Saturday, September 1, 2012

ಮಳೆ ಎಂಬುದೆ ಹಾಗೆ !



ಮಳೆ  ಎಂಬುದೆ ಹಾಗೆ !

ಮಳೆ ಎಂಬುದೇ ಹಾಗೆ
ಎಲ್ಲಾ ನೆನೆಸಿ
ಒಮ್ಮೆ ನೆನಪಿಸಿ
ಮತ್ತೆ  ಮರುಕಳಿಸಿ
ಬಾಲ್ಯಕ್ಕೆ !

ಮಳೆ ಸುರಿದಿದೆ ಹೇಗೆ
ಕೈ ಕೈಯ ಹಿಡಿದು
ಬಿಡದಂತೆ
ಹೆಜ್ಜೆ ಹೆಜ್ಜೆಗೆ ಬಿಗಿಯಾದ
ರಭಸದಲಿ
ನವಪ್ರೇಮಿಗಳ
ಅಪ್ಪುಗೆಯಂತೆ !

ಮಳೆ ಮೆರೆದಿದೆ ಹೀಗೆ
ನನ್ನಜ್ಜಿಯು ಹಟ್ಟಿಯ
ಒಲೆಯ ಮುಂದೆ
ನಮ್ಮೆಲ್ಲರ ಸೇರಿಸಿ
ಪಟ ಪಟ
ಕಥೆ ಹೇಳಿದಂತೆ !

--ಅಕುವ

ಕುರುಕ್ಷೇತ್ರ


ಕುರುಕ್ಷೇತ್ರ

ನನ್ನ  ಮನೆಯ ದೇವಿ  ಸದಾ
ದೀಪಕಳಾಗಿ   ಬೆಳಗುತಿರುವಳು
ಉಪನದಿಯ ಇಕ್ಕೆಲದಲಿ
ಮೊರ್ತಳಾಗಿ ಹರಸುತಿಹಳು
ಊರಿಗೆ ಗ್ರಾಮದೇವತೆ ಇವಳೇ !

ನಿತ್ಯಪೂಜೆಯ  ಸಂಭ್ರಮ
ತೆಂಗುಮರಗಳ ತಂಪು ಗಾಳಿಗೆ
ಮೈಯ್ಯೊಡ್ಡುವಳು....
ಹಸುರಬಯಲ ಲೀಲಾಜಾಲದಲಿ
ತೂಗುವಳು....
ಘಂಟೆ ಘೋಷಗಳ ಭಕ್ತಿಭಾವದ ಹೂವಿನ
ಪೂಜೆಗೆ ಪ್ರಸನ್ನಳು !
ಮಕ್ಕಳ್ಳೀಯುತ್ತಿದ್ದ ಶಾರದ ಸೇವೆಗೆ
ಬೆರಗಾಗುತಿದ್ದಳು.....!

ಮೊನ್ನೆ ಮೊನ್ನೆ  ಬಯಲ  ನಡುವೆ  ಸೀಳಿ ಹೋದ
ಕೊಂಕಣರೈಲು...
ಗದ್ದೆ ಪಡೆದವರು ಕಾಂಚಣ ಬಿಚ್ಚಲು
ಮಕ್ಕಳ ಮನವು  ಕದಡಿ ರಾಡಿಯಾಗಿದೆ  !

ಮರೆತೆ  ಬಿಟ್ಟರಲ್ಲ ನಿಮ್ಮಿರುವಿಕೆಯನ್ನ!
ದಾಯಾದಿ  ಕಲಹದಲಿ ಮೈಮರೆಯಲು
ತುಂಡು ಭೂಮಿಯ ನೆಪ ಮಾಡಿ...
ಸಮರಕ್ಕೆ  ಸಜ್ಜಾಗಿಹರು....
ನಿನ್ನೊಡಲೆ ಮತ್ತೆ ಕುರುಕ್ಷೇತ್ರ !

-ಅಕುವ

ಕಾಯಲಿಲ್ಲ


ಕಾಯಲಿಲ್ಲ

ಮತ್ಯಾಕೆ ಮೊನ್ನೆ ಸಿಕ್ಕಿದಾಕೆ ..
ಉದ್ಗಾರ ತೆಗೆದಳು ...ಕಾಯಲಿಲ್ಲ ..
ಇನ್ನು ಬಿಸುಟ್ಟಿಲ್ಲವೇ ಸವಿ ನೆನಪನ್ನು !

ಕಾಯಲೇನು?
ವರುಷ ಕಳೆದು ಬರುವ ವಸಂತವೇ?
ಕಾಲವ ನೀಡಲು  ....ನೀ ಕೈ ಕೊಟ್ಟೆ .
ಆದರೂ ಆರೋಪ ನಾನೇ ಹೊತ್ತೆ...!

ಕಾಯುವುದು ಅದ್ಯಾವ ಪುರುಷಾರ್ಥ?
ನನ್ನ ಅಭಾಗ್ಯನ ಮಾಡಿದುದಕ್ಕೆ?
ಹದಿಮೂರೇ ಮಾಸದಲಿ ಬತ್ತಿತ್ತಲವೇ ಹೃದಯ
ಒಡೆಯಿತಲ್ಲವೇ ಒಡಲು...ಸುಟ್ಟೆನಲ್ಲವೇ
ಎಲ್ಲಾ ಆ ದಿನ......
ಒಡಲಿಲ್ಲದವಗೆ ಇನ್ನು  ಕಾಯುವೆಯಾ?

- ಅಕುವ

ಕಾಣದ ನಾಳೆಗೆ


ಕಾಣದ ನಾಳೆಗೆ

ಸುಳಿವಿಲ್ಲ ಕಂಡಿಲ್ಲ
ಬಾರದೆ ಇರುವ ನಾಳೆಗೇಕೆ
ಕೊರಗು ?
ಸದ್ದಿಲ್ಲದ  ಗದ್ದಲವ ಮಾಡಿ
ಇಂದು ಜಾರುತಿದೆ
ಮುದ್ದು ಮಾಡಿ ನಿನ್ನದಾಗಿಸೋ
ಗದ್ದೆಗಳ ಹದಮಾಡಿ
ಸಜ್ಜನಿಕೆಯ ಬೀಜವ ಬಿತ್ತೋ
ಕತ್ತರಿಯ ಅರಮಾಡಿ
ಕಿತ್ತೊಗೆಯೋ ಕಳೆಯ
ಮತ್ತ್ಯಾಕೆ ಚಿಂತೆ ನಾಳೆಯ ?

-ಅಕುವ

ಕದವ ತೆರೆದೊಮ್ಮೆ


ಕದವ ತೆರೆದೊಮ್ಮೆ


ಮನದ ಕದವ ತೆರೆದು
ಬಟ್ಟ ಬಯಲಲಿ ಎಲ್ಲವ ಓದಿ(ಡಿ)ಸಿ
ದಿಟದ ಸಾಕ್ಷಾತ್ಕಾರವ ಮಾಡಿದ
ತೊದಲು ನಾಲಿಗೆಯಲಿ ಅಮ್ಮನ
ಕರೆಸಿದ ಕಸ್ತೂರಿ ಕನ್ನಡಕೆ ನಮನ.

ಸಿಕ್ಕುಗಳ ಜಗತ್ತಿನಲಿ ಲೆಕ್ಕದಲೇ
ಮರೆತಿರುವಾಗ ಕಗ್ಗಗಳ ಬಿಡಿಸಿ
ಜೀವನದ ಸುಗ್ಗಿಯ ಬಡಿಸಿ
ಇಂದು ಹಿಗ್ಗುತ್ತಿರಲು ಮತ್ತೆ
ಕಣ್ಮುಚ್ಚಿ ನೆನೆವೆ ಕನ್ನಡವ....!

ಕಳವಳದಿ ಜಗವ ಅರಿಯಲಂಜುತ
ಹೆಜ್ಜೆ ಹೆಜ್ಜೆಗೆ ಜಿಜ್ನಾಸೆಯ ಉತ್ತರಿಸುತ
ಉದ್ಧರಿಸಿದ ಕನ್ನಡಾಂಬೆ ಶಿರವ ಬಾಗುವೆ......

-ಅಕುವ

ಹೆದ್ದಾರಿ


  ಹೆದ್ದಾರಿ

ಸುಳಿವಿಲ್ಲದೆ ಬಂದರವರು
ಬೀಳಿಸುತಾ ಹೋದರವರು
ಬುಡಮೇಲಾಗಿ ನೂಕಿದರವರು
ಬಲವಂತ ಮಾಡಿದರವರು !
ನಿಂತಿದ್ದೆವು ನಾವು ನಮ್ಮಷ್ಟಕ್ಕೆ
ಸದ್ದು ಗದ್ದಲದ್ದಲ್ಲೂ ಇಕ್ಕೆಲಕೆ
ಮಂತ್ರಿ ಕಾರು ಬರುವುದಿದ್ದರೆ
ಬಣ್ಣ ಬಳಿವರು ಅವಸರದಿ
ತೂಗುವೆವು ನೆರಳನೊಡ್ಡುವೆವು
ನಿಮ್ಮ ದಾರಿಯುದ್ದ ಹಾರೈಸುವೆವು
ಮತ್ತೂ ಯಾಕೆ ನಾವು ಬೇಡವಾದೆವೇ?
ನಿಮ್ಮ ಹೆದ್ದಾರಿಗೆ ಅಡ್ಡವಾದೆವೇ?

-----ಅಕುವ

ಗೂಡು ಮರೆಯುವ ಮುನ್ನ


ಗೂಡು ಮರೆಯುವ ಮುನ್ನ


ನಳನಳಿಸಿದ ವನದಲಿ ಲೀಲಾಜಾಲ
ಪಾದಗಳೋಡಿದ ನದಗಳ ಬೀಡಿಗೆ
ಜುಳು ಜುಳು ನದಿಗಳ ಸರಸದ ವೇಗಕ್ಕೆ
ತುಂಬಿದೆ ಉತ್ಸದ ಕಂಪು .

ಹಕ್ಕಿ ಗೂಡಲ್ಲಿ ಇಲ್ಲ, ಪ್ರತಿ ವರುಷ ಕೇವಲ
ದಿನದ ನೆಪ ಮಾತ್ರ  ಹಾರಾಲಾಗದೆ
ದೃಷ್ಟಿ ಕ್ಷೀಣವೋ ಮರೆವ ರೋಗವೋ
ಹಿಡಿಯ ತುಂಬದ ನೆನಪುಗಳು ಜಾರಿದ್ದವು !

ಹೊಸ ಮಣ್ಣು ತಂದು
ತೇಪೆ ಹಾಕಿದೆ ಗೂಡಿಗೆ ಇಂದು !
ಸುಣ್ಣ ಬಳಿದು ಶುದ್ಧ ಮಾಡಿದೆ
ಹಕ್ಕಿ ಮಾತ್ರ ಗೂಡಿಗೆ ಬಂದಿಲ್ಲ
ನಳ ನಳಿಸುವ ಉತ್ಸವ ಸಂಭ್ರಮ ಅದಕ್ಕಿಲ್ಲ
ಗೂಡು ಮರೆತಾಗಿದೆ ಹಕ್ಕಿ........
ಬಳಿದ ಸುಣ್ಣ ಮಂಕಾಗಿದೆ
ತಾಯ ಕಣ್ಣೀರಲಿ ಕದಡಿ ಹರಿದಿದೆ !

-ಅಕುವ