್ರದಾಯವಿದೆ. ಏನಾದರೂ ಮನೆಯಲ್ಲಿ ಶುಭ ಕಾರ್ಯ ನಡೆಯುವುದು ಇದ್ದರೆ ಮನೆದೇವರಿಗೆ  ಒಂದು ಚೆಂಡು ಹೂ ಅರ್ಪಿಸುವ ಹರಕೆ ಹೇಳುತ್ತಾರೆ . ಇದು  ಸಣ್ಣ  ಹರಕೆ. ಮತ್ತೆ ಮುಂದಿನ ಸಂಕ್ರಮಣಕ್ಕೊ  ಅಥವ ಪೂಜೆ ಪುನಸ್ಕಾರಗಳು ಇದ್ದ ದಿನ ಈ  ಮಲ್ಲಿಗೆಯ ಹರಕೆ  ತೀರಿಸುತ್ತಾರೆ. ಒಂದು ರೀತಿಯಲ್ಲಿ  ತುಳುನಾಡಿನಲ್ಲಿ ಮಲ್ಲಿಗೆಯ ಕೃಷಿ ಹೆಚ್ಚಾಗಲು ದೈವ ದೇವತೆಗಳು ಕಾರಣ. ಡಿಮ್ಯಾಂಡ್  ಮತ್ತು ಸಪ್ಲಯ್ ಅರ್ಥಶಾಸ್ತ್ರ ಚೆನ್ನಾಗಿ ಕೆಲಸ ಮಾಡುತ್ತೆ.

ಉಡುಪಿಯ  ಕಟಪಾಡಿಯಿಂದ ಶಂಕರಪುರ ಮಾರ್ಗವಾಗಿ ಬೆಳ್ಮಣ್ಣ ತನಕ ಹರಡಿ ಕೊಂಡಿದ್ದ ಮಲ್ಲಿಗೆ ಕೃಷಿ ಈಗ ಕಾರ್ಕಳ ಮತ್ತು ಮಂಗಳೂರಿಗೂ ಹರಡಿದೆ. ಮಲ್ಲಿಗೆಯ ಒಂದು ವೈಶಿಷ್ಟ್ಯ ವೆಂದರೆ ಇದನ್ನು ಕೇವಲ ಕೃಷಿಕರು ಮಾತ್ರ ವಲ್ಲದೆ ಪೇಟೆಯ ಕಡೆ ಕೂಡಾ ಬೆಳೆಯಲಾಗುತ್ತದೆ. ಕೆಂಪು ಮಣ್ಣು ಮತ್ತು ನೀರಿನ ಆಸರೆ ಇದ್ದರೆ ೩೬೫ ದಿನ ಮಲ್ಲಿಗೆ ಬೆಳೆಯುತ್ತಲೇ  ಇರುತ್ತದೆ. ಇದು ಒಂದು ಲಾಭದ ಬೆಲೆ. ನಮ್ಮ ಕಡೆ ಇದಕ್ಕೆ "ವೈಟ್ ಬಿಸಿನೆಸ್ಸ್ " ಅನುತ್ತಾರೆ . ಮಲ್ಲಿಗೆ ಹಾಲಿನ ತರಹ ಇರುವುದರಿಂದ ಇದಕ್ಕೆ ಈ  ಅನ್ವರ್ಥನಾಮ. ಮಲ್ಲಿಗೆ ಬೆಳೆಗೆ ಶ್ರಮ ತುಂಬಾ ಇದೆ. ಬೇಸಿಗೆ ಕಾಲದಲ್ಲಿ ಮಲ್ಲಿಗೆ  ಗಿಡಗಳ ಬುಡ ಬಿಡಿಸಿ , ಹುಲ್ಲು ತೆಗೆಯದಿದ್ದರೆ ಹೂವೇ ಬಿಡೋಲ್ಲ. ದಿನ ತಪ್ಪದೆ ನೀರು ಹಾಕಬೇಕು . ಮಳೆಗಾಲದ ರಗಳೆಯೇ ಬೇರೆ . ಬುಡ ಏರಿಸಿ ಒಂದು ತೊಟ್ಟು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮೊದಲ ಮಳೆ ನೀರಿಗೆ ಒಮ್ಮೆಲೇ  ಮಲ್ಲಿಗೆ ಬೆಳೆ ಜಾಸ್ತಿಯಾಗುತ್ತೆ . ಕೆಲವೊಮ್ಮೆ ಕೊಯ್ದು ಕೊಯ್ದು ಸಾಕಾಗಿ ಗಿಡದಲ್ಲೇ ಬಿಡ ಬೇಕದ ಪ್ರಸಂಗ ಕೂಡಾ ಬರುತ್ತೆ. 
ಮಳೆಯ ರಭಸ ಹೆಚ್ಚಿದಂತೆ ಮಲ್ಲಿಗೆಯ ಮೊಗ್ಗುಗಳು ಕಡಿಮೆಯಾಗುತ್ತಾ ಹೋಗುತ್ತದೆ. ಹೂವಿನ ಗಾತ್ರ ಕೂಡಾ ಕ್ಷೀಣಿಸುತ್ತದೆ.  ಚಲಿಗಳದ್ದಲ್ಲಿ ಗಿಡಗಳು ಸೊಟ್ಟು ಕಟ್ಟಿ  ಚಿಗುರು ಇಲ್ಲದಾಗುತ್ತದೆ. ಮಲ್ಲಿಗೆ ಮೊಗ್ಗುಗಳು ಚಳಿಗೆ ಮುರುಟಿ ಹೋಗುತ್ತವೆ. ಹೀಗೆ ಹವಾಮಾನಕ್ಕೆ  ತಕ್ಕಂತೆ ಮಲ್ಲಿಗೆ  ಗಿಡಗಳನ್ನು ರಕ್ಷಿಸಿಕೊಂದು  ಬರುವುದು ಸುಲಭ ದ ಕೆಲಸವಲ್ಲ. ಕೂಲಿನಾಲಿ ದೊರೆಯದ ಪ್ರಸಕ್ತ ಪರಿಸ್ಥಿತಿಯಲ್ಲಿ ಮಲ್ಲಿಗೆ ಗಿಡದ ಆರೈಕೆ ಬಾಣಂತಿ ಯ  ಆರೈಕೆಗಿಂತ ಕಡಿಮೆಯೇನು ಇಲ್ಲ . ಪರಿಶ್ರಮದ ಫಲವಂತು  ಇದ್ದೆ ಇದೆ. ಇದು ನನ್ನ ಸ್ವಂತ ಅನುಭವ. 

ನಮ್ಮದು  ಕೃಷಿ ಪ್ರಧಾನ ಮನೆ. ಏನಿದ್ದರೂ ಮಣ್ಣಿನಿಂದಲೇ ಉತ್ಪತ್ತಿ. ಸಣ್ಣ ಸಣ್ಣ ಗದ್ದೆಗಳು . ಅದಕ್ಕೆ ತಕ್ಕಂತೆ ನಮ್ಮಲ್ಲಿ ಎತ್ತು ಗಳಿದ್ದವು . ಒಂದು ಕಪ್ಪು ಕೊಂಬು ಬಾಗಿದ ಬಾಚ ಎತ್ತು  ಇನ್ನೊಂದು ಕೆಂಪು ಬಣ್ಣದ ಮೈರ . ಕೃಷಿಯಿಂದ ಬಂದದ್ದು ಬಾಯಿ ತನಕ ಮಾತ್ರ . ತಿಂದು ಉಡಲು ಸಾಕಾಗುತ್ತಿತ್ತು . ನಾವು ಆಗ ೧೨-೧೩ ವರ್ಷದವರು . ನಮ್ಮೂರಿನ  ಮೂಡುಮನೆಯ  ಶೀನ ಪೂಜಾರಿಯ (ಮಾವನವರು) ಮನೆಯಲ್ಲಿ ಆಗ ಮಲ್ಲಿಗೆ ಕೃಷಿ ಉಛ್ರಾಯ ಸ್ಥಿತಿಯಲ್ಲಿತು . ನಾವು  ದಿನ ಬೆಳ್ಳಿಗೆ ಅಲ್ಲಿ ಹೂವು ಕೊಯ್ದು ಅವರಿಗೆ ಬಾಳೆಯ ದಾರದಿಂದ ನೇಯ್ದು ಕೊಡುತಿದ್ದೆವು.   ಅವರು ನಮಗೆ ಪುಸ್ತಕಕ್ಕೆ  ಬೇಕಾದ ಹಣವೆಲ್ಲ ಕೊಡುತಿದ್ದರು.  ಒಂದು ದಿನ ತಮ್ಮನಿಗೆ ಇದ್ದಕ್ಕಿದಂತೆ ನಾವು ಕೂಡಾ ಮಲ್ಲಿಗೆ ಗಿಡ ನೆಡೋಣ ಎಂಬ ಯೋಚನೆ ಬಂತು . ಅವನ ಯೋಚನೆ ಕಾರ್ಯಗತವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ .  ಶ್ರಾವಣ ಕಳೆದು ಮಳೆ ಕಡಿಮೆ ಆಗುವ ಹೊತ್ತಿಗೆ  ಶೀನ ಮಾವನವರಿಂದ 16  ಗಿಡಗಳನ್ನು ತಯಾರು ಮಾಡಿ ಬೆಟ್ಟು ಗದ್ದೆಯಲ್ಲಿ ನೆಟ್ಟದ್ದು ಆಯಿತು . 16  ರಲ್ಲಿ ೮ ರಿಂದ ೧೦ ಗಿಡ ಮಾತ್ರ ಜೀವ ಪಡೆಯಿತು. ಮತ್ತೆ ಹೂವು ಬಿಡಲು ಇನ್ನು ೬ ತಿಂಗಳು ಕಾಯಬೇಕಿತ್ತು.  ಸುಮಾರು ಏಪ್ರಿಲ್ ವೇಳೆಗೆ ಎಲ್ಲಾ ಗಿಡಗಳಲ್ಲಿ ಚಿಗುರು ಕಾಣಿಸಿಕೊಂಡು ಹೂವು ಆರಂಭವಾಯಿತು.  ಅಂದಿನಿಂದ  ಇಂದಿನ ವರೆಗೂ ನಮ್ಮ ಆರ್ಥಿಕ ಪರಿಸ್ಥಿತಿ ಒಂದು ಮಟ್ಟದಲ್ಲಿ ಸುಸ್ಥಿತಿಯಲ್ಲಿದೆ. 

ಮಲ್ಲಿಗೆ ಒಂದು ವಾಣಿಜ್ಯ ಬೆಳೆ.  ಮನೆಯಲ್ಲಿ ತುಂಬಾ ಜನವಿದ್ದರೆ  ತುಂಬಾ ಒಳ್ಳೆಯ ಬೆಳೆ. ಮಲ್ಲಿಗೆ ಹೆಣೆಯಲು ಬೇಕಾದ ಬಾಳೆಗಿಡದ ನೂಲಿನ ಉಂಡೆ ತಯಾರಿಸಬೇಕು. ಬೆಳ್ಳಿಗೆ ಎದ್ದ ಕೂಡಲೇ ಇದ್ದ ಹೂವನ್ನು ಕೊಯ್ಯ ಬೇಕು. ಬಿಸಿಲು ಬಿತ್ತೆಂದರೆ ಬಿಸಿಲಿನ ಪ್ರಕರತೆಗೆ ಹೂವು ಕಾಣಿಸುವುದಿಲ್ಲ. ಕೆಲವೊಮ್ಮೆ ಕೊಡೆ ಹಿಡಿದು ಮಲ್ಲಿಗೆ ಕೀಲ್ಬೇಕಾಗುತ್ತದೆ. ಮಲ್ಲಿಗೆ ಗಿಡದ ಒಂದು ವಿಶೇಷ ಅಂದರೆ  ಸಣ್ಣ ಎಲೆಯ ಗಿಡದಲ್ಲಿ ಹೂವು ಜಾಸ್ತಿ . ಮತ್ತೆ ಒಂದು ಚಿಗುರಿಗೆ ೩ ಹೂವು. ಇದಕ್ಕಾಗಿ ಗಿಡಗಳು ಸದಾ ನಳನಳಿಸುತಿರಬೇಕು . ಇದಕ್ಕಾಗಿ ನೆಲಕಡಲೆಯ ಹಿಂಡಿಯನ್ನು ನೆನೆಸಿಟ್ಟು ಗಿಡಗಳಿಗೆ ಹಾಕಿ ಚೆನ್ನಾಗಿ ನೀರು ಹರಿಸಬೇಕು .ಹುಳ  ಹುಪ್ಪಡಿಗಳು ಎಲೆ ತಿನ್ನದಂತೆ ಕೀಟನಾಶಕಗಳನ್ನೂ ಕೂಡಾ ಸಿಂಪಡಿಸಬೇಕಾಗುತ್ತೆ .ಮಲ್ಲಿಗೆ ಗಿಡ ಇರುವವರಿಗೆ ಬೆಳ್ಳಿಗೆ ೧೨ ಗಂಟೆ ತನಕ ಮನೆ ಬಿಡುವ ಹಾಗಿಲ್ಲ. ಹೂವು ಕೊಯ್ದು ,ನೇಯ್ದು  ಹೂವಿನ ಕಟ್ಟೆಗೆ ೧೨ ಗಂಟೆಯ ಒಳಗೆ ಕೊಡಬೇಕು . ನಂತರ ಬಂದ ಹೂವನ್ನು ಸ್ವೀಕರಿಸುವುದಿಲ್ಲ. ಈ ಕಟ್ಟೆಯವರದ್ದು ಪಾಡು ಬೇರೆಯೇ.
ಸುಮಾರು ಒಂಬತ್ತು ಗಂಟೆಗೆ ನೇಯ್ದ ಹೂವು ಗಳು ಚೆಂಡು ಮತ್ತು ಅಟ್ಟೆಯ ರೂಪದಲ್ಲಿ ಇವರ ಕೈ ಸೇರುತ್ತೆ .  ಒಂದು ಚೆಂಡು ಅಂದರೆ ೬ ಸುತ್ತುಗಳು. ಒಂದು ಸುತ್ತಿಗೆ 120 ರಿಂದ 150  ಹೂ ಇರುತ್ತದೆ. ಅಂದರೆ ಒಂದು ಚೆಂಡು ಅಂದರೆ ೭೦೦ ರಿಂದ ೮೦೦ ಹೂವು ಇರುತ್ತದೆ. ೪ ಚೆಂಡು ಒಟ್ಟಿಗೆ ಸೇರಿ ಒಂದು ಅಟ್ಟೆ ಆಗುತ್ತದೆ. ಇನ್ನು ಕಟ್ಟೆಗೆ ಬಂದ ಹೂವುಗಳು ಅವರ ಕೈಯಿಂದ ಇನ್ನೂ ಗಿಡ್ಡವಾಗಿ ಶಂಕರಪುರದಲ್ಲಿ ಮಧ್ಯವರ್ತಿಗಳ ಕೈ ಸೇರುತ್ತೆ . ಅಲ್ಲಿ ಅಂದಿನ ಧಾರಣೆ ನಿರ್ಧಾರವಾಗುತ್ತದೆ. ಅಲ್ಲಿಂದ ಮಂಗಳೂರು ಏರ್ಪೋರ್ಟ್  ಮೂಲಕ ಮುಂಬೈ , ದುಬೈ ಮತ್ತಿತರ ಕಡೆಗಳಿಗೆ  ಸಾಗುತ್ತದೆ. 


Inline image 1


Inline image 1


Inline image 2

Saturday, September 22, 2012

ಐವತ್ತು ತುಂಬಿದೆ .......


ಐವತ್ತು ತುಂಬಿದೆ .......

ಸಂವತ್ಸರ ಕಳೆದು ಬಾಳೊಂದು ಹಸನಾಗಿದೆ
ಬಿಳಿ ನರೆಯೊಂದಿಗೆ ಪಕ್ವತೆಯು ತುಂಬಿ
ಹರುಷದ ಹೊನಲೆಲ್ಲಾ ಹರಿದು ಮುನ್ನುಗ್ಗಿದೆ
ಭಟ್ ಸರ್ ಗೆ ಇದ್ದಕ್ಕಿದಂತೆ ಐವತ್ತು ತುಂಬಿದೆ !

ಇನ್ನು ಮಾಸಿಲ್ಲ ನಿಮ್ಮೊಡನೆ ಪ್ರಶಿಕ್ಷಣದ ಕ್ಷಣ
ಸಾಟಿಯಿಲ್ಲ ನಿಮ್ಮ ಸಹಾಯ ಹಸ್ತಕ್ಕೆ
ಕದ್ದು ನಿಮ್ಮ ಜ್ಯೂಸ್ ಕುಡಿದದ್ದು ಇನ್ನು ಮರೆತಿಲ್ಲ
ಎಂದೂ ಅನಿಸಲೇ ಇಲ್ಲ ನಾವು ನಿಮ್ಮಂದ ದೂರ.

ಹರಸುವೆವು ಇನ್ನೊಂದು ಐವತ್ತು ಬಾಳಿರಿ
ಸಂತಸದ  ಕಡಲು ಇನ್ನೂ ಉಕ್ಕಲಿ
ನಿಮ್ಮನ್ನು ಪಡೆದ ನಮಗೆ ಬೀಳದಿರಲಿ ಜಗದ ಕಣ್ಣು
ಐವತ್ತರ ಚಿರಯುವಕನಿಗೆ ಮತ್ತೊಮ್ಮೆ ಹಾರೈಕೆ
ಹುಟ್ಟು ಹಬ್ಬದ ಶುಭ ಹಾರೈಕೆ !

-ಅಕುವ

(ನನ್ನ  ಮುಂಬೈನ ಗುರುವಾದ C A  ಹರಿದಾಸ್ ಭಟ್ ರವರ 50 ನೇ ಹುಟ್ಟುಹಬ್ಬಕ್ಕೆ..ಶುಭಕೋರುತ್ತಾ)

ಜಂಗಮ ಮತ್ತು ಸ್ಥಾವರ


ಜಂಗಮ ಮತ್ತು ಸ್ಥಾವರ

ವಿದ್ಯೆಯದು ಸದ್ದು ಮಾಡದ ಮದ್ದು
ಅತಿ ಮುದ್ದು ಮಾಡಿ ಕಲಿಸಿ
ಸಗ್ಗ ಸುಖದ ಹಿಗ್ಗಿನಲ್ಲಿ
ರೆಕ್ಕೆ ಪುಕ್ಕಕ್ಕೆ ಹಣದ ಕನಸ ಕಟ್ಟಿ
ನೆನಪ ತೊರೆದೆ ಹಾರ ಕಲಿಸಿದವನ!

ಕೋಶ ಓದಿ ದೇಶ ಸುತ್ತಿ
ಹಣದ ಅಳತೆಗೋಲು ಹಿಡಿದು
ಬಡವ ಬಲ್ಲಿದನ ಕಲ್ಪಿಸಿದೆ!

ಅಕ್ರಮದ ಸಂಪತ್ತಿನಲಿ ಸಭೆಕರೆದು
ಮಹಾಪೋಷಕನ ಪೋಷಾಕಿನಲ್ಲಿ
ಸವಕಲು ಪಾವಲಿಯ ಅಪಾತ್ರ ದಾನ!
ನಕಲಿ ಗೌರವ, ಒಣ ಪ್ರತಿಷ್ಠೆಗೆ
ಹಲ್ಲು ಬಿಟ್ಟ ಬಣ್ಣದ ಫೋಟೋ
ಪತ್ರಿಕೆಯ ದಿನಚರಿಯಲ್ಲಿ!

ನಿನ್ನದೇ ನಾಮಧೇಯ
ಬಸ್ಸು ತಾಣ,ಶೌಚದ ದ್ವಾರಕೂ!
ಹೆಗ್ಗಳಿಕೆಯ ಸೋಗಿನಲಿ
ಪೊಳ್ಳು ಪುರುಷೋತ್ತಮನಾಗಿ
ಗುಡಿಗೆ ಅಮೃತಶಿಲೆಯ ಮುಚ್ಚುವೆ
ಎದ್ದು ಬರಬಾರದೆಂದು ಕಲ್ಲಿನ ರುದ್ರ
ಏರಿಸಿ ಬಿಡುವೆ ಗೋಡೆಗೋಪುರವನ್ನು!

ಕೋಟಿ ಸುರಿಯುವೆ ಸ್ಥಾವರಕ್ಕೆ
ಕೋಟಿ ಜೀವನಾಡಿಗೆ ನೀ ಮಿಡಿಯಲಿಲ್ಲ!
ಅಡಿಕೆ ಜಗಿದು ಪೀಕುದಾನಿ ತುಂಬುವ ಹೊತ್ತು
ಹಡೆದವ್ವ ಅಪ್ಪ ನಿನ್ನ ಆಶ್ರಯಿಸಲು
ಒಡನೆ ಹುಡುಕುವೆಯಲ್ಲಾ ಆಶ್ರಮ
ಜಂಗಮರಂತೆ ಸವೆಸಿದ ಶ್ರಮ
ಅವರೊಲುಮೆಯನು ಅವಾಸ್ತವದ
ತಕ್ಕಡಿಯಲಿ ನಿಯತ್ತಿಲ್ಲದೆ ತೂಗಿದೆ !

ಜಂಗಮರರಿಯದೆ ಸ್ಥಾವರವ ಪೂಜಿಸುವೆ
ಸ್ಥಾವರವು ತಡೆಯೋ ಜಂಗಮರಿಗೆ
ಜಂಗಮಕ್ಕಳಿವೋ ಸ್ಥಾವರಕ್ಕಳಿವೋ

-ಅಕುವ
೧೬/೦೯/೨೦೧೨

Saturday, September 1, 2012

ಯಂತ್ರ


ಯಂತ್ರ

ನಿದ್ದೆಗಣ್ಣಲ್ಲಿ ಜಗವ ನೋಡುವ
ಕೋಳಿ ಕೂಗಿನ ಅಲಾರಮದ ಗುಂಡಿ
ಒತ್ತಿ ತಡೆದು ....
ಅರ್ಧ ಏಳುತ್ತಾ....ದಿನಕರನು ಕಾಣದೆ....

ಹೊತ್ತು ಓಡುವುದೋ, ನಾವು ...?
ಸದ್ದು ಮಾಡಿ ಬಂದ ಗಾಡಿಯಲಿ
ಜಜ್ಜಿ  ತೂರಿ........
ಜಗವ  ಮರೆವ ಗುಂಗಿಗೆ ಹತ್ತಿರವಾಗಲು
ಉದರ ಪೊರೆವ ಉದ್ಯೋಗ ನೆನಪಾಗಲು......

ಸಿಕ್ಕುಗಳ ಶುಷ್ಕ ಸುಲಿಗೆಯಲಿ
ಸಲಿಲದಂತೆ ಜಾರದೆ ಆವಿಯಾದ ದೇಹ
ಬದುಕಲು ಮರೆತ ಬಡಜೀವ
ಸುಸ್ತಾಗಿ.....ಮತ್ತೆ ಮರುಗಿದೆ....ಇಷ್ಟೇನಾ
ಜೀವನ !

-ಅಕುವ
೨೨/೧೨/೨೦೧೧

ವಿಷಾದ


ವಿಷಾದ

ಓದು ಮುಗಿಸಿ ಕೆಲಸ ಗಿಟ್ಟಿಸಿ
ಚಿಂತೆಯಲ್ಲಿ ಮುಳುಗಿದ್ದ
ದಕ್ಷಿಣದ  ಹುಡುಗ...  !

ದಿನಾ ಒಂದೇ ಬೋಗಿಯಲಿ
ಮುಖ  ನೋಡಿ ನೋಡಿ
ಮುಗಳ್ನಾಕ್ಕಾಗ ...
ಒಂದು ದಿನ ಅರುಹಿಕೊಂಡ....

ಮದುವೆಗೆ ಹೆಣ್ಣು
ಗೊತ್ತು ಮಾಡಿದ್ದಾರೆ....
ಅಪ್ಪ ಅಮ್ಮನ ಒಟ್ಟಿಗಿರಲು
ಅವಳೊಪ್ಪಲ್ಲ......!
ಹಣದ ತೊಂದರೆ ಅಲ್ಲ !
ಒಟ್ಟಿಗೆ  ಇರೋದೆ ಬೇಡ !

ಅವಿಭಕ್ತ ನಮ್ಮಲ್ಲೇ ನೋಡಿ
ಗಂಡಿಗೆ ಅಪ್ಪ ಅಮ್ಮ ಇರಬಾರದು !
ಇದ್ರು ಮದುವೆ ಮುಂಚೆ
ಸಾಯಿಸಬೇಕು! ಸಾಯಬೇಕು !
ಇಲ್ಲಾಂದ್ರೆ ಮದುವೆ ಬೇಡ
ಸುಮ್ಮಗಿರಬೇಕು !

ನಾನು ಏನು ಹೇಳದೆ ಮೌನ
ಸುತ್ತಮುತ್ತ ಇದೇ ಎಲ್ಲಾ !

-ಅಕುವ
(ಮೊನ್ನೆ ರೈಲ್ಲಿನಲ್ಲಿ  ನನ್ನ  ಸಹಪ್ರಯಾಣಿಕ  ಆಂಧ್ರ ಯುವಕನೊಬ್ಬನ ವಿಷಾದದ ಮಾತಿನಿಂದ  ಹುಟ್ಟಿದ ಕವನ.  ನಮ್ಮ ಸಂಭಾಷಣೆಯ ಭಾಷೆಯನ್ನೇ  ಉಪಯೋಗಿಸಿದ್ದೇನೆ.)

ಟ್ಯಾಲಿ


ಟ್ಯಾಲಿ

ವಾಲಿ ನಿಂತ ಮೊನಿಟರೊಳಗೆ
ತಾಳೆ ಲೆಕ್ಕದ ಟ್ಯಾಲಿ !
ಗುಂಡಿ ಒತ್ತಲು ಕೂಡಿಸಿ ಕಳೆದು
ಮೊತ್ತ ಮಾಡಿ
ಬ್ಯಾಲನ್ಸು ಕನ್ಫರ್ಮ್ ಆದಾಗ
ನಗೆಯು ಮೆಲ್ಲ ಮೊಗದಲಿ

ಅಲ್ಲಿ ಇಲ್ಲಿ ಅಂಟಿಸಿದ
ಸೂಚನೆ ಚೀಟಿಗಳು
ಮರೆವ ರೋಗದ
ಗುಳಿಗೆಗಳು !

ನಡುವೆ ಬಡಿದು ಕೊಳ್ಳುವ ಪೋನು
ಮಡದಿ ಇರಬೇಕು
ಮತ್ತೆ ತಲೆ ತುರಿಕೆ !
ಬಣ್ಣದ ಪೆನ್ನು ಗೀಚಿದ ಬಿಳಿ ಹಾಳೆ !
ವೇಗದಿ ಓಡುವ ದಿನಗಳ ಲೆಕ್ಕಕೆ
ಪಕ್ಕದ್ದಲ್ಲೇ ಕ್ಯಾಲೆಂಡರ್
ಪ್ರಾಯ ಓಡಿದುದೆ ತಿಳಿಯಲಿಲ್ಲ !

-ಅಕುವ
೨೯/೦೭/೨೦೧೧

ಶೋಕ ದೀಪ


 ಶೋಕ ದೀಪ

ಉತ್ತರ ದಕ್ಷಿಣ ಮಲಗಿಸಿ ನೆತ್ತಿ ಮೇಲೆ
ಹಚ್ಚಿಬಿಟ್ಟು ಎಣ್ಣೆಹಾಕಿ ಮೌನಧರಿಸಿ
ನೀವು ಮುಳುಗಲು ದು:ಖದಿ
ನಾ ಮಾಡಿದ ಪಾಪವಾದರೇನು ?

ಯಾವುದಕ್ಕಾದರೂ ಹಚ್ಚಿ ನಾ
ಬೆಳಕು ನಿಮಗೆ ಕೊಟ್ಟು
ಕತ್ತಲು ಎನ್ನಡಿಯಲಿ ಬಚ್ಚಿಡುವೆ
ನಿಮ್ಮ ಶೋಕದೊಳ್ ಎನ್ನ ದೋಷವೇನು ?

ಕತ್ತೆತ್ತಿ ನಾ ಬದುಕುವೆ
ಎನ್ನ ಉರಿಸುತ ಬೆಳಕ ಚೆಲ್ಲುವೆ
ನಂದಿ ಹೋದರೂ ಗಾಳಿಬೀಸಿ
ಶಕುನದ ಲೆಕ್ಕ ನಾನೆಲ್ಲಿ ಅರಿವೆನು ?

ಎನ್ನ ಕರೆಯದಿರಿ ಶೋಕದೀಪ
ನಾ ಭಾಗಿಯಿಲ್ಲ ಯಾರ ಸಾವಲ್ಲಿ
ನಾನರಿವೆ ಒಂದೆ !
ಕಿಲಕಿಲನೆ ನಗುವೆ ಹಚ್ಚಿದವರ ಮುಂದೆ !
                                       - ಅಕುವ
೨೨/೧೦/೨೦೧೦